ಚೇಳೂರು: ದೀಪದ ಕೆಳಗೆ ಕತ್ತಲು ಎನ್ನುವಂತೆ ಚರಂಡಿ ಸೌಲಭ್ಯ ಕಲ್ಪಿಸಬೇಕಾದ ಪಂಚಾಯಿತಿಯ ಕಟ್ಟಡ ಬಳಿಯೇ ಚರಂಡಿ ನೀರು ಹರಿಯುತ್ತಿದ್ದು, ದುರ್ನಾತ ಬೀರುತ್ತಿದೆ.
ಇಲ್ಲಿನ ಬಾಗೇಪಲ್ಲಿ ಮುಖ್ಯ ರಸ್ತೆಯಲ್ಲಿರುವ ಸೋಮನಾಥಪುರ ಗ್ರಾಮ ಪಂಚಾಯತಿ ಹಾಗೂ ಗ್ರಂಥಾಲಯ ಕಟ್ಟಡ ನಡುವಿನ ರಸ್ತೆಯಲ್ಲಿ ಚರಂಡಿ ನೀರು ಹರಿಯುತ್ತಿದ್ದು, ಇದರಿಂದ ಸಾರ್ವಜನಿಕರು ಮುಗು ಮುಚ್ಚಿಕೊಂಡು ಓಡಾಡುತ್ತಿದ್ದಾರೆ.
ಪಂಚಾಯಿತಿ ಮತ್ತು ಗ್ರಂಥಾಲಯ ಕಟ್ಟಡ ಮಧ್ಯದಲ್ಲಿ ಸಿ.ಸಿ ರಸ್ತೆ ನಿರ್ಮಿಸುವ ವೇಳೆ ಚರಂಡಿ ನಿರ್ಮಾಣ ಮಾಡದೇ ಕಾಮಗಾರಿ ನಡೆಸಿದ ಪ್ರತಿಫಲವನ್ನು ಜನರು ಅನುಭವಿಸುವಂತಾಗಿದೆ.
ಸಮರ್ಪಕವಾದ ಚರಂಡಿ ಇಲ್ಲದೆ ನಡುರಸ್ತೆಯಲ್ಲೇ ಕೊಳಚೆ ನೀರು ಹರಿಯುತ್ತಿದೆ. ಇದರ ಸಮೀಪ ಅನೇಕ ಸರ್ಕಾರಿ ಕಚೇರಿಗಳಿವೆ. ಪಂಚಾಯಿತಿ, ಗ್ರಂಥಾಲಯ, ಸಹಕಾರ ಬ್ಯಾಂಕ್ ಮತ್ತು ಬಸ್ ನಿಲ್ದಾಣ ಇದೆ. ಇಲ್ಲಿಗೆ ಬರುವವರೆಲ್ಲರೂ ದುರ್ನಾತವನ್ನು ಎದುರಿಸಿಯೇ ಬರಬೇಕು. ಕೊಳಚೆಯನ್ನು ತುಳಿದುಕೊಂಡು ಬರಬೇಕು. ಆದರೂ ಪಂಚಾಯಿತಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜಾಣ ಕುರುಡರಾಗಿದ್ದಾರೆ.
ಪಂಚಾಯಿತಿ ಬಳಿಯೇ ಚರಂಡಿ ಹರಿಯುತ್ತಿದ್ದರೂ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸುಮ್ಮನಿದ್ದಾರೆ. ಇವರಿಗೆಲ್ಲ ಈ ಚರಂಡಿಯ ದುರ್ನಾತ ಸುವಾಸನೆಯಾಗಿದಿಯೇ ಎಂಬವುದು ತಿಳಿಯುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಂಚಾಯಿತಿ ಸಮೀಪ ದಲಿತ ಸಮುದಾಯಗಳು ಹೆಚ್ಚು ವಾಸ ಮಾಡುತ್ತಿವೆ. ಇಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಕಲ್ಪಿಸಿಲ್ಲ. ಈ ಬಡಾವಣೆ ಅಭಿವೃದ್ಧಿಯ ಮತ್ತು ಸ್ವಚ್ಛತೆ ಮರೀಚಿಕೆಯಾಗಿದೆ. ಚರಂಡಿ ನೀರು ಸರಾಗವಾಗಿ ಹರಿಯಲು ಸಾಧ್ಯ ಆಗದೇ ನೀರು ಸಂಗ್ರಹವಾಗಿ ದುರ್ವಾಸನೆ ಬೀರುತ್ತಿದೆ.ಸೊಳ್ಳೆಗಳ ಕಾಟ ಜಾಸ್ತಿಯಾಗಿದೆ. ಸಾಂಕ್ರಮಿಕ ರೋಗಗಳು ಹರಡುವ ಭೀತಿಯಲ್ಲಿದ್ದಾರೆ ಇಲ್ಲಿನ ನಿವಾಸಿಗಳು. ಸಂಗ್ರಹವಾದ ಚರಂಡಿ ನೀರಿಗೆ ತ್ಯಾಜ್ಯ ಸೇರಿ ಸಮಸ್ಯೆ ಉಲ್ಬಣಿಸಿದೆ.
ಗ್ರಾಮದಲ್ಲಿ ಇಂತಹ ಹಲವಾರು ಚರಂಡಿಗಳು ಸರಾಗವಾಗಿ ಹೋಗದೆ ನಿಂತಿದ್ದು ಹಲವು ಸಮಸ್ಯೆಗಳಿಗೆ ಕಾರಣವಾಗಿವೆ. ಕೆಲ ಜನರು ಅನಾರೋಗ್ಯದಿಂದ ನರಳುವ ಪರಸ್ಥಿತಿ ನಿರ್ಮಾಣವಾಗಿದೆ. ಮನೆಗಳ ಪಕ್ಕದಲ್ಲೇ ಈ ಗ್ರಾಮದ ಚರಂಡಿಗಳಲ್ಲಿ ಕೋಳಿಗಳು, ನಾಯಿಗಳು. ಚರಂಡಿ ಕೆಸರಿನಲ್ಲಿ ಚಲ್ಲಾಪಿಲ್ಲಿ ಮಾಡಿವುದರಿಂದ ಜನತೆ ಸಂಚರ ಸ್ಥಗಿತ ಗೊಂಡಿದೆ.
ಈ ರಸ್ತೆಯಲ್ಲಿ ಸಂಚರಿಸುವ ಗ್ರಾಮಸ್ಥರು ಮನೆಗಳಿಗೆ ಹೋಗಲು ಬೇರೆ ದಾರಿ ಇಲ್ಲದೇ ಅನಿವಾರ್ಯವಾಗಿ ಕೊಳಚೆ ನೀರು ತುಳಿದುಕೊಂಡೇ ಹೋಗಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.