ADVERTISEMENT

ಕಾಯಕಲ್ಪಕ್ಕೆ ಕಾದಿದೆ ತಾಂಡವೇಶ್ವರ ದೇಗುಲ

ಗುಡಿಬಂಡೆ ತಾಲ್ಲೂಕು ಹಂಪಸಂದ್ರ ಗ್ರಾ.ಪಂ ವ್ಯಾಪ್ತಿಯ ಪುಲಸಾನಿವೊಡ್ಡು ಗ್ರಾಮ

ಜೆ.ವೆಂಕಟರಾಯಪ್ಪ
Published 3 ಜೂನ್ 2024, 7:53 IST
Last Updated 3 ಜೂನ್ 2024, 7:53 IST
ಗುಡಿಬಂಡೆ ತಾಲ್ಲೂಕು ಪುಲಸಾನಿವೊಡ್ಡು ಗ್ರಾಮದ ತಾಂಡವೇಶ್ವರ ದೇವಾಲಯ 
ಗುಡಿಬಂಡೆ ತಾಲ್ಲೂಕು ಪುಲಸಾನಿವೊಡ್ಡು ಗ್ರಾಮದ ತಾಂಡವೇಶ್ವರ ದೇವಾಲಯ    

ಗುಡಿಬಂಡೆ: ಪುರಾತನ ದೇವಾಲಯಗಳನ್ನು ರಕ್ಷಿಸಬೇಕಾದ ಪುರಾತತ್ವ ಇಲಾಖೆ ಹಾಗೂ ಮುಜರಾಯಿ ಇಲಾಖೆಗಳು ನಿರ್ಲಕ್ಷ್ಯಕ್ಕೆ ಕೈಗನ್ನಡಿಯಾಗಿದೆ ತಾಲ್ಲೂಕಿನ ಹಂಪಸಂದ್ರ ಗ್ರಾ.ಪಂ ವ್ಯಾಪ್ತಿಯ ಪುಲಸಾನಿವೊಡ್ಡು ಗ್ರಾಮದ ತಾಂಡವೇಶ್ವರ (ವೀರಗಲ್ಲು) ದೇವಾಲಯ.

ಸುಮಾರು 900 ವರ್ಷಗಳ ಪುರಾತನ ದೇವಾಲಯ ಇದು. ಇಂತಹ  ದೇವಾಲಯವು ಭೂಗರ್ಭದಲ್ಲಿ ಸೇರುವ ದುಸ್ಥಿತಿಯಲ್ಲಿದೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕಾಯಕಲ್ಪಕ್ಕೆ ಮುಂದಾಗಿಲ್ಲ. ಇದು ಸ್ಥಳೀಯರ ಆಕ್ರೋಶಕ್ಕೂ ಕಾರಣವಾಗಿದೆ. ಈವರೆಗೂ ಯಾರು ಗಮನಿಸದ ಹಾಗೂ ನಿರಂತರವಾಗಿ ನಿರ್ಲಕ್ಷಿಸಲ್ಪಟ್ಟ ಈ ದೇವಾಲಯ ಈಗ ಅನಾಥವಾಗಿದೆ.  

ಚೋಳ ರಾಜವಂಶಕ್ಕೆ ಸೇರಿದ ಈ ದೇವಾಲಯದ ಕಣಕಣದಲ್ಲೂ ಕಲಾವೈಭವ ಅಡಕವಾಗಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಪ್ರದೇಶಗಳನ್ನು ಆಳ್ವಿಕೆ ಮಾಡಿರುವ ಚೋಳ ಅರಸರು ಅನೇಕ ದೇಗುಲಗಳನ್ನು ಕಟ್ಟಿಸಿದ್ದಾರೆ. ಅವೆಲ್ಲ ಅವನತಿಯ ಹಾದಿಯಲ್ಲಿವೆ.

ADVERTISEMENT

ಈ ತಾಂಡವೇಶ್ವರ ದೇವಾಲಯವೂ ಯಾರಿಗೂ ಬೇಡದ ಸ್ಥಿತಿಯಲ್ಲಿದೆ. ತಾಂಡವೇಶ್ವರ ಎಂದರೆ ನಟರಾಜ ಸ್ವಾಮಿ ಅಥವಾ ತಾಂಡವರೂಪಿ ರುದ್ರ. ಅದರೆ, ಅಲ್ಲಿ ಮೂಲ ದೇವರ ಮೂರ್ತಿಯೇ ಇಲ್ಲ.

ಬೇಲೂರು, ಹಳೆಬೀಡು ಹಾಗೂ ಆಂಧ್ರ ಪ್ರದೇಶದ ಲೇಪಾಕ್ಷಿ ದೇವಾಲಯಗಳನ್ನು ತಾಂಡವೇಶ್ವರ ದೇವಾಲಯ ಹೋಲುತ್ತದೆ. ಶಿಲಾಬಾಲಕಿಯರ ಕೆತ್ತನೆಗಳು, ವಿವಿಧ ದೇವತೆಗಳ ರಚನೆಗಳು ಇಲ್ಲಿವೆ.

ಈಗಾಗಲೇ ದೇವಾಲಯದ ಕಂಬಗಳು ಮುರಿದಿವೆ. ಗರ್ಭಗುಡಿಯಲ್ಲಿರುವ ವಿಗ್ರಹಗಳು ಅರೆಬರೆಯಾಗಿ ಭೂಮಿ ಸೇರಿವೆ. ಗರ್ಭಗುಡಿಯ ಗೋಡೆಗಳು ಉರುಳಿದ್ದು ದೇವಾಲಯವು ಸಂಪೂರ್ಣವಾಗಿ ಗಿಡಮರಗಳಲ್ಲಿ ಮರೆಯಾಗಿದೆ. ದೇವಾಲಯಕ್ಕೆ ಸಂಬಂಧಿಸಿದ ಶಾಸನಗಳು ಪುಂಡರಹಾವಳಿಯಿಂದ ಹಾಳಾಗಿವೆ.  

ದೇವಾಲಯದ ಇತಿಹಾಸ: ಇತಿಹಾಸ ಸಂಶೋಧಕರ ಪ್ರಕಾರ ದೇವಾಲಯಕ್ಕೆ 900 ವರ್ಷಗಳ ಇತಿಹಾಸವಿದೆ. ಕ್ರಿ.ಶ 11 ಮತ್ತು 12ನೇ ಶತಮಾನಗಳಲ್ಲಿ ಈ ಪ್ರಾಂತ್ಯವನ್ನು ಆಳಿದ ಚೋಳ ದೊರೆಗಳು ಈ ದೇಗುಲವನ್ನು ಕಟ್ಟಿಸಿದ್ದರು. ವಿಜಯನಗರ ಅರಸರ ಕಾಲದಲ್ಲಿ ಈ ದೇಗುಲ ನಿರ್ಮಾಣವಾಗಿದೆ ಎನ್ನುತ್ತಾರೆ ಇತಿಹಾಸಕಾರರು.

ದೇವಸ್ಥಾನದ ದೈವಿಕಾರ್ಯಗಳಿಗೆ ರಂಗಸಾನಿ ಎಂಬ ‘ಸಾನಿ’ (ದೇವದಾಸಿ) ಪರಂಪರೆಯ ಮಹಿಳೆಯನ್ನು ನೇಮಕ ಮಾಡಲಾಗಿತ್ತು. ರಂಗಸಾನಿಯ ತಂಗಿಯಾದ ಪೂಲಸಾನಿಯ ಮೂಲ ಹೆಸರು ಹನುಮಕ್ಕ. ಈಕೆ ಲೇಪಾಕ್ಷಿಯಿಂದ ಒಂದು ತಾಂಡವೇಶ್ವರ ಸ್ವಾಮಿಯ ಲಿಂಗವನ್ನು ಬುಟ್ಟಿಯಲ್ಲಿ ತರುತ್ತಾಳೆ. ಮಾರ್ಗ ಮಧ್ಯೆ ಹಂಪಸಂದ್ರ ಬಳಿಯ ಜಾಗವು ಪ್ರಶಸ್ತವಾಗಿ ಕಾಣುತ್ತದೆ. ಈ ಜಾಗದಲ್ಲಿಯೇ ಲಿಂಗವನ್ನು ಪ್ರತಿಷ್ಠಾಪಿಸಿ, ಮಾಧವ ವರ್ಮನ ಸಹಾಯದಿಂದ ಭವ್ಯ ದೇವಸ್ಥಾನ ಕಟ್ಟಿಸುತ್ತಾಳೆ.

ಇಲ್ಲಿ ನೀರಿನ ಸೌಲಭ್ಯಕ್ಕೆ ಎರಡು ಕುಂಟೆಗಳನ್ನು ಸಹ ಕಟ್ಟಿಸಿ, ಗೋಣಿ ಮರವೊಂದನ್ನು ನೆಟ್ಟು, ಬಂಡೆಯ ಮೇಲೆ ಶಾಸನ ಬರೆಸುತ್ತಾಳೆ. ಹೀಗೆ ಈ ಪ್ರದೇಶವನ್ನು ಅಭಿವೃದ್ಧಿ ಮಾಡಿದ್ದಕ್ಕಾಗಿ ಈ ಗ್ರಾಮಕ್ಕೆ ‘ಪೂಲಸಾನಿವೊಡ್ಡು’ ಎಂಬ ಹೆಸರು ಬಂದಿದೆ.

ಗುಡಿಬಂಡೆ ಪ್ರದೇಶಕ್ಕೆ ಸಂಬಂಧಿಸಿದ ಮುಖಂಡನೊಬ್ಬ ಆಕೆಗೆ ಮೋಹಗೊಳ್ಳುವನು. ಅದನ್ನು ತಿರಸ್ಕರಿಸುವ ಹನುಮಕ್ಕ ತಾನು ಕೇವಲ ದೇವರ ಸೇವಕಿ ತಾಂಡವೇಶ್ವರನ ಸೇವೆಗೆ ಮಾತ್ರ ಮೀಸಲು ಎಂದು ತಿಳಿಸುತ್ತಾಳೆ. ಇದರಿಂದ ಕೋಪಗೊಂಡು ಆತ ಈಕೆ ಲೇಪಾಕ್ಷಿಗೆ ಹೋಗಿದ್ದ ಸಮಯದಲ್ಲಿ ತಾಂಡವೇಶ್ವರ ಲಿಂಗವನ್ನು ಕಿತ್ತು ಕೆರೆಯಲ್ಲಿ ಎಸೆಸುವನು. ಲೇಪಾಕ್ಷಿಯಿಂದ ಮರಳಿದ ಸಾನಿ ಹನುಮಕ್ಕ ತನ್ನ ಪ್ರಾಣಪ್ರಿಯನಾದ ತಾಂಡವೇಶ್ವರನನ್ನು ಕಾಣದೇ ಅದೇ ವೇದನೆಯಿಂದ ಆ ಜಾಗ ತೊರೆಯುವರು. ಈ ಅಂಶವು ಇತಿಹಾಸದಲ್ಲಿ ದಾಖಲಾಗಿದೆ.

ದೇಗುಲದ ದ್ವಾರದಲ್ಲಿ ಹೂಗಳನ್ನು ಚೆಲ್ಲುತ್ತಾ ನಿಂತು ಸ್ವಾಗತಿಸುತ್ತಿರುವ ರಂಗಸಾನಿ, ಪುಲಸಾನಿಯವರ ಉಬ್ಬು ಶಿಲ್ಪಗಳಂತೂ ಬೇಲೂರು ಶಿಲಾ ಬಾಲಿಕೆಯರ ರೀತಿ ಕಲಾತ್ಮಕವಾಗಿವೆ. 

ಹೀಗೆ ಐತಿಹಾಸಿಕವಾಗಿ ಮಹತ್ವವಾಗಿರುವ ದೇವಾಲಯವೊಂದು ನಿರ್ಲಕ್ಷ್ಯದ ಕಾರಣದಿಂದ ಕಲಾಭರ್ಗ ಸೇರುತ್ತಿದೆ.

ದೇವಾಲಯದಲ್ಲಿನ ವೀರಗಲ್ಲು ಹಾಗೂ ಇತರೆ ದೇವರ ವಿಗ್ರಹಗಳು
ಗುಡಿಬಂಡೆ ಹೊರವಲಯದ ಐತಿಹಾಸಿಕ ಶಿವನದೇವಾಲಯ

ಜನಪ್ರತಿನಿಧಿಗಳ ಸಹಕಾರದಿಂದ ಅಭಿವೃದ್ಧಿ ಪುಲಸಾನಿವೊಡ್ಡು ತಾಂಡವೇಶ್ವರ ದೇವಾಲಯ ತಾಲ್ಲೂಕಿನಲ್ಲಿ ಅತೀ ಪುರಾತನವಾಗಿದೆ. ಜನಪ್ರತಿನಿಧಿಗಳ ಸಹಕಾರ ಪಡೆದು ದೇವಾಲಯ ಅಭಿವೃದ್ಧಿಗೊಳಿಸಲಾಗುವುದು.  ಲಕ್ಷ್ಮಿನಾರಾಯಣಪ್ಪ ಹಂಪಸಂದ್ರ ಗ್ರಾ.ಪಂ ಸದಸ್ಯ  ಮರೆಯಾಗುವ ಹಂತ ಅನನ್ಯ ಇತಿಹಾಸವಿರುವ ಈ ದೇವಾಲಯವು ಸರ್ಕಾರಿ ಜಾಗದಲ್ಲಿದೆ. ದೇವಾಲಯದ ಸುತ್ತ ಐದು ಎಕರೆ ಸರ್ಕಾರಿ ಸ್ಥಳವಿದೆ. ಸ್ಥಳೀಯ ರಾಜಕೀಯ ನಾಯಕರ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೂ ಬಾರದೆ ಮರೆಯಾಗುವ ಹಂತದಲ್ಲಿದೆ. ಇನ್ನಾದರೂ ರಕ್ಷಣೆ ಅಗತ್ಯ.  ವೆಂಕಟೇಶ ಪುಲಸಾನಿವುಡ್ಡು ಗ್ರಾಮ ಮುಖಂಡ  ಗತಿಸಿದರೆ ಮರು ನಿರ್ಮಾಣ ಸಾಧ್ಯವೇ ಬೃಹತ್ ಗಾತ್ರದ ಗೋಣಿ ಮರವು ದೇಗುಲದ ಒಂದು ಪಾರ್ಶ್ವದ ಮೇಲೆ ಬಿದ್ದು ದೇವಸ್ಥಾನ ಹಾಳುಗೆಡವಿದೆ. ಸುತ್ತಲಿನ ಗೋಡೆಗಳು ಬೀಳುವ ಹಂತದಲ್ಲಿವೆ. ಮೂಲ ತಾಂಡವೇಶ್ವರ ಲಿಂಗವಿಲ್ಲದೆ ಆ ಜಾಗದಲ್ಲಿ ವೀರಗಲ್ಲುಗಳನ್ನು ತಂದು ಇಡಲಾಗಿದೆ. ಇಂತಹ ಸುಂದರ ಕಲಾ ದೇವಾಲಯಗಳು ಗತಿಸಿಹೋದರೆ ಮತ್ತೆ ಮರು ನಿರ್ಮಿಸಲು ಸಾಧ್ಯವೇ?  ಅದಿನಾರಾಯಣಪ್ಪ ಗ್ರಾಮಸ್ಥ ಅಭಿವೃದ್ಧಿಗೆ ಕಾಳಜಿ ಅಗತ್ಯ ಹಂಪಸಂದ್ರದ  ಚನ್ನಕೇಶವಸ್ವಾಮಿ ಪುಲಸಾನಿವೊಡ್ಡು ತಾಂಡವೇಶ್ವರ ಗುಡಿಬಂಡೆ  ವಾಪಸಂದ್ರ ರಸ್ತೆಯ ಶಿವನದೇವಾಲಯ ಸೇರಿ ತಾಲ್ಲೂಕಿನ ಹಲವು ಐತಿಹಾಸಿಕ ದೇವಾಲಯಗಳು ಶಿಥಿಲವಾಗಿವೆ. ಅಭಿವೃದ್ಧಿಗೆ ಕಾಳಜಿವಹಿಸಬೇಕು.  ಕಡೇಹಳ್ಳಿ ಅನಂದಪ್ಪ ಗ್ರಾ.ಪಂ ಮಾಜಿ ಸದಸ್ಯ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.