ADVERTISEMENT

ಚಿಕ್ಕಬಳ್ಳಾಪುರ: ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ: ಪೊಲೀಸ್ ಬಂದೋಬಸ್ತ್

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2024, 5:22 IST
Last Updated 12 ಸೆಪ್ಟೆಂಬರ್ 2024, 5:22 IST
   

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿನ ನಗರಸಭೆ ಕಚೇರಿ ಸುತ್ತಮುತ್ತ ವ್ಯಾಪಕ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಬಜಾರ್ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ನಗರಸಭೆ ಅಡಿಗಡಿಗೂ ಪೊಲೀಸರು ಇದ್ದಾರೆ.

ಖುದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಎಎಸ್ ಪಿ ಕಾಸಿಂ, ಡಿವೈಎಸ್ ಪಿ ಶಿವಕುಮಾರ್, ಸಿಪಿಐ ಮಂಜುನಾಥ್ ಸೇರಿದಂತೆ ದೊಡ್ಡ ಸಂಖ್ಯೆಯಲ್ಲಿ ಅಧಿಕಾರಿಗಳು ಬಂದೋಬಸ್ತ್ ನಲ್ಲಿ ಭಾಗಿ ಆಗಿದ್ದಾರೆ.

ADVERTISEMENT

ಭಾರಿ ಕುತೂಹಲ ಮೂಡಿಸಿದ ಚುನಾವಣೆ:

ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ಭಾರಿ ಕುತೂಹಲ ಮೂಡಿಸಿದೆ. ಸಂಸದ ಡಾ.ಕೆ.ಸುಧಾಕರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ನಡುವಿನ ಜಿದ್ದಾಜಿದ್ದಿ ಕಣವಾಗಿದೆ.

ಬಹುಮತ ಇದ್ದರೂ ಸುಧಾಕರ್ ರಾಜಕೀಯ ಆಟದ ಕಾರಣ ಕಾಂಗ್ರೆಸ್ ಪಕ್ಷ ಮೊದಲ ಅವಧಿಯಲ್ಲಿ ಕಾಂಗ್ರೆಸ್ ಅಧಿಕಾರ ವಂಚಿತವಾಗಿತ್ತು. ಮತ್ತೆ ಸುಧಾಕರ್ ತಮ್ಮ ಬೆಂಬಲಗರಿಗೆ ಪಟ್ಟು ಹಿಡಿದಿದ್ದಾರೆ.

ನಗರಸಭೆಯಲ್ಲಿ 31 ಸದಸ್ಯ ಬಲವಿದೆ. ಕಾಂಗ್ರೆಸ್ 16, ಬಿಜೆಪಿ 9, ಜೆಡಿಎಸ್ ಇಬ್ಬರು ಮತ್ತು ಮೂವರು ಪಕ್ಷೇತರ ಸದಸ್ಯರು ಇದ್ದಾರೆ. ಸಂಸದ ಡಾ.ಕೆ.ಸುಧಾಕರ್ ಮತ್ತು ಶಾಸಕ ಪ್ರದೀಪ್ ಈಶ್ವರ್ ಸಹ ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ.

ಮೊದಲ ಅವಧಿಯ ಚುನಾವಣೆ ವೇಳೆ ಕಾಂಗ್ರೆಸ್ ನ 7 ಸದಸ್ಯರು ಡಾ.ಕೆ.ಸುಧಾಕರ್ ಅವರಿಗೆ ನಿಷ್ಠೆ ವ್ಯಕ್ತಪಡಿಸಿ‌ದ್ದರು. ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿದ್ದ ಪಕ್ಷೇತರ ಅಭ್ಯರ್ಥಿ ಆನಂದ ರೆಡ್ಡಿ ಪರ ಮತ ಚಲಾಯಿಸಿದ್ದರು. ನಮ್ಮ ನಿಷ್ಠ ಪಕ್ಷೇತರ ಸದಸ್ಯ ಆನಂದ ರೆಡ್ಡಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದರು.

ಬಹುಮತ ಇದ್ದರೂ‌ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತ್ತು.

ಈ ಬಾರಿಯೂ‌ ಕಾಂಗ್ರೆಸ್ ನ ಆರು ಸದಸ್ಯರು ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಂಡಿದ್ದಾರೆ.

ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯರಾದ ಅನಿಲ್ ಕುಮಾರ್ ಮತ್ತು ಎಂ.ಆರ್.ಸೀತಾರಾಮ್ ಸಹ ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಮತದಾನ ಮಾಡಲು ಹಕ್ಕು ಪಡೆದಿದ್ದರು. ಇದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿತ್ತು.

ಬುಧವಾರ ಹೈಕೋರ್ಟ್ ಮೊರೆ ಹೋಗಿತ್ತು. ಈ ಇಬ್ಬರು ಸದಸ್ಯರು ಮುಚ್ಚಿದ ಲಕೋಟೆಯಲ್ಲಿ ಮತಚಲಾಯಿಸಬೇಕು. ಅವರ ಮತ ಎಣಿಕೆ ಮಾಡಬಾರದು ಎಂದು ಹೈಕೋರ್ಟ್ ತಿಳಿಸಿದೆ.

ಈ ಎಲ್ಲ ಕಾರಣ ನಗರಸಭೆ ಚುನಾವಣೆ ತೀವ್ರವಾಗಿ ರಂಗೇರಿದೆ.

ಪ್ರವಾಸ ಮುಗಿಸಿ ಬರುತ್ತಿರುವ ಸದಸ್ಯರು...

ಚಿಕ್ಕಬಳ್ಳಾಪುರ: ನಗರಸಭೆಯ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು ಪ್ರತ್ಯೇಕವಾಗಿ 10 ದಿನಗಳ ಹಿಂದೆಯೇ ಪ್ರವಾಸ ಹೋಗಿದ್ದರು.

ಬಿಜೆಪಿ ಸದಸ್ಯರು ಡಾರ್ಜಿಲಿಂಗ್‌ ಮತ್ತು ಕಾಂಗ್ರೆಸ್ ಸದಸ್ಯರು ರಾಜಸ್ತಾನ ಪ್ರವಾಸಕ್ಕೆ ತೆರಳಿದ್ದರು. ಚುನಾವಣೆ ಹಿನ್ನೆಲೆಯಲ್ಲಿ ರಾತ್ರಿ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಗುರುವಾರ ಬೆಳಿಗ್ಗೆ ಒಬ್ಬೊಬ್ಬರಾಗಿ ಪೊಲೀಸ್ ಭದ್ರತೆಯಲ್ಲಿ ನಗರಸಭೆ ಪ್ರವೇಶಿಸುತ್ತಿದ್ದಾರೆ.

ಒಂದು ಗಂಟೆಗೆ ಸಭೆ ಆರಂಭವಾಗಲಿದೆ. ಮಧ್ಯಾಹ್ನ 1ರಿಂದ 1.10ರವರೆಗೆ ನಾಮಪತ್ರ ಪರಿಶೀಲನೆ ನಡೆಯಲಿದೆ. 1.10ರಿಂದ 1.20ರವರೆಗೆ ನಾಮ ಪತ್ರ ವಾಪಸ್ ಪ್ರಕ್ರಿಯೆ ನಡೆಯಲಿದೆ. ಮಧ್ಯಾಹ್ನ 1.20ರಿಂದ ಚುನಾವಣೆ ‌ಪ್ರಕ್ರಿಯೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.