ಚಿಕ್ಕಬಳ್ಳಾಪುರ: ಮತ್ತೊಂದು ಮಕ್ಕಳ ದಿನಾಚರಣೆಯು ಜಿಲ್ಲೆಯಲ್ಲಿ ನಡೆಯುತ್ತಿದೆ. ಆದರೆ ಜಿಲ್ಲೆಯಲ್ಲಿ ಇಂದಿಗೂ ಬಾಲ ಭವನ ನಿರ್ಮಾಣವೇ ಆಗಿಲ್ಲ. ಚಿಕ್ಕಬಳ್ಳಾಪುರವು ಜಿಲ್ಲೆಯಾಗಿ ರೂಪು ತಳೆದು 18 ವರ್ಷಗಳೇ ಉರುಳಿವೆ.
ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ಬಾಲ ಭವನದ ಕನಸು ಮಾತ್ರ ಈಡೇರಿಲ್ಲ. ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ವೇದಿಕೆ ಒದಗಿಸುವ ಮಹತ್ವದ ಯೋಜನೆ ನನೆಗುದಿಗೆ ಬಿದ್ದಿದೆ.
ಅತ್ಯಂತ ಕಡಿಮೆ ಶುಲ್ಕದಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನ ವೃದ್ಧಿಗೆ ಅಗತ್ಯವಾದ ಕಲೆ, ಸಾಹಿತ್ಯ, ಸಂಸ್ಕೃತಿ, ಸಂಗೀತ, ಕ್ರೀಡೆಯಂತ ಪಠ್ಯೇತರ ಚಟುಟಿಕೆಗಳ ತರಬೇತಿ ನೀಡುವುದು. ಮಕ್ಕಳು ವೈಯಕ್ತಿಕ ಮತ್ತು ಮಾನಸಿಕವಾಗಿ ವಿಕಾಸ ಹೊಂದುವಂತೆ ನೋಡಿಕೊಳ್ಳುವುದು ಬಾಲ ಭವನ ಯೋಜನೆಯ ಮುಖ್ಯ ಧ್ಯೇಯ.
ನಗರದ ಹೊರವಲಯದ ಗೌರಿಬಿದನೂರು ರಸ್ತೆಯಲ್ಲಿರುವ ರಂಗನಾಥ ಸ್ವಾಮಿ ದೇವಸ್ಥಾನದ (ರಂಗಸ್ಥಳ) ಬಳಿಯ ಸರ್ವೆ ನಂ 96ರಲ್ಲಿ 7 ಎಕರೆ ಜಮೀನನ್ನು ಜಿಲ್ಲಾ ಬಾಲ ಭವನ ನಿರ್ಮಿಸಲು 2015ರ ಜುಲೈನಲ್ಲಿ ಜಿಲ್ಲಾಧಿಕಾರಿ ಮಂಜೂರು ಮಾಡಿದ್ದಾರೆ. ಭೂಮಿ ಮಂಜೂರಾಗಿ ಒಂಬತ್ತು ವರ್ಷಗಳು ಕಳೆದರೂ ಭವನ ತಲೆ ಎತ್ತಿಲ್ಲ. ಈ ಭೂಮಿ ಇಂದಿಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೆಸರಿನಲ್ಲಿ ಇದೆ.
ಅಂದು ಬಾಲ ಭವನ ಸೊಸೈಟಿಯು ಕಟ್ಟಡ, ಮಕ್ಕಳ ಹುಟ್ಟುಹಬ್ಬದ ಹಾಲ್, ಶೌಚಾಲಯ, ಆಟೋಪಕರಣ, ಟೆಲಿಸ್ಕೋಪ್, ಅಕ್ವೇರಿಯಂ, ಆಟದ ಮೈದಾನ ನಿರ್ಮಿಸಲು ₹ 60 ಲಕ್ಷ ಅನುದಾನ ಸಹ ಮಂಜೂರು ಮಾಡಿತ್ತು. ಆದರೆ 2017 ರಲ್ಲಿ ಉದ್ದೇಶಿತ ಜಾಗದ ಸಮೀಕ್ಷೆ ನಡೆಸಿದ ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ) ಅಧಿಕಾರಿಗಳು ಬಾಲಭವನಕ್ಕೆ ಮಂಜೂರಾದ ಜಾಗ ಸೂಕ್ತವಾಗಿಲ್ಲ ಎಂದು ವರದಿ ನೀಡಿದ್ದರು.
ರಂಗಸ್ಥಳದ ಬಳಿ ಮಂಜೂರಾದ ಜಾಗ ಸಮತಟ್ಟಾಗಿಲ್ಲ. ಸರಿಯಾದ ದಾರಿ ವ್ಯವಸ್ಥೆ ಇಲ್ಲ. ದಾರಿ ನಿರ್ಮಾಣಕ್ಕೆ ₹ 1 ಕೋಟಿ ಬೇಕು. ಅಲ್ಲಿ ಬಾಲ ಭವನ ನಿರ್ಮಿಸುವುದು ಸೂಕ್ತವಲ್ಲ ಎಂದು ಲಿಖಿತವಾಗಿ ಹಿಂಬರಹ ನೀಡಿದ್ದರು.
ಹೀಗಾಗಿ, ಬಾಲ ಭವನ ಸೊಸೈಟಿಯು ಬಾಲ ಭವನ ನಿರ್ಮಾಣಕ್ಕಾಗಿ ನೀಡಿದ್ದ ₹60 ಲಕ್ಷ ಅನುದಾನವನ್ನು 2018ರ ಆಗಸ್ಟ್‌ನಲ್ಲಿ ಹಿಂಪಡೆಯಿತು. ಪರ್ಯಾಯ ಜಾಗ ಹುಡುಕಿ, ಯೋಜನೆ ಸಿದ್ಧಪಡಿಸಿದ ಬಳಿಕ ಪುನಃ ಅನುದಾನ ನೀಡುವುದಾಗಿ ತಿಳಿಸಿತ್ತು. ಅಂದಿನಿಂದ ಈವರೆಗೆ ಬಾಲಭವನಕ್ಕೆ ಪರ್ಯಾಯ ಜಾಗ ಹುಡುಕುವ ಕೆಲಸ ನಡೆದಿಲ್ಲ.
ರಂಗಸ್ಥಳದ ಬಳಿ ಗುರುತಿಸಿರುವ ಸ್ಥಳಕ್ಕೆ ತೆರಳಲು ಸೂಕ್ತ ರಸ್ತೆ ಇಲ್ಲ. ಈ ರಸ್ತೆ ನಿರ್ಮಾಣಕ್ಕೆ ಸಾಕಷ್ಟು ಹಣ ವ್ಯಯವಾಗುತ್ತದೆ. ಆದ್ದರಿಂದ ಇಲ್ಲಿ ಬಾಲಭವನ ನಿರ್ಮಾಣ ನನೆಗುದಿಗೆ ಬಿದ್ದಿದೆ ಎನ್ನುತ್ತವೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಗಳು.
ಬಾಲಭವನ ನಿರ್ಮಾಣಕ್ಕೆ ಜಾಗ ನೀಡಿರುವ ರಂಗಸ್ಥಳದ ಬಳಿಯೇ ಇತರೆ ಇಲಾಖೆಗಳಿಗೂ ಜಮೀನು ನೀಡಲಾಗಿದೆಯಂತೆ. ಇಲ್ಲಿ ರಸ್ತೆ ನಿರ್ಮಿಸಿದರೆ ಕೇವಲ ಒಬ್ಬರಿಗಷ್ಟೇ ಅಲ್ಲ ಎಲ್ಲರಿಗೂ ಅನುಕೂಲ ಆಗುತ್ತದೆ. ರಂಗಸ್ಥಳ ಈಗಾಗಲೇ ಪ್ರವಾಸಿ ತಾಣ ಎನಿಸಿದೆ. ನಿತ್ಯ ಪ್ರವಾಸಿಗರು ಭೇಟಿ ನೀಡುವರು. ವಾರಾಂತ್ಯದಲ್ಲಿ ಸಂಖ್ಯೆ ಹೆಚ್ಚಿರುತ್ತದೆ. ಬಾಲಭವನಕ್ಕೆ ನೀಡಿರುವ ಜಾಗ ನಗರಕ್ಕೂ ಸಮೀಪವಿದೆ. ಈ ಎಲ್ಲ ದೃಷ್ಟಿಯಿಂದ ಈಗ ನೀಡಿರುವ ಜಮೀನನ್ನು ಅಚ್ಚುಕಟ್ಟುಗೊಳಿಸಿ ಭವನ ನಿರ್ಮಿಸಿದರೆ ಒಳ್ಳೆಯದು. ಅಷ್ಟೊಂದು ಜಮೀನು ನಗರಕ್ಕೆ ಸಮೀಪದಲ್ಲಿ ಒಂದೇ ಕಡೆ ದೊರೆಯುವುದು ಕಷ್ಟಸಾಧ್ಯ ಎನ್ನುತ್ತಾರೆ ಪೋಷಕರು.
ರಂಗಸ್ಥಳದ ಜಮೀನು ಸಹ ನಮ್ಮ ಇಲಾಖೆ ಹೆಸರಿನಲ್ಲಿಯೇ ಇದೆ. ಆದರೆ ಅಲ್ಲಿನ ಜಾಗವೂ ಒತ್ತುವರಿಯಾಗಿದೆ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವೆಂಕಟೇಶ್ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು. ನಗರದಿಂದ ಐದು ಕಿ.ಮೀ ಹೊರಗೆ ಭವನ ನಿರ್ಮಾಣಕ್ಕೆ ಜಮೀನು ನೀಡಿದರೆ ಸಮಸ್ಯೆ ಆಗುತ್ತದೆ. ಮಕ್ಕಳು ಬರುವುದು ಸಹ ಕಷ್ಟ. ನಾವು ಸಹ ಜಮೀನು ನೋಡುತ್ತಿದ್ದೇವೆ. ಬಾಲ ಭವನಕ್ಕೆ ಜಮೀನು ದೊರಕಿಸಿಕೊಡುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೂ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
Cut-off box - ಜಮೀನು ಒತ್ತುವರಿ? ಬಾಲಭವನ ನಿರ್ಮಾಣಕ್ಕೆ ಜಿಲ್ಲಾಡಳಿ ರಂಗಸ್ಥಳದ ಬಳಿ ಮಂಜೂರು ಮಾಡಿದ್ದ ಜಮೀನು ಒತ್ತುವರಿಯಾಗಿದೆ ಎನ್ನುತ್ತವೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.