ADVERTISEMENT

ಚಿಕ್ಕಬಳ್ಳಾಪುರ | ಅನಧಿಕೃತ ಹೋಂ ಸ್ಟೇ ಬೀಳುವುದೇ ಕಡಿವಾಣ!

ಡಿ.ಎಂ.ಕುರ್ಕೆ ಪ್ರಶಾಂತ
Published 22 ಅಕ್ಟೋಬರ್ 2024, 7:17 IST
Last Updated 22 ಅಕ್ಟೋಬರ್ 2024, 7:17 IST

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತಮ ಅವಕಾಶಗಳು ಇವೆ. ಈ ಕಾರಣದಿಂದ ಅಕ್ರಮವಾಗಿ ಮತ್ತು ಅನಧಿಕೃತವಾಗಿ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿಯೇ ಹೋಂಸ್ಟೇಗಳು ತಲೆ ಎತ್ತಿವೆ. ಹೀಗೆ ಅನಧಿಕೃತ ಹೋಂ ಸ್ಟೇಗಳ ಪತ್ತೆಯೂ ಪ್ರವಾಸೋದ್ಯಮ ಇಲಾಖೆಗೆ ಸವಾಲಾಗಿದೆ.

ಈ ಹಿಂದೆ ಜಿಲ್ಲೆಯಲ್ಲಿ ಅಧಿಕೃತವಾಗಿ 7 ಹೋಂಸ್ಟೇಗಳು ನಡೆಯುತ್ತಿದ್ದವು. ನಂತರ ಅನಧಿಕೃತವಾಗಿ ಹೋಂಸ್ಟೇಗಳಿಗೆ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರು ನೋಟಿಸ್ ಜಾರಿಗೊಳಿಸಿದರು. ಆ ಪರಿಣಾಮ ಅನಧಿಕೃತವಾಗಿ ನಡೆಯುತ್ತಿದ್ದ 12 ಹೋಂ ಸ್ಟೇಗಳು ಅಧಿಕೃತ ಎನ್ನುವ ಹಣೆಪಟ್ಟಿ ಹೊತ್ತವು. 

ಒಂದು ವೇಳೆ ನೋಟಿಸ್ ಜಾರಿಯಾಗದಿದ್ದರೆ ಇವು ಅನಧಿಕೃತವಾಗಿಯೇ ಮುಂದುವರಿಯುತ್ತಿದ್ದವು. ಜಿಲ್ಲೆಯಲ್ಲಿ ಸದ್ಯ 19 ಹೋಂ ಸ್ಟೇಗಳು ಅಧಿಕೃತವಾಗಿವೆ. ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿ ಪಡೆಯಲಾಗಿದೆ ಎನ್ನುವ ಫಲಕಗಳನ್ನು ಅಳವಡಿಸಿವೆ. ಇನ್ನೂ ಆರು ಹೋಂ ಸ್ಟೇಗಳು ಅಧಿಕೃತ ಪಟ್ಟಿ ಸೇರಲು ಪರಿಶೀಲನೆಯ ಹಂತದಲ್ಲಿ ಇವೆ. ಹೀಗೆ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಪ್ರಕಾರ ಜಿಲ್ಲೆಯಲ್ಲಿ 25 ಹೋಂ ಸ್ಟೇಗಳು ಅಧಿಕೃತದ ಪಟ್ಟಿಯಲ್ಲಿ ಇವೆ. 

ADVERTISEMENT

ಇತ್ತೀಚೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಎನ್‌. ಭಾಸ್ಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅನಧಿಕತ ಹೋಂ ಸ್ಟೇಗಳ ಬಗ್ಗೆ ಗಂಭೀರವಾಗಿ ಚರ್ಚೆ ನಡೆದಿದೆ. 

ಜಿಲ್ಲೆಯ ಯಾವುದೇ ಭಾಗದಲ್ಲಿ ಪರಿವಾನಗಿ ಇಲ್ಲದೆ ಹೋಂ ಸ್ಟೇಗಳು ನಡೆಯಬಾರದು. ನಂದಿಬೆಟ್ಟದ ಸುತ್ತಮುತ್ತಲ ಸೇರಿದಂತೆ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿನ ಸ್ಥಳೀಯಾಡಳಿತ ಸಂಸ್ಥೆಗಳ ಮುಖ್ಯಸ್ಥರು, ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಈ ಬಗ್ಗೆ ಪರಿಶೀಲಿಸಬೇಕು. 

ಫಾಮ್ ಹೌಸ್‌ಗಳಲ್ಲಿ ಹೋಂ ಸ್ಟೇಗಳು ನಡೆಯುವ ಸಾಧ್ಯತೆಗಳು ಇರುತ್ತದೆ. ಇದಕ್ಕೆ ಜಿಲ್ಲೆಯಲ್ಲಿ ಎಲ್ಲಿಯೂ ಅವಕಾಶ ಮಾಡಿಕೊಡದೆ ಸಂಪೂರ್ಣವಾಗಿ ಕಡಿವಾಣ ಹಾಕಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಚಿಕ್ಕಬಳ್ಳಾಪುರ ತಾಲ್ಲೂಕು ಐತಿಹಾಸಿಕ ನಂದಿಗಿರಿಧಾಮ ವನ್ನು ಹೊಂದಿದೆ. ಬೆಂಗಳೂರಿಗರು ಸೇರಿದಂತೆ ರಾಜ್ಯದ ನಾನಾ ಭಾಗಗಳ ಪ್ರವಾಸಿಗರು ದೊಡ್ಡ ಸಂಖ್ಯೆಯಲ್ಲಿ ಗಿರಿಧಾಮಕ್ಕೆ ಭೇಟಿ ನೀಡುತ್ತಾರೆ. ಈ ಕಾರಣದಿಂದ ಹೋಂ ಸ್ಟೇಗಳು ಅನಧಿಕೃತವಾಗಿ ಹೆಚ್ಚು ತಲೆ ಎತ್ತಿವೆ. 

ನಂದಿ ಗಿರಿಧಾಮದ ಜೊತೆಗೆ ಆವುಲಬೆಟ್ಟ, ಸ್ಕಂದಗಿರಿ, ಈಶಾ ಯೋಗ ಕೇಂದ್ರ ಸೇರಿದಂತೆ ಪ್ರಮುಖ ಪ್ರವಾಸಿ ಮತ್ತು ಚಾರಣ ತಾಣಗಳು ಇವೆ. ಈ ಕಾರಣದಿಂದ ಹೋಂ ಸ್ಟೇಗಳು ನಿರ್ಮಾಣವಾಗುತ್ತಿವೆ. 

ಹೋಂ ಸ್ಟೇಗಳನ್ನು ನಡೆಸಬೇಕಾದರೆ ಎರಡು ಕೊಠಡಿಗಳು ಇರಬೇಕು. ಆ ಕೊಠಡಿಗಳಿಗೆ 1, 2 ಎಂದು ಸಂಖ್ಯೆ ನಮೂದಿಸಬೇಕು. ಸಿಸಿ ಟಿವಿ ಕ್ಯಾಮೆರಾ ಅಳವಡಿಸಿರ ಬೇಕು. ಕೊಠಡಿಗಳಿಗೆ ಶೌಚಾಲಯವು ಹೊಂದಿಕೊಂಡ ರೀತಿಯಲ್ಲಿ ಇರಬೇಕು. ಪ್ರಥಮ ಚಿಕಿತ್ಸೆಯ ಕಿಟ್ ಅಗತ್ಯವಾಗಿ ಇರಬೇಕು. ಹೋಂ ಸ್ಟೇಗೆ ಯಾರು ಭೇಟಿ ನೀಡುತ್ತಾರೆ ಎನ್ನುವ ಬಗ್ಗೆ ದಾಖಲಾತಿ ಪುಸ್ತಕ ನಿರ್ವಹಿಸಬೇಕು. 

ಗ್ರಾಮ ಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಂದ ನಿರಾಕ್ಷೇಪಣಾ ಪತ್ರ, ಪ್ರವಾಸೋದ್ಯಮ ಇಲಾಖೆಯಿಂದ ಮಾನ್ಯತೆ ಪಡೆದಿರಬೇಕು.

ಈಗ ಅನಧಿಕೃತ ಹೋಂ ಸ್ಟೇಗಳಿಗೆ ಕಡಿವಾಣ ಹಾಕಲು ಪ್ರವಾಸೋದ್ಯಮ ಇಲಾಖೆ ಹೆಜ್ಜೆ ಇಟ್ಟಿದೆ. ಪೊಲೀಸರು ಮತ್ತು ಪಿಡಿಒ ಅವರಿಂದ ಆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಎಲ್ಲಾ ಹೋಂ ಸ್ಟೇಗಳ ಮಾಹಿತಿ ಸಂಗ್ರಹಿಸಿ, ಎಲ್ಲವುಗಳನ್ನು ಪರಿಶೀಲಿಸಲಾಗುತ್ತಿದೆ.

ಮಾರ್ಗಸೂಚಿ ಪಾಲಿಸದಿದ್ದರೆ ಅನುಮತಿ ಇಲ್ಲ

ಮಾರ್ಗಸೂಚಿಗಳು ಪಾಲಿಸದ ಹೋಂಸ್ಟೇಗಳಿಗೆ ಅನುಮತಿ ನೀಡಿಲ್ಲ. ಈಗಾಗಲೇ ಜಿಲ್ಲೆಯಲ್ಲಿ 19 ಹೋಂ ಸ್ಟೇಗಳು ಅಧಿಕೃತವಾಗಿ ನಡೆಯುತ್ತಿವೆ. ಆರು ವಿವಿಧ ಹಂತದಲ್ಲಿ ಇವೆ. ಇನ್ನೂ ಕೆಲವು ಹೋಂಸ್ಟೇಗಳು ನಿರ್ಮಾಣ ಹಂತದಲ್ಲಿ ಇವೆ ಎಂದು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಯಶವಂತ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿ ಠಾಣೆಗಳಿಂದ ಮತ್ತು ಪಿಡಿಒಗಳಿಂದ ಮಾಹಿತಿ ಪಡೆಯುತ್ತಿದ್ದೇವೆ. ಕೆಲವರು ಅನುಮತಿ ಪಡೆದಿದ್ದರೂ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಮಾನ್ಯತೆ ಪಡೆದಿದೆ ಎನ್ನುವ ಫಲಕ ಹಾಕಿಕೊಂಡಿರುವುದಿಲ್ಲ. ಅಂತಹ ಹೋಂಸ್ಟೇಗಳಿಗೆ ನೋಟಿಸ್ ಕೊಟ್ಟಿದ್ದೇವೆ ಎಂದರು. 

ಅನಧಿಕೃತವಾಗಿ ಹೋಂಸ್ಟೇಗಳನ್ನು ನಡೆಸುತ್ತಿದ್ದರೆ ಆ ಬಗ್ಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಗಮನಕ್ಕೆ ತಂದು ಅವುಗಳನ್ನು ಬಂದ್ ಮಾಡಿಸುತ್ತೇವೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.