ADVERTISEMENT

ಶಿಡ್ಲಘಟ್ಟ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಯೇ ಚಿಂತೆ

ಸರ್ಕಾರಿ ಅನುದಾನಕ್ಕೆ ಕಾದಿರುವ ಇಲಾಖೆ ಅಧಿಕಾರಿಗಳು

ಡಿ.ಜಿ.ಮಲ್ಲಿಕಾರ್ಜುನ
Published 24 ಜೂನ್ 2024, 6:01 IST
Last Updated 24 ಜೂನ್ 2024, 6:01 IST
ಶಿಡ್ಲಘಟ್ಟ ತಾಲ್ಲೂಕಿನ ಎಸ್.ದೇವಗಾನಹಳ್ಳಿಯ ಸರ್ಕಾರಿ ಶಾಲಾ ಕೊಠಡಿ
ಶಿಡ್ಲಘಟ್ಟ ತಾಲ್ಲೂಕಿನ ಎಸ್.ದೇವಗಾನಹಳ್ಳಿಯ ಸರ್ಕಾರಿ ಶಾಲಾ ಕೊಠಡಿ   

ಶಿಡ್ಲಘಟ್ಟ: ತಾಲ್ಲೂಕಿನ ಹಲವಾರು ಸರ್ಕಾರಿ ಶಾಲಾ ಕೊಠಡಿಗಳು ಅರೆಬರೆ ಶಿಥಿಲಗೊಂಡಿವೆ. ಹಲವು ಕೊಠಡಿಗಳು ದುರಸ್ತಿಗೆ ಕಾದಿವೆ. ಕೆಲವೊಂದು ಸಂಪೂರ್ಣವಾಗಿ ಬೀಳುವ ಸ್ಥಿತಿಯಲ್ಲಿವೆ. ಇಂತಹ ಕೊಠಡಿಗಳಲ್ಲೆ ಮಕ್ಕಳನ್ನು ಕೂರಿಸಿಕೊಂಡು ಪಾಠ ನಡೆಸಲಾಗುತ್ತಿದೆ.

ಮಳೆಗಾಲ ಬೇರೆ. ಹಾಗಾಗಿ ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರಲ್ಲಿ ಆತಂಕವೂ ಮೂಡಿದೆ. ಇದಕ್ಕೆ ಉತ್ತರಿಸಬೇಕಾದ, ಮಕ್ಕಳ ಸುರಕ್ಷತೆ ಬಗ್ಗೆ ಗಮನ ಹರಿಸಬೇಕಾದ, ಇಲಾಖೆ ಅಧಿಕಾರಿಗಳು, ಜವಾಬ್ದಾರಿ ಹೊತ್ತ ಜನಪ್ರತಿನಿಧಿಗಳು ವರದಿ ಕೊಟ್ಟಿದ್ದೇವೆ, ಪತ್ರ ಬರೆದಿದ್ದೇವೆ. ಆದೇಶಕ್ಕೆ, ಅನುದಾನಕ್ಕೆ ಕಾಯುತ್ತಿದ್ದು ಬಂದ ತಕ್ಷಣ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಿದ್ದಾರೆ. ಆದರೆ, ಪೋಷಕರ, ವಿದ್ಯಾರ್ಥಿಗಳ, ಶಿಕ್ಷಣ ಪ್ರೇಮಿಗಳ ಆತಂಕ ಮಾತ್ರ ಕಡಿಮೆ ಆಗಿಲ್ಲ.

ವರ್ಷಗಳಿಂದ ದುರಸ್ತಿಗೆ ಕಾದಿವೆ: ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಒಂದನೇ ತರಗತಿಯಿಂದ ಹತ್ತನೇ ತರಗತಿಯ ಕಿರಿಯ, ಹಿರಿಯ ಪ್ರಾಥಮಿಕ, ಪ್ರೌಢಶಾಲೆಯ 984 ಕೊಠಡಿಗಳಿವೆ. ಸುರಕ್ಷತೆ ದೃಷ್ಟಿಯಿಂದ 584 ಕೊಠಡಿಗಳಷ್ಟೆ ಸುಸ್ಥಿತಿಯಲ್ಲಿವೆ. 217 ಕೊಠಡಿಗಳಲ್ಲಿ ಪಾಠ ನಡೆಯುತ್ತಿದೆಯಾದರೂ ಯಾವಾಗ ಏನು ಅನಾಹುತ ಬೇಕಾದರೂ ಸಂಭವಿಸಬಹುದಾದ ಸಣ್ಣ ಪುಟ್ಟ ದುರಸ್ತಿ ಕಾರ್ಯ ನಡೆಸಬೇಕಾದ ಸ್ಥಿತಿಯಲ್ಲಿವೆ.

ADVERTISEMENT

ಇನ್ನು 183 ಕೊಠಡಿಗಳು ಇಲಾಖೆಯ ತಾಂತ್ರಿಕ ವರದಿಯಂತೆ ಶಿಥಿಲಗೊಂಡಿದ್ದು ಅವುಗಳನ್ನು ಕೆಡವಿ ಹೊಸ ಕಟ್ಟಡ ಕಟ್ಟಲು, ಇಲ್ಲವೇ ಸಂಪೂರ್ಣ ದುರಸ್ತಿ ಕೈಗೊಳ್ಳಲು ಮೇಲಧಿಕಾರಿಗಳಿಗೆ ಪತ್ರ ವ್ಯವಹಾರ ಹಲವು ವರ್ಷಗಳಿಂದಲೂ ನಡೆಸಿಕೊಂಡು ಬರಲಾಗುತ್ತಿದೆ. ಇನ್ನೂ ಅದಕ್ಕೆ ಉತ್ತರವಾಗಲಿ ಪತ್ರವಾಗಲಿ ಇಲ್ಲಿಗೆ ರವಾನೆ ಆಗಿಲ್ಲ. ತಾಂತ್ರಿಕ ಸಮಸ್ಯೆಯೂ ಅಡ್ಡಿಯಾಗಿದೆ.

ಇತಿಹಾಸದ ವರದಿ: ಕನಿಷ್ಠ 30 ವರ್ಷಕ್ಕೂ ಹಳೆಯದಾದ ಕೊಠಡಿ, ಕಟ್ಟಡವನ್ನು ಕೆಡವಬಹುದು ಎಂದು ಇಲಾಖೆಯ ಆದೇಶವಿದೆ. 30 ವರ್ಷಕ್ಕೂ ಹಳೆಯದಾದ ಶಿಥಿಲಗೊಂಡ 183 ಕೊಠಡಿಗಳು ಶಿಡ್ಲಘಟ್ಟ ತಾಲ್ಲೂಕಿನಲ್ಲಿವೆ. ಈ ಪೈಕಿ 31 ಕೊಠಡಿಗಳನ್ನು ಪರಿಶೀಲಿಸಿದ ಪಿಡಬ್ಲುಡಿ ಇಲಾಖೆಯ ತಾಂತ್ರಿಕ ವರದಿ ಆಧಾರದಲ್ಲಿ ಶಿಕ್ಷಣ ಇಲಾಖೆ ಕೆಡವಲು ಆದೇಶ ನೀಡಿತ್ತು.

ಆದರೆ ಈ ಕೊಠಡಿಗಳ, ಕಟ್ಟಡಗಳ ಇತಿಹಾಸದ ವರದಿಯನ್ನು ಈಗಿನ ಡಿಡಿಪಿಐ, ಸಿಇಒ ಅವರು ಕೇಳಿದ್ದಾರೆ. ಇತಿಹಾಸ, ಹಿನ್ನೆಲೆ, ಪಾರಂಪರಿಕ ಕಟ್ಟಡವಾಗಿದ್ದರೆ, ದಾನಿಗಳಿಂದ ನಿರ್ಮಿಸಿದ್ದ, ಸಿಎಸ್‌ಆರ್ ಅನುದಾನದಲ್ಲಿ ನಿರ್ಮಿಸಿದ್ದಾ ಎಂಬಿತ್ಯಾದಿ ಮಾಹಿತಿಯನ್ನು ಕೇಳಿದ್ದಾರೆ. ಆದರೆ ಈ ಕಟ್ಟಡಗಳ ಇತಿಹಾಸವನ್ನು ಸಾರುವ ಈ ಯಾವ ಮಾಹಿತಿಯೂ ಲಭ್ಯವಿಲ್ಲದ ಕಾರಣ ಶಿಥಿಲಗೊಂಡ ಕೊಠಡಿಗಳನ್ನು ಬೀಳಿಸಿ ಬೇರೊಂದು ಕೊಠಡಿ ಕಟ್ಟುವ ಕೆಲಸವೂ ನನೆಗುದಿಗೆ ಬಿದ್ದಿದೆ.

ಅನುದಾನ ಬಂದಿಲ್ಲ: ನೂತನ ಶಾಲಾ ಕೊಠಡಿಗಳ ನಿರ್ಮಾಣ, ಶಿಥಿಲಗೊಂಡ ಕೊಠಡಿಗಳ ದುರಸ್ತಿಗೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ನರೇಗಾದ ಅನುದಾನ, ಶಾಸಕರ ಅನುದಾನ, ಸಿಎಸ್‌ಆರ್‌ ನಿಧಿ, ದಾನಿಗಳ ಕೊಡುಗೆಯ ಹಣವನ್ನು ಬಳಸಿಕೊಳ್ಳಬಹುದು.

ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಯಾವ ಮೂಲದಿಂದಲೂ ನೂತನ ಕೊಠಡಿ ನಿರ್ಮಾಣ, ದುರಸ್ತಿಗೆ ಅನುದಾನ ಬಂದಿಲ್ಲ. ಕೆಲ ಕಂಪನಿಗಳು ಕೊಠಡಿ ನಿರ್ಮಿಸಲು ಮುಂದೆ ಬಂದಿದ್ದು ಹೆಚ್ಚು ವಿದ್ಯಾರ್ಥಿಗಳಿರುವ ಕುಂದಲಗುರ್ಕಿ, ದಿಬ್ಬೂರಹಳ್ಳಿ, ತುಮ್ಮನಹಳ್ಳಿ, ನಗರದ ಬಾಲಕಿ, ಬಾಲಕರ ಶಾಲೆಗಳಲ್ಲಿ ಕೊಠಡಿ ನಿರ್ಮಿಸುವ ಉದ್ದೇಶವಿದೆ.

ಶಿಡ್ಲಘಟ್ಟ ತಾಲ್ಲೂಕಿನ ಸೀತಹಳ್ಳಿಯ ಶಾಲೆಯ ದುಸ್ಥಿತಿ
ಶಿಡ್ಲಘಟ್ಟ ತಾಲ್ಲೂಕಿನ ಸೀತಹಳ್ಳಿಯ ಶಾಲೆಯ ದುಸ್ಥಿತಿ

183 ಕೊಠಡಿ ಶಿಥಿಲ

ಶಿಡ್ಲಘಟ್ಟ ತಾಲ್ಲೂಕಿನಲ್ಲಿ 584 ಕೊಠಡಿಗಳು ಸುಸ್ಥಿತಿಯಲ್ಲಿದ್ದು 217 ಕೊಠಡಿಗಳಲ್ಲಿ ಸಣ್ಣ ಪುಟ್ಟ ದುರಸ್ತಿ ಕೆಲಸ ಆಗಬೇಕಿದೆ. 183 ಕೊಠಡಿಗಳು ಶಿಥಿಲಗೊಂಡಿವೆ. ಕೊಠಡಿಗಳ ಇತಿಹಾಸದ ವಿವರ ಕೇಳಿದ್ದು ದಾಖಲೆಗಳು ಶಾಲೆಗಳಲ್ಲಿ ಸಿಗದ ಕಾರಣ ಶಿಥಿಲಗೊಂಡ ಕೊಠಡಿಗಳನ್ನು ಬೀಳಿಸಿ ಹೊಸ ಕೊಠಡಿ ನಿರ್ಮಿಸುವ ಕೆಲಸ ನನೆಗುದಿಗೆ ಬಿದ್ದಿದೆ. ಲಕ್ಷ್ಮಿನಾರಾಯಣ್ ಶಾಲಾ ಕಟ್ಟಡಗಳ ಸಿವಿಲ್ ವಿಭಾಗದ ಮೇಲ್ವಿಚಾರಕ ಭರವಸೆಗೆ ಸೀಮಿತ ಎಲ್ಲ ರೀತಿಯ ಸವಲತ್ತುಗಳನ್ನು ನೀಡುವುದಾಗಿ ಹೇಳುವ ಸರ್ಕಾರದ ಕೆಲಸ ಕೇವಲ ಮಾತಿಗೆ ಭರವಸೆಗೆ ಸೀಮಿತವಾಗಿದೆ. ಪಾಠಕ್ಕಿಂತಲೂ ಮೊದಲು ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಬೇಕಿದೆ. ಆದರೆ ಬಹುತೇಕ ಶಾಲೆಗಳಲ್ಲಿ ಮೂಲ ಸೌಕರ್ಯಗಳೆ ಇಲ್ಲ. ಸರ್ಕಾರ ಸಂಘ ಸಂಸ್ಥೆ ದಾನಿಗಳ ಸಿಎಸ್‌ಆರ್ ಅನುದಾನವನ್ನು ಪಡೆದು ಮೂಲ ಸೌಕರ್ಯ ಸುರಕ್ಷತೆ ಕಲ್ಪಿಸುವ ಕೆಲಸ ಇಲಾಖೆ ಮಾತ್ರವಲ್ಲ ಶಿಕ್ಷಕರು ಎಸ್‌ಡಿಎಂಸಿಯಿಂದಲೂ ಆಗಬೇಕಿದೆ. ಆರ್.ಎ.ಉಮೇಶ್ ಮೇಲೂರು ಗ್ರಾಮ ಪಂಚಾಯಿತಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.