ಚಿಕ್ಕಬಳ್ಳಾಪುರ: ಸಂಸದ ಬಿ.ಎನ್.ಬಚ್ಚೇಗೌಡ ಚುನಾವಣಾ ನಿವೃತ್ತಿ ಘೋಷಣೆ ಬಳಿಕ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ಗಾಗಿ ಪೈಪೋಟಿ ಹೆಚ್ಚಿದೆ. ವರಿಷ್ಠರು ಸಹ ಈಗಾಗಲೇ ಆಂತರಿಕ ವರದಿ ಪಡೆಯುತ್ತಿದ್ದಾರೆ.
ವಿಧಾನಸಭೆಯ ಚುನಾವಣೆಯಲ್ಲಿ ಸೋಲಿನ ನಂತರ ಹೆಚ್ಚು ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಮಾಜಿ ಸಚಿವ ಡಾ.ಕೆ. ಸುಧಾಕರ್ ಲೋಕಸಭೆ ಚುನಾವಣೆಗೆ ಸಿದ್ಧರಾಗುತ್ತಿದ್ದಾರೆ ಎಂಬ ಸುದ್ದಿ ಪ್ರಬಲವಾಗಿದೆ. ಇದರ ಬೆನ್ನಲ್ಲೇ ಪಕ್ಷದೊಳಗಿನ ಅವರ ವಿರೋಧಿಗಳು ಕೂಡ ಸಕ್ರಿಯರಾಗಿದ್ದು, ಪರಸ್ಪರ ಒಗ್ಗೂಡುತ್ತಿದ್ದಾರೆ.
ಸದ್ಯ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಮಾಜಿ ಸಚಿವ ಡಾ.ಕೆ.ಸುಧಾಕರ್ ಮತ್ತು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಮಗ ಅಲೋಕ್ ಹೆಸರು ಚಾಲ್ತಿಯಲ್ಲಿವೆ. ಅಲೋಕ್‌ಗೆ ಟಿಕೆಟ್ ನೀಡುವಂತೆ ಒತ್ತಾಯಿಸಲು ವಿಶ್ವನಾಥ್ ವರಿಷ್ಠರನ್ನು ಭೇಟಿ ಮಾಡಿದ್ದಾರೆ. ಪಕ್ಷ ಸಂಘಟಿಸುವಂತೆ ವರಿಷ್ಠರು ಸೂಚಿಸಿದ್ದಾರೆ ಎಂದು ಅವರು ಕಾರ್ಯಕರ್ತರು ಮತ್ತು ಮುಖಂಡರನ್ನು ಸಂಪರ್ಕಿಸುತ್ತಿದ್ದಾರೆ.
ಕೆ. ಸುಧಾಕರ್ ಟಿಕೆಟ್‌ಗಾಗಿ ದೆಹಲಿ ಮಟ್ಟದಲ್ಲಿ ಪ್ರಯತ್ನಿಸುತ್ತಿದ್ದಾರೆ. ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸೇರಿದಂತೆ ದೆಹಲಿ ಮಟ್ಟದಲ್ಲಿ ಹಲವು ವರಿಷ್ಠರನ್ನು ಭೇಟಿ ಆಗಿರುವ ಸುದ್ದಿ ಇದೆ.
ಸುಧಾಕರ್ ವಿರುದ್ಧ ಮುನಿಸಿಕೊಂಡಿರುವ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ನಾಯಕರನ್ನು ಯಲಹಂಕ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಭೇಟಿ ಮಾಡುತ್ತಿದ್ದಾರೆ. ಪುತ್ರನನ್ನು ಬೆಂಬಲಿಸುವಂತೆ ಕೋರುತ್ತಿದ್ದಾರೆ. ಕೆ.ಸುಧಾಕರ್ ಆಪ್ತರಿಗೂ ಗಾಳ ಹಾಕುತ್ತಿದ್ದಾರೆ.
ಮಾಜಿ ಸಚಿವ ಎಂ.ಟಿ.ಬಿ.ನಾಗರಾಜ್ ಮತ್ತು ಕೆ. ಸುಧಾಕರ್ ನಡುವಿನ ಮುಸುಕಿನ ಗುದ್ದಾಟ ವಿಧಾನಸಭೆ ಚುನಾವಣೆಯ ಫಲಿತಾಂಶದ ನಂತರ ಸಾಮಾಜಿಕ ಜಾಲತಾಣದಲ್ಲಿ ಸ್ಫೋಟವಾಗಿತ್ತು. ವಿಧಾನಸಭೆಯ ಸೋಲಿನ ಬಳಿಕ ಈ ಇಬ್ಬರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿಲ್ಲ.
ಎಂ.ಟಿ.ಬಿ ನಾಗರಾಜ್ ತೆಗೆದು ಕೊಳ್ಳುವ ರಾಜಕೀಯ ನಿರ್ಧಾರ ಲೋಕಸಭಾ ಚುನಾವಣಾ ಫಲಿತಾಂಶದ ಮೇಲೆ ನೇರ ಪರಿಣಾಮ ಬೀರಲಿದೆ ಎನ್ನುತ್ತಾರೆ ಬಿಜೆಪಿ ಸ್ಥಳೀಯ ಮುಖಂಡರು.
ಗೌರಿಬಿದನೂರು ಕ್ಷೇತ್ರದಲ್ಲಿ ಸುಧಾಕರ್ ಬೆಂಬಲಿಗರು ಪಕ್ಷದ ಅಧಿಕೃತ ಅಭ್ಯರ್ಥಿ ಬಿಟ್ಟು ಪಕ್ಷೇತರ ಅಭ್ಯರ್ಥಿ ಕೆ.ಎಚ್.ಪುಟ್ಟಸ್ವಾಮಿ ಗೌಡ ಅವರನ್ನು ಬೆಂಬಲಿಸಿದ್ದರು. ವಿಧಾನಸಭೆ ಚುನಾವಣೆ ಬಳಿಕ ಗೌರಿಬಿದನೂರಿನ ಬಿಜೆಪಿ ನಾಯಕ ಎನ್.ಎಂ.ರವಿನಾರಾಯಣ ರೆಡ್ಡಿ ಅವರು ಸುಧಾಕರ್ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು.
ಬಾಗೇಪಲ್ಲಿಯಲ್ಲಿ ಸಿ.ಮುನಿರಾಜು ಪಕ್ಷ ಸಂಘಟಿಸುತ್ತಿದ್ದ ವೇಳೆ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಆಗಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಕೋನಪ್ಪ ರೆಡ್ಡಿ ಅವರನ್ನು ಸುಧಾಕರ್ ಕರೆ ತಂದಿದ್ದರು
ಎಂದು ಹೇಳಲಾಗುತ್ತಿದೆ. ಆಗ ಮುನಿಸಿಕೊಂಡಿದ್ದ ಮುನಿರಾಜು ಅವರನ್ನು ವಿಶ್ವನಾಥ್ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.
ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿರುವ ಜೆಡಿಎಸ್ ನಾಯಕರು ಕೆ.ಸುಧಾಕರ್ ವಿರುದ್ಧ ಅಸಮಾಧಾನ ಹೊಂದಿದ್ದಾರೆ. ‘ಮೈತ್ರಿ’ ಕುದುರಿದರೂ ಅವರು ಸುಧಾಕರ್ ಪರ ಕೆಲಸ ಮಾಡುವುದು ಕಷ್ಟ ಎನ್ನುವ ಮಾತು ಕೇಳಿ ಬರುತ್ತಿವೆ. ಅಂಥ ಜೆಡಿಎಸ್ ನಾಯಕರು ಮತ್ತು ಕಾರ್ಯಕರ್ತರನ್ನು ವಿಶ್ವನಾಥ್
ಸಂಪರ್ಕಿಸುತ್ತಿದ್ದಾರೆ.
ಬಿಡದಿಯ ತೋಟದ ಮನೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಈಚೆಗೆ ಭೇಟಿ ಮಾಡಿರುವ ಸುಧಾಕರ್ ಬೆಂಬಲ ಕೋರಿದ್ದಾರೆ ಎಂಬ ವರದಿಗಳಿವೆ.
ಮೂರು ಜಿಲ್ಲೆಯಲ್ಲಿ ಹರಡಿರುವ ಕ್ಷೇತ್ರ
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಮೂರು ಜಿಲ್ಲೆಗಳಲ್ಲಿ ಹರಡಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ, ಗೌರಿಬಿದನೂರು, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಜಿಲ್ಲೆಯ ಯಲಹಂಕ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲ ಮತ್ತು ದೇವನಹಳ್ಳಿ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಮೂರು ಚುನಾವಣೆಗಳಿಂದ ಬಿಜೆಪಿ ಈ ಕ್ಷೇತ್ರದಲ್ಲಿ ಬಲ ಹೆಚ್ಚಿಸಿಕೊಳ್ಳುತ್ತಲೇ ಸಾಗಿದೆ.
ತಿರುಪತಿ ಪ್ರವಾಸ!
ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿಯ ಕೆಲವು ಸ್ಥಳೀಯ ಮುಖಂಡರ ಓಲೈಕೆಗಾಗಿ ವಿಶ್ವನಾಥ್ ತಿರುಪತಿ ಪ್ರವಾಸ ಆಯೋಜಿಸುತ್ತಿದ್ದಾರೆ.
ತಿರುಮಲ ತಿರುಪತಿ ದೇವಸ್ಥಾನ ಸಮಿತಿಯ ಸದಸ್ಯರೂ ಆಗಿರುವ ವಿಶ್ವನಾಥ್, ಕ್ಷೇತ್ರವಾರು ಬಿಜೆಪಿ ಮತ್ತು ಜೆಡಿಎಸ್ ಮುಖಂಡರನ್ನು ತಿರುಪತಿ ಪ್ರವಾಸಕ್ಕೆ ಕರೆದೊಯ್ಯುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.