ADVERTISEMENT

ಚಿಂತಾಮಣಿ | ಶಾಲಾ ವಾಹನ ಅಪಘಾತ: 7 ವಿದ್ಯಾರ್ಥಿಗಳಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 18 ಜೂನ್ 2024, 15:31 IST
Last Updated 18 ಜೂನ್ 2024, 15:31 IST
ಚಿಂತಾಮಣಿ ತಾಲ್ಲೂಕಿನ ಏನಿಗದಲೆ ಬಳಿ ಅಪಘಾತಕ್ಕೀಡಾಗಿರುವ ಶಾಲಾ ವಾಹನ
ಚಿಂತಾಮಣಿ ತಾಲ್ಲೂಕಿನ ಏನಿಗದಲೆ ಬಳಿ ಅಪಘಾತಕ್ಕೀಡಾಗಿರುವ ಶಾಲಾ ವಾಹನ   

ಚಿಂತಾಮಣಿ: ತಾಲ್ಲೂಕಿನ ಚಿಲಕಲನೇರ್ಪು ಹೋಬಳಿಯ ಏನಿಗದಲೆ ಬಳಿಯ ಮಿಂಚಲಹಳ್ಳಿ ಬಳಿಯಲ್ಲಿ ಮಂಗಳವಾರ ಖಾಸಗಿ ಶಾಲಾ ವಾಹನ ರಸ್ತೆ ಬದಿಯ ಗುಂಡಿಗೆ ಬಿದ್ದು 7 ಮಂದಿ ವಿದ್ಯಾರ್ಥಿಗಳು ಹಾಗೂ ಚಾಲಕ ಗಾಯಗೊಂಡಿದ್ದಾರೆ.

ವಿದ್ಯಾರ್ಥಿಗಳಾದ ತ್ರಿಶಾ, ಯಶಸ್ವಿನಿ, ಮಧುಶ್ರೀ, ಜ್ಞಾನವಿ, ರತನ್, ಗಗನ್, ಸಮತಾರೆಡ್ಡಿ ಹಾಗೂ ಚಾಲಕ ಮಂಜುನಾಥರೆಡ್ಡಿ ಗಾಯಾಳುಗಳಾಗಿದ್ದಾರೆ. ನಗರದ ಸಾರ್ವಜನಿಕ ಆಸ್ಪತ್ರೆ, ಇಂದಿರಾ ಆಸ್ಪತ್ರೆ, ಡೆಕ್ಕನ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಿಲಕಲನೇರ್ಪು ಗ್ರಾಮದಲ್ಲಿರುವ ಅಕ್ಷರ ದಿ.ಸ್ಕೂಲ್ ಶಾಲೆಯ ಸಿಬ್ಬಂದಿ ವಾಹನದಲ್ಲಿ ಮಂಗಳವಾರ ಸಂಜೆ ಶಾಲೆ ಮುಗಿದ ನಂತರ ವಿದ್ಯಾರ್ಥಿಗಳನ್ನು ಚಿಂತಾಮಣಿ ಕಡೆಗೆ ಬರುವ ರಸ್ತೆಯ ಗ್ರಾಮಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಏನಿಗದಲೆಯ ನವೋದಯ ವಿದ್ಯಾಲಯದ ರಸ್ತೆಯಲ್ಲಿ ಚಾಲಕನ ಅತಿ ವೇಗ ಮತ್ತು ಅಜಾಗರೂಕತೆಯ ಚಾಲನೆಯಿಂದ ವಾಹನ ಚಾಲಕನ ಹಿಡಿತ ತಪ್ಪಿ ರಸ್ತೆ ಬದಿಯ ಗುಂಡಿಗೆ ಬಿದ್ದಿದೆ.

ADVERTISEMENT

ಏನಿಗದಲೆಯ ಗ್ರಾಮಸ್ಥರು ಕೂಡಲೇ ಅಂಬ್ಯುಲೆನ್ಸ್‌ನಲ್ಲಿ ಗಾಯಾಳುಗಳನ್ನು ನಗರದ ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ. ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣವಾಗಿದೆ. ಮೊಬೈಲ್‌ನಲ್ಲಿ ಮಾತನಾಡಿಕೊಂಡು ಚಾಲನೆ ಮಾಡುತ್ತಿದ್ದರು ಎಂದು ಪೋಷಕರು ಕೆಲವು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ.

ಎದುರುಗಡೆಯಿಂದ ವೇಗವಾಗಿ ಬಂದ ಟೆಂಪೋ ತಪ್ಪಿಸಲು ಹೋಗಿ ವಾಹನ ಹಿಡಿತ ತಪ್ಪಿತು. ಹೀಗಾಗಿ ಅಪಘಾತವಾಯಿತು ಎಂದು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಚಾಲಕ ಮಂಜುನಾಥರೆಡ್ಡಿ ಹೇಳಿದರು.

ಕೆಂಚಾರ್ಲಹಳ್ಳಿ ಠಾಣೆಯ ಇನ್‌ಸ್ಪೆಕ್ಟರ್ ವೆಂಕಟರವಣಪ್ಪ, ಸಬ್ ಇನ್‌ಸ್ಪೆಕ್ಟರ್ ಶಿವಕುಮಾರ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.