ADVERTISEMENT

ಕಾಂಗ್ರೆಸ್‌, ಜೆಡಿಎಸ್‌ ಕಾರ್ಯಕರ್ತರ ಘರ್ಷಣೆ

ರಸ್ತೆ ಕಾಮಗಾರಿ ಉದ್ಘಾಟನೆ ವಿಚಾರದಲ್ಲಿ ಕಿತ್ತಾಟ, ಕಾಂಗ್ರೆಸ್‌ ಕಾರ್ಯಕರ್ತರ ಚಪ್ಪರಕ್ಕೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 12:04 IST
Last Updated 18 ಜನವರಿ 2021, 12:04 IST
ಬೆಂಕಿಯಲ್ಲಿ ಸುಟ್ಟು ನೆಲ ಕಚ್ಚಿದ ಕಾಂಗ್ರೆಸ್‌ ಕಾರ್ಯಕರ್ತ ನರಸಿಂಹಮೂರ್ತಿ ಅವರ ಮನೆಗೆ ಹೊಂದಿಕೊಂಡಿರುವ ಚಪ್ಪರ
ಬೆಂಕಿಯಲ್ಲಿ ಸುಟ್ಟು ನೆಲ ಕಚ್ಚಿದ ಕಾಂಗ್ರೆಸ್‌ ಕಾರ್ಯಕರ್ತ ನರಸಿಂಹಮೂರ್ತಿ ಅವರ ಮನೆಗೆ ಹೊಂದಿಕೊಂಡಿರುವ ಚಪ್ಪರ   

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಹೋಬಳಿಯ ತಿಮ್ಮಸಂದ್ರ ಪಂಚಾಯಿತಿ ವ್ಯಾಪ್ತಿಯ ಸಡ್ಲವಾರಪಲ್ಲಿ ಗ್ರಾಮದಲ್ಲಿ ರಸ್ತೆ ಕಾಮಗಾರಿ ವಿಚಾರದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯಕರ್ತರ ನಡುವೆ ಗುಂಪು ಘರ್ಷಣೆ ನಡೆದಿದ್ದು, ಕಾಂಗ್ರೆಸ್‌ ಕಾರ್ಯಕರ್ತರೊಬ್ಬರ ಚಪ್ಪರವೊಂದಕ್ಕೆ ಬೆಂಕಿ ಹಚ್ಚಲಾಗಿದೆ.

ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯ ರಾಜಕೀಯ ದ್ವೇಷದಿಂದಾಗಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಸದ್ಯ ದಿಬ್ಬೂರಹಳ್ಳಿ ಪೊಲೀಸ್‌ ಠಾಣೆಯಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಕಾರ್ಯಕರ್ತರು ಪರಸ್ಪರ ಹಲ್ಲೆ ದೂರು ದಾಖಲಿಸಿದ್ದಾರೆ.

ಏನಿದು ಘಟನೆ?

ADVERTISEMENT

ಶಿಡ್ಲಘಟ್ಟ ಕ್ಷೇತ್ರದ ಶಾಸಕ ವಿ.ಮುನಿಯಪ್ಪ ಅವರ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ರಸ್ತೆ ಕಾಮಗಾರಿವೊಂದರ ಉದ್ಘಾಟನೆಗಾಗಿ ಸಡ್ಲವಾರಪಲ್ಲಿಯಲ್ಲಿ ಭಾನುವಾರ ಮಧ್ಯಾಹ್ನ ಕಾಂಗ್ರೆಸ್‌ ಕಾರ್ಯಕರ್ತರು ಮುಂದಾದ ವೇಳೆ ಅದಕ್ಕೆ ಜೆಡಿಎಸ್‌ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು. ಆಗ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಗುಂಪು ಘರ್ಷಣೆ ನಡೆದಿತ್ತು ಎನ್ನಲಾಗಿದೆ.

ಸಂಜೆ ವೇಳೆ ಕಾಂಗ್ರೆಸ್‌ ಕಾರ್ಯಕರ್ತರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿ ರಮೇಶ್‌ ಮತ್ತು ಅವರ ಸಂಗಡಿಗರಾದ ನಾಗಭೂಷಣಾಚಾರಿ ಮನೆಗೆ ತೆರಳಿ ಗಲಾಟೆ ಮಾಡಿ ಹಲ್ಲೆ ಮಾಡಿದ್ದು, ಗಾಯಗೊಂಡ ನಾಗಭೂಷಣಾಚಾರಿ ಅವರನ್ನು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ನಾಗಭೂಷಣಾಚಾರಿ ಅವರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸೋತ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಜಯರಾಮರೆಡ್ಡಿ ಅವರ ಬೆಂಬಲಿಗರಾದ ನರಸಿಂಹಮೂರ್ತಿ ಸೇರಿದಂತೆ 10 ಜನರ ವಿರುದ್ಧ ದಿಬ್ಬೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತಮ್ಮ ಮನೆಗೆ ಹೊಂದಿಕೊಂಡಿದ್ದ ಚಪ್ಪರವನ್ನು ರಾತ್ರಿ ವೇಳೆ ಜೆಡಿಎಸ್‌ ಕಾರ್ಯಕರ್ತರು ಸುಟ್ಟು ಹಾಕಿ, ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನರಸಿಂಹಮೂರ್ತಿ ಅವರು ರಮೇಶ್, ನಾಗಭೂಷಣ್, ಹರೀಶ್‌ ಎಂಬುವರು ಸೇರಿದಂತೆ ಐದು ಜನರ ವಿರುದ್ಧ ಪ್ರತಿ ದೂರು ದಾಖಲಿಸಿದ್ದಾರೆ.

ಸದ್ಯ ಸಡ್ಲವಾರಪಲ್ಲಿಯಲ್ಲಿ ವಾತಾವರಣ ಬಿಗುವಿನಿಂದ ಕೂಡಿದ್ದು, ಈವರೆಗೆ ಪೊಲೀಸರು ಯಾರನ್ನೂ ಬಂಧಿಸಿಲ್ಲ. ಈ ಘಟನೆ ಬಗ್ಗೆ ಪ್ರತಿಕ್ರಿಯೆ ಪಡೆಯಲು ಎಸ್ಪಿ ಜಿ.ಕೆ.ಮಿಥುನ್‌ ಕುಮಾರ್ ಅವರನ್ನು ಸಂಪರ್ಕಿಸಲಾಯಿತು. ಆದರೆ, ಅವರ ಕರೆ ಸ್ವೀಕರಿಸಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.