ADVERTISEMENT

ಚಿಕ್ಕಬಳ್ಳಾಪುರ | ನಿಸಾರ್ ಪುತ್ಥಳಿಗೆ ಪೆಟ್ಟು; ಭಗ್ನವಾದ ಫಲಕ

ಚಿಕ್ಕಬಳ್ಳಾಪುರ ತಾಲ್ಲೂಕಿನ ಮೋಟ್ಲೂರಿನಲ್ಲಿ ಉದ್ದೇಶಿತ ನಿಸಾರ್ ಅಹಮದ್ ವಸ್ತುಸಂಗ್ರಹಾಲಯ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2024, 5:54 IST
Last Updated 6 ನವೆಂಬರ್ 2024, 5:54 IST
ನಿಸಾರ್ ಅಹಮದ್ ಅವರ ಪುತ್ಥಳಿಯಲ್ಲಿನ ಮೂಗಿಗೆ ಹಾನಿ
ನಿಸಾರ್ ಅಹಮದ್ ಅವರ ಪುತ್ಥಳಿಯಲ್ಲಿನ ಮೂಗಿಗೆ ಹಾನಿ   

ಚಿಕ್ಕಬಳ್ಳಾಪುರ: ತಾಲೂಕಿನ ಮೋಟ್ಲೂರು ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನಿಸಾರ್ ಶಿಕ್ಷಣ ಸಂಸ್ಥೆಗಳು ಮತ್ತು ವಸ್ತು ಸಂಗ್ರಹಾಲಯದ ಭೂಮಿ ಪೂಜೆಯ ಫಲಕಗಳು ಭಗ್ನವಾಗಿವೆ. 

2023ರ ಫೆ.5ರಂದು ಸಾಹಿತಿ ಕೆ.ಎಸ್. ನಿಸಾರ್ ಅಹಮದ್ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಷನ್ ಟ್ರಸ್ಟ್‌ ಮತ್ತು ವಸ್ತು ಸಂಗ್ರಹಾಲಯಕ್ಕೆ ಅಂದಿನ ಸಚಿವ ಡಾ.ಕೆ.ಸುಧಾಕರ್ ಭೂಮಿ ಪೂಜೆ ನೆರವೇರಿಸಿದ್ದರು.

ನಿಸಾರ್ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಷನ್ ಟ್ರಸ್ಟ್‌ನ ಶೈಕ್ಷಣಿಕ ಉದ್ದೇಶಕ್ಕಾಗಿ ನಂದಿ ಹೋಬಳಿಯ ಮೋಟ್ಲೂರು ಗ್ರಾಮದ ಸರ್ವೆ ನಂ 18ರಲ್ಲಿ 2.20 ಎಕರೆಯನ್ನು ಕರ್ನಾಟಕ ಭೂ ಮಂಜೂರಾತಿ ನಿಯಮಗಳು ಅಡಿ ಸರ್ಕಾರ ಜಮೀನಿನ ಪ್ರಚಲಿತ ಮಾರುಕಟ್ಟೆ ಮೌಲ್ಯ ವಿಧಿಸಿ ಟ್ರಸ್ಟ್‌ಗೆ ಮಂಜೂರು ಮಾಡಿತ್ತು.

ADVERTISEMENT

ಈ ಸಂಬಂಧ 2021ರ ಜೂನ್‌ನಲ್ಲಿ ಅಧಿಕೃತ ಆಜ್ಞಾಪನ ಪತ್ರವನ್ನು ಸರ್ಕಾರ ಹೊರಡಿಸಿತ್ತು. ಟ್ರಸ್ಟ್ ಜಮೀನಿನ ಮೊತ್ತವನ್ನು ಸಹ ಪಾವತಿಸಿದೆ. ಇಲ್ಲಿ ಟ್ರಸ್ಟ್‌ನಿಂದ ನಿಸಾರ್ ಅಹಮದ್ ಅವರ ಹೆಸರಿನಲ್ಲಿ ವಸ್ತು ಸಂಗ್ರಹಾಲಯ ಮತ್ತು ಕಾಲೇಜು ನಿರ್ಮಾಣ ನಿರ್ಧರಿಸಲಾಗಿತ್ತು.

ಭೂಮಿ ಪೂಜೆ ಕಾರ್ಯಕ್ರಮದಲ್ಲಿ ನಿಸಾರ್ ಅಹಮದ್ ಅವರ ಪುತ್ರಿ ಮೀರಾ, ಇಲ್ಲಿ 1.60 ಲಕ್ಷ ಚದರಡಿಯಲ್ಲಿ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದೆ. ಆವರಣದಲ್ಲಿ ವಸ್ತು ಸಂಗ್ರಹಾಲಯ, ಕಾಲೇಜು, ಉಪನ್ಯಾಸಕರು ಮತ್ತು ವಿದ್ಯಾರ್ಥಿ, ವಿದ್ಯಾರ್ಥಿನಿಯರ ಪ್ರತ್ಯೇಕ ವಸತಿ ಸಮುಚ್ಚಯ, ಕ್ಯಾಂಟೀನ್ ನಿರ್ಮಿಸಲಾಗುವುದು. ಅಂದಾಜು ₹ 30 ಕೋಟಿ ವೆಚ್ಚದಲ್ಲಿ ಇವುಗಳ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಎರಡು ಹಂತದಲ್ಲಿ ಕಾಮಗಾರಿ ನಡೆಸಲಾಗುವುದು ಎಂದಿದ್ದರು.

ಸರ್ಕಾರದಿಂದ ಅನುದಾನ ಬಿಡುಗಡೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. 2.5 ಎಕರೆಯಲ್ಲಿ ಕಾಲೇಜು, ವಸ್ತು ಸಂಗ್ರಹಾಲಯ ನಿರ್ಮಿಸಲು ನೀಲನಕ್ಷೆ ತಯಾರಿಸಲಾಗಿದೆ. ಇದಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಭೂಮಿ ಪೂಜೆ ನೆರವೇರಿಸಿದ್ದ ಡಾ.ಕೆ.ಸುಧಾಕರ್ ಭರವಸೆ ನೀಡಿದ್ದರು. 

ಈ ಜಮೀನಿನಲ್ಲಿ ನಾಡೋಜ ನಿಸಾರ್ ಅಹಮದ್ ಅವರ ಪುತ್ಥಳಿಯನ್ನು  ಸ್ಥಾಪಿಸಲಾಗಿದೆ. ಅತಿಕ್ರಮ ಪ್ರವೇಶವಿಲ್ಲ ಎಂದು ಫಲಕವನ್ನು ಅಳವಡಿಸಲಾಗಿದೆ. ಭೂಮಿ ಪೂಜೆ ನಡೆದು ಒಂದೂವರೆ ವರ್ಷವಾದರೂ ಯಾವುದೇ ನಿರ್ಮಾಣ ಚಟುವಟಿಕೆಗಳು ನಡೆದಿಲ್ಲ. 

ಈಗ ಭೂಮಿ ಪೂಜೆ ವೇಳೆ ಹಾಕಿದ್ದ ಫಲಕಗಳು ಸಹ ಭಗ್ನವಾಗಿವೆ. ನಿಸಾರ್ ಅಹಮದ್ ಅವರ ಪುತ್ಥಳಿಯ ಮೂಗಿಗೂ ಹಾನಿ ಮಾಡಲಾಗಿದೆ. ಕಿಡಿಕೇಡಿಗಳ ಈ ಕೃತ್ಯಕ್ಕೆ ಸಾಹಿತ್ಯಾಸಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನೆಲಕ್ಕೆ ಉರುಳಿರುವ ಫಲಕ
ಭಗ್ನವಾಗಿರುವ ಫಲಕ

‘ನಿರ್ವಹಣೆಗೆ ಕ್ರಮವಹಿಸಿ’

ನಿತ್ಯೋತ್ಸವ ಕವಿಯ ಅಭಿಮಾನಿಗಳು ನಾವು. ರಾಜ್ಯೋತ್ಸವದ ಮರು ದಿನ ಇಲ್ಲಿಗೆ ಭೇಟಿ ನೀಡಿದ್ದೆವು. ನಿತ್ಯೋತ್ಸವ ಕವಿಯ ಪುತ್ಥಳಿಗೆ ಪೇಟ ತೊಡಿಸಿ ಸುತ್ತಲೂ ಕನ್ನಡ ಬಾವುಟಗಳನ್ನು ಕಟ್ಟಿ ಸಂಭ್ರಮಿಸಿದ್ದೆವು. ಕಳೆದ ವರ್ಷವೂ ನಾವು ಈ ರೀತಿಯಲ್ಲಿ ಮಾಡಿದ್ದೆವು ಎಂದು ದೊಡ್ಡಬಳ್ಳಾಪುರ ತಾಲ್ಲೂಕ ಕಸಬಾ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ದಾದಾಪೀರ್ ‘ಪ್ರಜಾವಾಣಿ’ಗೆ ತಿಳಿಸಿದರು. ಈ ಬಾರಿ ಸ್ಥಳಕ್ಕೆ ಭೇಟಿ ನೀಡಿದಾಗ ಬೇಸರವಾಯಿತು. ಕೆಲವರು ಅಲ್ಲಿಯೇ ಮದ್ಯ ಸೇವಿಸಿದ್ದಾರೆ. ಫಲಕಗಳು ನಾಶವಾಗಿವೆ. ಪುತ್ಥಳಿಗೂ ಹಾನಿಯಾಗಿದೆ. ಟ್ರಸ್ಟ್‌ನವರು ಸೂಕ್ತ ನಿರ್ವಹಣೆಗೆ ಸೂಕ್ತ ಕ್ರಮವಹಿಸಬೇಕು ಎಂದು ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.