ADVERTISEMENT

ಚೇಳೂರು ತಾಲ್ಲೂಕಾಗಿ 4 ವರ್ಷ ಕಳೆದರೂ ಆರಂಭವಾಗದ ಕಚೇರಿಗಳು: ತಪ್ಪದ ಜನರ ಬವಣೆ

ವರ್ಷದಲ್ಲಿ ಬದಲಾಗಿದ್ದು ನಾಮಫಲಕ ಮಾತ್ರ!

​ಪ್ರಜಾವಾಣಿ ವಾರ್ತೆ
Published 18 ಮೇ 2024, 8:00 IST
Last Updated 18 ಮೇ 2024, 8:00 IST
<div class="paragraphs"><p>ಚೇಳೂರು ತಾಲ್ಲೂಕಿನ ನೂತನ ಖಾಸಗಿ ಕಟ್ಟಡ</p></div>

ಚೇಳೂರು ತಾಲ್ಲೂಕಿನ ನೂತನ ಖಾಸಗಿ ಕಟ್ಟಡ

   

ಚೇಳೂರು: ಚೇಳೂರು ತಾಲ್ಲೂಕಾಗಿ ರಚನೆಯಾಗಿ ನಾಲ್ಕು ವರ್ಷ ಕಳೆದಿದೆ. ತಾಲ್ಲೂಕು ಕಚೇರಿ ಆರಂಭವಾಗಿ ಒಂದು ವರ್ಷ ತುಂಬಿದೆ. ಈ ಅವಧಿಯಲ್ಲಿ ನಾಮಫಲಕ ಬದಲಾಗಿದ್ದ ಬಿಟ್ಟರೆ ‌ಬೇರೆ ಯಾವ ಅಭಿವೃದ್ಧಿ ಕೆಲಸವು ಆಗಿಲ್ಲ. ಒಂದು ತಾಲ್ಲೂಕು ಕಚೇರಿಗೆ ಬೇಕಾದ ಕನಿಷ್ಠ ಸವಲತ್ತು ದೊರೆತಿಲ್ಲ.

ಇನ್ನೂ ಅಧಿಕಾರಿಗಳ ನಿಯೋಜನೆ ಆಗಿಲ್ಲ. ಇದರಿಂದ ಜನರ ಪರದಾಟ ತ‍ಪ್ಪಿಲ್ಲ. ಪೂರ್ಣ ಪ್ರಮಾಣದಲ್ಲಿ ತಾಲ್ಲೂಕು ಕಚೇರಿಯಾಗಿ ರೂಪುಗೊಳ್ಳುವುದು ಎಂದು ಎಂಬ ಪ್ರಶ್ನೆ ಕಾಡುತ್ತಿದೆ.

ADVERTISEMENT

ಗಡಿನಾಡಿನ ಜನತೆಯ ಬೇಡಿಕೆ ಹಾಗೂ ಹೋರಾಟದ ಫಲವಾಗಿ 2020ರಲ್ಲಿ ಚೇಳೂರು ತಾಲ್ಲೂಕು ರಚನೆಗೆ ಗೇಜೆಟ್‌ ನೋಟಿಫಿಕೇಷನ್‌ ಆಯಿತು. ತಾಲ್ಲೂಕು ರಚನೆಯಾಗಿ ಮೂರು ವರ್ಷ ಕಳೆದರೂ ತಾಲ್ಲೂಕು ಕಚೇರಿಗೊಂದು ನೆಲ ಸಿಕಿರಲಿಲ್ಲ. ನಾಡ ಕಚೇರಿಯಲ್ಲೇ ತಾಲ್ಲೂಕಿನ ಕಾರ್ಯನಿರ್ವಹಣೆ ನಡೆಯುತ್ತಿತು. ಕಳೆದ ವರ್ಷ ಚೇಳೂರಿನ‌ ಹೊರವಲಯ ಗೆರಿಗಿರೆಡ್ಡಿಪಾಳ್ಯದಲ್ಲಿ ಬಾಡಿಗೆ ಕಟ್ಟಡದಲ್ಲಿ ತಾಲ್ಲೂಕು ಕಚೇರಿ ಆರಂಭಗೊಂಡಿತು.

ಕಳೆದ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಸಚಿವ ಹಾಗೂ ಶಾಸಕರು ಜಿದ್ದಾ ಜಿದ್ದಿನ ಪೋಟಿಗೆ ಬಿದ್ದು ಖಾಸಗಿ ಕಟ್ಟದಲ್ಲಿ ತಾತ್ಕಾಲಿಕವಾಗಿ ತಾಲೂಕು ಕಚೇರಿ ಉದ್ಘಾಟಿಸಿದರು.

ವರ್ಷ ಕಳೆದರೂ ಇದುವರೆಗೂ ನೂತನ ತಾಲ್ಲೂಕಿಗೆ ಬೇಕಾದ ಯಾವುದೇ ಕಚೇರಿ ಕಾರ್ಯಾರಂಭ ಮಾಡಿಲ್ಲ. ಈ ಅವಧಿಯಲ್ಲಿ ಬದಲಾಗಿದ್ದು ನಾಡ ಕಚೇರಿಯಿಂದ ತಾಲ್ಲೂಕಿನ ನಾಮಫಲಕ ಮಾತ್ರ.

ಹೊಸ ತಹಶೀಲ್ದಾರ್ ಕಚೇರಿಯಲ್ಲಿ ಒಬ್ಬ ಗ್ರೇಡ್ –1. ಇಬ್ಬರು ಗ್ರೇಡ್ 2 ತಹಶೀಲ್ದಾ‌ರ್. ಇಬ್ಬರು ಶಿರಸ್ತೇದಾರರು, ಮೂವರು ಪ್ರಥಮದರ್ಜೆ ಸಹಾಯಕರು, ಒಬ್ಬರು ಆಹಾರ ನೀರಿಕ್ಷಕರು, ನಾಲ್ವರು ದ್ವಿತೀಯ ದರ್ಜೆ ಸಹಾಯಕರು, ಒಬ್ಬರು ಡಾಟಾ ಎಂಟ್ರಿ ಅಪರೇಟ‌ರ್, ಮೂವರು ಗ್ರೂಪ್ ಡಿ ದರ್ಜೆ ಸಹಾಯಕರು ಸೇರಿ ಒಟ್ಟು 17 ಸಿಬ್ಬಂದಿ ಇರಬೇಕು.

ಆದರೆ ಲೋಕಸಭೆಯ ಚುನಾವಣೆಯ ಸಮಯದಲ್ಲಿ ಮಾತ್ರ ನಾಮಕ ವ್ಯವಸ್ಥೆಗೆ ತಹಶೀಲ್ದಾರ್ ನೇಮಕ ಮಾಡಲಾಗಿದೆ. ಆದರೆ ಆಡಳಿತವನ್ನು ಬಾಗೇಪಲ್ಲಿ ತಾಲ್ಲೂಕಿನ ತಹಸೀಲ್ದಾರ್ ನೋಡಿಕೊಳ್ಳುತ್ತಿದ್ದಾರೆ.

ಮೊದಲಿನ ನಾಡ ಕಚೇರಿಯ ಸಿಬ್ಬಂದಿ ಹಾಗೂ ಕೆಲ ತಾತ್ಕಾಲಿಕ ಸಿಬ್ಬಂದಿ ಹೊರತುಪಡಿಸಿದರೆ, ತಹಶೀಲ್ದಾರ್ ಕಚೇರಿಗೆ ಉಳಿದ ಯಾವುದೇ ಸಿಬ್ಬಂದಿ ನಿಯೋಜನೆಯಾಗಿಲ್ಲ. ಕೋಣೆಗಳಲ್ಲಿ ಪೀಠೋಪಕರಣ ಅಳವಡಿಕೆ, ವಿದ್ಯುತ್ ಸಂಪರ್ಕ ಒದಗಿಸುವ ಕಾರ್ಯವೂ ಮಂದಗತಿಯಲ್ಲಿ ಸಾಗಿದೆ.

ಪಟ್ಟಣದಲ್ಲಿ ತಹಶೀಲ್ದಾರ್ ಕಚೇರಿ ಆರಂಭವಾದರೆ ಕಂದಾಯ ಸೇವೆಗಳಿಗೆ ಬಾಗೇಪಲ್ಲಿ ತಾಲ್ಲೂಕು ಕೇಂದ್ರಕ್ಕೆ ಅಲೆ ಯುವ ಅಗತ್ಯ ಇಲ್ಲ ಎಂದು ಜನರು ಭಾವಿಸಿದ್ದರು. ಆದರೆ, ಜನರ ನಿರೀಕ್ಷೆ ಹುಸಿಯಾಗಿದೆ. ತಹಶೀಲ್ದಾರ್ ಕಚೇರಿ ಪೂರ್ಣ ಪ್ರಮಾಣದಲ್ಲಿ ಆರಂಭ ಗೊಂಡಿಲ್ಲ. ಆಧಾರ್ ನೋಂದಣಿ, ತಿದ್ದುಪಡಿ, ಬಯೋ ಮೆಟ್ರಿಕ್ ಅಪ್ ಡೇಟ್ ಮಾಡಿಸುವುದಕ್ಕೆ ಮಾತ್ರ ಸೀಮಿತ ಎಂಬಂತಾಗಿದೆ.

ಬಿಇಒ, ಆರಣ್ಯ, ತೋಟಗಾರಿಕೆ, ತಾಲ್ಲೂಕು ಪಂಚಾಯತಿ, ಬಿಸಿಎಂ, ಕೃಷಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ, ಕೆ.ಐ.ಆರ್. ಡಿ.ಎಲ್. ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ, ಮೀನುಗಾರಿಕೆ, ಅಬಕಾರಿ. ಸಣ್ಣ ನೀರಾವರಿ, ಅಕ್ಷರ ದಾಸೋಹ, ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿಗಳು ಇನ್ನೂ ಹೊಸ ತಾಲ್ಲೂಕು ಕೇಂದ್ರದಲ್ಲಿ ಆರಂಭವಾಗಿಲ್ಲ.

ಚುನಾವಣಾ ಗಿಮಿಕ್‌
ಹೊಸ ತಾಲ್ಲೂಕು ಉದ್ಘಾಟನೆ ಸಂದರ್ಭದಲ್ಲಿ ಮಾಜಿ ಸಚಿವರು ಹಾಗೂ ಕಾಂಗ್ರೆಸ್‌ ಶಾಸಕರು ಎಲ್ಲ ತಾವೇ ಮಾಡಿದ್ದು ಎಂಬಂತೆ ಪಟಾಕಿ ಸಿಡಿಸಿ ಮೆರವಣಿಗೆ ನಡೆಸಿ, ಪಕ್ಷದ ಕಾರ್ಯಕ್ರಮದಂತೆ ಆಚರಿಸಿದ್ದರು. ಆದರೆ, ಈಗ ಏನಾಗಿದೆ? ವರ್ಷ ಕಳೆಯುತ್ತಾ ಬಂದರು, ಯಾವುದೇ ಕಚೇರಿ ಆರಂಭ ಗೊಂಡಿಲ್ಲ. ಇದೆಲ್ಲಾ ಚುನಾವಣಾ ಗಿಮಿಕ್ ಎಂದು ಪ್ರಜ್ಞಾವಂತ ನಾಗರಿಕರ ಆರೋಪ.
ಚೇಳೂರು ತಾಲ್ಲೂಕು ಕೇಂದ್ರವನ್ನಾಗಿ ರೂಪಿಸುವತ್ತ ಜಿಲ್ಲಾಧಿಕಾರಿ ಗಮನ ಹರಿಸಿ, ಸೂಕ್ತ ಕ್ರಮ ವಹಿಸಬೇಕು
ಶ್ರೀನಿವಾಸ್, ಚೇಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.