ADVERTISEMENT

ಚಿಕ್ಕಬಳ್ಳಾಪುರ: ಶಾಸಕ ಪ್ರದೀಪ್ ಈಶ್ವರ್ ವರ್ತನೆಗೆ ಸ್ವಪಕ್ಷೀಯರಿಂದಲೇ ಆಕ್ರೋಶ

ಡಿ.ಎಂ.ಕುರ್ಕೆ ಪ್ರಶಾಂತ
Published 7 ಜೂನ್ 2024, 5:35 IST
Last Updated 7 ಜೂನ್ 2024, 5:35 IST
ಪ್ರದೀಪ್ ಈಶ್ವರ್
ಪ್ರದೀಪ್ ಈಶ್ವರ್   

ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆ ಫಲಿತಾಂಶದ ತರುವಾಯ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ವಲಯದಲ್ಲಿ ಬಿರುಕು ಮತ್ತಷ್ಟು ಹೆಚ್ಚಿದೆ.

ಶಾಸಕ ಪ್ರದೀಪ್ ಈಶ್ವರ್ ವರ್ತನೆಗೆ ಸ್ವಪಕ್ಷೀಯ ಕಾಂಗ್ರೆಸ್ ನಾಯಕರೇ ತೀವ್ರ ಅಸಮಾಧಾನ ಹೊರಹಾಕುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ರಕ್ಷಾ ರಾಮಯ್ಯ ಅವರ ಸೋಲಿಗೆ ಪ್ರದೀಪ್ ಈಶ್ವರ್ ಮಾತುಗಳು ಕಾರಣ ಎಂದು ಫೇಸ್‌ಬುಕ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದ ಯುವಕಾಂಗ್ರೆಸ್ ರಾಜ್ಯ ಜಂಟಿ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಎಸ್‌.ಎಂ.ಮುನಿಯಪ್ಪ ಅವರ ಪುತ್ರ ಎಸ್‌.ಎಂ.ಜಗದೀಶ್ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿತ್ತು. 

ಖುದ್ದು ಶಾಸಕ ಪ್ರದೀಪ್ ಈಶ್ವರ್ ಅವರೇ ತಮ್ಮ ‘ಎಂಎಲ್‌ಎ ಮಿಡಿಯಾ ಗ್ರೂಪ್‌’ನಲ್ಲಿ  ಉಚ್ಛಾಟನೆಯ ಆದೇಶ ಪ್ರತಿಯನ್ನು ಗುರುವಾರ ಹಾಕಿದ್ದರು. ಗುರುವಾರ ಸಂಜೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ನಂದಿ ಆಂಜನಪ್ಪ ಅವರ ನೇತೃತ್ವದ ಕಾಂಗ್ರೆಸ್ ನಿಯೋಗ, ಉಚ್ಛಾಟನೆ ಆದೇಶ ವಾಪಸ್ ಪಡೆಯುವಂತೆ ಕೋರಿತು.

ADVERTISEMENT

ನಗರಸಭೆ ಸದಸ್ಯ ರಫೀಕ್, ಎಸ್‌.ಎಂ.ಜಗದೀಶ್ ಮತ್ತಿತರರು ಈ ವೇಳೆ ಇದ್ದರು. ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್, ಯುವಕಾಂಗ್ರೆಸ್ ರಾಜ್ಯ ಅಧ್ಯಕ್ಷ ಮಹಮದ್ ನಲಪಾಡ್ ಅವರನ್ನು ಸಹ ಭೇಟಿ ಮಾಡಿದರು. 

ಕಾಂಗ್ರೆಸ್ ಅಭ್ಯರ್ಥಿಯಾದ ರಕ್ಷಾ ರಾಮಯ್ಯ ಅಣ್ಣ ದೇವರಂತಹ ಮನುಷ್ಯ. ಸೋತಿರುವುದಕ್ಕೆ ಜಾಸ್ತಿ ನೋವಾಗಿದೆ. ಆದರೆ ಇದಕ್ಕೆ ಕಾರಣ ನಮ್ಮ ಎಂಎಲ್‌ಎ ಪ್ರದೀಪ್ ಈಶ್ವರ್. ಸರ್ ಇಂದಾನೆ ಕಾಂಗ್ರೆಸ್ ಅಭ್ಯರ್ಥಿ ಸೋತಿದ್ದಾರೆ. ನಮ್ಮ ಎಂಎಲ್‌ಎ ಸರ್ ಮಾತುಗಳಿಂದನೇ ಸಾವು ಸೋತ್ವಿ. 

ನಾನೊಬ್ಬ ಕಾಂಗ್ರೆಸ್ ಪಕ್ಷದ ನಿಷ್ಠಾವಂತರ ಕಾರ್ಯಕರ್ತನಾಗಿ ಹೇಳ್ತಾ ಇದ್ದೀನಿ. ನಿಮ್ಮಿಂದಲೇ ಎಂಟು ಕ್ಷೇತ್ರದಲ್ಲಿ ಒಕ್ಕಲಿಗರು ಒಂದಾಗೋದಕ್ಕೆ ಕಾರಣವಾಯಿತು ಎಂದು ಎಸ್‌.ಎಂ.ಜಗದೀಶ್ ಫೇಸ್‌ಬುಕ್‌ನಲ್ಲಿ ಬರಹ ಪ್ರಕಟಿಸಿದ್ದರು. 

ಉಚ್ಛಾಟನೆ: ಜಗದೀಶ್ ಬರಹ ಚರ್ಚೆಗೆ ಕಾರಣವಾಗಿತ್ತು. ‘2024ರ ಲೋಕಸಭಾ ಚುನಾವಣೆಯಲ್ಲಿ ಅನ್ಯ ಪಕ್ಷದ ಅಭ್ಯರ್ಥಿಯೊಂದಿಗೆ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿರುವುದು ಹಾಗೂ ಪಕ್ಷದ ನಾಯಕರ ಬಗ್ಗೆ ಸಾರ್ವಜನಿಕವಾಗಿ ಅವಹೇಳನಕಾರಿ ಮಾತನಾಡುತ್ತಿರುವುದು ಕಂಡು ಬಂದಿದೆ. ತಮ್ಮ ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಉಚ್ಛಾಟಿಸಲಾಗಿದೆ ಎಂದು ಕೆಪಿಸಿಸಿ ಶಿಸ್ತು ಪಾಲನಾ ಸಮಿತಿ ಅಧ್ಯಕ್ಷ ಕೆ.ರೆಹಮಾನ್ ಖಾನ್ ಉಚ್ಛಾಟನೆಯ ಆದೇಶ ಹೊರಡಿಸಿದ್ದರು. 

ಉಚ್ಛಾಟನೆ ಆದೇಶ ವಾಪಸ್ ಪಡೆಯುವುದಾಗಿ ಡಿ.ಕೆ.ಶಿವಕುಮಾರ್ ನಿಯೋಗಕ್ಕೆ ತಿಳಿಸಿದ್ದಾರೆ. ಈ ಬಗ್ಗೆ ಯುವಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಅವರಿಗೂ ನಿರ್ದೇಶನ ನೀಡಿದ್ದಾರೆ.

ಬಣ ರಾಜಕೀಯ: ಪ್ರದೀಪ್ ಈಶ್ವರ್ ಗೆಲುವಿಗೆ ಕಾಂಗ್ರೆಸ್ ಮುಖಂಡರು ಒಗ್ಗಟ್ಟಿನಿಂದ ಶ್ರಮಿಸಿದ್ದರು. ಆ ಪರಿಣಾಮ ಗೆಲುವು ಸಹ ದೊರೆಯಿತು. ಗೆಲುವಿನ ನಂತರ ಪ್ರದೀಪ್ ಈಶ್ವರ್ ಹಿರಿಯ ಮುಖಂಡರನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಮತ್ತು ಮಾಜಿ ಸಂಸದ ಎಂ.ವೀರಪ್ಪ ಮೊಯಿಲಿ ಅವರವರೆಗೂ ಈ ದೂರು ಹೋಯಿತು. 

ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ನಂದಿ ಆಂಜನಪ್ಪ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಲಾಯರ್ ನಾರಾಯಣಸ್ವಾಮಿ ಮತ್ತಿತರ ಹಿರಿಯ ಮುಖಂಡರು ಪ್ರದೀಪ್ ಈಶ್ವರ್ ವರ್ತನೆಗೆ ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದರು.  

ಶಾಸಕರು, ಮುಖಂಡರನ್ನು ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆಯುತ್ತಿಲ್ಲ ಎನ್ನುವ ಆರೋಪ ವ್ಯಾಪಕವಾಗಿದೆ. ಲೋಕಸಭೆ ಚುನಾವಣೆ ಪ್ರಚಾರಕ್ಕೆ ಬಂದಿದ್ದ ಎಲ್. ಹನುಮಂತಯ್ಯ, ಈ ಬಗ್ಗೆ ಪಕ್ಷದ ಅಧ್ಯಕ್ಷರ ಗಮನಕ್ಕೆ ತರುವುದಾಗಿಯೂ ಹೇಳಿದ್ದರು. ರಕ್ಷಾ ರಾಮಯ್ಯ ಅವರ ಸೋಲಿನ ತರುವಾಯ ಕಾಂಗ್ರೆಸ್ ನಾಯಕರು ಪ್ರದೀಪ್ ಈಶ್ವರ್ ಬಗ್ಗೆ ಮತ್ತಷ್ಟು ಆಕ್ರೋಶಗೊಂಡಿದ್ದಾರೆ.

ಮಡುಗಟ್ಟಿದ ಅಸಮಾಧಾನ

ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕೆಲವು ಕಾಂಗ್ರೆಸ್ ನಾಯಕರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದರೆ ಬಹಳಷ್ಟು ನಾಯಕರು ಪಕ್ಷದ ವೇದಿಕೆಗಳಲ್ಲಿ ಮತ್ತು ಮಾಧ್ಯಮದವರ ಬಳಿ ಆಂತರಿಕವಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪ್ರತಿಭಟನೆಗೆ ನಿರ್ಧಾರ?

ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆಗೂ ಸಜ್ಜಾಗುತ್ತಿದ್ದಾರೆ ಎನ್ನುತ್ತವೆ ಕಾಂಗ್ರೆಸ್ ಮೂಲಗಳು. ಕಾಂಗ್ರೆಸ್‌ನ ಆಂತರಿಕ ವಲಯದಲ್ಲಿ ಈ ಬಗ್ಗೆ ಚರ್ಚೆಗಳು ಸಹ ನಡೆದಿವೆ. 

ಡಿ.ಕೆ.ಶಿವಕುಮಾರ್ ಮಾಡಿದ ಚಿಕ್ಕಬಳ್ಳಾಪುರ ಕಾಂಗ್ರೆಸ್ ಮುಖಂಡರಾದ ನಂದಿ ಆಂಜನಪ್ಪ, ನಗರಸಭೆ ಸದಸ್ಯ ರಫೀಕ್, ಜಗದೀಶ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.