ಚಿಂತಾಮಣಿ: ಇಲ್ಲಿನ ನೂತನ ಸರ್ಕಾರಿ ಪ್ರೌಢಶಾಲೆಯಲ್ಲಿ ಖಾಸಗಿ ಶಾಲೆಗಳಿಗೂ ಪೈಪೋಟಿ ನೀಡುವಂತಹ ಆಧುನಿಕ ಪದ್ಧತಿಯಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಕಂಪ್ಯೂಟರ್ ಲ್ಯಾಬ್, ಸ್ಮಾರ್ಟ್‌ಕ್ಲಾಸ್ ಸೇರಿದಂತೆ ಹೊಸ ಮಾದರಿಯ ಕಲಿಕಾ ಮಾದರಿ ಮೂಲಕ ಮಕ್ಕಳನ್ನು ಕ್ರಿಯಾಶೀಲರನ್ನಾಗಿ ಮಾಡಲಾಗುತ್ತಿದೆ.
ಶಿಕ್ಷಕರು ಬದ್ಧತೆ ಮತ್ತು ಇಚ್ಛಾಶಕ್ತಿಯಿಂದ ಕೆಲಸ ಮಾಡಿದರೆ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಉತ್ತಮವಾಗಿ ನಿರ್ವಹಣೆ ಮಾಡಬಹುದು ಎಂಬುದಕ್ಕೆ ಈ ಪ್ರೌಢಶಾಲೆ ಉದಾಹರಣೆ ಆಗಿದೆ.
ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರ ಪ್ರಯತ್ನದಿಂದ ಸರ್ಕಾರದ ನೆರವು ಇಲ್ಲದೆ ಎಂಎನ್‌ಸಿ ಕಂಪನಿಗಳ ಸಿಎಸ್‌ಆರ್ ನೆರವಿನಿಂದ ಕೋಟ್ಯಂತರ ರೂಪಾಯಿ ವೆಚ್ಚದ ಸೌಲಭ್ಯ ಒದಗಿಸಲಾಗಿದ್ದು, ಹಲವು ಕಾಮಗಾರಿ ಪ್ರಗತಿಯಲ್ಲಿವೆ.
ಶಾಲೆಯಲ್ಲಿ ಎರಡು ಕಂಪ್ಯೂಟರ್ ಕೊಠಡಿಗಳಿದ್ದು, 25 ಕಂಪ್ಯೂಟರ್‌ಗಳಿವೆ. ಸ್ಮಾರ್ಟ್‌ಕ್ಲಾಸ್ ನಡೆಸಲು ಅನುಕೂಲವಾಗಿದೆ. ಯುಟ್ಯೂಬ್, ಆನ್‌ಲೈನ್ ಕಲಿಕಾ ಸಾಮಗ್ರಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಗೂಗಲ್‌ನಿಂದ ಗಣಿತ, ವಿಜ್ಞಾನ, ಭಾಷೆಗಳು, ಹೀಗೆ ಯಾವ ಪಠ್ಯವನ್ನು ಬೇಕಾದರೂ ವಿದ್ಯಾರ್ಥಿಗಳು ಸ್ವತಃ ಕಲಿಯಬಹುದು ಎನ್ನುತ್ತಾರೆ ಮುಖ್ಯ ಶಿಕ್ಷಕ ಮಂಜುನಾಥ್.
ಕಂಪ್ಯೂಟರ್ ಶಿಕ್ಷಕರಿಗೆ ಬೆಂಗಳೂರಿನ ‘ಟ್ರಿನಿಟಿ ಪೌಂಡೇಷನ್’ ಎಂಎನ್‌ಸಿ ಕಂಪನಿಯು ವೇತನ ಕಂಪನಿಯೇ ಭರಿಸುತ್ತಿದೆ. ಬೆಂಗಳೂರಿನ ‘ವಾಬ್-ಟೆಕ್’ ಕಂಪನಿಯು ₹2.4 ಲಕ್ಷ ವೆಚ್ಚದಲ್ಲಿ ಸ್ಮಾರ್ಟ್‌ಕ್ಲಾಸ್ ಬೋರ್ಡ್ ನೀಡಿದ್ದು, ಸ್ಮಾರ್ಟ್ ತರಗತಿ ನಡೆಸಲು ಅನುಕೂಲ ಆಗಿದೆ.
ಜಿಲ್ಲೆಯ ಯಾವುದೇ ಸರ್ಕಾರಿ ಪ್ರೌಢಶಾಲೆ ಶಾಲೆ ಹಾಗೂ ಖಾಸಗಿ ಪ್ರೌಢಶಾಲೆಯಲ್ಲೂ ದೊರೆಯದಂತಹ ಆಧುನಿಕ ತಂತ್ರಜ್ಞಾನ ಸೌಲಭ್ಯ ಈ ಶಾಲೆಯಲ್ಲಿ ದೊರೆಯುತ್ತಿದೆ.
ಪ್ರೌಢಶಾಲೆಯಲ್ಲಿ 8 ರಿಂದ 10 ನೇ ತರಗತಿಯ 550 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. 17 ಜನ ಶಿಕ್ಷಕರಿದ್ದಾರೆ. ಶಾಲೆಯಲ್ಲಿ ಇಂಟರ್ ಆಕ್ಟೀವ್ ಪ್ಯಾನಲ್ ವ್ಯವಸ್ಥೆ ಇರುವ ಕೊಠಡಿಗಳಿವೆ. ಗೂಗಲ್ ಮತ್ತು ಯು ಟ್ಯೂಬ್ ಗಳಲ್ಲಿ 8,9,10 ನೇ ತರಗತಿಯ ಪಠ್ಯವನ್ನು ಮತ್ತು ನೋಟ್ಸ್ ಆಪ್ ಲೋಡ್ ಮಾಡಲಾಗಿದ್ದು, ವಿದ್ಯಾರ್ಥಿಗಳು ಅದರಲ್ಲೇ ಓದಬಹುದು, ಬರೆದುಕೊಳ್ಳಬಹುದು.
ಅಮೆರಿಕಾ ಮೂಲದ ‘ಒಸಾಟ್’ ಕಂಪನಿಯು ₹1.5 ಕೋಟಿ ವೆಚ್ಚದಲ್ಲಿ ಆರು ಸುಸಜ್ಜಿತ ತರಗತಿ ಕೊಠಡಿಗಳು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಿಕೊಟ್ಟಿದ್ದಾರೆ. ಕಂಪನಿಗಳು ಮತ್ತು ದಾನಿಗಳು ನೀಡಿರುವ ಸೌಲಭ್ಯಗಳನ್ನು ಶಿಕ್ಷಕರು ಸದುಪಯೋಗ ಪಡಿಸಿಕೊಂಡು ಮಕ್ಕಳಿಗೆ ನೂತನ ತಂತ್ರಜ್ಞಾನದ ಮೂಲಕ ಬೋಧನೆ ಮಾಡುತ್ತಿದ್ದಾರೆ.
ಕಠಿಣ ವಿಷಯಗಳಾದ ಗಣಿತ, ವಿಜ್ಞಾನ, ಇಂಗಗ್ಲಿಷ್‌ನಲ್ಲಿ ವಿಭಿನ್ನ ಪ್ರಯೋಗಗಳ ಮೂಲಕ ಫಲಿತಾಂಶ ಹೆಚ್ಚಳಕ್ಕೆ ಹಲವು ಪ್ರಯೋಗ ಮಾಡುತ್ತಿದ್ದಾರೆ. ಪ್ರತಿನಿತ್ಯ ಶಾಲೆ ಆರಂಭಕ್ಕೆ ಒಂದು ಗಂಟೆ ಮುಂಚೆ ಮತ್ತು ಶಾಲಾ ಸಮಯ ಮುಕ್ತಾಯದ ನಂತರ ಒಂದು ಗಂಟೆ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಲಾಗುತ್ತಿದೆ.
ಮಹಾರಾಷ್ಟ್ರದ ಚೈಲ್ಡ್ ಹೆಲ್ಪ್ ಪೌಂಡೇಷನ್ ಶಾಲೆಯ ಹಳೆಯ ಕಟ್ಟಡಕ್ಕೆ ಹೊಸ ಸ್ಪರ್ಶ ನೀಡುತ್ತಿದೆ. ನೆಲಕ್ಕೆ ಟೈಲ್ಸ್, ವಿದ್ಯುತ್ ಸಂಪರ್ಕ, ಪ್ಯಾನ್ ಗಳ ಅಳವಡಿಕೆ, ಗೋಡೆಗಳಿಗೆ ಪ್ಲಾಸ್ಟಿಂಗ್ ಸೇರಿದಂತೆ ಎಲ್ಲ ಹಳೆಯ ಕೊಠಡಿಗಳನ್ನು ಸಂಪೂರ್ಣವಾಗಿ ನವೀಕರಣಗೊಳಿಸಲಾಗುತ್ತಿದೆ.
ಮಕ್ಕಳ ದತ್ತು
ಪ್ರತಿ ಶಿಕ್ಷಕರೂ ಸಂಖ್ಯೆಗೆ ಅನುಗುಣವಾಗಿ 10-11 ಮಕ್ಕಳನ್ನು ದತ್ತು ತೆಗೆದುಕೊಂಡು ವಿಶೇಷ ಕಾಳಜಿ ವಹಿಸುತ್ತಿದ್ದಾರೆ. ಆ ಮಕ್ಕಳ ಸಂಪೂರ್ಣ ಜವಾಬ್ದಾರಿ ಆ ಶಿಕ್ಷಕರು ನೋಡಿಕೊಳ್ಳುತ್ತಾರೆ. ಯಾವ ವಿಷಯದಲ್ಲಿ ಹಿಂದುಳಿದಿದ್ದಾರೆ. ಮನೆಗಳಲ್ಲಿನ ಕಲಿಕಾ ವಾತಾವರಣ, ಪೋಷಕರ ಆಸಕ್ತಿ ಎಲ್ಲವನ್ನು ಗಮನಿಸಿ ಸಲಹೆ ಸೂಚನೆ ನೀಡುತ್ತಾರೆ. ಹಿಂದುಳಿದ ಮಕ್ಕಳಿಗೆ ಹೆಚ್ಚಿನ ಬೋಧನೆ ಮಾಡುತ್ತಾರೆ.
ಶಾಲೆಗೆ ಬೇಕಾದ ವಿದ್ಯುತ್ ಉತ್ಪಾದನೆ
ಬೆಂಗಳೂರಿನ ‘ಟ್ರಿನಿಟಿ ಪೌಂಡೇಷನ್’ ಎಂಎನ್‌ಸಿ ಕಂಪನಿಯು ₹40 ಲಕ್ಷ ವೆಚ್ಚದಲ್ಲಿ ಶಾಲೆಗೆ ಸೋಲಾರ್ ಪ್ಯಾನಲ್ ಅಳವಡಿಸಿದೆ. ಇದರಿಂದ ಎರಡು ಕಂಪ್ಯೂಟರ್ ಕೊಠಡಿ, ನಾಲ್ಕು ಟಿ.ವಿ ಸೇರಿದಂತೆ ಇಡೀ ಶಾಲೆಗೆ ವಿದ್ಯುತ್ ಪೂರೈಕೆ ಆಗುತ್ತಿದೆ. ವಿದ್ಯುತ್ ನಿಲುಗಡೆ ಸಮಸ್ಯೆ ಇಲ್ಲದೆ ಆಧುನಿಕ ಸೌಲಭ್ಯಗಳ ಬಳಕೆ ಆಗುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.