ಚಿಂತಾಮಣಿ: ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಮತ್ತು ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಘಟಕದ ಪದಾಧಿಕಾರಿಗಳು ಬುಧವಾರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ, ಇಲಾಖೆಯ ವ್ಯಾಪ್ತಿಯ ವಿದ್ಯಾರ್ಥಿ ನಿಲಯಗಳಿಗೆ ಸೌಲಭ್ಯಗಳನ್ನು ಒದಗಿಸದೆ ದಲಿತರಿಗೆ ವಂಚನೆ ಮಾಡುತ್ತಿದ್ದಾರೆ. ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಲಂಚದ ಆರೋಪಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಹಿರಿಯ ಅಧಿಕಾರಿಗಳಿಗೆ ಮನವಿ
ಸಲ್ಲಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವಿಜಯನರಸಿಂಹ ಮಾತನಾಡಿ, ಸಹಾಯಕ ನಿರ್ದೇಶಕಿ ತಾಲ್ಲೂಕಿಗೆ ಬಂದಾಗಿನಿಂದಲೂ ಸರ್ವಾಧಿಕಾರಿ ಧೋರಣೆ ತಳೆದಿದ್ದಾರೆ. ಸಮಯಕ್ಕೆ ಸರಿಯಾಗಿ ಕಚೇರಿಗೆ ಬರುವುದಿಲ್ಲ. ಸರ್ಕಾರದಿಂದ ದೊರೆಯುವ ವಿವಿಧ ಸೌಲಭ್ಯಗಳನ್ನು ಪಡೆಯಲು ಕಚೇರಿಗೆ ಹೋದ ದಲಿತರು, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ಕೈಗೆ ಸಿಗುವುದಿಲ್ಲ ಎಂದು ಆರೋಪಿಸಿದರು.
ಇಲಾಖೆ ಅನುದಾನಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ದಲಿತರ ಅಭಿವೃದ್ಧಿಗಾಗಿ ಸ್ಥಾಪಿಸಿರುವ ಸಮಾಜ ಕಲ್ಯಾಣ ಇಲಾಖೆಯು ದಲಿತರ ಅಭಿವೃದ್ಧಿಗೆ ಬದಲಾಗಿ ದಮನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ವಿದ್ಯಾರ್ಥಿ ವೇತನ, ವಿದ್ಯಾರ್ಥಿ ನಿಲಯಗಳಿಗೆ ಸರಬರಾಜು ಮಾಡುವ ಆಹಾರ ಪದಾರ್ಥಗಳು, ತರಕಾರಿ ಪೂರೈಕೆದಾರರಿಗೆ ಹಣ ನೀಡದೆ ಬಿಲ್ಲುಗಳನ್ನು ಮಂಜೂರು ಮಾಡುವುದಿಲ್ಲ. ಇಲಾಖೆಯಲ್ಲಿ ಕೆಲಸ ಮಾಡುವ ದಿನಗೂಲಿ ನೌಕರರ ವೇತನ ಮತ್ತಿತರ ಸೌಲಭ್ಯಗಳನ್ನು ನೀಡಲು ಅನೇಕ ಬಾರಿ ದಲಿತ ಮುಖಂಡರು ಒತ್ತಾಯ ಹಾಕಿದಾಗ ಮಾತ್ರ ಗಮನಹರಿಸುತ್ತಾರೆ ಎಂದು ದೂರಿದರು.
ಸೆಲ್ವಕುಮಾರ್, ಖಜಾಂಚಿ ವೆಂಕಟ ರಮಣಪ್ಪ, ಬಿ.ಕೆ.ಮಂಜುನಾಥ್, ಟಿ.ವಿ.ಶ್ರೀನಿವಾಸ್, ಶಫಿಉಲ್ಲಾಖಾನ್, ಗಣೇಶ್, ಎಸ್.ಇ.ವೆಂಕಟರಾಯಪ್ಪ, ವಿ.ವೆಂಕಟಸ್ವಾಮಿ, ವಿ.ಮುನಿಯಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.