ADVERTISEMENT

ಚಿಕ್ಕಬಳ್ಳಾಪುರ: ಶಾಸಕ ಪ್ರದೀಪ್ ಈಶ್ವರ್ ಮಾತು ‘ಕಾಂಗ್ರೆಸ್‌’ಗೆ ದುಬಾರಿ!

ಒಕ್ಕಲಿಗರ ಮತ ಒಗ್ಗೂಡಲು ಕಾರಣವಾದ ನಿಂದನೆಯ ಮಾತು

​ಪ್ರಜಾವಾಣಿ ವಾರ್ತೆ
Published 5 ಜೂನ್ 2024, 6:46 IST
Last Updated 5 ಜೂನ್ 2024, 6:46 IST
ಪ್ರದೀಪ್ ಈಶ್ವರ್ ಮತ್ತು ಸುಧಾಕರ್
ಪ್ರದೀಪ್ ಈಶ್ವರ್ ಮತ್ತು ಸುಧಾಕರ್    

ಚಿಕ್ಕಬಳ್ಳಾಪುರ: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಅಚ್ಚರಿಯ ಅಭ್ಯರ್ಥಿಯಾಗಿ ಡಾ.ಕೆ.ಸುಧಾಕರ್ ವಿರುದ್ಧ ಗೆಲುವು ಸಾಧಿಸಿದ ಶಾಸಕ ಪ್ರದೀಪ್ ಈಶ್ವರ್ ಮಾತುಗಳು ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ದುಬಾರಿಯಾಗಿ ಪರಿಣಮಿಸಿದೆ.

ಅಬ್ಬರದ ಮಾತುಗಳ ಕಾರಣದಿಂದಲೇ ಪ್ರದೀಪ್ ಈಶ್ವರ್‌ ಗಮನ ಸೆಳೆಯುತ್ತಿದ್ದಾರೆ. ಅವರ ಈ ಮಾತುಗಳು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ತಂದುಕೊಡುವುದಕ್ಕಿಂತ ಪೆಟ್ಟು ನೀಡಿದೆ ಎನ್ನುವ ಮಾತುಗಳು ಕಾಂಗ್ರೆಸ್ ವಲಯದಲ್ಲಿಯೇ ಕೇಳಿ ಬರುತ್ತಿವೆ. 

ಚುನಾವಣೆಯ ಸಮಯದಲ್ಲಿ ಸೈದ್ಧಾಂತಿಕ ಟೀಕೆಗಳ ಬದಲು ಪ್ರದೀಪ್ ಈಶ್ವರ್, ಸುಧಾಕರ್ ವಿರುದ್ಧ ವ್ಯಕ್ತಿ ನಿಂದನೆಯ ಟೀಕೆಯಲ್ಲಿಯೇ ಅಬ್ಬರಿಸಿದರು. ಇದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಪ್ರಬಲ ಒಕ್ಕಲಿಗ ಸಮುದಾಯದ ಮತಗಳ ಧ್ರುವೀಕರಣಕ್ಕೆ ಪ್ರಮುಖವಾಗಿ ಕಾರಣವಾಯಿತು ಎನ್ನುವ ಚರ್ಚೆ ಈಗ ಜೋರಾಗಿದೆ.

ADVERTISEMENT

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಡಾ.ಕೆ.ಸುಧಾಕರ್ ಮೇಲಿನ ಸಿಟ್ಟಿಗೆ ಕಾಂಗ್ರೆಸ್ ಬೆಂಬಲಿಸಿದ್ದ ಚಿಕ್ಕಬಳ್ಳಾಪುರ ಕ್ಷೇತ್ರದ ಒಕ್ಕಲಿಗರಲ್ಲಿ ಪ್ರದೀಪ್ ಮಾತುಗಳು ಅಸಮಾಧಾನಕ್ಕೆ ಕಾರಣವಾಯಿತು. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರವಷ್ಟೇ ಅಲ್ಲ ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ ಸೇರಿದಂತೆ ಒಕ್ಕಲಿಗ ಮತದಾರರು ಗಣನೀಯವಾಗಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರದೀಪ್ ಈಶ್ವರ್, ಸುಧಾಕರ್‌ಗೆ ಸವಾಲು ಹಾಕಿದ ವಿಡಿಯೊಗಳು ಜೋರಾಗಿಯೇ ಹರಿದಾಡಿದವು.

ಒಕ್ಕಲಿಗ ಸಮುದಾಯದ ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಪ್ರದೀಪ್ ಮಾತುಗಳ ಬಗ್ಗೆ ಆಕ್ರೋಶ ಸಹ ವ್ಯಕ್ತವಾಯಿತು. ‘ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸುಧಾಕರ್ ಒಂದು ಮತ ಹೆಚ್ಚಿಗೆ ಪಡೆಯಲಿ’, ‘ಸುಧಾಕರ್ ಅವರನ್ನು ಪಾರ್ಲಿಮೆಂಟ್ ಮೆಟ್ಟಿಲು ಹತ್ತಲು ಬಿಡುವುದಿಲ್ಲ’ ಎನ್ನುವ ಸವಾಲು ಸಮುದಾಯದ ಒಗ್ಗಟ್ಟಿಗೆ ಮತ್ತಷ್ಟು ಕಾರಣವಾಯಿತು.

ಪ್ರದೀಪ್ ಈಶ್ವರ್, ಸುಧಾಕರ್ ವಿರುದ್ಧ ಮಾತನಾಡಿದ್ದ ವಿಡಿಯೊಗಳನ್ನು ಒಕ್ಕಲಿಗ ಸಮುದಾಯದ ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ದೊಡ್ಡ ಮಟ್ಟದಲ್ಲಿಯೇ ಹರಿದಾಡಿದವು.

‘ಸುಧಾಕರ್ ಒಂದು ಮತ ಹೆಚ್ಚು ಪಡೆಯಲಿ ಎನ್ನುವ ಸವಾಲು, ಒಕ್ಕಲಿಗ ಸಮುದಾಯ ಒಂದು ಮತ ಹೆಚ್ಚು ಪಡೆಯಲಿ ಎನ್ನುವ ರೀತಿ ಸಮುದಾಯದಲ್ಲಿ ಹರಡಿತು. ಚಿಕ್ಕಬಳ್ಳಾಪುರವಷ್ಟೇ ಅಲ್ಲ ಇಡೀ ಲೋಕಸಭಾ ಕ್ಷೇತ್ರದಲ್ಲಿನ ಸಾಮಾನ್ಯ ಒಕ್ಕಲಿಗ ಮತದಾರರಲ್ಲಿ ಇದು ಪ್ರವಹಿಸಿತು. ಪ್ರತಿಷ್ಠೆಯಾಗಿ ಸಮುದಾಯ ಪರಿಗಣಿಸಿತು’ ಎಂದು ಕಾಂಗ್ರೆಸ್‌ನ ಪ್ರಮುಖ ಒಕ್ಕಲಿಗ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಒಕ್ಕಲಿಗ ಸಮುದಾಯದ ಪ್ರಾಬಲ್ಯದ ಗ್ರಾಮಗಳಲ್ಲಿ ಕಾಂಗ್ರೆಸ್‌ನಲ್ಲಿ ಒಕ್ಕಲಿಗ ನಾಯಕರು ಇದ್ದರೂ ಒಕ್ಕಲಿಗ ಮತದಾರರು ಸುಧಾಕರ್ ಪರ ನಿಲುವು ತಾಳಿದರು. ಪ್ರದೀಪ್ ಮಾತುಗಳು ನಮಗೆ ದುಬಾರಿ ಆಗುತ್ತಿದೆ ಎನ್ನುವುದನ್ನು ಗುರುತಿಸುವಲ್ಲಿ ಕಾಂಗ್ರೆಸ್ ಪಕ್ಷವು ಸೋತಿತು.

ವ್ಯಾಪಕ ಟ್ರೋಲ್ 

‘ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಮತವನ್ನು ಡಾ.ಕೆ.ಸುಧಾಕರ್ ಹೆಚ್ಚು ಪಡೆದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಹೇಳಿದ್ದ ಶಾಸಕ ಪ್ರದೀಪ್ ಈಶ್ವರ್ ಈಗ ತೀವ್ರ ಟ್ರೋಲ್‌ಗೆ ಗುರಿಯಾಗಿದ್ದಾರೆ. 

ಬಿಜೆಪಿ ವಾಟ್ಸ್ಆ್ಯಪ್ ಗ್ರೂಪ್‌ಗಳಲ್ಲಿ ಈ ಬಗ್ಗೆ ಪೋಸ್ಟರ್‌ಗಳು ವಿಡಿಯೊಗಳು ವ್ಯಾಪಕವಾಗಿ ಹರಿದಾಡುತ್ತಿವೆ. ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಗೇಲಿ ಮಾಡಿ ವಿಡಿಯೊ ಹರಿಬಿಡುತ್ತಿದ್ದಾರೆ.

‘ಇನ್ನು ಕೆಲವೇ ಗಂಟೆಗಳಲ್ಲಿ ಪ್ರದೀಪ್ ಈಶ್ವರ್ ರಾಜೀನಾಮೆ’ ಎಂದು ಬಿಜೆಪಿ ಮುಖಂಡ ಪ್ರತಾಪ್ ಸಿಂಹ ‘ಎಕ್ಸ್‌’ ಮಾಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.