ADVERTISEMENT

ಚಿಕ್ಕಬಳ್ಳಾಪುರ | ಪ್ರದೀಪ್ ಈಶ್ವರ್ ಬೆಂಬಲಿಗರಿಗೆ ಸಚಿವರಿಂದ ‘ಶಿಷ್ಟಾಚಾರ’ದ ಪಾಠ

ವೇದಿಕೆಯಿಂದಲೇ ನಿರ್ಗಮಿಸಲು ಮುಂದಾಗಿದ್ದ ಡಾ.ಎಂ.ಸಿ.ಸುಧಾಕರ್

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2024, 9:52 IST
Last Updated 2 ಅಕ್ಟೋಬರ್ 2024, 9:52 IST
   

ಚಿಕ್ಕಬಳ್ಳಾಪುರ: ಬ್ಯಾನರ್‌ನಲ್ಲಿ ಶಾಸಕ ಪ್ರದೀಪ್ ಈಶ್ವರ್ ಭಾವಚಿತ್ರ ಇಲ್ಲದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪ್ರದೀಪ್ ಈಶ್ವರ್ ಬೆಂಬಲಿಗರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ‘ಶಿಷ್ಟಾಚಾರ’ದ ಪಾಠ ಹೇಳಿದ ಪ್ರಸಂಗ ನಗರದಲ್ಲಿ ಬುಧವಾರ ನಡೆದ ಗಾಂಧಿ ಜಯಂತಿ ಮತ್ತು ಗಾಂಧಿ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ನಡೆಯಿತು.

ಒಂದು ಹಂತದಲ್ಲಿ ಡಾ.ಎಂ.ಸಿ.ಸುಧಾಕರ್ ವೇದಿಕೆಯಿಂದಲೇ ನಿರ್ಗಮಿಸಲು ಮುಂದಾಗಿದ್ದರು.

ಜಿಲ್ಲಾ ಮಟ್ಟದ ಈ ಕಾರ್ಯಕ್ರಮದ ವೇದಿಕೆ ಹಿಂಬದಿಯಲ್ಲಿ ಬ್ಯಾನರ್ ಅಳವಡಿಸಲಾಗಿತ್ತು. ಬ್ಯಾನರ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಭಾವಚಿತ್ರಗಳು ಇದ್ದವು. 

ADVERTISEMENT

ಸಚಿವ, ಶಾಸಕ ಹಾಗೂ ಅಧಿಕಾರಿಗಳು ವೇದಿಕೆಯಲ್ಲಿ ಆಸೀನರಾದ ಕೆಲ ಹೊತ್ತಿನಲ್ಲಿಯೇ ಶಾಸಕರ ಕೆಲವು ಬೆಂಬಲಿಗರು, ‘ಬ್ಯಾನರ್‌ನಲ್ಲಿ ಶಾಸಕರ ಭಾವಚಿತ್ರವಿಲ್ಲ. ಇದು ಶಿಷ್ಟಾಚಾರದ ಉಲ್ಲಂಘನೆ. ಜಿಲ್ಲಾಡಳಿತ ಭವನದಲ್ಲಿ ಇತ್ತೀಚಿಗೆ ನಡೆದ ಕಾರ್ಯಕ್ರಮದಲ್ಲಿಯೂ ಬ್ಯಾನರ್ ಹಾಕಿಲ್ಲ ಎಂದು ಸಚಿವರನ್ನು  ಏರುಧ್ವನಿಯಲ್ಲಿ ಪ್ರಶ್ನಿಸಿದರು. 

ಈ ವರ್ತನೆಗೆ ತೀವ್ರ ಅಸಮಾಧಾನಗೊಂಡ ಸಚಿವರು, ವೇದಿಕೆಯಿಂದ ನಿರ್ಗಮಿಸಲು ಮುಂದಾದರು. ತಕ್ಷಣವೇ ಅಧಿಕಾರಿಗಳು ಎಚ್ಚೆತ್ತರು. ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ‘ಮಹಾತ್ಮರ ಜಯಂತಿಯ ದಿನವೇ ಈ ರೀತಿಯಲ್ಲಿ ಆಗಬಾರದು.  ಶಿಷ್ಟಾಚಾರ ಪ್ರಕಾರವೇ ವೇದಿಕೆ ಕಾರ್ಯಕ್ರಮ ನಡೆಯುತ್ತಿದೆ’ ಎಂದರು. 

‘ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಬೇರೆಯದ್ದೇ ಇರುತ್ತದೆ. ತಾಲ್ಲೂಕು ಮಟ್ಟದ ಕಾರ್ಯಕ್ರಮ ಮತ್ತು ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಶಿಷ್ಟಾಚಾರ ಬೇರೆಯದ್ದೇ ಇರುತ್ತದೆ. ಶಿಷ್ಟಾಚಾರಕ್ಕೆ ನಾವು ಆದ್ಯತೆ ನೀಡಬೇಕು. ಇಲ್ಲದಿದ್ದರೆ ಶಿಸ್ತು ಇರುವುದಿಲ್ಲ. ಗೊಂದಲವಾಗುತ್ತದೆ. ಶಿಷ್ಟಾಚಾರವನ್ನು ಬಿಟ್ಟು ಬೇರೆ ಮಾಡಲು ಸಾಧ್ಯವಿಲ್ಲ’ ಎಂದು ಸಚಿವರು ತಮ್ಮ ಭಾಷಣದಲ್ಲಿ ಹೇಳಿದರು. 

ಕಾರ್ಯಕ್ರಮ ಮುಗಿಯುತ್ತಿದ್ದಂತೆ ಏರುಧ್ವನಿಯಲ್ಲಿ ಮಾತನಾಡಿದ ಪ್ರದೀಪ್ ಈಶ್ವರ್ ಬೆಂಬಲಿಗರ ನಿಲುವಿಗೆ ಕಾಂಗ್ರೆಸ್‌ ಕೆಲವು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು. 

‘ಇದು ಜಿಲ್ಲಾ ಮಟ್ಟದ ಕಾರ್ಯಕ್ರಮ. ಎಲ್ಲ ಶಾಸಕರ ಭಾವಚಿತ್ರವನ್ನೂ ಹಾಕಬೇಕಾಗುತ್ತದೆ. ಸಂಸದ ಡಾ.ಕೆ.ಸುಧಾಕರ್ ಅವರ ಭಾವಚಿತ್ರವೂ ಇರಬೇಕಾಗುತ್ತದೆ. ಸೂಕ್ಷ್ಮಗಳನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಕಾಂಗ್ರೆಸ್ ನಾಯಕರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.