ADVERTISEMENT

ಚಿಂತಾಮಣಿ | ಮಿಶ್ರ ಬೆಳೆ, ಸಮಗ್ರ ಕೃಷಿಯೇ ಲಾಭದ ಮೂಲ

ಎಂ.ರಾಮಕೃಷ್ಣಪ್ಪ
Published 22 ಅಕ್ಟೋಬರ್ 2024, 7:23 IST
Last Updated 22 ಅಕ್ಟೋಬರ್ 2024, 7:23 IST
<div class="paragraphs"><p>ರೈತರ ಕುರಿ ಸಾಕಾಣಿಕೆ ಶೆಡ್‌</p></div>

ರೈತರ ಕುರಿ ಸಾಕಾಣಿಕೆ ಶೆಡ್‌

   

ಚಿಂತಾಮಣಿ: ಸಮಗ್ರ ಕೃಷಿ ಪದ್ಧತಿ ಮತ್ತು ಮಿಶ್ರ ಬೆಳೆ ಪದ್ಧತಿಯನ್ನು ಕೈಗೊಂಡರೆ ಕೃಷಿ ಖಂಡಿತವಾಗಿಯೂ ಲಾಭದಾಯಕವಾಗುತ್ತದೆ ಎಂಬುದು ಮಸ್ತೇನಹಳ್ಳಿಯ ಪ್ರಗತಿಪರ ರೈತ ಬೈರೇಶ್ ಸಾಧಿಸಿ ತೋರಿಸಿದ್ದಾರೆ.

ಚಿಂತಾಮಣಿ ತಾಲ್ಲೂಕಿನ ಮಸ್ತೇನಹಳ್ಳಿ ಗ್ರಾಮದ ನಿವಾಸಿ ಬೈರೇಶ್ ಪದವಿ ಮುಗಿಸಿದ್ದಾರೆ. ಐಟಿಐ ಅಪ್ರೆಂಟಿಶಿಪ್ ಮಾಡಿ ಬಿಎಂಟಿಸಿ ಯಲ್ಲಿ ಉದ್ಯೋಗದಲ್ಲಿದ್ದರು. ಒಂದು ವರ್ಷ ಕೆಲಸ ಮಾಡಿದರೂ ಅವರಿಗೆ ಇಷ್ಟವಾಗದೆ ಕೃಷಿಯ ಕಡೆಗೆ ಮನಸ್ಸು ಹೊರಳಿ ಮತ್ತೆ ಊರಿಗೆ ಬಂದು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ADVERTISEMENT

ತಂದೆಯಿಂದ ಬಳುವಳಿಯಾಗಿ ಬಂದಿದ್ದ ಕೃಷಿಯಲ್ಲೇ ಖುಷಿಯನ್ನು ಕಾಣುವ ಕನಸು ಕಟ್ಟಿಕೊಂಡರು. ತನಗಿರುವ 4 ಎಕರೆ ಜಮೀನಿನಲ್ಲಿ ವಿವಿಧ ತೋಟಗಾರಿಕೆ ಬೆಳೆಗಳನ್ನು ಬೆಳೆದು ಉತ್ತಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಸರ್ಕಾರದ ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಗಳು ಆಧುನಿಕ ಪ್ರಗತಿಪರ ರೈತ ಎಂದು ಗುರುತಿಸಿಕೊಂಡಿದ್ದಾರೆ. ಇತರೆ ರೈತರು ಅವರನ್ನು ಮಾದರಿಯನ್ನಾಗಿ ತೆಗೆದುಕೊಳ್ಳುವಂತೆ ಸೂಚಿಸುತ್ತಾರೆ.

ಸಾಮಾನ್ಯವಾಗಿ ಕೃಷಿ ಲಾಭದಾಯಕವಲ್ಲ, ಬೆಳೆನಷ್ಟ, ರೋಗರುಜಿನ, ಬೆಲೆ ಕುಸಿತದಿಂದ ಚೇತರಿಸಿಕೊಳ್ಳುವುದೇ ಕಷ್ಟ ಎಂದು ಕೃಷಿಯಿಂದಲೇ ವಿಮುಖರಾಗುತ್ತಾರೆ. ಆದರೆ ಬೈರೇಶ್ ವಿವಿಧ ತೋಟಗಾರಿಕೆ ಮಿಶ್ರ ಬೆಳೆಗಳಿಂದಲೇ ಹೆಚ್ಚು ಲಾಭ ಮಾಡಿಕೊಳ್ಳುತ್ತಾರೆ. ಸೀಬೆ, ನೇರಳೆ, ತೆಂಗು, ಮಾವು, ಅಂಜೂರ, ರಾಮಫಲ, ಲಕ್ಷ್ಮಣಫಲ, ಸೀತಾಫಲ, ಪಪ್ಪಾಯಿ, ನಿಂಬೆ, ಏಲಕ್ಕಿ, ವಾಟರ್ ಆಪಲ್ ಮತ್ತಿತರ ಹಲವಾರು ರೀತಿಯ ಬೆಳೆಗಳನ್ನು ಮಿಶ್ರ ಬೆಳೆಯಾಗಿ ಬೆಳೆದಿದ್ದಾರೆ.

ಕೃಷಿಯಲ್ಲೂ ಸಮಗ್ರವಾಗಿ ಯೋಜನೆ ರೂಪಿಸಿಕೊಳ್ಳಬೇಕು. ಒಮ್ಮೆಗೇ ಶ್ರೀಮಂತರಾಗಬೇಕು ಎಂಬ ದುರಾಸೆ ಕೂಡದು. ಯಾವುದೋ ಒಂದು ಬೆಳೆಗೆ ಬೆಲೆ ಬಂದಿದೆ ಎಂದು ಎಲ್ಲವನ್ನು ತ್ಯಜಿಸಿ ಒಂದೇ ಬೆಳೆಗೆ ಮಾರುಹೋಗಬಾರದು ಎನ್ನುತ್ತಾರೆ ಬೈರೇಶ್.

ರೈತರು ಅಧಿಕ ಇಳುವರಿ ಅಥವಾ ಅಧಿಕ ಲಾಭದ ಹಿನ್ನೆಲೆಯಲ್ಲಿ ಒಂದೇ ಬೆಳೆಗೆ ಜೋತುಬೀಳಬಾರದು. ಇರುವ ಜಮೀನಿನಲ್ಲಿಯೇ ಅನೇಕ ಅಲ್ಪಾವಧಿ ಮತ್ತು ದೀರ್ಘಾವಧಿ ಬೆಳೆ ಬೆಳೆಯಬೇಕು. ಕಡಿಮೆ ಖರ್ಚು ಮಾಡಿ ಲಾಭ ಪಡೆಯುವ ಬೆಳೆ ಬೆಳೆಯಬೇಕು. ಒಂದು ಬೆಳೆ ಕೈಕೊಟ್ಟರೆ ಮತ್ತೊಂದು ಕೈಹಿಡಿಯುತ್ತದೆ. ಪ್ರಕೃತಿಯ ವಿಕೋಪಗಳಿಂದ ಬೆಳೆ ನಷ್ಟ, ಬೆಲೆ ಕುಸಿತ ರೈತರನ್ನು ಹೆಚ್ಚು ಬಾಧಿಸುವ ಸಮಸ್ಯೆಯಾಗಿದೆ. ಇರುವ ಜಮೀನಿನಲ್ಲಿಯೆ ಅನೇಕ ಬೆಳೆಗಳನ್ನು ಬೆಳೆಯುವುದರಿಂದ ನಷ್ಟದಿಂದ ದೂರವಾಗಬಹುದು ಎನ್ನುತ್ತಾರೆ ಅವರು.

ಬೈರೇಶ್ ತನ್ನ ಜಮೀನಿನಲ್ಲಿ ತೆಂಗಿನಮರ, ಮಾವಿನ ಮರ, ನೇರಳೆ ಮರ ಬೆಳೆಸಿದ್ದಾರೆ. ಇದರಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಬರುತ್ತದೆ. ನೇರಳೆ ಹೆಚ್ಚು ಲಾಭದಾಯಕ ಎನ್ನುತ್ತಾರೆ. ಆಧುನಿಕ ಸಣ್ಣ ಪುಟ್ಟ ಯಂತ್ರಗಳ ಬಳಕೆಯಿಂದ ಕೂಲಿಯಾಳುಗಳ ಖರ್ಚನ್ನು ಕಡಿಮೆ ಮಾಡಿಕೊಂಡಿದ್ದಾರೆ.

ಕೃಷಿ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹಾಗೂ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಸಲಹೆ ಪಡೆಯುತ್ತಾರೆ. ಕೃಷಿಯಲ್ಲೂ ಹೊಸ ಹೊಸ ಅನ್ವೇಷಣೆ ಮಾಡುವುದು ಅವರ ಚಿಂತನೆಯಾಗಿದೆ.

ಬೆಳೆಗಳಿಗೆ ಕೊಟ್ಟಿಗೆ ಗೊಬ್ಬರ, ಹಸಿರು ಸೊಪ್ಪು, ಎರೆಹುಳ ಗೊಬ್ಬರ, ಬೇವಿನ ಹಿಂಡಿ ಬಳಸುತ್ತಾರೆ. ಹೀಗಾಗಿ ಇವರ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಮಾರುಕಟ್ಟೆ ವ್ಯವಸ್ಥೆಯನ್ನು ಸಮರ್ಪಕವಾಗಿ ರೂಪಿಸಿಕೊಂಡಿದ್ದಾರೆ. ಅವರ ಎಲ್ಲ ಬೆಳೆಗಳನ್ನು ವ್ಯಾಪಾರಿಗಳು ತೋಟದ ಬಳಿಯೇ ಬಂದು ಖರೀದಿಸಿಕೊಂಡು ಹೋಗುತ್ತಾರೆ. ಕೆಲವು ಬೆಳೆಗಳು ವರ್ಷಕ್ಕೆ 3-4 ಬಾರಿ, ಕೆಲವು 2 ಬಾರಿ ಕೆಲವು ಒಂದು ಬಾರಿ ಕೊಯ್ಲಿಗೆ ಬರುತ್ತವೆ. ಹೀಗಾಗಿ ಸದಾ ಒಂದಲ್ಲ ಒಂದು ಬೆಳೆಗಳ ಕೊಯ್ಲು ಇದ್ದೇ ಇರುತ್ತದೆ.

ಉಪಕಸುಬಾಗಿ ಕುರಿ, ಕೋಳಿ ಸಾಕಾಣಿಕೆ, ನಾಟಿಹಸು ಸಾಕಾಣಿಕೆ ಕೈಗೊಂಡಿದ್ದಾರೆ. ಅವರ ಪತ್ನಿಯೂ ಕೃಷಿಗೆ ಸಾಥ್ ನೀಡಿದ್ದಾರೆ. ಹೀಗೆ ವ್ಯವಸ್ಥಿತ ಮತ್ತು ಸಮಗ್ರ ಕೃಷಿಯನ್ನು ಕೈಗೊಂಡರೆ ರೈತರು ಕೃಷಿಯಿಂದ ಉತ್ತಮ ಬದುಕನ್ನು ರೂಪಿಸಿಕೊಳ್ಳಬಹುದು ಎಂದು ಬೈರೇಶ್ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.