ಬಾಗೇಪಲ್ಲಿ: ತಾಲ್ಲೂಕಿನ ಕೊತ್ತಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷ್ಣಾಪುರ ಗ್ರಾಮದ ಊರ ಮುಂದೆ ನಿರ್ಮಿಸಿದ ಊರ ಬಾಗಿಲು ಗ್ರಾಮಗಳ ಶುಭಕಾರ್ಯಗಳಿಗೆ ಗ್ರಾಮಸ್ಥರು ಬಳಕೆ ಮಾಡಿಕೊಳ್ಳುತ್ತಾರೆ. ಇದು ಜನರ ಸಹಬಾಳ್ವೆಗೆ ಹಾಗೂ ಸೌಹಾರ್ದತೆಯ ಕೊಂಡಿಯಾಗಿದೆ.
ಗಣ್ಯವ್ಯಕ್ತಿಗಳಿಗೆ ಸ್ವಾಗತ ಕೋರಲು, ರೈತರು ಹಸುಗಳನ್ನು ಖರೀದಿ ಮಾಡಿ ಗ್ರಾಮಕ್ಕೆ ಕರೆತಂದಾಗ ಇದೇ ಊರ ಬಾಗಿಲಿನ ಮೂಲಕ ಪ್ರವೇಶ ಮಾಡಿಸುತ್ತಿದ್ದರು. ನಾಲ್ಕು ಕಲ್ಲಿನ ಕಂಬಗಳ ಮೇಲೆ ಮಂಟಪ ಹಾಗೂ ಗೋಪುರದ ಆಕೃತಿಯಲ್ಲಿ ಕಮಾನನ್ನು ನಿರ್ಮಿಸಲಾಗಿದೆ. ಗೋಪುರ ಮೇಲೆ ದೇವರ ಚಿತ್ರ, ಕಲ್ಲು ಗುಂಡುಗಳನ್ನು ಇರಿಸಿ ದೀಪ ಹಚ್ಚಲು ಗೂಡನ್ನು ನಿರ್ಮಿಸಲಾಗಿದೆ.
70 ವರ್ಷಗಳ ಹಿಂದೆ ತಾಲ್ಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ದೇವರ ಗುಡಿ ಇತ್ತು. ಗುಡಿ ಮುಂದೆ ಹತ್ತಾರು ವಿವಿಧ ಸಮುದಾಯದ ಕುಟುಂಬ ವಾಸ ಮಾಡುತ್ತಿತ್ತು. ಊರಿಗೆ, ಗುಡಿಗೆ ಬರುವ ಸ್ವಲ್ಪದೂರದಲ್ಲಿ ಪೂರ್ವಜರು ಊರ ಬಾಗಿಲು ನಿರ್ಮಿಸಿದ್ದಾರೆ.
ವಿವಿಧ ಸಮುದಾಯದ 100ಕ್ಕೂ ಹೆಚ್ಚು ಕುಟುಂಬಗಳು ಈಗ ವಾಸವಿದೆ. ಗ್ರಾಮ ಬೆಳೆದ ಕಾರಣ ಇದೀಗ ಊರ ಬಾಗಿಲು ಮಧ್ಯದಲ್ಲಿ ಇದೆ.
560 ವರ್ಷ ಆಳ್ವಿಕೆ ಮಾಡಿದ ಪಾಳೇಗಾರರ ಆಳ್ವಿಕೆಯಲ್ಲಿ ತಾಲ್ಲೂಕಿನ ಪ್ರತಿ ಊರಿನಲ್ಲಿ ಊರ ಬಾಗಿಲು ನಿರ್ಮಿಸಿದ್ದಾರೆ. ಊರ ಬಾಗಿಲುಗಳ ಮೂಲಕ ಗಣ್ಯ ವ್ಯಕ್ತಿಗಳು, ರಾಜಮಹಾರಾಜ, ಅಧಿಕಾರಿಗಳಿಗೆ ಸ್ವಾಗತ ಕೋರಲಾಗುತ್ತಿತ್ತು.
ರಾಜಮಹಾರಾಜರ ಆಳ್ವಿಕೆ ಮುಗಿದ ನಂತರ ಊರುಗಳ ರಕ್ಷಣೆಗೆ ಪೊಲೀಸ್ ಹಾಗೂ ಆಡಳಿತ ವ್ಯವಸ್ಥೆ ಬಂದಿದೆ. ಪೊಲೀಸರು, ಕಂದಾಯ, ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಊರ ಬಾಗಿಲಿನಲ್ಲಿ ಸಭೆ ಮಾಡುತ್ತಾರೆ. ಕಂದಾಯ ವಸೂಲಿಗಾರರು ಸಹ ಊರ ಬಾಗಿಲಿನಲ್ಲಿ ವಸೂಲಿ ಮಾಡುವ ಸಂಪ್ರದಾಯವು ಇಂದಿಗೂ ಕೃಷ್ಣಾಪುರ ಗ್ರಾಮದಲ್ಲಿ ಇದೆ.
ಪ್ರತಿ ಹಬ್ಬದ ಸಂದರ್ಭಗಳಲ್ಲಿ ಊರ ಬಾಗಿಲಿಗೆ ಸುಣ್ಣಣ ಬಳಿಯುತ್ತಾರೆ. ಹಸಿರು ತೋರಣ, ಬಾಳೆದಿಂಡು, ಕಬ್ಬಿನ ದಿಂಡು ಹಾಗೂ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತದೆ. ಊರ ಜಾತ್ರೆಗಳ ಸಂದರ್ಭದಲ್ಲಿ ತಂಬಿಟ್ಟಿನ ದೀಪದಾರತಿ ಮೊದಲು ಊರ ಬಾಗಿಲಿಗೆ ಸಮರ್ಪಿಸುತ್ತಾರೆ.
‘ಕಾಲ ಬದಲಾದರೂ ಕೃಷ್ಣಾಪುರ ಗ್ರಾಮದಲ್ಲಿ ಊರ ಬಾಗಿಲನ್ನು ಉಳಿಸಿಕೊಂಡಿದ್ದೇವೆ. ಜಾತ್ರೆ, ಹಬ್ಬದ ಸಂದರ್ಭದಲ್ಲಿ ಗಣ್ಯವ್ಯಕ್ತಿಗಳು ಗ್ರಾಮಕ್ಕೆ ಬಂದರೆ ಊರ ಬಾಗಿಲಿನ ಮೂಲಕ ಸ್ವಾಗತಿಸುತ್ತೇವೆ. ಊರ ಬಾಗಿಲು ಜನರ ಬೆಸುಗೆ ಜಾಗ ಆಗಿದೆ’ ಎಂದು ಕೃಷ್ಣಾಪುರ ಗ್ರಾಮದ ಹಿರಿಯರಾದ ಲಕ್ಷ್ಮರೆಡ್ಡಿ ಹೇಳಿದರು.
‘ಮುತ್ತಜ್ಜರ ಕಾಲದಲ್ಲಿ ಊರ ಬಾಗಿಲನ್ನು ನಿರ್ಮಿಸಲಾಗಿದೆ ಎಂದು ಅಜ್ಜ ಹೇಳುತ್ತಿದ್ದರು. ಊರ ಬಾಗಿಲು, ಕೋಟೆಗಳು, ಸ್ಮಾರಕಗಳು, ಪಾಳೇಗಾರರ ಆಳ್ವಿಕೆಯ ದೇವಾಲಯಗಳು, ಗುಮ್ಮನಾಯಕಪಾಳ್ಯದ ಹಾಗೂ ದೇವಿಕುಂಟೆ ಕೋಟೆಗಳನ್ನು ಸರ್ಕಾರ ಅಭಿವೃದ್ಧಿ ಪಡಿಸಬೇಕು. ಪೂರ್ವಜರು ರೂಡಿಸಿಕೊಂಡು ಬಂದಿರುವ ಸಂಪ್ರದಾಯ ಹಾಗೂ ಆಚರಣೆಗಳನ್ನು ಗ್ರಾಮಗಳ ಯುವಜನರು ಮುಂದುವರೆಸಬೇಕು’ ಎಂದು ಕೃಷ್ಣಾಪುರ ಗ್ರಾಮದ ವಕೀಲ ರಮೇಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.