ADVERTISEMENT

ಚಿಕ್ಕಬಳ್ಳಾಪುರ ನಗರಸಭೆ: ಪೌರಾಯುಕ್ತ ಹುದ್ದೆಗೆ ಅಧಿಕಾರಿಗಳ ಹಿಂದೇಟು

ನಾಲ್ಕು ವರ್ಷದಲ್ಲಿ ಎಂಟು ಮಂದಿ ಕೆಲಸ

ಡಿ.ಎಂ.ಕುರ್ಕೆ ಪ್ರಶಾಂತ
Published 24 ಅಕ್ಟೋಬರ್ 2024, 7:06 IST
Last Updated 24 ಅಕ್ಟೋಬರ್ 2024, 7:06 IST
ಚಿಕ್ಕಬಳ್ಳಾಪುರ ನಗರಸಭೆ
ಚಿಕ್ಕಬಳ್ಳಾಪುರ ನಗರಸಭೆ   

ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ನಗರಸಭೆ ಪೌರಾಯುಕ್ತರ ಹುದ್ದೆಗೆ ‘ಕಾಯಂ’ ಅಧಿಕಾರಿ ಬರುವ ಲಕ್ಷಣಗಳು ಸದಸ್ಯಕ್ಕೆ ಕಾಣುತ್ತಿಲ್ಲ. ಚಿಕ್ಕಬಳ್ಳಾಪುರ ಪೌರಾಯುಕ್ತ ಹುದ್ದೆಗೆ ಬರಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. 

ಚಿಕ್ಕಬಳ್ಳಾಪುರ ನಗರಸಭೆ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಇಂತಹ ಸ್ಥಿತಿ ಇದೆ ಎನ್ನುತ್ತಾರೆ ನಗರಸಭೆ ಸದಸ್ಯರು ಮತ್ತು ಅಧಿಕಾರಿಗಳು. ಕಳೆದ ನಾಲ್ಕು ವರ್ಷಗಳಲ್ಲಿ ಎಂಟು ಮಂದಿ ಪೌರಾಯುಕ್ತರಾಗಿ ಕೆಲಸ ಮಾಡಿದ್ದಾರೆ. 

ಈ ‘ಬದಲಾವಣೆ’ ನಗರಸಭೆಯ ಪಟ್ಟಭದ್ರರ ಆಟಗಳನ್ನು ಸಾರಿ ಹೇಳುತ್ತವೆ. ಅಲ್ಲದೆ ರಾಜಕೀಯ ಇಚ್ಛಾಶಕ್ತಿಯ ಕೊರತೆ ಮತ್ತು ಹಿತಾಸಕ್ತಿ ಪೌರಾಯುಕ್ತರ ಹುದ್ದೆ ಖಾಲಿ ಇರಲು ಕಾರಣವಾಗಿದೆ.

ADVERTISEMENT

ಸದ್ಯಕ್ಕೆ ಈ ಹುದ್ದೆಗೆ ಬರಲು ಅಧಿಕಾರಿಗಳು ‘ಒಲ್ಲೆ’ ಎನ್ನುತ್ತಿದ್ದಾರೆ. ನಗರಸಭೆ ಕಾಂಗ್ರೆಸ್ ಸದಸ್ಯ ಎಸ್‌.ಎಂ.ರಫೀಕ್, ‘ನಗರಸಭೆ ಪೌರಾಯುಕ್ತರಾಗಿ ಕಾರ್ಯನಿರ್ವಹಿಸುತ್ತಿರುವ ಮಂಜುನಾಥ್ ಕೇವಲ ಮುಖ್ಯಾಧಿಕಾರಿ ಅಷ್ಟೇ. ಅವರು ಪೌರಾಯುಕ್ತರಾಗಿ ಕೆಲಸ ಮಾಡಲು ಮುನಿಸಿಪಾಲ್ ಕಾಯ್ದೆ ಪ್ರಕಾರ ವಿದ್ಯಾರ್ಹತೆ ಹೊಂದಿಲ್ಲ. ಅವರನ್ನು ಕೂಡಲೇ ಬದಲಾವಣೆ ಮಾಡಬೇಕು’ ಎಂದು ಹೈಕೋರ್ಟ್ ಮೊರೆ ಹೋಗಿದ್ದಾರೆ. 

ಆದ ಕಾರಣ 2024ರ ಜುಲೈ ಮೊದಲ ವಾರದಲ್ಲಿ ಮಂಜುನಾಥ್ ಹುದ್ದೆಯಿಂದ ವರ್ಗಾವಣೆಯಾದರು. ನಂತರ ಪರಿಸರ ಎಂಜಿನಿಯರ್ ಪಿ.ಉಮಾಶಂಕರ್, ಪ್ರಭಾರ ಪೌರಾಯುಕ್ತರಾದರು. ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯ ನಂತರ ‘ಪ್ರಭಾರ’ ಜವಾಬ್ದಾರಿಯನ್ನು ಉಪವಿಭಾಗಾಧಿಕಾರಿ ಅವರಿಗೆ ವಹಿಸಲಾಯಿತು.

ಜಿಲ್ಲೆಯ ಇತರೆ ನಗರಸ್ಥಳೀಯ ಸಂಸ್ಥೆಗಳೂ ಸೇರಿದಂತೆ ರಾಜ್ಯದ ಬಹಳಷ್ಟು ನಗರಸ್ಥಳೀಯ ಸಂಸ್ಥೆಗಳಲ್ಲಿ ಪೌರಾಯುಕ್ತರಾಗಿ ಕೆಲಸ ನಿರ್ವಹಿಸುತ್ತಿರುವವರು ‘ಗ್ರೇಡ್ 1’ ಅಧಿಕಾರಿಗಳಲ್ಲ. ಹೀಗಿದ್ದರೂ ‘ಅರ್ಹತೆ’ಯ ಕಾರಣ ಚಿಕ್ಕಬಳ್ಳಾಪುರ ನಗರಸಭೆಯ ಪೌರಾಯುಕ್ತರು ಮಾತ್ರ ಬದಲಾವಣೆಯಾಗಿದ್ದಾರೆ.

ಉಪವಿಭಾಗಾಧಿಕಾರಿ ಅವರಿಗೆ ಪ್ರಭಾರ ಜವಾಬ್ದಾರಿ ವಹಿಸಲಾಗಿದೆ. ಆದರೆ ಅವರಿಗೆ ಕಾರ್ಯಭಾರದ ಒತ್ತಡ ಹೆಚ್ಚು.

ವಿದ್ಯಾರ್ಹತೆಯೇ ಮಾನದಂಡವಾಗಿರುವ ಕಾರಣ ಗ್ರೇಡ್‌–1 ಅಧಿಕಾರಿಯೇ ನಗರಸಭೆಗೆ ಪೌರಾಯುಕ್ತರಾಗಿ ಬರಬೇಕಿದೆ. ಆದರೆ ಚಿಕ್ಕಬಳ್ಳಾಪುರ ನಗರಸಭೆ ಬೆಳವಣಿಗೆಗಳ ಬಗ್ಗೆ ತಿಳಿದ ಅಧಿಕಾರಿಗಳು ಇದರ ಗೊಡವೆಯೇ ಬೇಡ ಎಂದು ಹಿಂದೆ ಸರಿಯುತ್ತಿದ್ದಾರೆ ಎನ್ನುತ್ತವೆ ಮೂಲಗಳು. 

ನಗರದ ಅಭಿವೃದ್ಧಿ ಮತ್ತು ನಾಗರಿಕರ ಸಮಸ್ಯೆಗಳ ಪರಿಹಾರಕ್ಕೆ ಪೌರಾಯುಕ್ತರ ಜವಾಬ್ದಾರಿ ಪ್ರಮುಖವಾದುದು. ಮಳೆಗಾಲದಲ್ಲಿ ಪೌರಾಯುಕ್ತರು ಸಮಸ್ಯೆಯಾದ ಸ್ಥಳಗಳಿಗೆ ತಕ್ಷಣವೇ ಭೇಟಿ ನೀಡಿ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದರು. ನಾಗರಿಕರ ಸಮಸ್ಯೆಗಳನ್ನು ಆಲಿಸುತ್ತಿದ್ದರು. ಇ–ಖಾತೆಗಳು ಸಹ ಚುರುಕಾಗುತ್ತಿದ್ದವು. ಆದರೆ ಕಾಯಂ ಪೌರಾಯುಕ್ತರು ಇಲ್ಲದ ಕಾರಣ ಈ ಎಲ್ಲವೂ ಆಮೆಗತಿಯಲ್ಲಿದೆ. ಜನರು ಹೈರಾಣಾಗುತ್ತಿದ್ದಾರೆ ಎಂದು ನಗರಸಭೆ ಸದಸ್ಯರೊಬ್ಬರು ಬೇಸರ ವ್ಯಕ್ತಪಡಿಸುವರು.

ಇತ್ತೀಚಿನ ವರ್ಷಗಳಲ್ಲಿ ನಗರಸಭೆ ಪೌರಾಯುಕ್ತರ ಹುದ್ದೆ ರಾಜಕೀಯ ದಾಳವಾಗುತ್ತಿದೆ ಎನ್ನುವುದಕ್ಕೆ ವರ್ಗಾವಣೆಗಳೇ ಸಾಕ್ಷಿ. 2021ರ ತರುವಾಯ ಅಧಿಕಾರವಹಿಸಿಕೊಂಡ ಯಾವ ಪೌರಾಯುಕ್ತರೂ ಸಹ ಒಂದು ವರ್ಷ ಅಧಿಕಾರ ಪೂರ್ಣಗೊಳಿಸಿಲ್ಲ. 2021ರಿಂದ ಇಲ್ಲಿಯವರೆಗೆ ಎಂಟು ಮಂದಿ ಪೌರಾಯುಕ್ತರ ಹುದ್ದೆಯಲ್ಲಿ ಕೆಲಸ ಮಾಡಿದ್ದಾರೆ. 

2021 ಆಗಸ್ಟ್ 18ರಿಂದ 19ರವರೆಗೆ ಅಂದರೆ ಕೇವಲ ಒಂದೇ ದಿನ ಮಾತ್ರ ಡಿ.ಎನ್.ಮಾಧವನ್ ಪ್ರಭಾರ ಪೌರಾಯುಕ್ತರಾಗಿದ್ದರು. 2021 ಆ.19ರಿಂದ 2022ರ ಜು.15ರವರೆಗೆ ಎನ್.ಮಹಾಂತೇಶ್, 2022ರಜು.15ರಿಂದ 2022ರ ಸೆ.2ರವರೆಗೆ ಎಂ.ರೇಣುಕ ಈ ಹುದ್ದೆಯಲ್ಲಿ ಇದ್ದರು.

ಉಮಾಶಂಕರ್ 2022ರ ಸೆ.2ರಿಂದ 2023ರ ಮಾ.20ರವರೆಗೆ ಪ್ರಭಾರ ಪೌರಾಯುಕ್ತರಾಗಿ ಕೆಲಸ ನಿರ್ವಹಿಸಿದರು. ನಂತರ 2023ರ ಮಾ.21ರಿಂದ 2023ರ ಆ.16ರವರೆಗೆ ಪಂಪಾಶ್ರೀ ಯು.ಪಿ ಕೆಲಸ ಮಾಡಿದರು. 2023ರ ಆ.16ರಿಂದ ಮಂಜುನಾಥ್ ಪೌರಾಯುಕ್ತರಾಗಿ ನೇಮಕವಾದರು. ಮತ್ತೆ ಉಮಾಶಂಕರ್ ಅವರಿಗೆ ಪ್ರಭಾರ ಜವಾಬ್ದಾರಿ ನೀಡಲಾಯಿತು. ಈಗ ಉಪವಿಭಾಗಾಧಿಕಾರಿ ಅಶ್ವಿನ್ ಕುಮಾರ್ ಪ್ರಭಾರದ ಜವಾಬ್ದಾರಿಯಲ್ಲಿ ಇದ್ದಾರೆ.

ಹಿಂದೆ ಈ ರೀತಿ ಆಗಿತ್ತಾ?
ಚುನಾಯಿತ ಪ್ರತಿನಿಧಿಗಳಷ್ಟೇ ಪೌರಾಯುಕ್ತರು ಸಹ ಮುಖ್ಯ. ಜಿಲ್ಲಾ ಕೇಂದ್ರದ ನಗರಸಭೆಗೆ ಪೌರಾಯುಕ್ತರ ನೇಮಕವಾಗಿಲ್ಲ. ಈ ಹಿಂದೆ ಯಾವತ್ತಾದರೂ ಈ ರೀತಿಯಲ್ಲಿ ಆಗಿತ್ತಾ ಎಂದು ಸಂಸದ ಡಾ.ಕೆ.ಸುಧಾಕರ್ ಪ್ರಶ್ನಿಸಿದ್ದಾರೆ. ಇವರಿಗೆ ಹೊಸ ಪೌರಾಯುಕ್ತರ ನೇಮಕ ಮಾಡಿಸಲೂ ಆಗುತ್ತಿಲ್ಲ.  ಪೌರಾಯುಕ್ತರು ಇದಿದ್ದರೆ  ಇ–ಖಾತೆ ಸ್ವಚ್ಛತೆ ಕುಡಿಯುವ ನೀರು ಪೂರೈಕೆ ಸೇರಿದಂತೆ ನಾಗರಿಕರ ಸಮಸ್ಯೆಗಳು ಪರಿಹಾರವಾಗುತ್ತಿದ್ದವು ಎಂದಿದ್ದಾರೆ.
‘ಯಾರೂ ಸಿಗುತ್ತಿಲ್ಲ’
‘ಚಿಕ್ಕಬಳ್ಳಾಪುರ ನಗರಸಭೆ ಪೌರಾಯುಕ್ತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದವರು ಈ ಹುದ್ದೆಗೆ ಅರ್ಹರಲ್ಲ ಎಂದು ಕೆಲವರು ನ್ಯಾಯಾಲಯಕ್ಕೆ ಹೋದರು. ಆದರೆ ಈಗ ಗ್ರೇಡ್ 1 ಪೌರಾಯುಕ್ತರು ಯಾರೂ ಸಿಗುತ್ತಿಲ್ಲ ಎಂದು ಡಾ.ಎಂ.ಸಿ.ಸುಧಾಕರ್ ಇತ್ತೀಚೆಗೆ ತಿಳಿಸಿದರು. ಯಾವ ಕಾರಣಕ್ಕೆ ನ್ಯಾಯಾಲಯಕ್ಕೆ ಹೋದರೊ ಗೊತ್ತಿಲ್ಲ. ತಪ್ಪು ಆಗಿದೆ. ಆದರೆ ರಾಜ್ಯದಲ್ಲಿ ನಗರಸಭೆ ಪೌರಾಯುಕ್ತ ಹುದ್ದೆಗಳಿಗೆ ಗ್ರೇಡ್ 1 ಅಧಿಕಾರಿಗಳು ಸಿಗುತ್ತಿಲ್ಲ. ಗ್ರೇಡ್ 2 ಅಧಿಕಾರಿ ಪೌರಾಯುಕ್ತರಾಗಿ ಬಂದರೆ ಮತ್ತೆ ಗೊಂದಲ ಸೃಷ್ಟಿ ಆಗುತ್ತದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.