ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರದಲ್ಲಿ ನಿತ್ಯ ಉತ್ಪತ್ತಿ ಆಗುತ್ತಿರುವ ಹಸಿ ಕಸ ಹಳ್ಳಿಗಳ ರೈತರ ಜಮೀನು ಸೇರುತ್ತಿದೆ. ಇಲ್ಲಿ ಗೊಬ್ಬರವಾಗಿ ಪರಿವರ್ತನೆ ಆಗುತ್ತಿದೆ.
ಚಿಕ್ಕಬಳ್ಳಾಪುರ ನಗರಸಭೆಯು ಭಾರತೀಯ ಮಾನವ ವಸಾಹತುಗಳ ಸಂಸ್ಥೆ (ಐಐಎಚ್‌ಎಸ್) ಮತ್ತು ಗೋದ್ರೇಜ್ ಪ್ರಾಪರ್ಟಿಸ್ ಸಂಸ್ಥೆ ಸಹಯೋಗದಲ್ಲಿ ‘ರೈತರ ಸಹಭಾಗಿತ್ವದಲ್ಲಿ ಘನತ್ಯಾಜ್ಯ ನಿರ್ವಹಣೆ’ ಎಂಬ ವಿನೂತನ ಯೋಜನೆ ಜಾರಿಗೊಳಿಸಿದೆ.
ನಗರದ ಹಸಿ ಕಸವನ್ನು ರೈತರ ಜಮೀನುಗಳಲ್ಲಿ ಸಾವಯವ ಗೊಬ್ಬರವಾಗಿ ಪರಿವರ್ತಿಸುವುದು ಯೋಜನೆಯ ಗುರಿ. ಈಗಾಗಲೇ ಅಜ್ಜವಾರ, ಅಣಕನೂರು, ಅಗಲಗುರ್ಕಿ ಸೇರಿದಂತೆ ಚಿಕ್ಕಬಳ್ಳಾಪುರ ನಗರದಿಂದ 8 ಕಿ.ಮೀ ವ್ಯಾಪ್ತಿಯಲ್ಲಿನ ಗ್ರಾಮಗಳ 225 ರೈತರು ಹಸಿ ಕಸವನ್ನು ಗೊಬ್ಬರವನ್ನಾಗಿಸುತ್ತಿದ್ದಾರೆ. ನಿತ್ಯವೂ 6ರಿಂದ 7 ಟನ್ ಹಸಿಕಸ ಜಮೀನುಗಳಿಗೆ ಹೋಗುತ್ತಿದೆ.
ಚಿಕ್ಕಬಳ್ಳಾಪುರ ನಗರವು ಸುಮಾರು 72,000 ಜನಸಂಖ್ಯೆ ಹೊಂದಿದೆ. ನಿತ್ಯ 26ರಿಂದ 28 ಟನ್ ಘನ ತ್ಯಾಜ್ಯ ಉತ್ಪಾದನೆ ಆಗುತ್ತದೆ. ಅದರಲ್ಲಿ ಶೇ 60ರಷ್ಟು ಹಸಿ ಮತ್ತು ಶೇ 40 ಒಣ ಕಸವಾಗಿದೆ.
ತ್ಯಾಜ್ಯ ನಿರ್ವಹಣೆಯು ಸಮರ್ಪಕವಾಗಿ ಆಗಬೇಕು ಮತ್ತು ರೈತರ ಜಮೀನುಗಳಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆಯಾಗಿ ಸಾವಯವ ಗೊಬ್ಬರ ಬಳಕೆ ಹೆಚ್ಚಬೇಕು ಎನ್ನುವುದು ಯೋಜನೆಯ ಉದ್ದೇಶವಾಗಿದೆ. ಆದ್ದರಿಂದ ಈ ಎರಡೂ ವಿಚಾರಗಳನ್ನು ಸಮ್ಮಿಳಿತವಾಗುವಂತೆ ಯೋಜನೆ ರೂಪಿಸಲಾಗಿದೆ.
ಐಐಎಚ್‌ಎಸ್ ಸಂಸ್ಥೆಯು ರೈತರ ಜಮೀನುಗಳಲ್ಲಿ 20 ಚದುರ ಮೀಟರ್ ಅಳತೆಯ ಗುಂಡಿ ನಿರ್ಮಿಸುತ್ತದೆ. ಈ ಗುಂಡಿಗೆ ಸುಮಾರು 20 ಟನ್ ಹಸಿ ತ್ಯಾಜ್ಯ ಸುರಿಯಬಹುದು. ರೈತರು ಜಾನುವಾರುಗಳನ್ನು ಸಾಕುತ್ತಿದ್ದರೆ ಇವುಗಳ ಸಗಣಿ, ಗಂಜಲವೂ ಸೇರಿಸಿ ಕೊಳೆತು ಗೊಬ್ಬರವಾಗುವಂತೆ ನೋಡಿಕೊಳ್ಳಲಾಗುತ್ತದೆ.
ತಿಂಗಳಿಗೆ ಒಮ್ಮೆ ಗುಂಡಿಯಲ್ಲಿನ ತ್ಯಾಜ್ಯ ಮುಗುಚುವ ಪ್ರಕ್ರಿಯೆಯನ್ನು ಐಐಎಚ್‌ಎಸ್ ಸಂಸ್ಥೆಯೇ ಮಾಡುತ್ತದೆ. ಒಂದು ವೇಳೆ ರೈತರ ಬಳಿ ರಾಸುಗಳು ಇಲ್ಲದಿದ್ದರೆ ಸಂಸ್ಥೆಯೇ ರೈತರಿಗೆ ‘ಬಯೊ ಕಚ್ಚರ್’ ನೀಡುತ್ತದೆ. ಇದನ್ನು ಗೊಬ್ಬರವಾಗಿಸಲು ಹಸಿ ತ್ಯಾಜ್ಯಕ್ಕೆ ಮಿಶ್ರಣ ಮಾಡಲಾಗುತ್ತದೆ.
ಆರು ತಿಂಗಳ ಹಿಂದೆ ನಗರದಲ್ಲಿ ಈ ಯೋಜನೆ ಜಾರಿಯಾಗಿದೆ. ಆರಂಭದಲ್ಲಿ ನಾಲ್ಕು ಟನ್ ಹಸಿ ಕಸವನ್ನು ರೈತರಿಗೆ ನೀಡಲಾಗುತ್ತಿತ್ತು. ಮೂಲದಲ್ಲಿಯೆ ಕಸ ವಿಂಗಡಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ನಗರದಾದ್ಯಂತ ಕಾರ್ಯಕ್ರಮ ನಡೆಸಲಾಯಿತು. ರೋಡ್ ಶೋ, ಬೀದಿ ನಾಟಕಗಳು, ಶಾಲಾ-ಕಾಲೇಜುಗಳಲ್ಲಿ ಜಾಗೃತಿ, ತ್ಯಾಜ್ಯ ಸಂಗ್ರಹಣೆ ವಾಹನಗಳ ಮೂಲಕ ಜಾಗೃತಿ, ಗೋಡೆ ಬರಹಗಳು, ಸ್ಟಿಕ್ಕರ್‌ಗಳು ಮತ್ತು ಬ್ಯಾನರ್‌ಗಳ ಅಳವಡಿಕೆ ಸೇರಿದಂತೆ ವಿವಿಧ ರೀತಿಯಲ್ಲಿ ಜಾಗೃತಿ ಮೂಡಿಸಲಾಯಿತು. ಈ ಪರಿಣಾಮ ಈಗ ಹಸಿ ಕಸ ಸಂಗ್ರಹ 7 ಟನ್‌ಗೆ ಹೆಚ್ಚಿದೆ. ಒಂದು ದಿನದ ಹಸಿ ಕಸವನ್ನು ಒಬ್ಬ ರೈತರಿಗೆ ನೀಡಲಾಗುತ್ತಿದೆ.
‘ರೈತರಿಂದ ಸ್ಪಂದನೆ ಉತ್ತಮವಾಗಿದೆ. ನಗರಸಭೆಯ ವಾಹನಗಳು ಸುಗಮವಾಗಿ ಹೋಗಿ ಬರಲು ಸಾಧ್ಯವಿರುವ ಜಮೀನುಗಳಿಗೆ ಮಾತ್ರ ಹಸಿ ತ್ಯಾಜ್ಯ ಪೂರೈಸಲಾಗುತ್ತಿದೆ. ಕಚ್ಚಾರಸ್ತೆ ಮತ್ತು ವಾಹನಗಳ ಸಂಚಾರಕ್ಕೆ ಅನನುಕೂಲ ಇರದ ಕಡೆಗೆ ಪೂರೈಸುತ್ತಿಲ್ಲ’ ಎಂದು ಐಐಎಚ್‌ಎಸ್ ಸಂಸ್ಥೆಯ ಯೋಜನಾ ವ್ಯವಸ್ಥಾಪಕ ಕಿರಣ್ ಡಿ.ಎ. ತಿಳಿಸಿದರು.
ಹಸಿತ್ಯಾಜ್ಯವನ್ನು ನಮ್ಮ ಜಮೀನಿಗೆ ಪೂರೈಸಿ ಎನ್ನುವ ರೈತರು ಚಿಕ್ಕಬಳ್ಳಾಪುರ ನಗರಸಭೆಯ ಪರಿಸರ ವಿಭಾಗ ಅಥವಾ ಐಐಎಚ್‌ಎಸ್ ಸಂಸ್ಥೆಯ ಯೋಜನಾ ವ್ಯವಸ್ಥಾಪಕ ಕಿರಣ್ ಡಿ.ಎ. (99641 75380) ಅವರನ್ನು ಸಂಪರ್ಕಿಸಬಹುದು.
‘ಪತ್ಯೇಕಿಸಿ ನೀಡಿದರೆ ಮತ್ತಷ್ಟು ಕಸ’
ನಗರದಲ್ಲಿ ನಿತ್ಯ ಸುಮಾರು 15 ಟನ್ ಹಸಿ ಕಸವು ಉತ್ಪಾದನೆ ಆಗುತ್ತದೆ. ಆದರೆ ಬಹಳಷ್ಟು ಮಂದಿ ಇಂದಿಗೂ ಹಸಿ ಮತ್ತು ಒಣ ಕಸ ಪ್ರತ್ಯೇಕಿಸಿ ನೀಡುತ್ತಿಲ್ಲ. ಕೆಲವರು ನಗರಸಭೆ ಗುರುತಿಸಿರುವ ಬ್ಲಾಕ್ ಸ್ಪಾಟ್ ಸೇರಿದಂತೆ ರಸ್ತೆ ಬದಿ ಕಸ ಎಸೆಯುತ್ತಿದ್ದಾರೆ ಎಂದು ನಗರಸಭೆ ಪರಿಸರ ಎಂಜಿನಿಯರ್ ಪಿ.ಉಮಾಶಂಕರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಸಮರ್ಪಕವಾಗಿ ಕಸ ವಿಂಗಡಿಸಿ ನೀಡುತ್ತಿಲ್ಲ. ಒಂದು ವೇಳೆ ಎಲ್ಲರೂ ಕಸವನ್ನು ಪ್ರತ್ಯೇಕಿಸಿ ನೀಡಿದರೆ ರೈತರಿಗೆ ಮತ್ತಷ್ಟು ಹಸಿ ತ್ಯಾಜ್ಯ ನೀಡಬಹುದು. ಗೊಬ್ಬರಕ್ಕಾಗಿ ಹಸಿ ತ್ಯಾಜ್ಯ ನೀಡುವಾಗ ಅದರಲ್ಲಿ ಪ್ಲಾಸ್ಟಿಕ್ ಸೇರಿದಂತೆ ಯಾವುದೇ ಹಾನಿಕಾರಕ ತ್ಯಾಜ್ಯ ಇರಬಾರದು ಎಂದರು.
‘ಮತ್ತಷ್ಟು ತ್ಯಾಜ್ಯಕ್ಕೆ ಬೇಡಿಕೆ’
ನಗರಸಭೆಯ ತ್ಯಾಜ್ಯ ಸಂಸ್ಕರಣಾ ಘಟಕವು ಚಿಕ್ಕಬಳ್ಳಾಪುದಿಂದ 8ರಿಂದ 9 ಕಿ.ಮೀ ದೂರದ ಪುಟ್ಟತಿಮ್ಮನಹಳ್ಳಿಯಲ್ಲಿ ಇದೆ. ಇದೇ ಅಂತರದ ಹಳ್ಳಿಗಳ ರೈತರನ್ನು ಗುರುತಿಸಿ ಹಸಿ ತ್ಯಾಜ್ಯ ನೀಡುತ್ತಿದ್ದೇವೆ. ನಮಗೆ ಇಷ್ಟು ತ್ಯಾಜ್ಯ ಸಾಕಾಗುವುದಿಲ್ಲ ಮತ್ತಷ್ಟು ಕೊಡಿ ಎಂದು ರೈತರಿಂದ ಬೇಡಿಕೆ ಇದೆ ಎಂದು ಐಐಎಚ್‌ಎಸ್ ಸಂಸ್ಥೆಯ ಯೋಜನಾ ವ್ಯವಸ್ಥಾಪಕ ಕಿರಣ್ ಡಿ.ಎ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.