ADVERTISEMENT

ಬಾಗೇಪಲ್ಲಿ | ಹೆಸರಿಗೆ ಉದ್ಯಾನ, ಒಳಗಡೆ ಅಧ್ವಾನ

ಬಾಗೇಪಲ್ಲಿ ತಾಲ್ಲೂಕು ಕೇಂದ್ರದಲ್ಲಿರುವ ಕಿರು ಉದ್ಯಾನಗಳ ದುಸ್ಥಿತಿ

ಪಿ.ಎಸ್.ರಾಜೇಶ್
Published 6 ಜುಲೈ 2024, 7:45 IST
Last Updated 6 ಜುಲೈ 2024, 7:45 IST
ಬಾಗೇಪಲ್ಲಿ ರೆಡ್ಡಿಕೆರೆ ಉದ್ಯಾನ ಸೂಕ್ತ ನಿರ್ವಹಣೆ ಇಲ್ಲದಿರುವುದು
ಬಾಗೇಪಲ್ಲಿ ರೆಡ್ಡಿಕೆರೆ ಉದ್ಯಾನ ಸೂಕ್ತ ನಿರ್ವಹಣೆ ಇಲ್ಲದಿರುವುದು    

ಬಾಗೇಪಲ್ಲಿ: ಮರ ಬೆಳೆಸಿ–ರಕ್ಷಿಸಿ ಎಂಬ ಅಭಿಯಾನ ತಾಲ್ಲೂಕಿನಲ್ಲಿ ಪ್ರಚಾರ ಮಾಡಲಾಗುತ್ತಿದೆ. ಆದರೆ, ಕಳೆದ 20 ವರ್ಷಗಳಿಂದ ಪಟ್ಟಣದ ಹೊರವಲಯದ ರೆಡ್ಡಿಕೆರೆ ಪಕ್ಕದಲ್ಲಿ ಪುರಸಭೆ ಅನುದಾನದಲ್ಲಿ ನಿರ್ಮಾಣಗೊಂಡಿರುವ ಉದ್ಯಾನ ಅಭಿವೃದ್ಧಿ ಕಾಣದೆ ನನೆಗುದಿಗೆ ಬಿದ್ದಿದೆ.

ಕಳೆದ 5 ವರ್ಷಗಳಿಂದ ಕಿತ್ತು ಹೋಗಿರುವ ಉದ್ಯಾನದ ಮುಖ್ಯದ್ವಾರದ ಬಾಗಿಲು ಸರಿಪಡಿಸಲು ಪುರಸಭೆ ಅಧಿಕಾರಿಗಳು, ಆಡಳಿತ ಮಂಡಳಿಗೆ ಇದುವರೆಗೂ ಸಾಧ್ಯವಾಗಿಲ್ಲ. ಸುತ್ತಲೂ ಬೇಲಿ, ಉದ್ಯಾನದಲ್ಲಿ ನಡಿಗೆ ಪಥ, ಕೆಲ ಆಟಿಕೆ ಹೊರತುಪಡಿಸಿದರೆ ಬೇರೆ ಯಾವುದೇ ರೀತಿಯಲ್ಲೂ ಅಭಿವೃದ್ಧಿ ಕಂಡಿಲ್ಲ. ‌‌‌‌

ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚಾಗುತ್ತಿದೆ. ಪಟ್ಟಣದ 23 ವಾರ್ಡ್‍ಗಳ ವ್ಯಾಪ್ತಿಯಲ್ಲಿ ವಾಯುವಿಹಾರ, ಮಕ್ಕಳ ಆಟದ ಮೈದಾನ, ಉದ್ಯಾನ ಇಲ್ಲ. ಉದ್ಯಾನಕ್ಕೆ ಮೀಸಲಿಟ್ಟಿದ್ದ 64 ನಿವೇಶನಗಳನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಪುರಸಭೆ ಅಧಿಕಾರಿಗಳು, ಆಡಳಿತ ಮಂಡಳಿ ಕೆಲ ನಿವೇಶನಗಳಿಗೆ ಕನಿಷ್ಠ ತಡೆ ಬೇಲಿ ಹಾಕಿಲ್ಲ. ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಿಸಲಾಗಿದೆ.

ADVERTISEMENT

ಉದ್ಯಾನವು ಕಳೆ ಮತ್ತು ಮುಳ್ಳಿನ ಗಿಡಗಳಿಂದ ಕೂಡಿದೆ. ಮುಖ್ಯದ್ವಾರ ಬಾಗಿಲು ಇಲ್ಲದೆ ಇರುವುದರಿಂದ ಕೆಲ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ರಾತ್ರಿ ಸಮಯದಲ್ಲಿ ಕೆಲವರು ಮದ್ಯ, ಧೂಮಪಾನ ಸೇವನೆ ಮಾಡಿರುವುದರಿಂದ ಮದ್ಯದ ಬಾಟಲಿ, ಸಿಗರೇಟ್, ಪ್ಲಾಸ್ಟಿಕ್ ಕವರ್, ತ್ಯಾಜ್ಯದ ಪೊಟ್ಟಣಗಳು ಹೆಚ್ಚಾಗಿವೆ. ಕಸ, ಕಡ್ಡಿ ತಾಣವಾಗಿ ಪರಿಣಮಿಸಿದೆ.

ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯ, ಉದ್ಯಾನ, ರಸ್ತೆಗಳು, ಬೀದಿದೀಪಗಳಿಗೆ ಅನುದಾನ ಒದಗಿಸುವುದು ಪುರಸಭೆ ಅಧಿಕಾರಿಗಳ ಹೊಣೆ. ಆದರೆ, ಜವಾಬ್ದಾರಿ ಹೊರುತ್ತಿಲ್ಲ ಎನ್ನುತ್ತಾರೆ ಸಾರ್ವಜನಿಕರು.

‘ಪಟ್ಟಣದಲ್ಲಿ 3 ಕಡೆ ಚಿತ್ರಾವತಿ ಉದ್ಯಾನ, ಕೊಡಿಕೊಂಡ ರಸ್ತೆಯಲ್ಲಿ ಡಾ.ಎಚ್.ಎನ್.ಉದ್ಯಾನ, ರೆಡ್ಡಿಕೆರೆ ಪಕ್ಕದಲ್ಲಿ ಉದ್ಯಾನ ಇದ್ದರೂ ನಿರೀಕ್ಷೆಯಷ್ಟು ಅಭಿವೃದ್ಧಿ ಕಂಡಿಲ್ಲ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಮುಸ್ತಾಪ ಸಾಬ್‌

ಪಟ್ಟಣದ ವ್ಯಾಪ್ತಿಯಲ್ಲಿ ವಾಯುವಿಹಾರ ಕೇಂದ್ರ, ಉದ್ಯಾನ, ಮಕ್ಕಳ ಆಟಿಕೆ ಕೇಂದ್ರ ಮಾಡಬೇಕು ಎಂದು ಸರ್ಕಾರ ಕಾನೂನು ರೂಪಿಸಿದರೂ ಪುರಸಭೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ. ಕೂಡಲೇ ಉದ್ಯಾನ ಅಭಿವೃದ್ಧಿಪಡಿಸಬೇಕೆಂದು ಹಿರಿಯ ನಾಗರಿಕ ಎಚ್‌.ಎ.ರಾಮಲಿಂಗಪ್ಪ ಒತ್ತಾಯಿಸುತ್ತಾರೆ.

ಉದ್ಯಾನ ಅಭಿವೃದ್ಧಿ ಹೆಸರಿನಲ್ಲಿ ಗುತ್ತಿಗೆದಾರರು, ಅಧಿಕಾರಿಗಳು ಹಣ ಕಬಳಿಸಲು ಹುನ್ನಾರ ಹೂಡಿದ್ದು, ಕಾಟಾಚಾರಕ್ಕೆ ರೆಡ್ಡಿಕೆರೆ ಉದ್ಯಾನ ಮಾಡಲಾಗಿದೆ. ಕೂಡಲೇ ಅಭಿವೃದ್ಧಿಪಡಿಸದಿದ್ದರೆ ಹೋರಾಟ ನಡೆಸಲಾಗುವುದು ಎನ್ನುತ್ತಾರೆ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಕೆ.ಎನ್.ಹರೀಶ್.

ಮುಖ್ಯದ್ವಾರದ ಬಾಗಿಲು ಮುರಿದಿರುವುದು

ಉದ್ಯಾನ ಅಭಿವೃದ್ಧಿಗೆ ಹೆಚ್ಚು ಅನುದಾನ ಅವಶ್ಯ. ಮೂರು ಉದ್ಯಾನ ಸ್ವಚ್ಛತೆಗೊಳಿಸಿ ವಾಯುವಿಹಾರಿಗಳಿಗೆ ಅನುಕೂಲ ಮಾಡಿಕೊಡಲಾಗುವುದು

-ಶ್ರೀನಿವಾಸ್ ಪುರಸಭೆ ಮುಖ್ಯಾಧಿಕಾರಿ

ಕಿತ್ತುಹೋದ ಮುಖ್ಯದ್ವಾರಕ್ಕೆ ಬಾಗಿಲು ಇಟ್ಟಿಲ್ಲ. ‌‌ಮುಳ್ಳಿನ ಗಿಡ ತೆರವುಗೊಳಿಸಿಲ್ಲ. ವಾಯುವಿಹಾರ ನಡೆಸಲು ತೊಂದರೆ ಆಗಿದೆ.

- ಜಬೀವುಲ್ಲಾ ಸ್ಥಳೀಯ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.