ಚಿಂತಾಮಣಿ: ಬರಗಾಲದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬೇಸಿಗೆ ರಜೆಯಲ್ಲೂ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ಯೋಜನೆ ಮುಂದುವರೆಸಿದೆ. ಆದರೆ ಸುಡು ಬಿಸಿಲಿನ ಕಾರಣಕ್ಕೆ ಬಹುತೇಕ ಮಕ್ಕಳು ಶಾಲೆಗಳತ್ತ ಸುಳಿಯುತ್ತಿಲ್ಲ.
ಬರಪೀಡಿತ ತಾಲ್ಲೂಕಿನಲ್ಲಿ ಮಕ್ಕಳಿಗೆ ಪೌಷ್ಟಿಕಾಂಶದ ಕೊರತೆ ಕಾಡಬಾರದೆಂದು ಏಪ್ರಿಲ್ 11 ರಿಂದ ಮೇ 27 ರವರೆಗೆ 41 ದಿನಗಳ ಕಾಲ ಬಿಸಿಯೂಟ ನೀಡಲಾಗುತ್ತಿದೆ.
ತಾಲ್ಲೂಕಿನಲ್ಲಿ 378 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿವೆ. 1 ರಿಂದ 9 ನೇ ತರಗತಿಯವರೆಗೆ 17,546 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಅವರಲ್ಲಿ 12,670 ವಿದ್ಯಾರ್ಥಿಗಳು ಮಾತ್ರ ಬೇಸಿಗೆಯ ಬಿಸಿಯೂಟಕ್ಕೆ ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ ಕೆಲವರು ಶಾಲೆಗಳತ್ತ ಮುಖ ಮಾಡಿಲ್ಲ. ಒಂದೊಂದು ದಿನ ಒಂದೊಂದು ರೀತಿ ಹಾಜರಾತಿ ಇರುತ್ತೆ. ಏಪ್ರಿಲ್ ತಿಂಗಳಲ್ಲಿ ಸರಾಸರಿ 9,526 ವಿದ್ಯಾರ್ಥಿಗಳು ಬಿಸಿಯೂಟ ಸವಿದಿದ್ದಾರೆ ಎಂದು ಅಕ್ಷರದಾಸೋಹ ನಿರ್ದೇಶಕ ಸುರೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ಮಧ್ಯಾಹ್ನ 12 ಗಂಟೆಯಿಂದ 4 ಗಂಟೆಯವರೆಗೆ ಮಕ್ಕಳು ಹೊರಗಡೆ ಓಡಾಡಬಾರದು ಎಂದು ಆರೋಗ್ಯ ಇಲಾಖೆ ಜಾಗೃತಿ ಮೂಡಿಸುತ್ತಿದೆ. ಬಿಸಿಲಿ ತೀವ್ರತೆ ಹೆಚ್ಚಿರುವುದರಿಂದ ಹೊರಗಡೆ ಹೋದರೆ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಬಹುದು ಎಂಬ ಭಯ ಪೋಷಕರನ್ನು ಕಾಡುತ್ತಿದೆ. ಹೀಗಾಗಿ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ. ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು ಪೋಷಕರ ಮನವೊಲಿಸಿದರೂ ಸ್ಪಂದನೆ ದೊರೆಯುತ್ತಿಲ್ಲ.
ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಮಾತ್ರ ಬಿಸಿಯೂಟದ ವ್ಯವಸ್ಥೆ ಕಲ್ಪಿಸಿದ್ದಾರೆ. ಸರ್ಕಾರ 2 ಕಿ.ಮೀ ವ್ಯಾಪ್ತಿಯ ಎಲ್ಲ ಶಾಲೆಗಳ ಮಕ್ಕಳನ್ನು ಒಂದು ಮುಖ್ಯ ಶಾಲೆಗೆ ಸಂಯೋಜನೆ ಮಾಡಿದೆ. ನಗರದಲ್ಲಿ ಹಲವು ಶಾಲೆಗಳ ಮಕ್ಕಳಿಗೆ ಒಂದು ಮುಖ್ಯ ಶಾಲೆಯಲ್ಲಿ ಅಡುಗೆ ವ್ಯವಸ್ಥೆ ಮಾಡಲಾಗಿದೆ. ಗ್ರಾಮೀಣ ಭಾಗಗಳಲ್ಲಿ ಬಹುತೇಕ ಆಯಾ ಶಾಲೆಗಳಲ್ಲೇ ಬಿಸಿಯೂಟ ವ್ಯವಸ್ಥೆ ಮಾಡಲಾಗಿದೆ.
ಬಿಸಿಯೂಟದಲ್ಲಿ ಅನ್ನ ಸಾಂಬಾರ್, ತಿಳಿಸಾರು, ಪುಲಾವ್, ಚಿತ್ರಾನ್ನ ಕೊಡಲಾಗುತ್ತಿದೆ. ವ್ಯವಸ್ಥೆಯ ಮೇಲ್ವಿಚಾರಣೆಯನ್ನು ಸಿ.ಆರ್.ಪಿ ಮತ್ತು ಬಿ.ಆರ್.ಪಿ ಗಳಿಗೆ ವಹಿಸಲಾಗಿದೆ. ಅವರು ಶಾಲೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡು ಅಗತ್ಯ ಸಲಹೆ, ಸೂಚನೆ ನೀಡುತ್ತಾರೆ. ಮೇ 27 ಕ್ಕೆ ಬೇಸಿಗೆ ಬಿಸಿಯೂಟ ಮುಗಿಯುತ್ತದೆ. 28 ರಿಂದ ಹೊಸ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಶಾಲೆಗಳ ಆರಂಭದೊಂದಿಗೆ ಬಿಸಿಯೂಟ ವ್ಯವಸ್ಥೆಯು ಎಂದಿನಂತೆ ನಡೆಯಲಿದೆ.
ಈ ವರ್ಷ ಅತ್ಯಧಿಕ ತಾಪಮಾನ ಇರುವುದರಿಂದ ಕೆಲವು ವಿದ್ಯಾರ್ಥಿಗಳು ಶಾಲೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಬರುತ್ತಿರುವ ಮಕ್ಕಳಿಗೆ ಬಿಸಿಯೂಟದ ವ್ಯವಸ್ಥೆ ಸಮರ್ಪಕವಾಗಿ ನಡೆಯುತ್ತಿದೆಸುರೇಶ್ ಸಹಾಯಕ ನಿರ್ದೇಶಕ ಅಕ್ಷರ ದಾಸೋಹ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.