ಚಿಕ್ಕಬಳ್ಳಾಪುರ:‘ನೈತಿಕತೆ ಕುರಿತು ಮಾತನಾಡುವ ಅನರ್ಹ ಶಾಸಕ ಡಾ.ಕೆ.ಸುಧಾಕರ್ ಅವರು ಸಮ್ಮಿಶ್ರ ಸರ್ಕಾರದಲ್ಲಿ ಪಡೆದುಕೊಂಡ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಮೊದಲು ರಾಜೀನಾಮೆ ಕೊಡಲಿ’ಎಂದು ಚಿಕ್ಕಬಳ್ಳಾಪುರ ಉಪ ಚುನಾವಣೆ ವೀಕ್ಷಕ, ಶಾಸಕ ಎಚ್.ಎನ್.ಶಿವಶಂಕರರೆಡ್ಡಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎರಡು ಬಾರಿ ಕಾಂಗ್ರೆಸ್‌ನಿಂದ ಆಯ್ಕೆಯಾದ, ಮಂಡಳಿ ಅಧ್ಯಕ್ಷ ಸ್ಥಾನ ಪಡೆದ ಸುಧಾಕರ್ ಬಿಜೆಪಿಯವರ ಆಸೆಗೆ ಬಲಿಯಾಗಿ ಪಕ್ಷಕ್ಕೆ ದ್ರೋಹ ಬಗೆದು ಇದೀಗ ನೈತಿಕತೆಯ ಮಾತನಾಡುತ್ತಾರೆ. ಮತದಾರರು ಪ್ರಬುದ್ಧರಿದ್ದಾರೆ ಮುಂಬರುವ ಉಪ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ’ಎಂದು ತಿಳಿಸಿದರು.
ರಾಜಕಾರಣದಲ್ಲಿ ಆಸೆ ಇರಬೇಕು ಆದರೆ ದುರಾಸೆ ಇರಬಾರದು. ಮಂಡಳಿ ಅಧ್ಯಕ್ಷ ಸ್ಥಾನ ಪುಟಗೋಸಿ ಎಂದಿದ್ದ ಸುಧಾಕರ್ ಮೊದಲು ಆ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಳಿಕ ನೈತಿಕತೆಯ ಬಗ್ಗೆ ಮಾತನಾಡಲಿಎಂದರು.
ಜಿಲ್ಲೆಯಲ್ಲಿ ಈವರೆಗೆ ಸಾಕಷ್ಟು ರಾಜಕಾರಣಿಗಳು ಮೌಲ್ಯಾಧಾರಿತ ರಾಜಕಾರಣ ಮಾಡಿದ್ದಾರೆ. ಈವರೆಗೆ ಯಾರು ಕೂಡ ಪಕ್ಷಾಂತರ ಮಾಡಿರಲಿಲ್ಲ. ನೈತಿಕತೆಯ ಬಗ್ಗೆ ಮಾತನಾಡುವ ಸುಧಾಕರ್ ಅವರು ಆ ಕೆಲಸ ಮಾಡಿರುವುದು ಶೋಚನೀಯ. ಇದನ್ನು ಜನ ಕ್ಷಮಿಸುವುದಿಲ್ಲಎಂದರು.
ಸುಧಾಕರ್ ಅವರು ಪಕ್ಷದಲ್ಲಿ ಉಸಿರುಗಟ್ಟಿಸುವ, ಭಯದ ವಾತಾವರಣ ಸೃಷ್ಟಿಸಿದ್ದರು. ಅವರ ಧೋರಣೆಯಿಂದಾಗಿ ಸಾಕಷ್ಟು ಹಿರಿಯರು ಪಕ್ಷದಿಂದ ದೂರವಾಗಿದ್ದರು. ಇದೀಗ ಎಲ್ಲ ಮುಖಂಡರು ಒಗ್ಗೂಡಿ ಪಕ್ಷ ಸಂಘಟನೆಗೆ ಶ್ರಮಿಸಲಿದ್ದಾರೆ. ಒಮ್ಮತದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ನಿರ್ಧರಿಸಲಾಗಿದೆಎಂದು ಹೇಳಿದರು.
ಹಳ್ಳಿಹಳ್ಳಿಯಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಲಾಗುತ್ತದೆ. ಉಪ ಚುನಾವಣೆ ಪ್ರಚಾರಕ್ಕೆ ರಮೇಶ್ ಕುಮಾರ್, ಸಿದ್ದರಾಮಯ್ಯ, ಕೃಷ್ಣಭೈರೆಗೌಡ ಅವರು ಭಾಗವಹಿಸಲಿದ್ದಾರೆ. ಈವರೆಗೆ ಅಭ್ಯರ್ಥಿ ಆಯ್ಕೆಯ ಬಗ್ಗೆ ಚರ್ಚೆ ನಡೆದಿಲ್ಲ’ಎಂದು ತಿಳಿಸಿದರು.
ಮತ್ತೊಬ್ಬ ವೀಕ್ಷಕ, ಶಾಸಕ ವಿ.ಮುನಿಯಪ್ಪ, ಮಾಜಿ ಶಾಸಕರಾದ ಶಿವಾನಂದ, ಎಸ್.ಎಂ.ಮರಿಯಪ್ಪ, ಮುಖಂಡರಾದ ಜಿ.ಎಚ್.ನಾಗರಾಜ್, ಕೆ.ವಿ.ನವೀನ್ ಕಿರಣ್, ಯಲುವಹಳ್ಳಿ ರಮೇಶ್ ಮಾತನಾಡಿ, 'ಪಕ್ಷದ್ರೋಹ ಬಗೆದ ಸುಧಾಕರ್ ಅವರಿಗೆ ಉಪ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು' ಎಂದು ಆಗ್ರಹಿಸಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಮಾತನಾಡಿ, ‘ಪಂಚಾಯಿತಿಗಳು, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಚಿಹ್ನೆಯಿಂದ ಗೆದ್ದವರು ಸುಧಾಕರ್ ಅವರ ಜತೆ ಗುರುತಿಸಿಕೊಂಡು ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗುತ್ತದೆ’ಎಂದು ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.