ADVERTISEMENT

ಸಾಲಬಾಧೆ: ರೈತ ಆತ್ಮಹತ್ಯೆ

ಮೀಟರ್ ದಂಧೆ ನಿಲ್ಲಿಸದಿದ್ದರೆ ಕಾನೂನು ಕ್ರಮದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2024, 14:22 IST
Last Updated 14 ನವೆಂಬರ್ 2024, 14:22 IST
ಚಿಲಕಲನೇರ್ಪು ಗ್ರಾಮದಲ್ಲಿ ಸಾಲಬಾಧೆಯಿಂದ ಮೃತಪಟ್ಟಿದ್ದಾರೆ ಎನ್ನಲಾದ ರೈತನ ಕುಟುಂಬವನ್ನು ಗುರುವಾರ ಭೇಟಿ ಮಾಡಿದ ತಹಶೀಲ್ದಾರ್ ಸಾಂತ್ವನ ಹೇಳಿದರು
ಚಿಲಕಲನೇರ್ಪು ಗ್ರಾಮದಲ್ಲಿ ಸಾಲಬಾಧೆಯಿಂದ ಮೃತಪಟ್ಟಿದ್ದಾರೆ ಎನ್ನಲಾದ ರೈತನ ಕುಟುಂಬವನ್ನು ಗುರುವಾರ ಭೇಟಿ ಮಾಡಿದ ತಹಶೀಲ್ದಾರ್ ಸಾಂತ್ವನ ಹೇಳಿದರು   

ಚೇಳೂರು: ತಾಲ್ಲೂಕಿನ ಚೀಲಕಲನೇರ್ಪು ಗ್ರಾಮದಲ್ಲಿ ಸಾಲಬಾಧೆ ತಾಳಲಾರದೆ ರೈತನೊಬ್ಬ ಬುಧವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. 

ಚೀಲಕಲನೇರ್ಪು ಗ್ರಾಮದ ಶ್ರೀನಿವಾಸ (41) ಆತ್ಮಹತ್ಯೆ ಮಾಡಿಕೊಂಡ ರೈತ.

ಇವರು ಬೆಳೆಸಾಲ ಸೇರಿದಂತೆ ಇತರೆ ಹಲವು ಕಡೆ ₹15 ಲಕ್ಷ ಸಾಲ ಮಾಡಿಕೊಂಡಿದ್ದರು. ವರ್ಷದಿಂದ ವರ್ಷಕ್ಕೆ ಸಾಲದ ಬಡ್ಡಿ ಹೆಚ್ಚಾಗುತ್ತಿತ್ತು. ಮತ್ತೊಂದೆಡೆ ತಮ್ಮ ಜಮೀನಿನಲ್ಲಿ ಸಾಲ ಮಾಡಿ ಬೆಳೆದಿದ್ದ ಬೆಳೆಗಳು ಸರಿಯಾದ ದರ ಸಿಗದೆ ಪ್ರತಿ ಬಾರಿಯೂ ನಷ್ಟದ ಸುಳಿಗೆ ಸಿಲುಕಿದ್ದರು. ಇದರಿಂದ ತೀವ್ರ ಮನನೊಂದು ಬುಧವಾರ ರಾತ್ರಿ ಸುಮಾರು ಎಂಟು ಗಂಟೆಗೆ ತನ್ನ ಹೆಂಡತಿಗೆ ಕರೆ ಮಾಡಿ, ನೇಣು ಬಿಗಿದುಕೊಂಡು ಸಾಯುತ್ತಿರುವೆ ಎಂದು ಹೇಳಿದ್ದ ಎಂದು ತಿಳಿದುಬಂದಿದೆ. 

ADVERTISEMENT

ಇದರಿಂದ ಆತಂಕಗೊಂಡ ಮನೆಯವರು ತೀವ್ರ ಹುಡುಕಾಟ ನಡೆಸಿದ್ದಾರೆ. ಆದರೆ, ಅಷ್ಟೊತ್ತಿಗಾಗಲೇ ತಮ್ಮ ಜಮೀನ ಪಕ್ಕ ಇರುವ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ದೃಶ್ಯ ಕಂಡುಬಂದಿದೆ. ಈ ಸಂಬಂಧ ಕೆಂಚರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮೃತ ವ್ಯಕ್ತಿಗೆ ಮೂವರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗು ಇದ್ದಾರೆ. ರೈತ ಶ್ರೀನಿವಾಸ್ ಸಾವಿನಿಂದಾಗಿ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತು. 

ರೈತ ಆತ್ಮಹತ್ಯೆ ವಿಷಯ ತಿಳಿದು ತಹಶೀಲ್ದಾರ್ ಶ್ರೀನಿವಾಸಲು ನಾಯುಡು, ಉಪ ತಹಶೀಲ್ದಾರ್ ಸತೀಶ್, ಗ್ರಾಮ ಲೆಕ್ಕಾಧಿಕಾರಿ ವೆಂಕಟೇಶ್ ಬಂದು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಅಲ್ಲದೆ, ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು. 

ದಂಧೆಕೋರರಿಗೆ ಎಚ್ಚರಿಕೆ: ಪರವಾನಗಿ ಇಲ್ಲದೆ ಅಕ್ರಮವಾಗಿ ಅಧಿಕ ಮೀಟರ್ ಬಡ್ಡಿ ದಂಧೆ ಮತ್ತು ಚೀಟಿ ವ್ಯವಹಾರ ನಡೆಸುವುದು ಕಾನೂನಿನ ಪ್ರಕಾರ ಅಪರಾಧ. ಇಂಥ ದಂಧೆಯಲ್ಲಿ ತೊಡಗಿದವರ ವಿರುದ್ಧ ಯಾರಾದರೂ ದೂರು ನೀಡಿದರೆ, ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಶ್ರೀನಿವಾಸುಲು ನಾಯುಡು ಎಚ್ಚರಿಕೆ ನೀಡಿದರು. 

ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕಲಿ

ಇತ್ತೀಚಿನ ದಿನಗಳಲ್ಲಿ ಕೆಲವು ಮೀಟರ್ ಬಡ್ಡಿ ದಂಧೆ ಅವ್ಯಾಹತವಾಗಿದ್ದು ಹಳ್ಳಿಗಳಲ್ಲಿ ಮನೆಗಳ ಬಳಿ ಬಂದು ಮೈಕ್ರೊ ಫೈನಾನ್ಸ್ ದಂಧೆ ನಡೆಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.  ಇದರಿಂದ ಹಲವು ಕುಟುಂಬಗಳು ಸಾಲದ ಸಂಕಷ್ಟಕ್ಕೆ ಸಿಲುಕಿವೆ. ಇಂಥಹ ಅಕ್ರಮ ಬಡ್ಡಿ ವ್ಯವಹಾರ ನಡೆಸುವ ದಂಧೆಕೋರರಿಗೆ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳಲ್ಲಿ ರೈತರು ಹಾಗೂ ಗೃಹಣಿಯರ ಆತ್ಮಹತ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಅಕ್ರಮ ಬಡ್ಡಿ ವ್ಯವಹಾರದಲ್ಲಿ ತೊಡಗಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸ್ಥಳೀಯರು ಒತ್ತಾಯಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.