ADVERTISEMENT

ಚಿಂತಾಮಣಿ ಕ್ಷೇತ್ರ: ನೂತನ ಶಾಸಕರಿಗೆ ನೂರೆಂಟು ಸವಾಲು

​ಪ್ರಜಾವಾಣಿ ವಾರ್ತೆ
Published 20 ಮೇ 2023, 23:30 IST
Last Updated 20 ಮೇ 2023, 23:30 IST
ಚಿಂತಾಮಣಿ ಎಂಜಿ.ರಸ್ತೆಯಲ್ಲಿ ಹಾಳಾಗಿರುವ ರಸ್ತೆ ವಿಭಜಕ
ಚಿಂತಾಮಣಿ ಎಂಜಿ.ರಸ್ತೆಯಲ್ಲಿ ಹಾಳಾಗಿರುವ ರಸ್ತೆ ವಿಭಜಕ   

ಚಿಂತಾಮಣಿ: ಚಿಂತಾಮಣಿ ನಗರ ಮತ್ತು ತಾಲ್ಲೂಕಿನಲ್ಲಿ ಶಾಸಕ ಡಾ.ಎಂ.ಸಿ.ಸುಧಾಕರ್ ಹಿಂದೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಆದರೆ ಇನ್ನೂ ಹೆಚ್ಚಿನ ನಿರೀಕ್ಷೆಗಳಿವೆ. ನೂತನ ಶಾಸಕರ ಮುಂದೆ ಹಲವಾರು ಸವಾಲುಗಳಿವೆ.

ಡಾ.ಎಂ.ಸಿ.ಸುಧಾಕರ್ ಅವಧಿಯಲ್ಲಿ ರೂಪಿಸಿದ್ದ ಅನೇಕ ಅಭಿವೃದ್ಧಿ ಯೋಜನೆಗಳು 10 ವರ್ಷ ಕಳೆದರೂ ನೆನಗುದಿಗೆ ಬಿದ್ದಿವೆ. ಅವರ ಅವಧಿಯಲ್ಲಿ ಸ್ವಚ್ಛ ಚಿಂತಾಮಣಿ ಎಂಬ ಬಿರುದು ನಗರಕ್ಕೆ ಲಭ್ಯವಾಗಿತ್ತು. ನಗರದ ಸ್ವಚ್ಛತೆ ಮಾಯವಾಗಿ ಗಬ್ಬೆದ್ದು ನಾರುತ್ತಿದೆ. ಹದಗೆಟ್ಟು ರಸ್ತೆಗಳು, ರಸ್ತೆಗಳ ಬದಿಯಲ್ಲಿ ಕಸದ ರಾಶಿಗಳು, ಒಳಚರಡಿ ನೀರು ರಸ್ತೆಗಳಿಗೆ ಹರಿಯುವುದು ಮತ್ತಿತರ ಸಮಸ್ಯೆಗಳಿಂದ ನಾಗರಿಕರು ಹೈರಾಣಾಗಿದ್ದಾರೆ. ಈ ಸಮಸ್ಯೆಯಿಂದ ಮುಕ್ತಿ ಸಿಗಬೇಕು ಎಂದು ನಗರದ ಮತದಾರರು ಒತ್ತಾಯಿಸುತ್ತಾರೆ.

ನಗರದ ಬೆಂಗಳೂರು ಜೋಡಿ ರಸ್ತೆ, ಬಾಗೇಪಲ್ಲಿ ಕ್ರಾಸ್ ನಿಂದ ಕೋಲಾರದ ಕ್ರಾಸ್ ವರೆಗೆ ರಸ್ತೆಯ ಅಭಿವೃದ್ಧಿ, ಚೇಳೂರು ವೃತ್ತದಿಂದ ರೈಲ್ವೆ ಅಂಡರ್ ಪಾಸ್ ವರೆಗಿನ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿತ್ತು. ರಸ್ತೆಯಲ್ಲಿ ಮೀಡಿಯನ್ ನಿರ್ಮಾಣ ಮಾಡಿ ಫೆನ್ಸ್ ಹಾಕಿ ಗಿಡಮರಗಳನ್ನು ಬೆಳೆಸಲಾಗಿತ್ತು.

ADVERTISEMENT

ಡಾ.ಎಂ.ಸಿ.ಸುಧಾಕರ್ ಶಾಸಕರಾಗಿದ್ದ ಅವಧಿಯಲ್ಲಿ ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಆಂಧ್ರಪ್ರದೇಶದ ರಾಜಮಂಡ್ರಿಗೆ ಕಳುಹಿಸಿ ವಿವಿಧ ಜಾತಿಯ ಸಸಿಗಳನ್ನು ತರಿಸಿ ನಾಟಿಸಿದ್ದರು. ಸಮರ್ಪಕ ಮೇಲ್ವಿಚಾರಣೆ ಇಲ್ಲದೆ ಎಲ್ಲವೂ ಹಾಳಾಗಿವೆ. ಮೀಡಿಯನ್ ಫೆನ್ಸ್ ಸಹ ಕಿತ್ತು ಹಾಕಿದ್ದಾರೆ. ಹೇಳುವವರು, ಕೇಳುವವರು ಇಲ್ಲದೆ ಹಾಳಾದ ಕೊಂಪೆಯಂತೆ ಕಾಣುತ್ತಿದೆ.

ಲಕ್ಷಾಂತರ ರೂ ಖರ್ಚು ಮಾಡಿ ರಸ್ತೆಯ ಎರಡು ಬದಿಯ ಪುಟ್ ಪಾತ್ ಗಳಿಗೆ ಗ್ರಾನೈಟ್ ಹಾಕಿಸಿದ್ದರು. ನಗರದ ಸೌಂದರ್ಯವನ್ನು ಹೆಚ್ಚಿಸಿ ಸುಂದರ ನಗರವನ್ನಾಗಿ ಮಾಡಿದ್ದರು. ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಾಣವಾಗಿದ್ದ ಪುಟ್ ಪಾತ್ ಗಳನ್ನು ಅಂಗಡಿಗಳ ಮಾಲೀಕರು ಬಳಕೆ ಮಾಡಿಕೊಂಡಿದ್ದಾರೆ. ಕೆಲವು ಕಡೆ ಟೀ ಅಂಗಡಿಗಳು, ತಳ್ಳುವ ಗಾಡಿಗಳ ಅಂಗಡಿಗಳನ್ನಿಟ್ಟುಕೊಂಡು ಪಾದಾಚಾರಿಗಳು ರಸ್ತೆಯಲ್ಲಿ

ನಡೆಯುವಂತಾಗಿದೆ. ಇವುಗಳನ್ನು ಸರಿಪಡಿಸಿ ಒಂದು ವ್ಯವಸ್ಥಿತ ಸ್ಥಿತಿಗೆ ತರಬೇಕು ಎಂಬ ಬೇಡಿಕೆ ಇದೆ.
ನಗರದ ದಿವೇ ದಿವೇ ವಿಶಾಲವಾಗಿ ಬೆಳೆಯುತ್ತಿದೆ. ಪೊಲೀಸರಿಗೆ ಕಾನೂನು ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡುವುದರ ಜತೆಗೆ ಸಂಚಾರಿ ವ್ಯವಸ್ಥೆಯನ್ನು ನಿರ್ವಹಿಸುವುದು ಕಷ್ಟವಾಗಿದೆ. ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿಯ ಕೊರತೆಯೂ ಕಾಡುತ್ತಿದೆ. ಸಂಚಾರಿ ವ್ಯವಸ್ಥೆಯನ್ನು ಉತ್ತಮ ಪಡಿಸಲು ಒಂದು ಸಂಚಾರಿ ಪೊಲೀಸ್ ಠಾಣೆ ಸ್ಥಾಪಿಸಬೇಕು ಎಂಬುದು ಬಹಳ ವರ್ಷಗಳ ಬೇಡಿಕೆಯಾಗಿದೆ. ಇದು ಜರೂರಾಗಿ ಆಗಬೇಕಾಗಿರುವ ಕೆಲಸವಾಗಿದೆ ಎನ್ನುತ್ತಾರೆ ನಾಗರಿಕರು.

ನಗರಸಭೆ, ತಾಲ್ಲೂಕು ಕಚೇರಿ, ತಾಲ್ಲೂಕು ಪಂಚಾಯಿತಿ ಕಚೇರಿ ಸೇರಿದಂತೆ ಸರ್ಕಾರಿ ಕಚೇರಿಗಳ ಆಡಳಿತ ಹದಗೆಟ್ಟಿದೆ. ಭ್ರಷ್ಟಾಚಾರ ತಾಂಡವಾಳುತ್ತಿದೆ. ಸಿಬ್ಬಂದಿಯ ಕೊರತೆ ಕಾಡುತ್ತಿದೆ. ವಿಶೇಷವಾಗಿ ನಗರಸಭೆ ಪೌರಾಯುಕ್ತರು ಮತ್ತು ತಾಲ್ಲೂಕು ಕಚೇರಿಯ ತಹಶೀಲ್ದಾರ್ ಹುದ್ದೆಗಳಲ್ಲಿ ವರ್ಷಕ್ಕೆ 3-4 ಕೆಲಸ ಮಾಡುವಂತಾಗಿದೆ. ಆಡಳಿತದಲ್ಲಿ ಬಿಗಿತಪ್ಪಿದೆ, ಹೇಳುವವರು, ಕೇಳುವವರು ಯಾರು ಇಲ್ಲ ಎನ್ನುವಂತಾಗಿದೆ. ಪರಿಣಾಮ ಸಾರ್ವಜನಿಕರು ಸಂಕಷ್ಟಗಳಿಗೆ ಗುರಿಯಾಗಿದ್ದಾರೆ. ವಿವಿಧ ಕೆಲಸಗಳಿಗಾಗಿ ಅಲೆದಾಡುವಂತಾಗಿದೆ. ಸಿಬ್ಬಂದಿಯ ಕೊರತೆ ನೀಗಿಸಬೇಕು. ಉತ್ತಮ ಅಧಿಕಾರಿಗಳನ್ನು ತಂದು ಆಡಳಿತ ವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ

ನಗರಸಭೆ ಮತ್ತು ತಾಲ್ಲೂಕು ಕಚೇರಿಗೆ ಮೇಜರ್ ಸರ್ಜರಿಯ ಅಗತ್ಯವಿದೆ. ಕಂದಾಯ ಪಾವತಿ, ಖಾತೆ ಬದಲಾವಣೆ, ಇ-ಖಾತೆ, ಕಟ್ಟಡ ನಿರ್ಮಾಣದ ಪರವಾನಗಿ ಕೆಲಸಗಳಿಗೆ ಜನರು ನಾನಾ ರೀತಿಯ ಪರಿಪಾಟಲು ಪಡುತ್ತಿದ್ದಾರೆ. ಬ್ರೋಕರ್ ಗಳ ಹಾವಳಿ ಮಿತಿ ಮೀರಿದೆ. ನಾಗರಿಕರು ಹೋದರೆ ಕೆಲಸವಾಗುವುದಿಲ್ಲ. ದಳ್ಳಾಳಿಗಳ ಮೂಲಕ ಹೋದರೆ ಮಾತ್ರ ಕೆಲಸವಾಗುತ್ತದೆ. ರೈತರು ಪಹಣಿ ತಿದ್ದುಪಡಿ, ಪವತಿವಾರು, ಪೋಡಿ, ಖಾತೆ ಬದಲಾವಣೆ ಮತ್ತಿತರ ಕೆಲಸಗಳಿಗಾಗಿ ತಾಲ್ಲೂಕು ಕಚೇರಿಗೆ ಅಲ್ಲೂ ಇದೇ ಪರಿಸ್ಥಿತಿ ಇದೆ. ನೂತನ ಶಾಸಕರು ಇದಕ್ಕೆ ಕಡಿವಾಣ ಹಾಕುತ್ತಾರೆ ಎಂಬ ನಿರೀಕ್ಷೆಯನ್ನು ಮತದಾರರು ಹೊಂದಿದ್ದಾರೆ.

ನಗರದಲ್ಲಿ ನಿರ್ಮಾಣ ಹಂತದಲ್ಲಿ ನೆನಗುದಿಗೆ ಬಿದ್ದಿರುವ ಅಂಬೇಡ್ಕರ್ ಭವನ, ವಾಲ್ಮೀಕಿ ಭವನದ ಕಾಮಗಾರಿ. ನೀರಾವರಿಗಾಗಿ ರೂಪಿಸಿರುವ ಭಕ್ತರಹಳ್ಳಿ-ಅರಸೀಕೆರೆ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಮುಕ್ತಾಯಕ್ಕೆ ಕ್ರಮಕೈಗೊಳ್ಳಬೇಕು. ನಗರ ಮತ್ತು ಗ್ರಾಮೀಣ ಭಾಗಗಳ ಬಡವರಿಗೆ ವಸತಿರಹಿತರಿಗೆ ನಿವೇಶನ, ವಸತಿ ಒದಗಿಸಬೇಕು. ನಗರದಲ್ಲಿ ಹತ್ತಾರು ವರ್ಷಗಳಿಂದ ನಿವೇಶನಗಳಿಗಾಗಿ ಅರ್ಜಿ ಸಲ್ಲಿಸಿ ಜಾತಕಪಕ್ಷಿಯಂತೆ ಕಾಯುತ್ತಿರುವ ಬಡವರಿಗೆ ನೂತನ ಶಾಸಕರು ಸೂರು ಒದಗಿಸುತ್ತಾರೆ ಎಂಬ ಭರವಸೆ ಜನರು ವ್ಯಕ್ತಪಡಿಸುತ್ತಾರೆ.

ಜಿಲ್ಲೆಯ ಜನಸಂಖ್ಯೆ, ಭೌಗೋಳಿಕ ಪ್ರದೇಶದಲ್ಲಿ ಚಿಂತಾಮಣಿ ತಾಲ್ಲೂಕು ಜಿಲ್ಲೆಯಲ್ಲೇ ಅತ್ಯಂತ ದೊಡ್ಡದಾಗಿದೆ. ವಾಣಿಜ್ಯ ನಗರ ಎಂದು ಹೆಸರು ಗಳಿಸಿದೆ. ಮುಖ್ಯವಾಗಿ ಇಲ್ಲಿಗೆ ಕೈಗಾರಿಕೆಗಳು ಬರಬೇಕು. ಯುವಕರಿಗೆ ಉದ್ಯೋಗ ಸೃಷ್ಠಿಯಾಗಬೇಕು ಎಂಬ ಬೇಡಿಕೆ ಪ್ರಮುಖವಾಗಿದೆ.

ಡಾ.ಎಂ.ಸಿ.ಸುಧಾಕರ್ ಅವಧಿಯಲ್ಲಿ ಕೈಗಾರಿಕಾ ಪ್ರಾಂಗಣ ಸ್ಥಾಪನೆಗಾಗಿ ತಾಲ್ಲೂಕಿನ ಮಸ್ತೇನಹಳ್ಳಿ ಮತ್ತು ಸಿದ್ದೇಪಲ್ಲಿ ಕ್ರಾಸ್ ಬಳಿ ಭೂಮಿಯನ್ನು ಗುರುತಿಸಲಾಗಿತ್ತು. 10 ವರ್ಷ ಕಳೆದರೂ ಆ ಯೋಜನೆಗಳು ನೆನಗುದಿಗೆ ಬಿದ್ದಿವೆ. ಇದೇ ಅವಧಿಯಲ್ಲಿ ವೇಮಗಲ್-ನರಸಾಪುರದ ಬಳಿ ಸ್ಥಾಪನೆಯಾಗಿರುವ ಕೈಗಾರಿಕಾ ಪ್ರಾಂಗಣದಲ್ಲಿ ನೂರಾರು ಕೈಗಾರಿಕೆಗಳು ತಲೆ ಎತ್ತಿದ್ದು ಸಾವಿರಾರು ಜನರಿಗೆ ಉದ್ಯೋಗ ದೊರೆತಿದೆ. ನೆನಗುದಿಗೆ ಬಿದ್ದಿರುವ ಮಸ್ತೇನಹಳ್ಳಿ ಕೈಗಾರಿಕಾ ಪ್ರಾಂಗಣವನ್ನು ಸ್ಥಾಪಿಸಬೇಕು ಎಂಬುದು ಯುವಜನಾಂಗದ ನಿರೀಕ್ಷೆಯಾಗಿದೆ.

ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲೂ ಬಹುತೇಕ ರಸ್ತೆಗಳು ಹಾಳಾಗಿವೆ. ಹಲವಾರು ವರ್ಷಗಳಿಂದ ದುರಸ್ಥಿ ಕಾಣದೆ ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿವೆ. ಆಗಿರುವ ರಸ್ತೆಗಳ ಸಹ ಕಳಪೆ ಕಾಮಗಾರಿಯಿಂದ ಕೂಡಿವೆ. ವರ್ಷಕ್ಕೆ ಒಂದೋ-ಎರಡೋ ರಸ್ತೆಗಳನ್ನು ಮಾಡಿಸಿದರೆ ಸಾಲದು. ಸರ್ಕಾರದಿಂದ ವಿಶೇಷ ಅನುದಾನವನ್ನು ತಂದು ಒಮ್ಮಲೇ ಎಲ್ಲ ರಸ್ತೆಗಳಿಗೆ ಮುಕ್ತಿ ನೀಡಬೇಕು ಎಂಬುದು ಗ್ರಾಮೀಣ ಜನರ ಬೇಡಿಕೆಯಾಗಿದೆ.

ತಾಲ್ಲೂಕಿನಲ್ಲಿ ರೈತರು ಬೆಳೆಯುವ ಪ್ರಮುಖ ವಾಣಿಜ್ಯ ಬೆಳೆ ಟೊಮೆಟೊ ಮತ್ತು ಮಾವಿನ ಸಂಸ್ಕರಣಾ ಘಟಕಗಳನ್ನು ಸ್ಥಾಪನೆಯಾಗಬೇಕು. ಟೊಮೆಟೊ ಬೆಳೆಗಾರರು ಬೆಲೆ ಕುಸಿತದ ಸಂದರ್ಭಗಳಲ್ಲಿ ಪಾತಾಳಕ್ಕೆ ಕುಸಿಯುತ್ತಾರೆ. ಸ್ಥಳದಲ್ಲಿಯೇ ಸಂಸ್ಕರಣಾ ಘಟಕಗಳಿದ್ದರೆ ಬೆಳೆಗಾರರಿಗೆ ಒಂದು ನಿರ್ಧಿಷ್ಟ ಬೆಲೆ ಸಿಗುತ್ತದೆ. ಇದರಿಂದ ನಷ್ಟದ ಕೂಪದಿಂದ ಪಾರಾಗಬಹುದು ಎಂಬುದು ರೈತರ ಬಹುದಿನಗಳ ಬೇಡಿಕೆಯಾಗಿದೆ. ನೂತನ ಶಾಸಕರು ಇದಕ್ಕೇ ಒತ್ತು ನೀಡಿ ರೈತರನ್ನು ನಷ್ಟದಿಂದ ಪಾರುಮಾಡಬೇಕು ಎಂದು ರೈತರು ಆಗ್ರಹಪಡಿಸುತ್ತಾರೆ.

ಒಟ್ಟಾರೆಯಾಗಿ ನಗರದ ಸ್ವಚ್ಛತೆ, ಸರ್ಕಾರಿ ಕಚೇರಿಗಳ ಆಡಳಿಯಂತ್ರಕ್ಕೆ ಸರ್ಜರಿ, ಉದ್ಯೋಗ ಸೃಷ್ಠಿ, ಅರ್ಧಕ್ಕೆ ನಿಂತಿರುವ ಕಾಮಗಾರಿಗಳಿಗೆ ಮರುಜೀವ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕ ಮೂಲಭೂತ ಸೌಲಭ್ಯ ಒದಗಿಸಬೇಕು ಎಂಬುದು ಕ್ಷೇತ್ರದ ಬಹುತೇಕ ಮತದಾರರ ಅಭಿಪ್ರಾಯವಾಗಿದೆ.

ನಗರದ ಸರ್ಕಾರಿ ಕಚೇರಿಗಳ ಆಡಳಿತಯಂತ್ರ ಕುಸಿದುಬಿದ್ದಿದೆ. ಜನರು ಅಗತ್ಯ ಕೆಲಸ ಕಾರ್ಯಗಳಿಗಾಗಿ ತಕ್ಷಣ ಅಲೆದಾಡಿ ಪರಿತಪಿಸುವಂತಾಗಿದೆ. ನೂತನ ಶಾಸಕರು ತಕ್ಷಣ ಗಮನಹರಿಸಬೇಕು. ನಿಧಾನಗತಿ ಲಂಚ ದಳ್ಳಾಳಿಗಳ ಹಾವಳಿಗೆ ಕಡಿವಾಣ ಹಾಕಬೇಕು. ಸುಲಭವಾಗಿ ಜನರ ಕೆಲಸಗಳಾಗುವಂತೆ ಕ್ರಮಕೈಗೊಳ್ಳಬೇಕು. ಮಂಜುನಾಥ್. ಕೈವಾರ ತಾಲ್ಲೂಕಿನಲ್ಲಿ ಅಗತ್ಯವಿರುವ ಯೋಜನೆಗಳಿಗೆ ಡಿಪಿಆರ್ ಮಾಡಿಸಿದೆ ಟೆಂಡರ್ ಕರೆಯಲಾಗಿದೆ ಎಂದು ಸಬೂಬುಗಳನ್ನು ಹೇಳಿದರೆ ಪ್ರಯೋಜನವಿಲ್ಲ. ವಿವಿಧ ಹಂತಗಳಲ್ಲಿ ನೆನಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ನಗರಕ್ಕೆ ನೀರು ಪೂರೈಕೆಗಾಗಿ ರೂಪಿಸಿರುವ ಭಕ್ತರಹಳ್ಳಿ-ಅರಸೀಕೆರೆ ನೀರು ಹರಿಸಲು ಸಾಸಕರು ಒತ್ತುನೀಡಬೇಕು.
–ಸುರೇಶ್ ಹಿರಿಯ ನಾಗರಿಕ, ಚಿಂತಾಮಣಿ.
ನಗರದ ಹೊರವಲಯದ ಮಾಡಿಕೆರೆ ಬಳಿ ಸ್ಥಾಪಿಸಿರುವ ಮಾವು ಅಭಿವೃದ್ದಿ ಕೇಂದ್ರ ನಿರುಪಯುಕ್ತವಾಗಿದೆ. ಅಲ್ಲಿ ರೈತರಿಗೆ ವಿವಿಧ ಬೆಳೆಗಳ ಬಗ್ಗೆ ತರಬೇತಿ ನೀಡುವ ಉದ್ದೇಶದಿಂದ ಉತ್ತಮ ಕಟ್ಟಡಗಳ ನಿರ್ಮಾಣವಾಗಿದೆ. ಹಿಂದಿನ ಶಾಸಕರ ನಿರ್ಲಕ್ಷ್ಯತೆಯಿಂದ ಕೇಂದ್ರ ಯಾವುದಕ್ಕೂ ಬಳಕೆಯಾಗದೆ ಖಾಲಿಯಾಗಿದೆ. ಸಂಪನ್ಮೂಲ ವ್ಯಕ್ತಿಗಳಿಂದ ರೈತರಿಗೆ ವಿವಿಧ ಬೆಳೆಗಳ ಬಗ್ಗೆ ಸಮಗ್ರ ತರಬೇತಿ ಕೊಡಿಸಲು ನೂತನ ಶಾಸಕರು ಗಮನಹರಿಸಬೇಕು.
–ವೆಂಕಟೇಶ್. ಮಾವು ಬೆಳೆಗಾರ.
ಕ್ಷೇತ್ರದಲ್ಲಿ ಶೇ.90 ರಷ್ಟು ರಸ್ತೆಗಳು ಹಾಳಾಗಿವೆ. ರಸ್ತೆಗಳ ದುರಸ್ಥಿಗೆ ವಿಶೇಷ ಅನುದಾನವನ್ನು ತಂದು ಶೀಘ್ರವಾಗಿ ಕಾಮಗಾರಿಯನ್ನು ಅರಂಭಿಸಬೇಕು. ಅತ್ಯಧಿಕ ಮತಗಳಿಂದ ಆಯ್ಕೆ ಮಾಡಿರುವ ಜನರ ನಿರೀಕ್ಷೆಗಳನ್ನು ಪೂರೈಕೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು.
-ಶ್ರೀನಿವಾಸ್.ಮುರುಗಮಲ್ಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.