ADVERTISEMENT

ಚಿಕ್ಕಬಳ್ಳಾಪುರ: ಗುಡಿಬಂಡೆಯ ಅಪರೂಪದ ಕಲಾವಿದನ ಬದುಕಿಗಿಲ್ಲ ಬಲ

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುಡಿಬಂಡೆ ತಾಲ್ಲೂಕಿನ ಗವಿಕುಂಟಹಳ್ಳಿಯ ಮುಖವೀಣೆ ಅಂಜಿನಪ್ಪ

ಡಿ.ಎಂ.ಕುರ್ಕೆ ಪ್ರಶಾಂತ
Published 25 ನವೆಂಬರ್ 2024, 7:42 IST
Last Updated 25 ನವೆಂಬರ್ 2024, 7:42 IST
‘ಮುಖವೀಣೆ’ ಅಂಜಿನಪ್ಪ
‘ಮುಖವೀಣೆ’ ಅಂಜಿನಪ್ಪ   

ಚಿಕ್ಕಬಳ್ಳಾಪುರ: ‘ಮನೆ ಎಲ್ಲಿ, ಮಠ ಎಲ್ಲಿ? ಯಾರು ನಮ್ಮನ್ನು ಕೇಳುತ್ತಾರೆ. ಬೋರ್‌ವೆಲ್ ಹಾಕಿಸಿಕೊಡುತ್ತೇವೆ. ಮನೆ ಕಟ್ಟಿಸಿಕೊಡುತ್ತೇವೆ ಎಂದು ಶಾಸಕ ಸುಬ್ಬಾರೆಡ್ಡಿ, ಈ ಹಿಂದೆ ಶಾಸಕರಾಗಿದ್ದ ಸಂಪಂಗಿ ಹೇಳಿದರು. ಆದರೆ ಎಲ್ಲವೂ ಬಾಯಿ ಮಾತಿಗೆ ಮಾತ್ರ...’

–ಇದು ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಗವಿಕುಂಟಹಳ್ಳಿಯ (ಕಾಟೈಗಾರಹಳ್ಳಿ) ‘ಮುಖವೀಣೆ’ ಕಲಾವಿದ  ಅಂಜಿನಪ್ಪ ಅವರ ಬೇಸರದ ಮಾತು.

ಅಂಜಿನಪ್ಪ ಅವರಿಗೆ ಈಗ 82ರ ಪ್ರಾಯ. ಅಳಿವಿನ ಅಂಚಿನಲ್ಲಿರುವ ‘ಮುಖವೀಣೆ’ ಕಲೆಯನ್ನು ದಶಕಗಳಿಂದಲೂ ಪೋಷಿಸಿಕೊಂಡು ಬರುತ್ತಿರುವ ಕಲಾವಿದ. ಏಕಕಾಲಕ್ಕೆ ಮೂರು ವಾದ್ಯಗಳನ್ನು ನುಡಿಸುವ ಕಲಾವಿದ ಎನ್ನುವ ಹಿರಿಮೆಯೂ  ಅವರದ್ದು. 

ADVERTISEMENT

ರಾಜ್ಯದಲ್ಲಿ ಮುಖವೀಣೆ ನುಡಿಸುವ ಕಲಾವಿದರು ಅಪರೂಪದಲ್ಲಿ ಅಪರೂಪವಾಗಿದ್ದಾರೆ. ಸದ್ಯ ‘ಮುಖವೀಣೆ’ ನುಡಿಸುತ್ತಿರುವ ಕಲಾವಿದರಲ್ಲಿ ಅಂಜಿನಪ್ಪ ಅಗ್ರಗಣ್ಯರು.

ಅವರ ಕಲೆಗೆ 2022ನೇ ಸಾಲಿನಲ್ಲಿ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ಜಾನಪದ ಯಕ್ಷಗಾನ ಅಕಾಡಮಿ ಪ್ರಶಸ್ತಿ, ದೂರದರ್ಶನದ ಚಂದನ ಪ್ರಶಸ್ತಿ, ಜಾನಪದ ಕಲಾಶ್ರೀ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ನೀಡುವ ರಾಜ್ಯೋತ್ಸವ ಪ್ರಶಸ್ತಿ, ಜಾನಪದ ಲೋಕೋತ್ಸವ ಪ್ರಶಸ್ತಿ–ಹೀಗೆ ಪ್ರಶಸ್ತಿಗಳ ಪಟ್ಟಿ ಬೆಳೆಯುತ್ತದೆ. ಜಿಲ್ಲೆಯಷ್ಟೇ ಅಲ್ಲ ರಾಜ್ಯ, ಹೊರ ರಾಜ್ಯದಲ್ಲಿಯೂ ಸನ್ಮಾನ, ಗೌರವಕ್ಕೆ ಪಾತ್ರರಾಗಿದ್ದಾರೆ. 

ಜಿಲ್ಲೆಯಲ್ಲಿ ವಿವಿಧ ಇಲಾಖೆಗಳು ನಡೆಸಿದ ಕಾರ್ಯಕ್ರಮಗಳಲ್ಲಿ, ಪ್ರತಿಷ್ಠಿತ ಶಾಲಾ, ಕಾಲೇಜುಗಳಲ್ಲಿ ಅವರು ಕಾರ್ಯಕ್ರಮ ನೀಡಿದ್ದಾರೆ.

ಇಂತಹ ಕಲಾ ಶ್ರೀಮಂತಿಕೆಯ ಹಿರಿಯ ಕಲಾವಿದನ ಬದುಕು ಮಾತ್ರ ಮೂರಾಬಟ್ಟೆ ಎನ್ನುವಂತಿದೆ. ಸಾಮಾನ್ಯವಾಗಿ ‘ರಾಜ್ಯೋತ್ಸವ’ ಪ್ರಶಸ್ತಿ ಪುರಸ್ಕೃತರಿಗೆ ಮತ್ತು ಕಲಾ ಸಾಧಕರಿಗೆ ಸರ್ಕಾರಿ ಸೌಲಭ್ಯಗಳು ಕನಿಷ್ಟ ಮಟ್ಟದಲ್ಲಿಯಾದರೂ ದೊರೆಯುತ್ತವೆ. 

ಆದರೆ ಅಂಜಿನಪ್ಪ ಅವರ ವಿಚಾರದಲ್ಲಿ ತದ್ವಿರುದ್ಧ. ಸರ್ಕಾರಿ ಸೌಲಭ್ಯಗಳಿಗಾಗಿ ಕಚೇರಿಗಳಿಗೆ ಅಲೆದು ಅಲೆದು ಸೌಲಭ್ಯಗಳ ಆಸೆಯನ್ನೇ ಬಿಟ್ಟಿದ್ದಾರೆ. 2014ರಲ್ಲಿಯೇ ಗಂಗಾ ಕಲ್ಯಾಣ ಕೊಳವೆಬಾವಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇಂದಿಗೂ ಆ ಅರ್ಜಿ ಮುಕ್ತಿ ಕಂಡಿಲ್ಲ. ಕಲಾವಿದರಿಗೆ ನೀಡುವ ಬಸ್‌ಪಾಸ್‌ ಕೂಡ ದೊರೆತಿಲ್ಲ. ನಿವೇಶನಕ್ಕೆ ದಾಖಲೆಗಳನ್ನು ನೀಡಿದರೂ ಅವು ಸರ್ಕಾರಿ ಕಚೇರಿಯಲ್ಲಿಯೇ ದೂಳು ಹಿಡಿಯುತ್ತಿವೆ.

ಅಪರೂಪದ ಕಲೆ: ಅಂಜಿನಪ್ಪ 14ನೇ ವಯಸ್ಸಿನಲ್ಲಿಯೇ ತಮ್ಮ ತಂದೆಯಿಂದ ಮುಖವೀಣೆ ನುಡಿಸುವುದನ್ನು ಕಲಿತವರು. ರಾಜ್ಯ, ಹೊರ ರಾಜ್ಯಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಶಿಕ್ಷಣ ತಜ್ಞ ಎಚ್.ನರಸಿಂಹಯ್ಯ, ವರನಟ ರಾಜಕುಮಾರ್, ಗಾಯಕ ಘಂಟಸಾಲ–ಹೀಗೆ ಅನೇಕ ಮಹನೀಯರ ಎದುರು ತಮ್ಮ ವಿಶಿಷ್ಟ ಕಲೆಯನ್ನು ಪ್ರದರ್ಶಿಸಿ ಪ್ರಶಂಸೆ ಪಡೆದಿದ್ದಾರೆ. 

ಜೋಪಡಿಯಂತಹ ಮನೆಯಲ್ಲಿಯೇ ಅವರಿಗೆ ಸಂದಿರುವ ಸನ್ಮಾನಗಳು, ಫಲಕಗಳು, ಸ್ಮರಣಿಕೆಗಳನ್ನು ಜೋಡಿಸಲಾಗಿದೆ. ಈ ಪ್ರಶಸ್ತಿ ಫಲಕಗಳು ದೂಳು ಹಿಡಿಯುತ್ತಿವೆ.

ಅಂಜಿನಪ್ಪ ಅವರ ವಾದ್ಯ ಪರಿಕರಗಳು

‘ಉಚಿತ ಬಸ್‌ಪಾಸ್ ಸಹ ಕೊಟ್ಟಿಲ್ಲ’

ರಾಜ್ಯೋತ್ಸವ ಪ್ರಶಸ್ತಿ ಬಂದ ವೇಳೆ ಗುಡಿಬಂಡೆಯಲ್ಲಿ ನಿವೇಶನ ಕೊಡುತ್ತೇವೆ ಎಂದು ಶಾಸಕರು ತಹಶೀಲ್ದಾರ್ ಹೇಳಿದರು. ಅರ್ಜಿ ದಾಖಲೆ ಕೊಟ್ಟೆ. ಆದರೆ ಯಾವುದೂ ಅನುಕೂಲ ಆಗಲಿಲ್ಲ ಎಂದು ‘ಮುಖವೀಣೆ’ ಅಂಜನಪ್ಪ ಬೇಸರ ವ್ಯಕ್ತಪಡಿಸಿದರು. ಹಿರಿಯ ಕಲಾವಿದರಿಗೆ ಉಚಿತ ಬಸ್‌ಪಾಸ್ ಕೊಡುತ್ತಾರೆ ಎಂದು ತಿಳಿದು ಚಿಕ್ಕಬಳ್ಳಾಪುರದ ಕೆಎಸ್‌ಆರ್‌ಟಿಸಿ ಕಚೇರಿಗೆ ದಾಖಲೆ ನೀಡಿದೆ. ಪಾಸ್ ಸಹ ಸಿಕ್ಕಿಲ್ಲ. ಗಂಗಾ ಕಲ್ಯಾಣ ಕೊಳವೆ ಬಾವಿಗೆ ಅರ್ಜಿ ಸಲ್ಲಿಸಿದರೂ ಸೌಲಭ್ಯ ದೊರೆತಿಲ್ಲ ಎಂದು ತಿಳಿಸಿದರು.

‘ನಾಚಿಕೆ ಆಗಬೇಕು’

ಅಂಜಿನಪ್ಪ ರಾಜ್ಯದ ಹೆಮ್ಮೆಯ ಕಲಾವಿದ. ಮುಖವೀಣೆ ಕಲಾವಿದರನ್ನು ಹುಡುಕಿದರೆ ಅದರಲ್ಲಿ ಮೊದಲಿಗರಾಗಿ ಕಾಣುವುದೇ ಇವರು. ಕಲೆಯಲ್ಲಿ ಶ್ರೀಮಂತ ಆರ್ಥಿಕವಾಗಿ ಕಡು ಬಡವ. ಇಂತಹ ಕಲಾವಿದರ ನೆರವಿಗೆ ಸರ್ಕಾರ ಮುಂದಾಗಬೇಕು ಎಂದು ಉಪನ್ಯಾಸಕ ಎನ್.ಚಂದ್ರಶೇಖರ್ ಮನವಿ ಮಾಡಿದರು. ನಾನೇ ದಶಕಗಳ ಹಿಂದೆ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಯಿಸುವ ಬಗ್ಗೆ ಇವರಿಗೆ ಅರ್ಜಿ ಬರೆದುಕೊಟ್ಟಿದ್ದೆ. ಒಳ್ಳೆಯ ಮನೆಯೂ ಇಲ್ಲ. ಸೌಲಭ್ಯಗಳನ್ನು ನೀಡುತ್ತೇವೆ ಎಂದು ಈ ಹಿರಿಯರಿಗೆ ಪೊಳ್ಳು ಭರವಸೆ ನೀಡಿದ ಜನಪ್ರತಿನಿಧಿಗಳು ಹಾಗೂ ನಿರ್ಲಕ್ಷ್ಯ ತೋರಿದ ಜಿಲ್ಲಾಡಳಿತಕ್ಕೆ ನಾಚಿಕೆ ಆಗಬೇಕು ಎಂದು ಹೇಳಿದರು.  ಇಂತಹ ಅಪರೂಪದ ಹಿರಿಯ ಜಾನಪದ ಕಲಾವಿದ ಬದುಕಿರುವಾಗಲೇ ಅವರಿಗೆ ಸರ್ಕಾರದಿಂದ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯಗಳು ಸಿಗಲಿ. ಕನ್ನಡ ಪರ ದಲಿತಪರ ಮತ್ತು ರೈತಪರ ಸಂಘಟನೆಗಳು ಜಿಲ್ಲೆಯ ಹಿರಿಯ ಕಲಾವಿದನ ಪರವಾಗಿ ಪ್ರಾಮಾಣಿಕವಾಗಿ ದನಿ ಎತ್ತಲಿ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.