ADVERTISEMENT

ಚಿಕ್ಕಬಳ್ಳಾಪುರ | ‘ಕೈ’ ನಾಯಕತ್ವ; ರಕ್ಷಾಗೆ ದುಂಬಾಲು

ಚಿಕ್ಕಬಳ್ಳಾಪುರ ಕ್ಷೇತ್ರ; ಶಾಸಕ ಪ್ರದೀಪ್ ಈಶ್ವರ್ ವಿರೋಧಿ ಬಣದಿಂದ ಸೀತಾರಾಮ್ ಭೇಟಿ

ಡಿ.ಎಂ.ಕುರ್ಕೆ ಪ್ರಶಾಂತ
Published 20 ಜೂನ್ 2024, 8:01 IST
Last Updated 20 ಜೂನ್ 2024, 8:01 IST
ಪ್ರದೀಪ್ ಈಶ್ವರ್
ಪ್ರದೀಪ್ ಈಶ್ವರ್   

ಚಿಕ್ಕಬಳ್ಳಾಪುರ: ‘ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ನಾಯಕತ್ವವಹಿಸಿಕೊಳ್ಳಬೇಕು. ನಿಮಗೆ ಸಹಕಾರ ನೀಡುತ್ತೇವೆ’–ಇದು ಇತ್ತೀಚೆಗೆ ಚಿಕ್ಕಬಳ್ಳಾಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ನಂದಿ ಆಂಜನಪ್ಪ, ರಕ್ಷಾ ರಾಮಯ್ಯ ಮತ್ತು ಎಂ.ಆರ್.ಸೀತಾರಾಂ ಅವರಿಗೆ ನೀಡಿದ ಬಹಿರಂಗ ಆಹ್ವಾನ.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಅವರಿಂದ ಅಂತರ ಕಾಯ್ದುಕೊಂಡಿರುವ ಕಾಂಗ್ರೆಸ್‌ನ ಕೆಲವು ಮುಖಂಡರು ‘ನಾಯಕತ್ವ’ ವಹಿಸಿಕೊಳ್ಳುವಂತೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿಯೂ ಆದ ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ಮತ್ತು ಅವರ ತಂದೆ ವಿಧಾನ ಪರಿಷತ್ ಸದಸ್ಯ ಎಂ.ಆರ್.ಸೀತಾರಾಮ್ ಅವರಿಗೆ ದುಂಬಾಲು ಬಿದ್ದಿದ್ದಾರೆ ಎನ್ನುತ್ತವೆ ಖಚಿತ ಮೂಲಗಳು.

ಈ ಇಬ್ಬರನ್ನು ಕಾಂಗ್ರೆಸ್‌ನ ಸ್ಥಳೀಯ ಕೆಲವು ನಾಯಕರು ಇತ್ತೀಚೆಗೆ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಪಕ್ಷದ ಜಿಲ್ಲಾ ಮಾಜಿ ಅಧ್ಯಕ್ಷ, ಮಾಜಿ ಶಾಸಕ, ನಗರಸಭೆಯ ಕೆಲವು ಸದಸ್ಯರು ಈ ನಿಯೋಗದಲ್ಲಿ ಇದ್ದರು. 

ADVERTISEMENT

2018ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿಯೇ ಚಿಕ್ಕಬಳ್ಳಾಪುರದಿಂದ ಕಣಕ್ಕೆ ಇಳಿಯುವಂತೆ ರಕ್ಷಾ ರಾಮಯ್ಯ ಅವರನ್ನು ಕಾಂಗ್ರೆಸ್ ನಾಯಕರು ಕೋರಿದ್ದರು. ಆದರೆ ಅವರ ದೃಷ್ಟಿ ಲೋಕಸಭೆ ಚುನಾವಣೆ ಮೇಲಿದ್ದ ಕಾರಣ ಆಹ್ವಾನ ತಿರಸ್ಕರಿಸಿದ್ದರು.

ನಂತರ ಪ್ರದೀಪ್ ಈಶ್ವರ್ ಅವರಿಗೆ ಟಿಕೆಟ್ ದೊರೆಯಿತು. ಅವರು ಗೆಲುವು ಸಾಧಿಸಿದರು. ಇದೆಲ್ಲವೂ ಇತಿಹಾಸ.

ಪ್ರದೀಪ್ ಈಶ್ವರ್ ಅವರಿಂದ ಅಂತರ ಕಾಯ್ದುಕೊಂಡಿರುವ ಕೆಲವು ನಾಯಕರು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಜವಾಬ್ದಾರಿವಹಿಸಿಕೊಳ್ಳಬೇಕು ಎನ್ನುವ ಕೋರಿಕೆ ಮುಂದಿಟ್ಟಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಕ್ಷಾ ಅವರನ್ನು ಚಿಕ್ಕಬಳ್ಳಾಪುರದಿಂದ ಕಣಕ್ಕೆ ಇಳಿಸಬೇಕು ಎನ್ನುವ ಇರಾದೆಯೂ ಈ ಮುಖಂಡರದ್ದು. ಪ್ರದೀಪ್ ಈಶ್ವರ್ ವಿರುದ್ಧದ ಕಾಂಗ್ರೆಸ್‌ ತಂಡದಲ್ಲಿ ಒಕ್ಕಲಿಗ ಸಮುದಾಯದ ನಾಯಕರ ಸಂಖ್ಯೆಯೇ ಹೆಚ್ಚಿದೆ. 

ಬಾಲಾಜಿ ಕರೆತರಲೂ ಯತ್ನ: ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರ ಸಹೋದರ ಎಂ.ಸಿ.ಬಾಲಾಜಿ ಅವರಿಗೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಜವಾಬ್ದಾರಿವಹಿಸಿಕೊಳ್ಳಬೇಕು ಎಂದು ಸಚಿವರಿಗೆ ಮನವಿ ಮಾಡಲು ಸಹ ಕೆಲವು  ನಾಯಕರು ಮುಂದಾಗಿದ್ದಾರೆ. ರಕ್ಷಾ ರಾಮಯ್ಯ ಅವರ ಭೇಟಿಯ ತರುವಾಯ, ಸಚಿವರ ನಿವಾಸಕ್ಕೂ ಮುಖಂಡರು ತೆರಳಿದ್ದಾರೆ. ಆದರೆ ಸಚಿವರು ಭೇಟಿಗೆ ಲಭ್ಯವಾಗಿಲ್ಲ ಎನ್ನುತ್ತವೆ ಮೂಲಗಳು.

‘ಹಂಚಿಕೆ’ಗೆ ಅಡ್ಡಿಯಾದರೆ ಶಾಸಕ?

ಪ್ರದೀಪ್ ಈಶ್ವರ್ ಗೆಲುವಿನ ನಂತರ ಒಂದೊಂದು ಇಲಾಖೆಯ ಜವಾಬ್ದಾರಿಗಳನ್ನು ಹಂಚಿಕೊಳ್ಳಬೇಕು ಎಂದು ಕೆಲವು ನಾಯಕರು ಪ್ರಯತ್ನಿಸಿದ್ದರು. ಆದರೆ ಅದಕ್ಕೆ ಶಾಸಕರು ಅವಕಾಶ ನೀಡಲಿಲ್ಲ. ಶಾಸಕರಾದ ಕೆಲವು ದಿನಗಳಲ್ಲಿಯೇ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ‘ನಮ್ಮ ಕೆಲಸ ಮಾಡಿ’ ಎಂದು ಕೆಲವು ನಾಯಕರು ಬೇಡಿಕೆ ಪಟ್ಟಿ ಇಟ್ಟಿದ್ದರು. ಇದಕ್ಕೆ ಶಾಸಕರು ಆಸ್ಪದ ನೀಡಲಿಲ್ಲ. ಈ ಕಾರಣದಿಂದ ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ ಎನ್ನುತ್ತಾರೆ ಶಾಸಕ ಪ್ರದೀಪ್ ಈಶ್ವರ್ ಆಪ್ತರು. 

ಕಾಂಗ್ರೆಸ್‌ನಲ್ಲಿಯೇ ಇದ್ದರೂ ‘ಪ್ರಮುಖ’ ಮುಖಂಡರು ಲೋಕಸಭೆ ಚುನಾವಣೆಯಲ್ಲಿ ‘ಕೈ’ ಕೊಟ್ಟರು. ಅವರೇ ಈಗ ಶಾಸಕರ ವಿರುದ್ಧ ಮಾತನಾಡುತ್ತಿದ್ದಾರೆ. ಈ ‘ಪ್ರಮುಖ’ರಿಗೆ ಚಿಕ್ಕಬಳ್ಳಾಪುರದ ಜವಾಬ್ದಾರಿ ನೀಡಲಾಗಿತ್ತು. ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಕ್ಷೇತ್ರದ ಜವಾಬ್ದಾರಿ ನೀಡಿರಲಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ 86,224 ಮತ ಪಡೆದಿತ್ತು. ಲೋಕಸಭಾ ಚುನಾವಣೆಯಲ್ಲಿ 77,496 ಮತಗಳನ್ನು ಪಡೆದಿದೆ. ಜೆಡಿಎಸ್ ಮತಗಳು ಸಹ ಬಿಜೆಪಿಗೆ ದೊರೆತ ಕಾರಣ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಮುನ್ನಡೆ ಪಡೆಯಿತು. 

ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಲೀಡ್ ಪಡೆದಿದ್ದಕ್ಕೆ ಶಾಸಕರನ್ನೇ ಹೊಣೆ ಮಾಡಲು ಮುಂದಾಗುತ್ತಿದ್ದಾರೆ. ಚಿಕ್ಕಬಳ್ಳಾಪುರ ಕಾಂಗ್ರೆಸ್‌ನ ಕೆಲವು ಮುಖಂಡರು ಲೋಕಸಭೆ ಚುನಾವಣೆಯ ಸಮಯದಲ್ಲಿ ಎಲ್ಲಿ  ಯಾರನ್ನು ಭೇಟಿ ಮಾಡಿದ್ದಾರೆ ಎನ್ನುವುದು ಮುಂದಿನ ದಿನಗಳಲ್ಲಿ ಬಹಿರಂಗವಾಗಲಿದೆ ಎನ್ನುತ್ತಾರೆ ಶಾಸಕ ಆಪ್ತರು.

‘ನಮಸ್ತೆ’ ಮೂಲಕ ಜನರಿಗೆ ಹತ್ತಿರ; ಮುಖಂಡರಿಂದ ದೂರ!

ಶಾಸಕ ಪ್ರದೀಪ್ ಈಶ್ವರ್ ಮತ್ತು ಕೆಲವು ನಾಯಕರ ನಡುವಿನ ಬಾಂಧವ್ಯ ಹಳಸಿ ವರ್ಷವಾಗಿದೆ. ಈ ಅಸಮಾಧಾನಕ್ಕೆ ಕೆಪಿಸಿಸಿ ಕಚೇರಿಯಲ್ಲಿ ಹಾಗೂ ಸಚಿವ ಡಾ.ಎಂ.ಸಿ.ಸುಧಾಕರ್ ಸಮ್ಮುಖದಲ್ಲಿ ತೇಪೆ ಹಚ್ಚುವ ‍ಪ್ರಯತ್ನಗಳು ಸಹ ನಡೆದಿದ್ದವು.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪ್ರದೀಪ್ ಈಶ್ವರ್ ‘ನಮಸ್ತೆ ಚಿಕ್ಕಬಳ್ಳಾಪುರ’ ಕಾರ್ಯಕ್ರಮದ ಮೂಲಕ ಜನರನ್ನು ತಲುಪುತ್ತಿದ್ದಾರೆ. ವೆಬ್‌ಸೈಟ್‌ ಮೂಲಕ ಬಂದ ಜನರ ದೂರುಗಳು, ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಮತ್ತೊಂದು ಕಡೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಮಕ್ಕಳಿಗೆ ಬಟ್ಟೆ, ಅಮ್ಮ ಆಂಬುಲೆನ್ಸ್ ಸೇರಿದಂತೆ ತಮ್ಮದೇ ಹಾದಿಯಲ್ಲಿ ಜನರನ್ನು ತಲುಪುತ್ತಿದ್ದಾರೆ. ಶಾಸಕರ ಈ ಯಾವ ಕಾರ್ಯಕ್ರಮಗಳತ್ತಲೂ ಅಸಮಾಧಾನಿತ ಮುಖಂಡರು ಸುಳಿದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.