ಶಿಡ್ಲಘಟ್ಟ: ಯುದ್ಧ, ಹಿಂಸೆ, ಶೌರ್ಯ, ಸೋಲು–ಗೆಲುವುಗಳ ಗತಕಾಲದ ಇತಿಹಾಸ ಸಾರುವ ನಂದಿಬೆಟ್ಟದ ಮೇಲಿನ ಈ ಫಿರಂಗಿಗಳು ಈಗ ಮೌನ ಹೊದ್ದು ಮಲಗಿವೆ. ನಂದಿ ಬೆಟ್ಟದ ಮೇಲೆ ಸುಮಾರು 13 ಫಿರಂಗಿಗಳಿದ್ದು, ಅವುಗಳ ಮೌನ ಮುರಿದು, ಮಾತಾದರೆ ಅಂದಿನ ಕಾಲದ ಚಿತ್ರಣಗಳಿಗೆ ಜೀವ ತುಂಬಬಹುದು.
ನಡೆದು ಹೋಗುವುದೇ ಕಷ್ಟ ಸಾಧ್ಯವಾದ ನಂದಿಬೆಟ್ಟಕ್ಕೆ, ಈ ಭಾರವಾದ ಫಿರಂಗಿಗಳನ್ನು ಸಾಗಿಸಿದ ಬಗೆಯನ್ನು ಊಹಿಸಿದರೆ ರೋಮಾಂಚನವಾಗುತ್ತದೆ. ಭಾರತದ ಗೌರ್ನರ್ ಜನರಲ್ ಲಾರ್ಡ್ ಕಾರ್ನ್ ವಾಲಿಸ್, ಮೇಜರ್ ಗೌಡಿ ನೇತೃತ್ವದಲ್ಲಿ ನಂದಿದುರ್ಗವನ್ನು ಮುತ್ತಿಗೆ ಹಾಕಿಸಿದ. ಮೂರು ವಾರಗಳ ಕಾಲ ಶತಪ್ರಯತ್ನ ಮಾಡಿದ ಬ್ರಿಟಿಷ್ ಪಡೆ, ತಮ್ಮ ಫಿರಂಗಿಗಳ ಸಹಾಯದಿಂದ ಪಶ್ಚಿಮದ ದಿಕ್ಕಿನ ಕೋಟೆಗೋಡೆಯನ್ನು ಭೇದಿಸಿತು. 1791ರ ಅಕ್ಟೋಬರ್ 19ರ ಮುಂಜಾನೆ ಬೆಳದಿಂಗಳ ಬೆಳಕಿನಲ್ಲಿ ತನ್ನೆಲ್ಲಾ ಶಕ್ತಿಯನ್ನು ಬಳಸಿ ಬ್ರಿಟಿಷ್ ಸೈನ್ಯ, ನಂದಿದುರ್ಗವನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಯಿತು.
ನಂದಿಬೆಟ್ಟದ ಮೇಲೆ ಪ್ರವೇಶದ್ವಾರದಲ್ಲಿ, ನೆಹರು ಭವನದ ನಾಲ್ಕು ದಿಕ್ಕುಗಳಲ್ಲಿ, ಟಿಪ್ಪುವಿನ ಮದ್ದಿನ ಮನೆಯ ಬಳಿ... ಹೀಗೆ ಹಲವಾರು ಕಡೆ ಕಂಡು ಬರುವ ಫಿರಂಗಿಗಳಲ್ಲಿ ಕೆಲವು ಟಿಪ್ಪುವಿನ ಸೈನ್ಯದ್ದಾದರೆ, ಇನ್ನು ಕೆಲವು ಬ್ರಿಟಿಷರಿಗೆ ಸೇರಿದ್ದಾಗಿವೆ.
ಪ್ರತಿಯೊಂದು ಫಿರಂಗಿಯೂ ಚರಿತ್ರೆಯ ನಿರ್ಮಾಣದಲ್ಲಿ ತನ್ನದೇ ಪಾತ್ರ ವಹಿಸಿದ್ದಿದೆ. 1526 ರಲ್ಲಿ ಮೊಘಲ್ ಸಾಮ್ರಾಜ್ಯ ದೆಹಲಿಯಲ್ಲಿ ಸ್ಥಾಪಿಸಲು ಕಾರಣವಾಗಿದ್ದು ಫಿರಂಗಿಗಳೇ. 1757ರಲ್ಲಿ ಈಸ್ಟ್ ಇಂಡಿಯಾ ಕಂಪೆನಿ ತನ್ನ ಪ್ರಭುತ್ವ ಸ್ಥಾಪಿಸಲು ಕಾರಣವಾದ ಪ್ಲಾಸಿ ಕದನವನ್ನು ರಾಬರ್ಟ್ ಕ್ಲೈವ್ ಗೆಲ್ಲಲು ಕಾರಣವಾಗಿದ್ದು ಅವರ ಬಳಿ ಇದ್ದ, ಕಬ್ಬಿಣವನ್ನು ಎರಕ ಹೊಯ್ದು ತಯಾರಿಸಿದ್ದ ಫಿರಂಗಿಗಳು.
ಶ್ರೀರಂಗಪಟ್ಟಣ ಪತನವಾದಾಗ 927 ಫಿರಂಗಿಗಳನ್ನು ಬ್ರಿಟಿಷರು ವಶಪಡಿಸಿ ಕೊಂಡರು. ಅವುಗಳಲ್ಲಿ 400 ಹಿತ್ತಾಳೆಯ ಫಿರಂಗಿಗಳಿ ದ್ದವು. ಈ ಹಿತ್ತಾಳೆಯ ಫಿರಂಗಿಗಳಲ್ಲಿ ಬಹುತೇಕವು ಟಿಪ್ಪುವಿನ ಕಾರ್ಖಾನೆಗಳಲ್ಲಿ ತಯಾರಿಸಲಾಗಿತ್ತು. ಟಿಪ್ಪುವಿನ ಕುಲುಮೆಗಳು ಒಂದು ಬೆಂಗಳೂರಿನಲ್ಲಿದ್ದರೆ, ಮತ್ತೆರಡು ಶ್ರೀರಂಗಪಟ್ಟಣದಲ್ಲಿದ್ದವು. ಕೆಲವು ಫ್ರೆಂಚ್ ತಂತ್ರಜ್ಞರನ್ನು ನೇಮಿಸಿಕೊಂಡಿದ್ದರೂ, ಆತನ ಕಾರ್ಖಾನೆಗಳಲ್ಲಿ ಭಾರತೀಯ ಕುಶಲಕರ್ಮಿಗಳೇ ಹೆಚ್ಚಿದ್ದರು. ಟಿಪ್ಪು ಸುಲ್ತಾನನು ತನ್ನ ವಿಶಿಷ್ಟ ಹುಲಿ ಗುರುತನ್ನು ಫಿರಂಗಿಗಳ ವಿವಿಧ ಭಾಗಗಳ ಮೇಲೆ ಕೆತ್ತಿಸಿದ್ದ. ಬ್ರಿಟಿಷರು ವಶಪಡಿಸಿಕೊಂಡ ಬಹುತೇಕ ಫಿರಂಗಿಗಳನ್ನೆಲ್ಲಾ ನಾಶಪಡಿಸಿದರೂ, ಕೆಲವನ್ನು ಮಾತ್ರ ತಮ್ಮ ವಿಜಯದ ಸಂಕೇತವಾಗಿ ಉಳಿಸಿಟ್ಟರು.
ಮದ್ದಿನಮನೆ:
ಸಿಡಿಮದ್ದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ತಾಂತ್ರಿಕತೆ ಟಿಪ್ಪುವಿನಲ್ಲಿತ್ತು. ಅದರ ದಾಸ್ತಾನು ಮಾಡಲೆಂದು ತನ್ನ ಸಾಮ್ರಾಜ್ಯದಲ್ಲಿ ಹಲವಾರು ಕಡೆ ಮದ್ದಿನಮನೆಗಳನ್ನು ನಿರ್ಮಿಸಿದ್ದ. ನಂದಿಬೆಟ್ಟದಲ್ಲಿಯೂ ಒಂದು ಮದ್ದಿನಮನೆಯಿದೆ.
ಹಿಂದೆ ನಂದಿಬೆಟ್ಟದಲ್ಲಿನ ಟಿಪ್ಪು ಸುಲ್ತಾನನ ಮದ್ದಿನ ಮನೆ ಅತ್ಯಂತ ಹೀನಾಯ ಸ್ಥಿತಿಯಲ್ಲಿತ್ತು. ಅದರ ಸುತ್ತ ಕಳೆಗಿಡಗಳು ಬೆಳೆದು ಒಳಗೆ ತ್ಯಾಜ್ಯದ ರಾಶಿ ತುಂಬಿಹೋಗಿತ್ತು. 2021 ರಲ್ಲಿ ಯುನೈಟೆಡ್ ವೇ ಬೆಂಗಳೂರು ಎಂಬ ಸ್ವಯಂಸೇವಾ ಸಂಸ್ಥೆಯವರು ಸುಮಾರು ₹3 ಮೂರು ಲಕ್ಷ ವೆಚ್ಚದಲ್ಲಿ ಮದ್ದಿನ ಮನೆ ನವೀಕರಿಸಿದರು.
ಮದ್ದಿನ ಮನೆ ಮೂಲತಃ ಸ್ಫೋಟಕ ಸಾಧನಗಳ ಶೇಖರಣೆಯಾಗಿದ್ದು, ಸುರಕ್ಷಿತವಾಗಿ ಇರಿಸಲು ಇದನ್ನು ಬಂಕರ್ ಮಾದರಿಯಲ್ಲಿ ನಿರ್ಮಿಸಲಾಗುತ್ತಿತ್ತು. ಟಿಪ್ಪು ಆಳ್ವಿಕೆಯಲ್ಲಿ ಹಲವಾರು ಕೊಟೆ ಕೊತ್ತಲಗಳನ್ನು ಪುನರ್ ರಚಿಸಿ ಫಿರಂಗಿಗಳನ್ನು ಅಳವಡಿಸಿದ್ದರು. ಅವುಗಳಲ್ಲಿ ನಂದಿದುರ್ಗವೂ ಒಂದು. ಫಿರಂಗಿಗಳಿಗೆ ಬೇಕಾದ ಮದ್ದನ್ನು ಶೇಖರಿಸುವುದು ಅವರಿಗೆ ಅವಶ್ಯಕವಾಗಿತ್ತು. ಮದ್ದಿನ ಮನೆಯನ್ನು ನಿರ್ಮಿಸುವಲ್ಲಿಯೂ ಹಲವಾರು ಎಚ್ಚರಿಕೆ ಕ್ರಮಗಳನ್ನು ಅವರು ಕೈಗೊಳ್ಳುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.