ಚಿಂತಾಮಣಿ: ಜಿಲ್ಲೆಯಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಬೇಜವಾಬ್ದಾರಿತನದಿಂದ ಸುಮಾರು 50 ಸಾವಿರ ಎಕರೆ ಕೆರೆ, ಕುಂಟೆ, ರೈತರ ಜಮೀನುಗಳು ಡೀಮ್ಡ್ ಅರಣ್ಯಕ್ಕೆ ಸೇರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಬೇಸರ ವ್ಯಕ್ತಪಡಿಸಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಮಸ್ತೇನಹಳ್ಳಿ 2ನೇ ಹಂತದ ಕೈಗಾರಿಕಾ ಪ್ರದೇಶಾಭಿವೃದ್ಧಿ ಯೋಜನೆ ಕುರಿತು ಅಧಿಕಾರಿಗಳು ಮತ್ತು ಸ್ಥಳೀಯ ರೈತರ ಜೊತೆ ನಡೆದ ಸಭೆಯಲ್ಲಿ ಮಾತನಾಡಿದರು.
‘ಕೆರೆ, ಕುಂಟೆ ಹಾಗೂ ರೈತರ ಜಮೀನುಗಳನ್ನು ಡೀಮ್ಡ್ ಅರಣ್ಯದಿಂದ ಬಿಡುಗಡೆಗೊಳಿಸಬೇಕು’ ಎಂದು ಸುಪ್ರೀಂ ಕೋರ್ಟ್‌ಗೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ’ ಎಂದು ತಿಳಿಸಿದರು.
‘ತಾಲ್ಲೂಕಿನ ಮಾರಪ್ಪಲ್ಲಿ ಗ್ರಾಮದಲ್ಲಿ 15 ರೈತರ ಜಮೀನುಗಳು ಕೆಐಎಡಿಬಿ ಸ್ವಾಧೀನಪಡಿಸಿಕೊಂಡಿದ್ದು, ಪರಿಹಾರ ಪಡೆಯದ ಕಾರಣ ಒಂದು ಎಕರೆಗೆ 10 ಗುಂಟೆಯಂತೆ ಬದಲಿ ಜಮೀನು ನೀಡಲಾಗಿತ್ತು. ಆ ಜಮೀನು ಸಹ ಡೀಮ್ಡ್ ಅರಣ್ಯಕ್ಕೆ ಸೇರಿಸಲಾಗಿದೆ. ನಮಗೆ ಬದಲಿ ಜಮೀನು ನೀಡುವವರೆಗೆ ನಮ್ಮ ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳಲು ಬಿಡುವುದಿಲ್ಲ’ ಎಂದು ರೈತರು ಒತ್ತಾಯಿಸಿ ಲಿಖಿತ ಮನವಿ ಸಲ್ಲಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಡಾ.ಎಂ.ಸಿ. ಸುಧಾಕರ್, ‘ಅಧಿಕಾರಿಗಳು ಈಗ ಅಳೆದು-ತೂಗಿ ಜಮೀನುಗಳ ಸ್ವಾಧೀನಕ್ಕೆ ಮುಂದಾಗಿದ್ದಾರೆ. ಕೆಐಎಡಿಬಿಗೆ ಸೇರಿರುವ ಜಮೀನುಗಳನ್ನು ಕಾರ್ಖಾನೆಗಳಿಗೆ ಬಿಟ್ಟುಕೊಟ್ಟರೆ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಕೈಗಾರಿಕೆಗಳು ಅಭಿವೃದ್ಧಿಯಿಂದ ರೈತರ ಮಕ್ಕಳಿಗೆ ಉದ್ಯೋಗಾವಕಾಶಗಳು ಸಿಗುತ್ತದೆ. ಒಂದು ವರ್ಷದಿಂದ ಸಮೀಕ್ಷೆ ನಡೆಸಿ ಸಂಗ್ರಹಿಸಲಾದ ಎಲ್ಲ ಮಾಹಿತಿಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗುತ್ತದೆ. ನಂತರ ರೈತರಿಗೆ ಬರಬೇಕಾದ ಜಮೀನುಗಳನ್ನು ಕೊಡಿಸುವುದಾಗಿ’ ಭರವಸೆ ನೀಡಿದರು.
ಒಂದು ಮತ್ತು ಎರಡನೇ ಹಂತದಲ್ಲಿ ಜಮೀನು ನೀಡಿರುವ ರೈತರ ಸಮಸ್ಯೆಗಳನ್ನು ಆಲಿಸಿದ ಸಚಿವರು ಕಾನೂನುಬದ್ಧವಾಗಿ ರೈತರ ಜಮೀನಿಗೆ ಹಣ ಕೊಡಿಸುವ ಜವಾಬ್ದಾರಿ ವಹಿಸಿಕೊಳ್ಳುತ್ತೇನೆ. ಜಮೀನುಗಳ ವಿಸ್ತೀರ್ಣದಲ್ಲಿ ವ್ಯತ್ಯಾಸಗಳಿದ್ದಲ್ಲಿ, ರೈತರ ಒಪ್ಪಿಗೆ ಪಡೆದು ಸಮಸ್ಯೆ ಸರಿಪಡಿಸಲಾಗುವುದು ಎಂದರು.
ಜಿಲ್ಲಾಧಿಕಾರಿ ಡಾ.ಪಿ.ಎನ್.ರವೀಂದ್ರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ ಜಿ. ನಿಟ್ಟಾಲಿ, ಉಪವಿಭಾಗಾಧಿಕಾರಿ ಅಶ್ವಿನ್, ತಹಶೀಲ್ದಾರ್ ಸುದರ್ಶನ ಯಾದವ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್, ಪೌರಾಯುಕ್ತ ಜಿ.ಎನ್.ಚಲಪತಿ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.
1 ಮತ್ತು 2 ನೇ ಹಂತದ ಭೂಸ್ವಾಧೀನದಲ್ಲಿ ಕೆಲವು ಲೋಪದೋಷಗಳಾಗಿವೆ. ರೈತರಿಗೆ ನೀಡಲಾಗಿರುವ ಪರಿಹಾರದ ಹಣ ಕಡಿಮೆ ಎಂದು ದೂರಿದ್ದರಿಂದ, ಪರಿಶೀಲನೆ ನಡೆಸಿ ಪರಿಹಾರದ ಮೊತ್ತವನ್ನು ಹೆಚ್ಚಿಸುವ ಕೆಲಸ ಮಾಡಬಹುದಾಗಿತ್ತು.
ಒಂದನೇ ಹಂತದಲ್ಲಿ ಎಕರೆಗೆ 25 ಲಕ್ಷ ನಿಗದಿಪಡಿಸಲಾಗಿತ್ತು. ಜಮೀನು ಫಲವತ್ತತೆಯಿಂದ ಕೂಡಿದ್ದು ನೀಡುವ ಪರಿಹಾರ ಸಾಲದು ಎಂದು ಮನವಿ ಮಾಡಿದ್ದರಿಂದ 2ನೇ ಹಂತದಲ್ಲಿ 35 ಲಕ್ಷಗಳಿಗೆ ಏರಿಕೆ ಆಯಿತು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.