ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿ ಇಲ್ಲಿಯವರೆಗೆ ನಡೆದ ಚುನಾವಣೆಗಳಲ್ಲಿ ಅತಿ ಹೆಚ್ಚು ಮತಗಳನ್ನು ಪಡೆದಿರುವ ಮತ್ತು ಎದುರಾಳಿ ಅಭ್ಯರ್ಥಿಯನ್ನು ಅತಿ ಹೆಚ್ಚು ಮತಗಳಿಂದ ಸೋಲಿಸಿದ ಹೆಗ್ಗಳಿಕೆ ಸಂಸದ ಬಿ.ಎನ್. ಬಚ್ಚೇಗೌಡ ಅವರ ಹೆಸರಿನಲ್ಲಿ ಇದೆ.
ಈ ದಾಖಲೆಯ ಜೊತೆಗೆ ಬಚ್ಚೇಗೌಡ ಅವರು ಮತ್ತೊಂದು ಹೆಗ್ಗಳಿಕೆಯನ್ನೂ ಪಡೆದಿದ್ದಾರೆ. 17ನೇ ಲೋಕಸಭೆಯಲ್ಲಿ ಯಾವುದೇ ಚರ್ಚೆಯಲ್ಲಿಯೂ ಭಾಗಿಯಾಗದ, ಒಮ್ಮೆಯೂ ಸದನದಲ್ಲಿ ಮಾತನಾಡದ ಸಂಸದರು ಎನ್ನುವ ಹಣೆಪಟ್ಟಿ ಸಹ ಹೊತ್ತಿದ್ದಾರೆ.
17ನೇ ಲೋಕಸಭೆಯ ಈ ಐದು ವರ್ಷಗಳಲ್ಲಿ 1,354 ಗಂಟೆ ಕಲಾಪ ನಡೆದಿದೆ. ಈ ಅವಧಿಯಲ್ಲಿ ಕರ್ನಾಟಕದ ನಾಲ್ವರು ಸೇರಿದಂತೆ ಒಂಬತ್ತು ಸದಸ್ಯರು ಒಂದು ಮಾತು ಆಡಿಲ್ಲ, ಚರ್ಚೆಯಲ್ಲೂ ಭಾಗವಹಿಸಿಲ್ಲ. ಹೀಗೆ ಮಾತನಾಡದ ಕರ್ನಾಟಕದ ನಾಲ್ಕು ಸಂಸದರಲ್ಲಿ ಬಿ.ಎನ್.ಬಚ್ಚೇಗೌಡ ಸಹ ಒಬ್ಬರು. ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ, ಚಾಮರಾಜನಗರ ಸಂಸದ ವಿ.ಶ್ರೀನಿವಾಸಪ್ರಸಾದ್ ಹಾಗೂ ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಉಳಿದ ಮೂವರಾಗಿದ್ದಾರೆ.
ರಮೇಶ್ ಜಿಗಜಿಣಗಿ ಅವರು ಪ್ರಶ್ನೆಯನ್ನು ಕೇಳಿಲ್ಲ. ಕಲಾಪದಲ್ಲಿ ಮಂಡಿಸಲು ಪ್ರಶ್ನೆ ಕಳುಹಿಸಿಲ್ಲ. ಬಚ್ಚೇಗೌಡ ಸೇರಿದಂತೆ ಉಳಿದ ಮೂವರು ಚರ್ಚೆಯಲ್ಲಿ ಪಾಲ್ಗೊಳ್ಳದಿದ್ದರೂ ಕಲಾಪದಲ್ಲಿ ಭಾಗವಹಿಸಿದ್ದಾರೆ.
ಯಾವುದೇ ಜನಪ್ರತಿನಿಧಿ ಸದನದಲ್ಲಿ ತಮ್ಮ ಕ್ಷೇತ್ರ, ರಾಜ್ಯದ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವುದು, ಪ್ರಸ್ತಾಪಿಸುವುದು ಸಾಮಾನ್ಯ. ಸಂಸತ್ತಿನಲ್ಲಿ ರಾಜ್ಯದ ಆಗುಹೋಗುಗಳು, ನೀರಾವರಿ, ಕೃಷಿ ಸೇರಿದಂತೆ ಬಹಳಷ್ಟು ವಿಚಾರಗಳ ಬಗ್ಗೆ ಧ್ವನಿ ಎತ್ತಬಹುದು. ಆದರೆ ಚಿಕ್ಕಬಳ್ಳಾಪುರ ಸಂಸದರು ಮಾತ್ರ ಕಲಾಪಗಳಲ್ಲಿ ಪಾಲ್ಗೊಂಡರೂ ಮೌನಕ್ಕೆ ಜಾರಿದ್ದಾರೆ. ಚರ್ಚೆಯಲ್ಲಿಯೇ
ಪಾಲ್ಗೊಂಡಿಲ್ಲ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಕೃಷಿ ಪ್ರಧಾನವಾಗಿದೆ. ಇಂತಹ ಕಡೆಗಳಲ್ಲಿ ಕೃಷಿ ಉತ್ಪನ್ನಗಳ ಬೆಲೆಗಳು ಕುಸಿದಾಗ ಆ ಬಗ್ಗೆ ಸಂಸತ್ತಿನಲ್ಲಿ ಪ್ರಸ್ತಾಪಿಸುವ ಅವಕಾಶಗಳು ಗೌಡರಿಗೆ ಇದ್ದವು. ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಒಳಗೊಂಡ ಲೋಕಸಭಾ ಕ್ಷೇತ್ರದಲ್ಲಿ ನೀರಾವರಿ ಸಮಸ್ಯೆ ಬೃಹತ್ ಪ್ರಮಾಣದಲ್ಲಿಯೇ ಇದೆ.
ಬೆಂಗಳೂರಿನ ಕೊಳಚೆ ನೀರನ್ನು ಎರಡು ಹಂತದಲ್ಲಿ ಸಂಸ್ಕರಿಸಿ ಈ ಎರಡೂ ಜಿಲ್ಲೆಗಳ ಕೆರೆಗಳಿಗೆ ಹರಿಸಲಾಗುತ್ತಿದೆ. ಕೊಳಚೆ ನೀರನ್ನು ಸಂಸ್ಕರಿಸುವ ಬಗ್ಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರ ಪಾಲಿಸುತ್ತಿಲ್ಲ ಎನ್ನುವ ಆರೋಪವನ್ನು ನೀರಾವರಿ ಹೋರಾಟಗಾರರು ಮಾಡುತ್ತಿದ್ದಾರೆ. ಇಂತಹ ಸೂಕ್ಷ್ಮ ವಿಷಯಗಳನ್ನು ಸಹ ಸಂಸತ್ತಿನಲ್ಲಿ ಪ್ರಸ್ತಾಪಿಸಲು ಅವಕಾಶಗಳು ಇದ್ದವು.
ಆದರೆ ಬಚ್ಚೇಗೌಡರು ಸದನದಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಸಮಸ್ಯೆಗಳು ಸೇರಿದಂತೆ ರಾಜ್ಯದ ಯಾವುದೇ ವಿಚಾರಗಳ ಬಗ್ಗೆ ಮಾತನಾಡಿಲ್ಲ.
ಗರಿಷ್ಠ ಮತದ ಗೆಲುವು: 2019ರ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಮತದಾರರು ಬಚ್ಚೇಗೌಡ ಅವರಿಗೆ ದೊಡ್ಡ ಮಟ್ಟದಲ್ಲಿಯೇ ಬೆಂಬಲ ನೀಡಿದ್ದಾರೆ. ಲೋಕಸಭಾ ಕ್ಷೇತ್ರಕ್ಕೆ ಈವರೆಗೆ ಒಟ್ಟು 12 ಚುನಾವಣೆಗಳು ನಡೆದಿವೆ. 1980ರಲ್ಲಿ ನಡೆದ ಚುನಾವಣೆಯಲ್ಲಿ 1,46,943 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ ಎಸ್.ಎನ್.ಪ್ರಸನ್ನ ಕುಮಾರ್ ಅವರ ದಾಖಲೆಯನ್ನು ಮುರಿಯಲು 2019ರ ಚುನಾವಣೆವರೆಗೆ ಯಾರಿಂದಲೂ ಸಾಧ್ಯವಾಗಿಲ್ಲ.
ಬಚ್ಚೇಗೌಡರು 2019ರ ಚುನಾವಣೆಯಲ್ಲಿ 7,45,912 ಮತಗಳನ್ನು ಪಡೆದರು. ಪ್ರತಿಸ್ಪರ್ಧಿ ಅಭ್ಯರ್ಥಿ ಕಾಂಗ್ರೆಸ್‌ನ ವೀರಪ್ಪ ಮೊಯಿಲಿ ವಿರುದ್ಧ 1,82,110 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಚಿಕ್ಕಬಳ್ಳಾಪುರ ಕ್ಷೇತ್ರದ ಇತಿಹಾಸದಲ್ಲಿ ಗರಿಷ್ಠ ಮತಗಳಿಂದ ಗೆಲುವು ಸಾಧಿಸಿದ ಹೆಗ್ಗಳಿಕೆ ಅವರ ಹೆಸರಿನಲ್ಲಿ ಇದೆ.
ಗರಿಷ್ಠ ಮತದಿಂದ ಗೆಲುವು ಸಾಧಿಸಿದ ಹೆಗ್ಗಳಿಕೆ ಹೆಸರಿನಲ್ಲಿ ಇದ್ದಂತೆ ಕಡಿಮೆ ಅಂತರದಲ್ಲಿ ಸೋತವರೂ ಅವರೇ ಆಗಿದ್ದಾರೆ. 2014 ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ. ವೀರಪ್ಪ ಮೊಯಿಲಿ ವಿರುದ್ಧ 9,520 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು.
ಹೀಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮತದಾರರು ಗೌಡರಿಗೆ ದೊಡ್ಡ ಮಟ್ಟದಲ್ಲಿ ಬೆಂಬಲ ನೀಡಿದ್ದರೂ ಸಂಸತ್ತಿನಲ್ಲಿ ಮಾತ್ರ ಜನರ ಪರವಾಗಿ ಮಾತನಾಡದೆ ಮೌನಕ್ಕೆ ಜಾರಿದ್ದಾರೆ.
ಬಿಜೆಪಿ ಮುಖಂಡರಿಂದಲೇ ಬೇಸರ
ಬಚ್ಚೇಗೌಡ ಅವರು ಈಗಾಗಲೇ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ. ಬಿಜೆಪಿಯೂ ಅವರಿಗೆ ಟಿಕೆಟ್ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿತ್ತು ಎನ್ನುತ್ತವೆ ಪಕ್ಷದ ಮೂಲಗಳು. ಬಚ್ಚೇಗೌಡ ಅವರು ವಿಧಾನಸಭೆ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರವನ್ನೂ ನಡೆಸಲಿಲ್ಲ. ಬಿಜೆಪಿ ವೇದಿಕೆಗಳಿಂದಲೇ ಪೂರ್ಣವಾಗಿ ದೂರ ಸರಿದಿದ್ದಾರೆ. ಸಂಸದರ ಈ ನಡೆ ಬಿಜೆಪಿ ಮುಖಂಡರಲ್ಲಿಯೇ ಬೇಸರ ಮೂಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.