ADVERTISEMENT

ಚಿಕ್ಕಬಳ್ಳಾಪುರ ನಗರಸಭೆ: ಆಡಳಿತ ಪಕ್ಷದಲ್ಲಿ ಮುಂದುವರಿದ ಶೀತಲ ಸಮರ

ಅಕ್ಕಪಕ್ಕ ಕುಳಿತರೂ ಮಾತನಾಡದ ನಗರಸಭೆ ಅಧ್ಯಕ್ಷ–ಮಾಜಿ ಅಧ್ಯಕ್ಷ

ಡಿ.ಎಂ.ಕುರ್ಕೆ ಪ್ರಶಾಂತ
Published 16 ಅಕ್ಟೋಬರ್ 2024, 7:54 IST
Last Updated 16 ಅಕ್ಟೋಬರ್ 2024, 7:54 IST
ಚಿಕ್ಕಬಳ್ಳಾಪುರ ನಗರಸಭೆ ಆವರಣದಲ್ಲಿ ನಡೆದ ಹರಾಜು ಪ್ರಕ್ರಿಯೆ ವೇಳೆ ನಗರಸಭೆ ಅಧ್ಯಕ್ಷ ಎ.ಗಜೇಂದ್ರ, ಮಾಜಿ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ ಬಾಬು ಅಕ್ಕಪಕ್ಕದಲ್ಲಿ ಕುಳಿತ ಕ್ಷಣ. ಉಪಾಧ್ಯಕ್ಷ ಜೆ.ನಾಗರಾಜ್ ಚಿತ್ರದಲ್ಲಿ ಇದ್ದಾರೆ
ಚಿಕ್ಕಬಳ್ಳಾಪುರ ನಗರಸಭೆ ಆವರಣದಲ್ಲಿ ನಡೆದ ಹರಾಜು ಪ್ರಕ್ರಿಯೆ ವೇಳೆ ನಗರಸಭೆ ಅಧ್ಯಕ್ಷ ಎ.ಗಜೇಂದ್ರ, ಮಾಜಿ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ ಬಾಬು ಅಕ್ಕಪಕ್ಕದಲ್ಲಿ ಕುಳಿತ ಕ್ಷಣ. ಉಪಾಧ್ಯಕ್ಷ ಜೆ.ನಾಗರಾಜ್ ಚಿತ್ರದಲ್ಲಿ ಇದ್ದಾರೆ   

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರಸಭೆಯ ಅಧಿಕಾರ ಬಿಜೆಪಿ ಹಿಡಿತದಲ್ಲಿ ಇದೆ. ಬಿಜೆಪಿ ಸದಸ್ಯರು, ಸುಧಾಕರ್ ಬೆಂಬಲಿಗರು ಅಧಿಕಾರ ಹಿಡಿದಿದ್ದಾರೆ. ಆದರೆ ಆಡಳಿತ ಪಕ್ಷದ ಸದಸ್ಯರಲ್ಲಿ ಈ ಹಿಂದಿನಿಂದಲೂ ಇದ್ದ ಶೀತಲ ಸಮರ ಇಂದಿಗೂ ಮುಂದುವರಿದಿದೆ. 

ಮಂಗಳವಾರ ಚಿಕ್ಕಬಳ್ಳಾಪುರ ನಗರಸಭೆ ಆವರಣದಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಅಧ್ಯಕ್ಷ ಎ.ಗಜೇಂದ್ರ ಮತ್ತು ಮಾಜಿ ಅಧ್ಯಕ್ಷ ಡಿ.ಎಸ್.ಆನಂದ ರೆಡ್ಡಿ ಬಾಬು ಅಕ್ಕಪಕ್ಕದಲ್ಲಿಯೇ ಕುಳಿತರೂ ಪರಸ್ಪರ ಮಾತನಾಡಲಿಲ್ಲ. ಸಂಸದ ಡಾ.ಕೆ. ಸುಧಾಕರ್ ಬೆಂಬಲಿಗರಾಗಿರುವ ಈ ಇಬ್ಬರು ನಾಯಕರು, ಹಿಂದಿನಿಂದಲೂ ಉತ್ತರ ಮತ್ತು ದಕ್ಷಿಣ ಎನ್ನುವಂತೆ ಇದ್ದಾರೆ.  

ಇತ್ತೀಚೆಗೆ ನಡೆದ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ವೇಳೆ ಬಿಜೆಪಿಯ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿದ್ದ ಗಜೇಂದ್ರ ಅವರಿಗೆ ಮತ ಚಲಾಯಿಸಿ ಸಿಡಿಮಿಡಿಯಿಂದಲೇ ಆನಂದರೆಡ್ಡಿ ನಗರಸಭೆ ಆವರಣದಿಂದ ಹೊರ ನಡೆದಿದ್ದರು. ಇದು ತೀವ್ರ ಚರ್ಚೆಗೆ ಕಾರಣವಾಗಿತ್ತು.

ADVERTISEMENT

ಆ ನಂತರವಾದರೂ ಪರಿಸ್ಥಿತಿ ತಿಳಿಗೊಳ್ಳುತ್ತದೆ ಎನ್ನುವ ನಿರೀಕ್ಷೆಗಳು ಹುಸಿಯಾಗಿವೆ. ‘ಇಂದಿಗೂ ಆಡಳಿತ ಪಕ್ಷದಲ್ಲಿ ಎರಡು ಬಣಗಳು ಇವೆ’ ಎಂದು ಚಿಕ್ಕಬಳ್ಳಾಪುರ ನಗರಸಭೆಯ ಆಳ ಅಗಲ ಬಲ್ಲವರು ಹೇಳುವರು.

ಚಿಕ್ಕಬಳ್ಳಾಪುರ ನಗರಸಭೆಯ ಆಡಳಿತ ಪಕ್ಷದ ಸದಸ್ಯರ ನಡುವೆ ಮುಸುಕಿನ ಗುದ್ದಾಟ ಈ ಹಿಂದಿನಿಂದಲೂ ಇತ್ತು. ಡಿ.ಎಸ್.ಆನಂದರೆಡ್ಡಿ ಬಾಬು ಅಧ್ಯಕ್ಷರಾಗಿದ್ದ ವೇಳೆಯೂ ಆಡಳಿತ ಪಕ್ಷದ ಸದಸ್ಯರು ಎರಡು ಗುಂಪುಗಳಾಗಿದ್ದರು. 

ಒಂದು ಬಣಕ್ಕೆ ಡಿ.ಎಸ್.ಆನಂದರೆಡ್ಡಿ ಬಾಬು ಮತ್ತು ಮತ್ತೊಂದು ಬಣಕ್ಕೆ ಅಂದಿನ ನಗರಸಭೆ ಸದಸ್ಯ ಹಾಗೂ ಇಂದಿನ ಅಧ್ಯಕ್ಷ ಎ.ಗಜೇಂದ್ರ ನಾಯಕರಾಗಿದ್ದರು. ಉತ್ತರ ಮತ್ತು ದಕ್ಷಿಣ ಧ್ರುವಗಳಂತೆ ಎರಡೂ ಬಣಗಳು ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದ್ದವು. 

ನಗರಸಭೆ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡ ಸಂಸದ ಡಾ.ಕೆ.ಸುಧಾಕರ್, ಈ ಶೀತಲ ಸಮರವನ್ನು ಶಮನಗೊಳಿಸಲು ಮುಂದಾಗಿದ್ದರು. ಬಿಜೆಪಿ ಗೆಲುವು ಸಾಧಿಸಿದರೂ ಆಡಳಿತ ಪಕ್ಷದ ಸದಸ್ಯರ ನಡುವಿನ ಮುನಿಸು ಕರಗುತ್ತಿಲ್ಲ.

ಒಟ್ಟು 31 ಸದಸ್ಯ ಬಲದ ನಗರಸಭೆಯಲ್ಲಿ, ಕಾಂಗ್ರೆಸ್ 16, ಬಿಜೆಪಿ 9, ಜೆಡಿಎಸ್ 2 ಹಾಗೂ 4 ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದರು. ಕಾಂಗ್ರೆಸ್‌ಗೆ ಬಹುಮತವೂ ಇತ್ತು. 2020ರ ಅ.30ರಂದು ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಡಾ.ಕೆ.ಸುಧಾಕರ್ ಅವರ ರಾಜಕೀಯ ತಂತ್ರಗಾರಿಕೆಯ ಪರಿಣಾಮ ಕಾಂಗ್ರೆಸ್‌ಗೆ ಅಧಿಕಾರ ಕೈತಪ್ಪಿತು. 

ಪಕ್ಷೇತರರಾಗಿ ಗೆಲುವು ಸಾಧಿಸಿದ್ದ ಡಿ.ಎಸ್.ಆನಂದರೆಡ್ಡಿ ಬಾಬು ಅಧ್ಯಕ್ಷರಾದರು.  ಕಾಂಗ್ರೆಸ್‌ನ ನಾಲ್ವರು ಸದಸ್ಯರು ಆನಂದರೆಡ್ಡಿ ಅವರಿಗೆ ಮತಹಾಕಿದ್ದರು. ಮೂವರು ಗೈರಾಗಿದ್ದರು. ಹೀಗೆ ಪಕ್ಷೇತರರಾಗಿ ಗೆಲುವು ಸಾಧಿಸಿದ ಆನಂದರೆಡ್ಡಿ ಅವರು ಬಿಜೆಪಿ ಸದಸ್ಯರು ಮತ್ತು ಸಚಿವ ಡಾ.ಕೆ.ಸುಧಾಕರ್ ಅವರ ಬೆಂಬಲದಿಂದ ಅಧ್ಯಕ್ಷ ಸ್ಥಾನ ಪಡೆದರು. ನಗರಸಭೆ ಇತಿಹಾಸದಲ್ಲಿ ಇದೇ ಮೊದಲ ಬಾರಿ ಬಿಜೆಪಿ ಬೆಂಬಲಿತರು ಅಧ್ಯಕ್ಷರಾದರು.

ನಗರಸಭೆಯ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಕಳೆದ ತಿಂಗಳು ನಡೆಯಿತು. ಬಿಜೆಪಿಯಿಂದ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿದ್ದ ಎ.ಗಜೇಂದ್ರ ಗೆಲುವು ಸಾಧಿಸಿದರು. ಡಿ.ಎಸ್.ಆನಂದರೆಡ್ಡಿ ಹಾಗೂ ಅವರ ಜೊತೆಯಲ್ಲಿ ಗುರುತಿಸಿಕೊಂಡಿರುವ ನಗರಸಭೆ ಸದಸ್ಯರು ಗಜೇಂದ್ರ ಅವರಿಗೆ ಮತ ಚಲಾಯಿಸಿದರು. ಇದೆಲ್ಲವೂ ಇತಿಹಾಸ. 

ಒಗ್ಗಟ್ಟಿನ ಮಂತ್ರ ಜಪಿಸಿ ಅಧಿಕಾರಕ್ಕೆ ಬಂದ ಬಿಜೆಪಿ ಸದಸ್ಯರಲ್ಲಿ ಶೀತಲ ಸಮರ ಇಂದಿಗೂ ಮುಂದುವರಿದಿದೆ. ಇದನ್ನು ನಗರಸಭೆ ಸದಸ್ಯರೇ ಒಪ್ಪುವರು. ಆದರೆ ಬಹಿರಂಗವಾಗಿ ಹೇಳಲು ಹಿಂಜರಿಯುವರು. 

ಚಿಕ್ಕಬಳ್ಳಾಪುರದಲ್ಲಿ ಸಚಿವ ಡಾ.ಕೆ.ಸುಧಾಕರ್ ಅವರೇ ಬಿಜೆಪಿ ಹೈ ಕಮಾಂಡ್. ಡಿ.ಎಸ್.ಆನಂದರೆಡ್ಡಿ ಬಾಬು ಮತ್ತು ಎ.ಗಜೇಂದ್ರ ಇಬ್ಬರೂ ಸಚಿವರ ಆಪ್ತ ವಲಯದಲ್ಲಿ ಇದ್ದಾರೆ. ಸಚಿವರಿಗೂ ಆಡಳಿತ ಪಕ್ಷದ ಸದಸ್ಯರ ನಡುವಿನ ಮುಸುಕಿನ ಗುದ್ದಾಟದ ಬಗ್ಗೆ ತಿಳಿದಿದೆ ಎನ್ನುತ್ತಾರೆ ಬಿಜೆಪಿ ಮುಖಂಡರು ಮತ್ತು ಆಡಳಿತ ಪಕ್ಷದ ಸದಸ್ಯರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.