ADVERTISEMENT

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ: ಬಿಜೆಪಿಯಿಂದ ಅಂತರ ಕಾಯ್ದುಕೊಂಡ ಸಂಸದ ಬಚ್ಚೇಗೌಡ

ವಿಧಾನಸಭೆ, ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಪ್ರಚಾರ ನಡೆಸದ ಸಂಸದ

ಡಿ.ಎಂ.ಕುರ್ಕೆ ಪ್ರಶಾಂತ
Published 20 ಜೂನ್ 2023, 5:16 IST
Last Updated 20 ಜೂನ್ 2023, 5:16 IST
ಬಿ.ಎನ್.ಬಚ್ಚೇಗೌಡ
ಬಿ.ಎನ್.ಬಚ್ಚೇಗೌಡ   

ಚಿಕ್ಕಬಳ್ಳಾಪುರ: ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಒಂದು ವಿಧಾನಸಭಾ ಕ್ಷೇತ್ರದಲ್ಲಿಯೂ ಬಿಜೆಪಿ ಅಭ್ಯರ್ಥಿ ಪರವಾಗಿ ಮತಯಾಚಿಸಲಿಲ್ಲ. ಪಕ್ಷದ ರಾಷ್ಟ್ರ ಮತ್ತು ರಾಜ್ಯ ಮಟ್ಟದ ನಾಯಕರು ಪ್ರಚಾರಕ್ಕೆ ಬಂದರೂ ಅವರ ಜೊತೆ ವೇದಿಕೆ ಹಂಚಿಕೊಳ್ಳಲಿಲ್ಲ. ಚಿಕ್ಕಬಳ್ಳಾಪುರದಲ್ಲಿ ನಡೆಯುವ ಸರ್ಕಾರಿ ಮತ್ತು ಪಕ್ಷದ ಕಾರ್ಯಕ್ರಮಗಳಿಗೂ ಗೈರು– ಚಿಕ್ಕಬಳ್ಳಾಪುರ ಸಂಸದ ಬಿ.ಎನ್.ಬಚ್ಚೇಗೌಡ ಅವರ ಈ ನಡೆಯು ಅವರು ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳುತ್ತಿರುವುದನ್ನು ಎತ್ತಿ ತೋರಿಸುತ್ತಿದೆ. 

2024ರ ಲೋಕಸಭಾ ಚುನಾವಣೆಯಲ್ಲಿ ಬಿ.ಎನ್.ಬಚ್ಚೇಗೌಡ ಅವರಿಗೆ ಟಿಕೆಟ್ ದೊರೆಯುವುದಿಲ್ಲ. 80 ವರ್ಷ ದಾಟಿರುವ ಗೌಡರು ಸಹ ಸ್ಪರ್ಧೆಗೆ ಆಸಕ್ತರಾಗಿಲ್ಲ ಎನ್ನುತ್ತವೆ ಬಿಜೆಪಿ ಮೂಲಗಳು. ಲೋಕಸಭಾ ಚುನಾವಣೆಗೆ ಇನ್ನೂ 10 ತಿಂಗಳಿದೆ. ಆದರೆ ಸಂಸದರು ಮಾತ್ರ ಈಗಿನಿಂದಲೇ ಪಕ್ಷದಿಂದ ದೂರ ಸರಿಯುತ್ತಿದ್ದಾರೆ.

ಇತ್ತ ಬಿಜೆಪಿ ಕಾರ್ಯಕ್ರಮಗಳಿಂದ ದೂರವಿರುವ ಅವರು ಹೊಸಕೋಟೆ ಕಾಂಗ್ರೆಸ್ ಶಾಸಕ ಹಾಗೂ ಪುತ್ರ ಶರತ್‌ ಅವರು ಹೊಸಕೋಟೆಯಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳಲ್ಲಿ ಭಾಗಿ ಆಗುತ್ತಿದ್ದಾರೆ. ಆದರೆ ನೆರೆಯ ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿಯೇ ಏಳೆಂಟು ತಿಂಗಳಾಗಿದೆ. 

ADVERTISEMENT

ಜೂನ್ 16ರಂದು ಚಿಕ್ಕಬಳ್ಳಾಪುರದಲ್ಲಿ ಆಯೋಜಿಸಿದ್ದ ಯುವ ಉತ್ಸವಕ್ಕೆ ಕೊನೆಯ ಕ್ಷಣದಲ್ಲಿ ಸಂಸದರು ಗೈರಾದರು. ಆ ಕಾರಣದಿಂದ ಕಾರ್ಯಕ್ರಮವೇ ರದ್ದಾಯಿತು. ಜೂನ್ 12ರಂದು ಬೆಂಗಳೂರಿನ ತಮ್ಮ ನಿವಾಸದಲ್ಲಿ ಬಚ್ಚೇಗೌಡ ಉತ್ಸವದ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿದ್ದರು. ಆದರೆ ಕಾರ್ಯಕ್ರಮಕ್ಕೆ ಬರಲಿಲ್ಲ. ಸಂಸದರಿಲ್ಲದೆ ಕಾರ್ಯಕ್ರಮ ನಡೆಸಬಾರದು ಎಂಬ ಸೂಚನೆ ಬಂದ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಮುಂದೂಡುವ ನಿರ್ಧಾರ ಕೈಗೊಳ್ಳಲಾಯಿತು ಎಂದು ಮೂಲಗಳು ತಿಳಿಸಿವೆ.  

ಬಿಜೆಪಿ ಪರವಾಗಿ ಪ್ರಚಾರವಿಲ್ಲ: ವಿಧಾನಸಭೆ ಚುನಾವಣೆಯಷ್ಟೇ ಅಲ್ಲ 2022ರಲ್ಲಿ ವಿಧಾನ ಪರಿಷತ್‌ನ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ನಡೆದ ಚುನಾವಣೆ ಪ್ರಚಾರದಲ್ಲಿಯೂ ಸಂಸದರು ಭಾಗಿಯಾಗಲಿಲ್ಲ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಅರಳಿಸಿದ ಕೀರ್ತಿ ಬಚ್ಚೇಗೌಡ ಅವರದ್ದು. 

ಇಂತಹ ಬಚ್ಚೇಗೌಡರು ಜಿಲ್ಲೆಗೆ ಅಪರೂಪದ ಅತಿಥಿ ಆಗಿದ್ದಾರೆ. 2022ರ ನವೆಂಬರ್‌ನಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಗೆ ಹಾಜರಾಗಿದ್ದರು. ಅಲ್ಲಿಂದ ಯಾವುದೇ ಸರ್ಕಾರಿ ಕಾರ್ಯಕ್ರಮಗಳು, ರಾಷ್ಟ್ರೀಯ ಹಬ್ಬಗಳು ಸೇರಿದಂತೆ ಬಹುತೇಕ ಕಾರ್ಯಕ್ರಮಗಳಿಗೆ ಗೈರಾಗಿದ್ದಾರೆ. ಅಧಿಕಾರಿಗಳು ಶಿಷ್ಟಾಚಾರದ ಪ್ರಕಾರ ಸರ್ಕಾರದ ಆಹ್ವಾನ ಪತ್ರಿಕೆಗಳಲ್ಲಿ ಅವರ ಹೆಸರು ಮುದ್ರಿಸುತ್ತಿದ್ದಾರೆ. ಸರ್ಕಾರಿ ಮತ್ತು ಪಕ್ಷದ ಕಾರ್ಯಕ್ರಮಗಳಲ್ಲಿ ಅವರ ಹೆಸರಿನ ಜತೆ, ಭಾವಚಿತ್ರ ಮಾತ್ರ ಇರುತ್ತದೆ.

ಪುತ್ರ ಶರತ್ ಕಾಂಗ್ರೆಸ್ ಪಕ್ಷದಲ್ಲಿ ಶಾಸಕರಾಗಿರುವುದರಿಂದ ಬಚ್ಚೇಗೌಡರು ಬಿಜೆಪಿಯ ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಳ್ಳಲು ಕಾರಣವಾಗಿದೆಯೇ ಎನ್ನುವ ಭಾವನೆ ಜನರಲ್ಲಿ ಮೂಡಿದೆ.

ಕಾಂಗ್ರೆಸ್‌ ಗ್ಯಾರಂಟಿ ಹೊಗಳಿದ್ದ ಬಿಜೆಪಿ ಸಂಸದ

ಹೊಸಕೋಟೆಯಲ್ಲಿ ಜೂನ್ 12ರಂದು ನಡೆದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಂಸದ ಬಚ್ಚೇಗೌಡ ಕಾಂಗ್ರೆಸ್ ಗ್ಯಾರಂಟಿಗಳನ್ನು ಹೊಗಳಿದ್ದರು.  ಹೊಸಕೋಟೆ ತಾಲ್ಲೂಕಿನಲ್ಲಿ ಶರತ್ ಬಚ್ಚೇಗೌಡರನ್ನು ಗೆಲ್ಲಿಸಿ ಯುವ ವಿದ್ಯಾವಂತ ಹಾಗೂ ಕೆಲಸ ಮಾಡಲು ಶಕ್ತಿ ಇರುವ ಉತ್ತಮ ನಾಯಕನನ್ನು ಆಯ್ಕೆ ಮಾಡಿಕೊಂಡಿದ್ದೀರಿ. ಕಾಂಗ್ರೆಸ್ ಪಕ್ಷ ನೀಡಿರುವ ಗ್ಯಾರಂಟಿಗಳ ಬಗ್ಗೆ ಜನರಲ್ಲಿ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ದೇಶದಲ್ಲಿ ಯಾರೂ ಸಹ 200 ಯುನಿಟ್ ವಿದ್ಯುತ್ ಉಚಿತ ಎಂದು ಘೋಷಿಸಿರಲಿಲ್ಲ. ರಾಜ್ಯ ಸರ್ಕಾರದ ಯೋಜನೆಗಳಿಂದ ಬಡವರಿಗೆ ಹೆಚ್ಚಿನ ಸಹಾಯ ಆಗಲಿದೆ ಎಂದು ಬಚ್ಚೇಗೌಡ ಹೇಳಿದ್ದರು.

22ರ ಸಭೆಯಲ್ಲಿ ಭಾಗಿಯಾಗುವರೇ?

ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ರಾಜ್ಯ ಬಿಜೆಪಿಯು ನಾಯಕರ ತಂಡಗಳನ್ನು ರಚಿಸಿದೆ. ಕೋಲಾರ ಚಿಕ್ಕಬಳ್ಳಾಪುರ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಆರ್.ಅಶೋಕ್ ನೇತೃತ್ವದ ತಂಡ ಭೇಟಿ ನೀಡಲಿದೆ. ಸಂಸದ ಪ್ರತಾಪ್ ಸಿಂಹ ಎಸ್.ಮುನಿಸ್ವಾಮಿ ಪಿ.ಸಿ.ಮೋಹನ್ ಶಾಸಕ ಎಸ್.ಟಿ.ಸೋಮಶೇಖರ್ ಮತ್ತಿತರರು ತಂಡದಲ್ಲಿ ಇದ್ದಾರೆ. ಜೂನ್ 22ರಂದು ಬೆಳಿಗ್ಗೆ 10ಕ್ಕೆ ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಮುಖಂಡರು ಮತ್ತು ಕಾರ್ಯಕರ್ತರ ಸಭೆ ಸಹ ನಡೆಯಲಿದೆ. ಈ ಸಭೆಗಾದರೂ ಬಚ್ಚೇಗೌಡರು ಬರುತ್ತಾರೆಯೇ ಎನ್ನುವ ಕುತೂಹಲವಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.