ADVERTISEMENT

ಚಿಕ್ಕಬಳ್ಳಾಪುರ: ಕಾಡು ಪ್ರಾಣಿಗಳ ದಾಳಿಗೆ 43 ರಾಸು ಬಲಿ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವನ್ಯಜೀವಿ–ಮಾನವ ಸಂಘರ್ಷ; ಗೌರಿಬಿದನೂರು ತಾಲ್ಲೂಕಿನಲ್ಲಿ ಗರಿಷ್ಠ ಪ್ರಕರಣ

ಡಿ.ಎಂ.ಕುರ್ಕೆ ಪ್ರಶಾಂತ
Published 19 ಜುಲೈ 2024, 6:16 IST
Last Updated 19 ಜುಲೈ 2024, 6:16 IST
ರಮೇಶ್
ರಮೇಶ್   

ಚಿಕ್ಕಬಳ್ಳಾಪುರ: ಬಯಲು ಸೀಮೆಯ ಚಿಕ್ಕಬಳ್ಳಾಪುರ ಜಿಲ್ಲೆಯ ಅಲ್ಲಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚುತ್ತಿದೆ. ವಿಶೇಷವಾಗಿ ಚಿರತೆ ದಾಳಿ ಪ್ರಕರಣಗಳು ವರದಿ ಆಗುತ್ತಿದೆ. ರಾಸುಗಳ ಮೇಲೆ, ಕೋಳಿ ಶೆಡ್‌ಗಳ ಮೇಲೆ ಚಿರತೆ ದಾಳಿ ನಡೆಸಿದ ಪ್ರಕರಣಗಳು ಇತ್ತೀಚೆಗೆ ವರದಿ ಆಗಿವೆ. 

ಹೀಗೆ ಜಿಲ್ಲೆಯಲ್ಲಿ 2023–24ನೇ ಸಾಲಿನಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷದ 166 ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗಿವೆ. ದಾಳಿಯಿಂದ ಬೆಳೆ ಮತ್ತು ಜಾನುವಾರುಗಳನ್ನು ಕಳೆದು ಕೊಂಡ ರೈತರಿಗೆ ಅರಣ್ಯ ಇಲಾಖೆ ₹ 17.42 ಲಕ್ಷ ಪರಿಹಾರ ನೀಡಿದೆ.

ಕಳೆದ ವರ್ಷದಲ್ಲಿ ಜಿಲ್ಲೆಯಲ್ಲಿ43 ರಾಸುಗಳ ಕಾಡುಪ್ರಾಣಿಗಳ ದಾಳಿಗೆ ಬಲಿಯಾಗಿವೆ. ಮಾನವ ಮತ್ತು ವನ್ಯಜೀವಿ ಸಂರ್ಘದ ಪರಿಣಾಮ 123 ಬೆಳೆಹಾನಿ ಪ್ರಕರಣಗಳು  ವರದಿಯಾಗಿವೆ.

ADVERTISEMENT

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 55 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯವಿದೆ. ಕುರುಚಲು ಕಾಡು ಪ್ರಧಾನವಾಗಿರುವ ಜಿಲ್ಲೆಯಲ್ಲಿ ಚಿರತೆ, ಕರಡಿ, ನವಿಲು, ಜಿಂಕೆ, ಕಾಡು ಹಂದಿ ಸೇರಿದಂತೆ ಹಲವು ಪ್ರಾಣಿಗಳಿವೆ. 

ಇತ್ತೀಚಿನ ದಿನಗಳಲ್ಲಿ ಚಿರತೆ ದಾಳಿ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಗ್ರಾಮದ ಬಳಿ ಇತ್ತೀಚೆಗೆ ಚಿರತೆ ದಾಳಿ ನಡೆಸಿ ಕೋಳಿಗಳನ್ನು ಕೊಂದಿತು. ಮಂಡಿಕಲ್ಲು ಭಾಗದಲ್ಲಿ ಆಗಾಗ್ಗೆ ರಾಸುಗಳ ಮೇಲೆ ದಾಳಿ ನಡೆಯುತ್ತಿರುತ್ತವೆ. ಗೌರಿಬಿದನೂರು, ಚಿಂತಾಮಣಿ ತಾಲ್ಲೂಕಿನಲ್ಲಿಯೂ ಜಾನುವಾರುಗಳು, ಕುರಿ ಮೇಕೆಗಳ ಮೇಲೆ ವನ್ಯಜೀವಿ ದಾಳಿ ನಡೆಯುತ್ತಿವೆ.

ಹೀಗೆ 2023–24ನೇ ಸಾಲಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ದಾಳಿಯಿಂದ 43 ರಾಸುಗಳ ಹಸುನೀಗಿವೆ. ಗೌರಿಬಿದನೂರು ತಾಲ್ಲೂಕಿನಲ್ಲಿಯೇ ಗರಿಷ್ಠ ಪ್ರಕರಣಗಳು ದಾಖಲಾಗಿವೆ.

ಅರಣ್ಯ ಇಲಾಖೆಯು ಮೃತಪಟ್ಟ ರಾಸುಗಳಿಗೆ ಪರಿಹಾರ ನೀಡುತ್ತದೆ. ಜಿಲ್ಲೆಯಲ್ಲಿ 2023–24ನೇ ಸಾಲಿನಲ್ಲಿ ವನ್ಯಜೀವಿಗಳ ದಾಳಿಯಿಂದ ಮೃತಪಟ್ಟ ರಾಸುಗಳಿಗೆ ಪರಿಹಾರ ರೂಪವಾಗಿ ₹ 4.91 ಲಕ್ಷ ನೀಡಿದೆ. ಈ ಹಿಂದೆ ಕಾಡಂಚಿನ ಗ್ರಾಮಗಳ ಜನ ಜಾನುವಾರುಗಳ ಮೇಲೆ ವನ್ಯಜೀವಿಗಳು ದಾಳಿ ನಡೆಸುತ್ತಿದ್ದವು. ಆದರೆ ಈಗ ಎಲ್ಲ ಕಡೆಗಳಲ್ಲಿಯೂ ದಾಳಿಗಳು ನಡೆಯುತ್ತಿವೆ. 

ಈ ಹಿಂದೆ ಮಾನವ ಮತ್ತು ವನ್ಯಜೀವಿ ಸಂಘರ್ಷದಿಂದ ಹಸು, ಎತ್ತು, ಎಮ್ಮೆ, ಕೋಣ ಮೃತಪಟ್ಟರೆ ಅವುಗಳ ಮಾಲೀಕರಿಗೆ ₹ 10 ಸಾವಿರ ಮತ್ತು ಮೇಕೆ, ಕುರಿ ಮೃತಪಟ್ಟರೆ ₹ 5 ಸಾವಿರ ಮತ್ತು ಬೆಳೆ ಹಾನಿಯಾದರೆ ಗರಿಷ್ಠ ₹ 1 ಲಕ್ಷ ಪರಿಹಾರ ನೀಡಲಾಗುತ್ತಿತ್ತು. ನಂತರ ಈ ಪರಿಹಾರದ ಹಣವನ್ನು ಸರ್ಕಾರವು ದ್ವಿಗುಣಗೊಳಿಸಿತು. 

ದೊಡ್ಡ ಮಟ್ಟದಲ್ಲಿ ಬೆಳೆ ಹಾನಿ: ಒಂದೆಡೆ ವನ್ಯಜೀವಿಗಳು ರಾಸುಗಳ ಮೇಲೆ ದಾಳಿ ನಡೆಸಿ ಹತ್ಯೆಗೈದಿದ್ದರೆ ಮತ್ತೊಂದು ಕಡೆ ರೈತರ ಹೊಲ ತೋಟಗಳಲ್ಲಿನ ಬೆಳೆಗಳನ್ನೂ ನಾಶಗೊಳಿಸಿವೆ. ಜಿಂಕೆಗಳು, ನವಿಲುಗಳು, ಕಾಡು ಹಂದಿಗಳು ರೈತರ ಹೊಲ, ತೋಟಗಳಿಗೆ ಲಗ್ಗೆ ಇಟ್ಟು ಬೆಳೆಗಳನ್ನು ತಿಂದು ತೇಗುತ್ತಿವೆ. 

ಹೀಗೆ ಬೆಳೆ ನಾಶವು ಜಿಲ್ಲೆಯಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷಕ್ಕೆ ಪ್ರಮುಖ ಕಾರಣವಾಗಿದೆ. ಕಾಡು ಪ್ರಾಣಿಗಳು ನಮ್ಮ ಬೆಳೆ ನಾಶ ಮಾಡಿವೆ ಪರಿಹಾರ ಕೊಡಿ ಎಂದು 2023–24ನೇ ಸಾಲಿನಲ್ಲಿ ಜಿಲ್ಲೆಯ ಅರಣ್ಯ ಇಲಾಖೆಗೆ 123 ರೈತರು ಅರ್ಜಿ ಸಲ್ಲಿಸಿ ₹ 12,51,389 ಪರಿಹಾರ ಪಡೆದಿದ್ದಾರೆ.

ಹೀಗೆ ಬೆಳೆ ಹಾನಿ ಮತ್ತು ಜಾನುವಾರುಗಳ ಮೇಲೆ ದಾಳಿಯ ವಿಚಾರದಲ್ಲಿ ಜಿಲ್ಲೆಯಲ್ಲಿ ಗೌರಿಬಿದನೂರು ಮೊದಲ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ 2023–24ನೇ ಸಾಲಿನಲ್ಲಿ  ನಡೆದಿರುವ ಮಾನವ ಮತ್ತು ವನ್ಯಜೀವಿ ಸಂಘರ್ಷದಲ್ಲಿ 166 ಪ್ರಕರಣಗಳಲ್ಲಿ ಗೌರಿಬಿದನೂರು ತಾಲ್ಲೂಕಿನಿಂದಲೇ 95 ಪ್ರಕರಣಗಳು ವರದಿಯಾಗಿವೆ.

ವನ್ಯಜೀವಿಗಳು ಬೆಳೆಗಳನ್ನು ಹಾನಿಗೊಳಿಸಿದರೆ ಅವುಗಳಿಗೆ ಅರಣ್ಯ ಇಲಾಖೆ ಪರಿಹಾರ ನೀಡುತ್ತಿದೆ. ಕ್ವಿಂಟಲ್, ಹೆಕ್ಟೇರ್ ಲೆಕ್ಕದಲ್ಲಿ ಆಯಾ ಬೆಳೆಗೆ ಅನುಗುಣವಾಗಿ ಪರಿಹಾರ ನೀಡಲಾಗುತ್ತಿದೆ.

ಕ್ವಿಂಟಲ್ ಭತ್ತಕ್ಕೆ ₹ 2,640, ಮೆಕ್ಕೆ ಜೋಳ ಕ್ವಿಂಟಲ್‌ಗೆ ₹ 2,480, ರಾಗಿ ₹ 2,400, ಶೇಂಗಾ ₹ 6,200, ನುಗ್ಗೆಕಾಯಿ ₹ 6,400, ಹಾಗಲಕಾಯಿ ₹ 3,600, ಟೊಮೆಟೊ ₹ 1,176, ಆಲೂಗಡ್ಡೆ ₹ 4,268, ಬೀನ್ಸ್ ₹ 4780, ಕೊತ್ತಂಬರಿ ₹ 7120 ಪರಿಹಾರವನ್ನು ಅರಣ್ಯ ಇಲಾಖೆ ನೀಡುತ್ತಿದೆ.

‘ನೇರವಾಗಿ ರೈತರ ಖಾತೆಗೆ ಪರಿಹಾರದ ಹಣ ಜಮೆ’

ವನ್ಯಜೀವಿಗಳಿಂದ ಬೆಳೆಗಳಿಗೆ ಮತ್ತು ಸಾಕು ಪ್ರಾಣಿಗೆ ಹಾನಿಯಾದರೆ ಪರಿಹಾರ ಕೋರಿ ರೈತರು ಅರ್ಜಿ ಸಲ್ಲಿಸುವರು. ಡಿಆರ್‌ಎಫ್ ಮತ್ತು ಅರಣ್ಯ ಇಲಾಖೆಯ ಗಾರ್ಡ್‌ಗಳು ಸ್ಥಳಕ್ಕೆ ಭೇಟಿ ನೀಡಿ ಬೆಳೆ ಹಾನಿಯ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸುವರು ಎಂದು ಜಿಲ್ಲಾ ಅರಣ್ಯ ಉಪ ಸಂರಕ್ಷಣಾಧಿಕಾರಿ ರಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.  ಬೆಳೆ ಪರಿಹಾರವನ್ನು ‘ಇ–ಪರಿಹಾರ’ ಆ್ಯಪ್‌ಗೆ ಅಪ್‌ಲೋಡ್ ಮಾಡುವರು. ಆರ್‌ಎಫ್‌ಒ ಎಸಿಎಫ್‌ ಹಂತಗಳನ್ನು ದಾಟಿ ನಂತರ ನಮಗೆ ಅರ್ಜಿಗಳು ಬರುತ್ತವೆ. ಪರಿಹಾರ ಕೋರಿರುವ ಶೇ 90ಕ್ಕೂ ಹೆಚ್ಚು ಅರ್ಜಿಗಳು ವಿಲೇವಾರಿ ಆಗಿವೆ ಎಂದರು. ಪರಿಹಾರ ಕೋರಿರುವ ರೈತರ ಖಾತೆಗಳಿಗೆ ನೇರವಾಗಿಯೇ ಪರಿಹಾರದ ಹಣ ಜಮೆ ಆಗುತ್ತದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.