ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯ 18ನೇ ವಾರ್ಡ್‌ನಲ್ಲಿ ನಗರಸಭೆಯ ಕೊಳವೆ ಬಾವಿಗೆ ಬಿಡಬೇಕಾಗಿದ್ದ ಪೈಪ್‌ಗಳು ಕಳ್ಳತನವಾಗಿವೆ. ಈ ಪೈಪ್ ಕಳ್ಳತನಕ್ಕೆ ನಗರಸಭೆಯ ಸದಸ್ಯರೊಬ್ಬರು ಕಾರಣವಾಗಿದ್ದಾರೆ ಎನ್ನುವ ಮಾತುಗಳು ಸದಸ್ಯರ ನಡುವೆ ಬಿಸಿ ಚರ್ಚೆಗೆ ಕಾರಣವಾಗಿದೆ.
18ನೇ ವಾರ್ಡ್‌ನಲ್ಲಿ ಕೊಳವೆ ಬಾವಿ ದುರಸ್ತಿಗೆ ಬಂದಿತ್ತು. ಕೊಳವೆ ಬಾವಿಯಲ್ಲಿನ 42 ಲೆನ್ತ್ ಪೈಪ್‌ಗಳನ್ನು ಹೊರ ತೆಗೆಯಲಾಗಿತ್ತು. ನಂತರ ಇದರಲ್ಲಿ 30 ಲೆನ್ತ್ ಪೈಪ್ ಅನ್ನು ಕೊಳವೆಬಾವಿಗೆ ಬಿಡಲಾಗಿದೆ. ಉಳಿದ 12 ಲೆನ್ತ್ ಪೈಪ್‌ಗಳು ಕಳ್ಳತನವಾಗಿದ್ದವು.
ನಗರಸಭೆಯ ಕೆಲವು ‘ಪ್ರಮುಖ’ ಸದಸ್ಯರೇ ಕಳ್ಳತನದ ವಿಚಾರವನ್ನು ‘ಪ್ರಜಾವಾಣಿ’ ಗಮನಕ್ಕೆ ತಂದಿದ್ದಾರೆ. ನಗರಸಭೆ ಸದಸ್ಯ ಮತ್ತು ಅವರ ಸಂಬಂಧಿಕರು ತೆಗೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ವಿಡಿಯೊಗಳು ಸಹ ಇವೆ ಎನ್ನಲಾಗುತ್ತಿದೆ.
ಈ ವಿಚಾರವು ನೀರಗಂಟಿಯ ಮೂಲಕ ನಗರಸಭೆ ಪೌರಾಯುಕ್ತರ ಗಮನಕ್ಕೆ ಬಂದಿದೆ. ತಕ್ಷಣವೇ ಅವರು ನಗರಠಾಣೆಗೆ ದೂರು ನೀಡಿದ್ದಾರೆ. ಠಾಣೆಗೆ ದೂರು ಹೋಗುತ್ತಿದ್ದಂತೆ ಎಚ್ಚೆತ್ತ ಸದಸ್ಯ ಮತ್ತು ಅವರ ಕಡೆಯವರು ಪೈಪ್‌ಗಳನ್ನು ಮೊದಲು ಇದ್ದ ಸ್ಥಳಕ್ಕೆ ತಂದಿಟ್ಟಿದ್ದಾರೆ. ಹೊಸ ಪೈಪ್‌ಗಳನ್ನು ತೆಗೆದುಕೊಂಡು ಹೋಗಿ ಹಳೇ ಪೈಪ್‌ಗಳನ್ನು ತೆಗೆದುಕೊಂಡಿದ್ದಾರೆ ಎನ್ನುವ ಮಾತುಗಳು ಸಹ ಕೇಳಿ ಬರುತ್ತಿವೆ.
‘18ನೇ ವಾರ್ಡ್‌ನಲ್ಲಿ ಕೊಳವೆ ಬಾವಿ ಪೈಪ್‌ಗಳು ಕಳ್ಳತನವಾಗಿದೆ ಎಂದು ನಗರಸಭೆಯಿಂದ ದೂರು ಬಂದಿತ್ತು. ನಮ್ಮ ಸಿಬ್ಬಂದಿ ಸ್ಥಳಕ್ಕೆ ಹೋದಾಗ ಪೈಪ್‌ಗಳು ಸ್ಥಳದಲ್ಲಿಯೇ ಇದ್ದವು. ಪೈಪ್‌ಗಳು ಸ್ಥಳದಲ್ಲಿ ಇಲ್ಲದಿರುವ ಬಗ್ಗೆ ವಿಚಾರಣೆ ನಡೆಸುತ್ತಿದ್ದೇವೆ’ ಎಂದು ನಗರಠಾಣೆ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.