ADVERTISEMENT

ಚಿಕ್ಕಬಳ್ಳಾಪುರ | ತೆವಳುತ್ತಿದೆ ಜಲ ಜೀವನ್ ಕಾಮಗಾರಿ

ಜಿಲ್ಲೆಯಲ್ಲಿ ಕಾರ್ಯಾದೇಶ ಪಡೆದ 1,594 ಕಾಮಗಾರಿಗಳಲ್ಲಿ 39 ಮಾತ್ರ ‍ ಪೂರ್ಣ!

ಡಿ.ಎಂ.ಕುರ್ಕೆ ಪ್ರಶಾಂತ
Published 20 ಜುಲೈ 2024, 7:43 IST
Last Updated 20 ಜುಲೈ 2024, 7:43 IST
<div class="paragraphs"><p>ಸಾಂಕೇತಿಕ ಚಿತ್ರ&nbsp;</p></div>

ಸಾಂಕೇತಿಕ ಚಿತ್ರ 

   

ಚಿಕ್ಕಬಳ್ಳಾಪುರ: ಪ್ರತಿ ಮನೆ ಮನೆಗೂ ನಲ್ಲಿ ಸಂಪರ್ಕ ಕಲ್ಪಿಸುವ ಜಲಜೀವನ್ ಮಿಷನ್ ಯೋಜನೆ ಜಿಲ್ಲೆಯಲ್ಲಿ ವೇಗ ಪಡೆಯುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ನಡೆಸುವ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಜಲ ಜೀವನ್ ಮಿಷನ್ ಯೋಜನೆಯ ವಿಚಾರವೂ ಪ್ರಮುಖವಾಗಿ ಚರ್ಚೆ ಆಗುತ್ತಿದೆ. 

ಜಿಲ್ಲೆಯಲ್ಲಿ ಜೆಜೆಎಂ ಕಾಮಗಾರಿಯು ಆಮೆಗತಿಯಲ್ಲಿದೆ ಎನ್ನುವುದಕ್ಕೆ ಕಾಮಗಾರಿಗಳು ಪೂರ್ಣವಾಗಿರುವುದೇ ಸಾಕ್ಷಿ. ಕೆಲವು ಗ್ರಾಮಗಳಲ್ಲಿ ಗುತ್ತಿಗೆದಾರರು ಕಾಮಗಾರಿಗಳನ್ನು ಅರೆ ಬರೆಯಾಗಿ ನಡೆಸಿದ್ದಾರೆ ಎನ್ನುವ ಆರೋಪಗಳು ಸಹ ಕೇಳಿ ಬರುತ್ತಿವೆ. ಹೀಗೆ ಪ್ರತಿ ಕುಟುಂಬಗಳಿಗೆ ನೀರಿನ ಸಂಪರ್ಕ ಕಲ್ಪಿಸಬೇಕಾದ ಮಹತ್ವದ ಯೋಜನೆ ಜಿಲ್ಲೆಯಲ್ಲಿ ತೆವಳುತ್ತ ಸಾಗಿದೆ. 

ADVERTISEMENT

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜಲಜೀವನ್ ಮಿಷನ್‌ನಡಿ 1,640 ಕಾಮಗಾರಿಗಳ ಗುರಿಯನ್ನು ಹೊಂದಲಾಗಿದೆ. ಒಟ್ಟು 2.48 ಲಕ್ಷ ಮನೆಗಳಿಗೆ ನಲ್ಲಿ ಸಂಪರ್ಕಿಸಬೇಕಾದ ಗುರಿ ಇದೆ.

1,640 ಕಾಮಗಾರಿಗಳಿಗೂ ಆಡಳಿತಾತ್ಮಕ ಅನುಮೋದನೆ ದೊರೆತು ಟೆಂಡರ್ ಸಹ ಆಗಿದೆ. 1,594 ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗಿದೆ. ‌ಕಾರ್ಯಾದೇಶ ಪಡೆದಿರುವ ಕಾಮಗಾರಿಗಳ ಪೈಕಿ 1,222 ಕಾಮಗಾರಿಗಳು ಇನ್ನೂ ಆರಂಭವಾಗಬೇಕಿದೆ. 372 ಕಾಮಗಾರಿಗಳು ಆರಂಭವಾಗಿವೆ. ಈ ಪೈಕಿ 39 ಕಾಮಗಾರಿಗಳು ಪೂರ್ಣವಾಗಿವೆ. 

ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಜಲಜೀವನ ಮಿಷನ್ ಯೋಜನಾ ವೆಚ್ಚವು ₹1 ಕೋಟಿಯ ಒಳಗೆ ಇದ್ದರೆ 140ಕ್ಕೂ ಹೆಚ್ಚು ಗ್ರಾಮಗಳಲ್ಲಿ ₹1 ಕೋಟಿಗಿಂತ ಹೆಚ್ಚಿದೆ. 

ಹೀಗೆ ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಕಾಮಗಾರಿ ಆರಂಭವಾಗಿ ವರ್ಷ ಸಮೀಪಿಸುತ್ತಿದ್ದರೂ ಪೂರ್ಣವಾಗಿರುವುದು ಮಾತ್ರ 39 ಕಾಮಗಾರಿಗಳು ಮಾತ್ರ! 

ರಸ್ತೆ ಅಗೆದು ಅಧ್ವಾನಗಳು:

ಜಲ ಜೀವನ್ ಮಿಷನ್ ಕಾಮಗಾರಿಗಾಗಿ ಹಳ್ಳಿಗಳಲ್ಲಿ ರಸ್ತೆಗಳನ್ನು ಅಗೆಯಲಾಗಿದೆ. ಹೀಗೆ ಅಗೆದ ರಸ್ತೆಗಳನ್ನು ಗುತ್ತಿಗೆದಾರರು ಸೂಕ್ತವಾಗಿ ಮುಚ್ಚಿಲ್ಲ. ಗುತ್ತಿಗೆದಾರರು ಕಾಮಗಾರಿಗಳಿಗೆ ವೇಗ ನೀಡದಿರುವುದು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಜೆಜೆಎಂ ಕಾಮಗಾರಿಯ ವೇಗವಾಗಿ ನಡೆಯುತ್ತಿಲ್ಲ ಎನ್ನುವ ಆರೋಪಗಳು ವ್ಯಾಪಕವಾಗಿವೆ.  

2023ರ ಆಗಸ್ಟ್‌ನಲ್ಲಿ ಜಲಜೀವನ್ ಮಿಷನ್ ಯೋಜನೆ ಅನುಷ್ಠಾನ ಸಂಬಂಧ ಜಿಲ್ಲೆಯಲ್ಲಿ ಎದುರಾಗಿರುವ ತೊಡಕುಗಳನ್ನು ನಿವಾರಿಸಲು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಸಭೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ನಡೆಸಿದ್ದರು. ಸಭೆಯಲ್ಲಿ 150ಕ್ಕೂ ಹೆಚ್ಚು ಗುತ್ತಿಗೆದಾರರು ಭಾಗವಹಿಸಿದ್ದರು.

ಗ್ರಾಮೀಣ ಭಾಗದಲ್ಲಿ ಮನೆಗಳಿಗೆ ಕುಡಿಯುವ ನೀರು ಪೂರೈಸುವ ಜಲಜೀವನ್ ಮಿಷನ್ ಯೋಜನೆ ಜಿಲ್ಲೆಯಲ್ಲಿ ವಿಫಲ ಆಗಲು ಬಿಡುವುದಿಲ್ಲ. ಯೋಜನೆ ಯಶಸ್ವಿಗೆ ಸ್ಥಳೀಯರು, ಗುತ್ತಿಗೆದಾರರ ಸಹಕಾರ ಅಗತ್ಯ. 2024ರ ವೇಳೆಗೆ ಯೋಜನೆಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕಿದೆ. ಯೋಜನೆಯ ಅನುಷ್ಠಾನಕ್ಕೆ ಕಾಲಮಿತಿ ನಿಗದಿ ಪಡಿಸಬೇಕು. ಕಾರ್ಯಾದೇಶ ನೀಡಲು ವಿಳಂಬ ಮಾಡಬಾರದು. ಪೈಪ್‌ಗಳ ಗುಣಮಟ್ಟ ಪ್ರಮಾಣೀಕರಿಸಲು ಕಾಲ ವ್ಯಯ ಆಗಬಾರದು. ಕಾರ್ಯಾದೇಶ ನೀಡಿದ ದಿನದಿಂದ ಯೋಜನೆ ಫಲಾನುಭವಿಗೆ ತಲುಪುವವರೆಗೆ ಯಾವ ಕೆಲಸಕ್ಕೆ ಎಷ್ಟು ಸಮಯ ಅಗತ್ಯ ಎಂದು ಕಾಲಮಿತಿ ನಿಗದಿ ಪಡಿಸಬೇಕು. ಆ ಪ್ರಕಾರ ಯೋಜನೆ ಅನುಷ್ಠಾನ ಆಗಬೇಕು ಎಂದು ಸಭೆಯಲ್ಲಿ ಸಚಿವರು ಸೂಚಿಸಿದರು.

ಹೀಗೆ ಸೂಚಿಸಿ ವರ್ಷ ಸಮೀಪಿಸುತ್ತಿದೆ. ಆದರೆ ಬೆರಳೆಣಿಕೆಯ ಕಾಮಗಾರಿಗಳು ಮಾತ್ರ ಪೂರ್ಣವಾಗಿವೆ. ಕೆಲವು ಗುತ್ತಿಗೆದಾರರು ಎರಡು ಮೂರು ಕಾಮಗಾರಿಗಳನ್ನು ಪಡೆದಿದ್ದಾರೆ. ಈ ಕಾರಣದಿಂದಲೂ ವೇಗ ದೊರೆಯುತ್ತಿಲ್ಲ ಎನ್ನಲಾಗುತ್ತಿದೆ.

ಇತ್ತೀಚೆಗೆ ನಡೆಸ ಕೆಡಿಪಿ ಸಭೆಯಲ್ಲಿಯೂ ಜಲ ಜೀವನ್ ಮಿಷನ್ ಕಾಮಗಾರಿಯ ಕುರಿತು ಚರ್ಚೆ ನಡೆಯಿತು.

‘ಕೆಲವು ಗುತ್ತಿಗೆದಾರರು ಅರೆ ಬರೆಯಾಗಿ ಕೆಲಸ ಮಾಡಿದ್ದರೂ ಅವರ ಪೂರ್ಣ ಬಿಲ್ ಬಿಡುಗಡೆ ಮಾಡಲಾಗಿದೆ. ಕೆಲವರು ಕಾಮಗಾರಿ ಪೂರ್ಣಗೊಳಿಸಿದ್ದರೂ ಬಿಲ್ ಆಗಿಲ್ಲ ಎನ್ನುವ ದೂರುಗಳಿವೆ. ಕೆಲಸ ಕಡಿಮೆ ಆಗಿದ್ದರೂ ಬಿಲ್ ಬಿಡುಗಡೆ ಮಾಡಿದ್ದು ಹೇಗೆ? ಹೀಗೆ ಹಣ ಬಿಡುಗಡೆ ಮಾಡಿದವರಿಗೆ ನೋಟಿಸ್ ನೀಡಿ ಶಿಸ್ತು ಕ್ರಮಜರುಗಿಸಬೇಕು’ ಎಂದು ಸಚಿವರು ಇಲಾಖೆ ಅಧಿಕಾರಿಗೆ ಸಭೆಯಲ್ಲಿ ನಿರ್ದೇಶನ ನೀಡಿದರು.  

ಹೀಗೆ ಜಿಲ್ಲೆಯಲ್ಲಿ ಮಹತ್ವದ ಯೋಜನೆಗೆ ಅಕ್ರಮದ ವಾಸನೆಯೂ ಬಡಿಯುತ್ತಿದೆ. 

ತಾಲ್ಲೂಕು;ಗುರಿ; ಅಂದಾಜು ವೆಚ್ಚ (ಲಕ್ಷಗಳಲ್ಲಿ); ಕಾರ್ಯಾದೇಶ;ಕಾಮಗಾರಿ ಪೂರ್ಣ
ಬಾಗೇಪಲ್ಲಿ;360;17,853.69;343;3
ಚಿಕ್ಕಬಳ್ಳಾಪುರ;233;16,041.85;231;20
ಚಿಂತಾಮಣಿ;374;23,278.22;365;1
ಗೌರಿಬಿದನೂರು;296;20,504.83;287;3
ಗುಡಿಬಂಡೆ;113;5,166.13;107;12
ಶಿಡ್ಲಘಟ್ಟ;264;16,945.98;261;0
ಒಟ್ಟು;1,640;99,790.7;1,594;39

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.