ಚಿಂತಾಮಣಿ: ತಾಲ್ಲೂಕಿನ ಕೈವಾರ ಹೋಬಳಿ ಪೆರಮಾಚನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂದನಹಳ್ಳಿ ಸಮೀಪದ ತಪತೇಶ್ವರ ಬೆಟ್ಟದಲ್ಲಿನ ಗುಹೆಯಲ್ಲಿರುವ ಐತಿಹಾಸಿಕವಾದ ಎರಡು ಶಿವಲಿಂಗಗಳನ್ನು ಕಿಡಿಗೇಡಿಗಳು ಕದ್ದು ಪರಾರಿಯಾದ ವಿಚಾರ ಸೋಮವಾರ ಗೊತ್ತಾಗಿದೆ. ಕೈವಾರ ಹೊರಠಾಣೆಯ ಪೊಲೀಸರು ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಕಾರ್ತಿಕ ಸೋಮವಾರದ ಪ್ರಯುಕ್ತ ಪ್ರತಿ ಸೋಮವಾರ ಶಿವಲಿಂಗಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಬೆಟ್ಟದ ಮೇಲಿನ ದುರ್ಗಮ ಹಾದಿಯ ಗುಹೆಯಲ್ಲಿರುವ ಶಿವಲಿಂಗಗಳಿಗೆ ಕಳೆದ ಸೋಮವಾರ ಅರ್ಚಕರು ಪೂಜೆ ಸಲ್ಲಿಸಿದ್ದರು. ಮೂರನೇ ಕಾರ್ತಿಕ ಸೋಮವಾರ ಪೂಜೆ ಸಲ್ಲಿಸಲು ಬೆಟ್ಟಕ್ಕೆ ತೆರಳಿದಾಗ ಶಿವಲಿಂಗಗಳು ಕಳ್ಳತನವಾಗಿರುವುದು ಗೊತ್ತಾಗಿದೆ.
ಬೆಟ್ಟದ ಗುಹೆಯಲ್ಲಿರುವ ಶಿವಲಿಂಗ ಸ್ಥಳಕ್ಕೆ ತಲುಪಲು ಯಾವುದೇ ಮೆಟ್ಟಿಲುಗಳಿಲ್ಲ. ಶಿವಲಿಂಗ ಬಳಿಗೆ ತೆರಳಲು ಕಡಿದಾದ ಇಳಿಜಾರು ದಾರಿಯಲ್ಲಿ ಸ್ವಲ್ಪ ದೂರ ಭದ್ರತೆಗಾಗಿ ಹಾಕಲಾದ ಸರಪಳಿ ಹಿಡಿದು ಹೋಗಬೇಕು. ಇಂಥ ದುರ್ಗಮ ಸ್ಥಳದಲ್ಲಿ ಶಿವಲಿಂಗಗಳನ್ನು ಕಿತ್ತು ತೆಗೆದುಕೊಂಡು ಹೋಗಿರುವುದು ಘಾಸಿಯುಂಟು ಮಾಡಿದೆ ಎಂದು ಭಕ್ತರು ತಿಳಿಸಿದ್ದಾರೆ.
1990ರ ಜನವರಿಯಲ್ಲಿ ಒಮ್ಮೆ ಶಿವಲಿಂಗಗಳನ್ನು ವಿರೂಪಗೊಳಿಸಲಾಗಿತ್ತು. ಅರ್ಚಕ ಶ್ರೀನಿವಾಸ್ ಸಾರ್ವಜನಿಕರ ಸಹಕಾರದಿಂದ ಮರು ಪ್ರತಿಷ್ಟಾಪನೆ ಮಾಡಿದ್ದರು. ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.