ಚಿಂತಾಮಣಿ: ಚೆಕ್‌ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಎಸಿಎಂಎಂ ನ್ಯಾಯಾಲಯವು ಇಲ್ಲಿನ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ (ಟಿಎಪಿಸಿಎಂಎಸ್) ₹1.22 ಕೋಟಿ ದಂಡ ವಿಧಿಸಿದೆ.
ಟಿಎಪಿಸಿಎಂಎಸ್‌ಗೆ ಇಪ್ಕೊ ಸಂಸ್ಥೆಯು 200 ಟನ್ ರಸಗೊಬ್ಬರ ಪೂರೈಕೆ ಮಾಡಿತ್ತು. ಸಂಘವು ರಸಗೊಬ್ಬರ ಪೂರೈಕೆ ಬಾಬತ್ತು ಹಣವನ್ನು ಇಫ್ಕೊ ಸಂಸ್ಥೆಗೆ ಸಕಾಲದಲ್ಲಿ ಪಾವತಿಸಿರಲಿಲ್ಲ. ಇಪ್ಕೊಗೆ ಟಿಎಪಿಸಿಎಂಎಸ್ ನೀಡಿದ್ದ ₹61.25 ಲಕ್ಷದ ಚೆಕ್ ಬೌನ್ಸ್ ಆಗಿತ್ತು.
ಇಪ್ಕೊ ಸಂಸ್ಥೆಯು ಹಲವಾರು ಬಾರಿ ಸಂಘಕ್ಕೆ ಪತ್ರ ಬರೆದರೂ ಸ್ಪಂದನೆ ದೊರೆತಿರಲಿಲ್ಲ. ಪೂರೈಸಿದ ರಸಗೊಬ್ಬರಕ್ಕೆ ಹಣ ಪಾವತಿಸದ ಕಾರಣ ಇಪ್ಕೊ ಸಂಸ್ಥೆಯು ಟಿಎಪಿಸಿಎಂಎಸ್ ವಿರುದ್ಧ ಬೆಂಗಳೂರಿನ ಎಸಿಎಂಎಂ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿತ್ತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಸಿ.ಎನ್.ವೀರೇಶಕುಮಾರ್, ಟಿಎಪಿಸಿಎಂಎಸ್‌ಗೆ ದಂಡ ವಿಧಿಸಿದ್ದಾರೆ.
ಹಣದಲ್ಲಿ ₹1.20 ಕೋಟಿಯನ್ನು ಇಪ್ಕೊ ಸಂಸ್ಥೆಗೆ ಪಾವತಿಸಬೇಕು. ಒಂದು ವೇಳೆ ದಂಡ ಪಾವತಿಸಲು ತಪ್ಪಿದರೆ ಟಿಎಪಿಸಿಎಂಎಸ್ ಅಧ್ಯಕ್ಷರಾಗಿದ್ದ ಚಂದ್ರಪ್ಪ ಮತ್ತು ಕಾರ್ಯದರ್ಶಿಯಾಗಿದ್ದ ಎನ್.ವೆಂಕಟೇಶಪ್ಪ ಅವರಿಗೆ ಒಂದು ವರ್ಷದ ಕಾರಾಗೃಹ ಶಿಕ್ಷೆ ವಿಧಿಸುವ ಆದೇಶ ಹೊರಡಿಸಿದ್ದಾರೆ.
ತಪ್ಪಿತಸ್ಥರಿಗೆ ಕರುಣೆ ತೋರಿಸಿದರೆ ಮುಗ್ದರಿಗೆ ಅನ್ಯಾಯ ಆಗುತ್ತದೆ. ಚೆಕ್ ಮೊತ್ತದ ಹಣವನ್ನು ದಂಡ ವಿಧಿಸಿದರೆ ದೂರುದಾರರಿಗೆ ಅನ್ಯಾಯ ಆಗುತ್ತದೆ. ಹೀಗಾಗಿ ಚೆಕ್ ಮೊತ್ತದ ದುಪ್ಪಟ್ಟು ಹಣ ದಂಡವಿಧಿಸಲಾಗಿದೆ ಎಂದು ತೀರ್ಪಿನಲ್ಲಿ ನ್ಯಾಯಾಧೀಶರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.