ADVERTISEMENT

ಚಿಕ್ಕಬಳ್ಳಾಪುರ | ಎಲ್ಲ ಜಿಲ್ಲಾ ಪಂಚಾಯತ್‌ನಲ್ಲೂ ಸುಧಾಕರ್‌ಗೆ ಲೀಡ್

ಚಿಕ್ಕಬಳ್ಳಾಪುರ ಕ್ಷೇತ್ರ–ವಿಧಾನಸಭೆಗೆ ತಿರಸ್ಕಾರ; ಲೋಕಸಭೆಗೆ ಪುರಸ್ಕಾರ

ಡಿ.ಎಂ.ಕುರ್ಕೆ ಪ್ರಶಾಂತ
Published 12 ಜೂನ್ 2024, 7:06 IST
Last Updated 12 ಜೂನ್ 2024, 7:06 IST
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ   

ಚಿಕ್ಕಬಳ್ಳಾಪುರ: ಒಂದು ವರ್ಷದ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ 10,642 ಮತಗಳ ಅಂತರದಿಂದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಡಾ.ಕೆ.ಸುಧಾಕರ್ ಸೋಲು ಅನುಭವಿಸಿದ್ದರು. ಈಗ ಲೋಕಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 20,941 ಮತಗಳ ಮುನ್ನಡೆ ಪಡೆಯುವ ಮೂಲಕ ಸುಧಾಕರ್ ಸೋತ ನೆಲೆದಲ್ಲಿಯೇ ಮತ್ತೆ ಗೆಲುವು ಸಾಧಿಸಿದ್ದಾರೆ. 

ಒಂದೇ ವರ್ಷದ ಹಿಂದೆ ಕಳೆದಕೊಂಡ ಮತಗಳಿಗಿಂತ ಹೆಚ್ಚು ಮತಗಳನ್ನು ಪಡೆದಿದ್ದಾರೆ. ಚಿಕ್ಕಬಳ್ಳಾಪುರ ನಗರ ಸೇರಿದಂತೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಐದೂ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಡಾ.ಕೆ.ಸುಧಾಕರ್ ಲೀಡ್ ಪಡೆದಿದ್ದಾರೆ. ಈ ಮೂಲಕ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ‍ಪುಟಿಯುವಂತೆ ಮಾಡಿದ್ದಾರೆ. 

ಚಿಕ್ಕಬಳ್ಳಾಪುರ ನಗರದಲ್ಲಿ 1,650, ತಿಪ್ಪೇನಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ 3,400, ಮಂಡಿಕಲ್ಲು ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ 2,100, ನಂದಿ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ 5,700, ಮಂಚೇನಹಳ್ಳಿ 3,700 ಮತ್ತು ಮಂಚನಬಲೆ ಜಿ.ಪಂ ವ್ಯಾಪ್ತಿಯಲ್ಲಿ 4,400 ಮತಗಳ ಮುನ್ನಡೆಯನ್ನು ಸುಧಾಕರ್ ಪಡೆದಿದ್ದಾರೆ.

ADVERTISEMENT

ವಿಧಾನಸಭಾ ಕ್ಷೇತ್ರದ ಪಂಚಾಯಿತಿ ಕೇಂದ್ರಗಳು, ಪ್ರಮುಖ ಗ್ರಾಮಗಳಲ್ಲಿಯೂ ಬಿಜೆಪಿಗೆ ಮನ್ನಣೆ ದೊರೆತಿದೆ. 

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಸುತ್ತಿನಿಂದ ಕೊನೆಯ ಸುತ್ತಿನವರೆಗೂ ಕಾಂಗ್ರೆಸ್ ಅಭ್ಯರ್ಥಿ  ಪ್ರದೀಪ್ ಈಶ್ವರ್ ಮುನ್ನಡೆ ಪಡೆದುಕೊಂಡಿದ್ದರು. ಈ ಬಾರಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಸುತ್ತಿನಿಂದ ಎಣಿಕೆ ಪೂರ್ಣವಾದ 30ನೇ ಸುತ್ತಿನವರೆಗೂ ಡಾ.ಕೆ.ಸುಧಾಕರ್ ಮುನ್ನಡೆ ಪಡೆದಿದ್ದಾರೆ. ಎಲ್ಲ ಸುತ್ತುಗಳಲ್ಲಿಯೂ ಅವರ ಮತಗಳ ಪ್ರಮಾಣ ಹೆಚ್ಚುತ್ತಲೇ ಇತ್ತು.

ಜಾತಿ ಲೆಕ್ಕಾಚಾರಗಳೂ ಉಲ್ಟಾಪಲ್ಟಾ: ಚಿಕ್ಕಬಳ್ಳಾಪುರ ನಗರದಲ್ಲಿ ಜಾತಿ ಆಧಾರಿತ ಮತಗಳ ಸಂಖ್ಯೆಯನ್ನು ಗಮನಿಸಿದರೆ ಕಾಂಗ್ರೆಸ್ ಮುನ್ನಡೆ ಪಡೆಯುತ್ತದೆ ಎನ್ನುವ ಲೆಕ್ಕಾಚಾರಗಳು ಇದ್ದವು. ಆದರೆ ಈ ಮಾತುಗಳು ಚಿಕ್ಕಬಳ್ಳಾಪುರ ನಗರವಷ್ಟೇ ಅಲ್ಲ ಇಡೀ ವಿಧಾನಸಭಾ ಕ್ಷೇತ್ರದಲ್ಲಿಯೇ ತಪ್ಪಾಗಿವೆ. 

ಮುಸ್ಲಿಂ ಸಮುದಾಯದ ಬಾಹುಳ್ಯದ ಪ್ರದೇಶಗಳಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಗರಿಷ್ಠ ಮತಗಳನ್ನು ಪಡೆದಿದೆ. ಉಳಿದಂತೆ ಕೆಲವು ಬೂತ್‌ಗಳನ್ನು ಹೊರತುಪಡಿಸಿದರೆ ಬಿಜೆಪಿಗೆ ಎಲ್ಲ ಜಾತಿ, ಸಮುದಾಯಗಳ ಮತದಾರರು ಮನ್ನಣೆ ನೀಡಿರುವುದು ಕಂಡು ಬರುತ್ತದೆ. ಈ ಜಾತಿಯ ಮತದಾರರು ಈ ವಾರ್ಡ್‌ಗಳಲ್ಲಿ, ಈ ಗ್ರಾಮಗಳಲ್ಲಿ ಹೆಚ್ಚಿದ್ದಾರೆ. ಅವರು ಕಾಂಗ್ರೆಸ್‌ಗೆ ಮತ ನೀಡುತ್ತಾರೆ ಎಂದು ಖಚಿತವಾಗಿ ಹೇಳುತ್ತಿದ್ದ ಕಡೆಗಳಲ್ಲಿಯೂ ಬಿಜೆಪಿ ಲೀಡ್ ಪಡೆದಿದೆ.

ಜಿಲ್ಲಾ ಪಂಚಾಯಿತಿ ಚುನಾವಣೆಗೆ ಬಲ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಎಲ್ಲ ಜಿ.ಪಂಗಳಲ್ಲಿ ಬಿಜೆಪಿ ಲೀಡ್ ಪಡೆದಿರುವುದು ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಪಕ್ಷವು ಪ್ರಾಬಲ್ಯಗಳಿಸುವ ಸೂಚನೆ ಎಂದು ಬಿಜೆಪಿ ಮುಖಂಡರು ಪ್ರತಿಪಾದಿಸುತ್ತಿದ್ದಾರೆ.

ಮುಂದೆ ನಡೆಯುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳ ಬಗ್ಗೆ ಪಕ್ಷದ ಕಾರ್ಯಕರ್ತರಲ್ಲಿ ವಿಶ್ವಾಸವನ್ನು ಹೆಚ್ಚಿಸಿದೆ. ಮಂಚೇನಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿಜೆಪಿಗೆ ಲೀಡ್ ದೊರೆಯುವ ಸಾಧ್ಯತೆ ಕಡಿಮೆ ಎಂದೇ ವಿಶ್ಲೇಷಿಸಲಾಗುತ್ತಿತ್ತು. ಆದರೆ ಮಂಚೇನಹಳ್ಳಿಯನ್ನು ತಾಲ್ಲೂಕು ಕೇಂದ್ರ ಮಾಡಲು ಕಾರಣಕರ್ತರಾದ ಡಾ.ಕೆ.ಸುಧಾಕರ್ ಅವರಿಗೆ ಅಲ್ಲಿನ ಮತದಾರರು ಸಹ ಉತ್ತಮವಾಗಿ ಮನ್ನಣೆ ನೀಡಿದ್ದಾರೆ.

ಕಾಂಗ್ರೆಸ್ ಮತ ಬಿಜೆಪಿಗೆ!

ಕಳೆದ ವಿಧಾನಸಭೆ ಚುನಾವಣೆಯ ಅಂತಿಮ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರನ್ನು ಸೋಲಿಸಬೇಕು ಎಂದು ಜೆಡಿಎಸ್ ಮುಖಂಡರು ಕಾಂಗ್ರೆಸ್‌ಗೆ ಮತ ನೀಡಿದರು. ಜೆಡಿಎಸ್‌ 19 ಸಾವಿರ ಮತಗಳನ್ನು ಪಡೆಯಲಷ್ಟೇ ಸಾಧ್ಯವಾಗಿತ್ತು. ಈ ಬಾರಿ ಜೆಡಿಎಸ್‌ ಮತ್ತು ಬಿಜೆಪಿ ಮೈತ್ರಿ ಪರಿಣಾಮ ಜೆಡಿಎಸ್ ಮತಗಳು ಬಿಜೆಪಿಗೆ ದಕ್ಕಿದವು. ಜೊತೆಗೆ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಬೇಸರಗೊಂಡ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಸಹ ಬಿಜೆಪಿಗೆ ಮತ ನೀಡಿದ್ದಾರೆ ಎನ್ನುವ ಮಾತು ಚಿಕ್ಕಬಳ್ಳಾಪುರ ರಾಜಕಾರಣದಲ್ಲಿ ಜೋರಾಗಿದೆ. 

‘ಅಭಿವೃದ್ಧಿಗೆ ಮನ್ನಣೆ’

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಎಲ್ಲ ಜಾತಿಯ ಮತದಾರರು ಸಹ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಬೆಂಬಲಿಸಿದ್ದಾರೆ. ಡಾ.ಕೆ.ಸುಧಾಕರ್ ಅವರು ಶಾಸಕ ಸಚಿವರಾಗಿದ್ದ ಅವಧಿಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರ ಹೆಚ್ಚು ಅಭಿವೃದ್ಧಿ ಹೊಂದಿತು. ಇದು ಜನರ ಮನಸ್ಸಿನಲ್ಲಿರುವ ಪರಿಣಾಮ ಹೆಚ್ಚು ಮತಗಳು ದೊರೆತವು ಎಂದು ನಗರಸಭೆ ಮಾಜಿ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ ಬಾಬು ತಿಳಿಸಿದರು. ಸುಧಾಕರ್ ಅವರಿಗೆ ಚಿಕ್ಕಬಳ್ಳಾಪುರದಲ್ಲಿ ದೊರೆತ ಮತಗಳು ಅವರು ಮಾಡಿರುವ ಅಭಿವೃದ್ಧಿಗೆ ಮನ್ನಣೆಯಾಗಿದೆ. ಕಾಂಗ್ರೆಸ್ ಆಡಳಿತದ ಈ ಒಂದು ವರ್ಷದಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಯಾವ ಕೆಲಸಗಳು ನಡೆದಿವೆ ಎಂದು ನೋಡಿದರೆ ಶೂನ್ಯ ಎನ್ನುವುದು ತಿಳಿಯುತ್ತದೆ. ಚಿಕ್ಕಬಳ್ಳಾಪುರ ಜನರು ಅಭಿವೃದ್ಧಿಗಾಗಿಯೇ ಸುಧಾಕರ್ ಅವರನ್ನು ಗೆಲ್ಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.