ADVERTISEMENT

2023ರ ವಿಧಾನಸಭಾ ಚುನಾವಣೆ: ಉಗ್ರಪ್ಪ ಹೆಗಲಿಗೆ ಚಿಕ್ಕಬಳ್ಳಾಪುರ ಜವಾಬ್ದಾರಿ

ಕಾಂಗ್ರೆಸ್‌ನಿಂದ ಜಿಲ್ಲಾ ಉಸ್ತುವಾರಿ ನೇಮಕ

​ಪ್ರಜಾವಾಣಿ ವಾರ್ತೆ
Published 30 ಮೇ 2022, 9:49 IST
Last Updated 30 ಮೇ 2022, 9:49 IST
ವಿ.ಎಸ್‌.ಉಗ್ರಪ್ಪ
ವಿ.ಎಸ್‌.ಉಗ್ರಪ್ಪ   

ಚಿಕ್ಕಬಳ್ಳಾಪುರ: ರಾಜ್ಯ ಕಾಂಗ್ರೆಸ್ 2023ರ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸಿದೆ. ಈ ಭಾಗವಾಗಿ ಕೆಪಿಸಿಸಿ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಮತ್ತು ಮುಖಂಡರನ್ನು ಜಿಲ್ಲಾ ಮತ್ತು ವಿಧಾನಸಭಾವಾರು ಉಸ್ತುವಾರಿಗಳನ್ನಾಗಿ ನೇಮಕ ಮಾಡಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಜವಾಬ್ದಾರಿಯನ್ನು ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ ಅವರಿಗೆ ಒಪ್ಪಿಸಲಾಗಿದೆ. ಮಾಜಿ ಸಂಸದ, ವಿಧಾನ ಪರಿಷತ್ಮಾಜಿ ಸದಸ್ಯ ಹಾಗೂ ಕೆಪಿಸಿಸಿ ವಕ್ತಾರರಾಗಿಯೂ ಉಗ್ರಪ್ಪ ಕೆಲಸ ಮಾಡಿದ್ದಾರೆ. ಪರಿಶಿಷ್ಟ ಪಂಗಡದ ಪ್ರಮುಖ ಮುಖಂಡರಾಗಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡದ ಮತದಾರರು ಗಣನೀಯವಾಗಿ ಇದ್ದಾರೆ. ಗೌರಿಬಿದನೂರು, ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ನಿರ್ಣಾಯಕರು ಎನಿಸಿದ್ದಾರೆ. ಬಾಗೇಪಲ್ಲಿ, ಶಿಡ್ಲಘಟ್ಟ ಮತ್ತು ಚಿಂತಾಮಣಿ ವಿಧಾನಸಭಾ ಕ್ಷೇತ್ರಗಳಲ್ಲಿ ಗಣನೀಯವಾಗಿ ಇದ್ದಾರೆ. ಈ ಎಲ್ಲ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷವು ಉಗ್ರಪ್ಪ ಅವರಿಗೆ ಜವಾಬ್ದಾರಿ ನೀಡಿದೆಯೇ ಎನ್ನುವ ಚರ್ಚೆ ಕಾಂಗ್ರೆಸ್‌ನಲ್ಲಿ ಇದೆ.

ADVERTISEMENT

ಜಿಲ್ಲೆಯಲ್ಲಿ ಗಣನೀಯವಾಗಿರುವಪರಿಶಿಷ್ಟ ಜಾತಿ ಮತ್ತು ಪಂಗಡದ ಮತದಾರರನ್ನು ಸಂಘಟಿಸುವ ದೃಷ್ಟಿಯಿಂದ ಉಗ್ರಪ್ಪ ಆಯ್ಕೆ ಜಿಲ್ಲೆಯ ಮಟ್ಟಿಗೆ ಪ್ರಮುಖವಾಗಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಪಕ್ಷವು ಉಗ್ರಪ್ಪ ಅವರಿಗೆ ಈ ಹಿಂದೆ ಚಿತ್ರದುರ್ಗ ಮತ್ತು ದಾವಣಗೆರೆಯ ಜಿಲ್ಲೆಯ ಉಸ್ತುವಾರಿ ನೀಡಿತ್ತು. ಈಗ ಚಿಕ್ಕಬಳ್ಳಾಪುರದ ಜವಾಬ್ದಾರಿ ನೀಡಿದೆ.

ವಿಧಾನಸಭಾ ಕ್ಷೇತ್ರಗಳಿಗೂ ನೇಮಕ: ವಿಧಾನಸಭಾ ಕ್ಷೇತ್ರಗಳಿಗೂ ಉಸ್ತುವಾರಿ ನೇಮಕ ಮಾಡಲಾಗಿದೆ. ಬಾಗೇಪಲ್ಲಿ ಕ್ಷೇತ್ರಕ್ಕೆ ಗುರ್ರಪ್ಪ ನಾಯ್ದು, ಚಿಂತಾಮಣಿ ಕ್ಷೇತ್ರಕ್ಕೆ ಎನ್.ಸಂಪಂಗಿ, ಚಿಕ್ಕಬಳ್ಳಾಪುರ ಮತ್ತು ಶಿಡ್ಲಘಟ್ಟ ಕ್ಷೇತ್ರಕ್ಕೆ ಎಂ.ಉದಯ ಶಂಕರ್ ಅವರನ್ನು ನೇಮಿಸಲಾಗಿದೆ.

ಸಮಸ್ಯೆಗಳ ಅರಿವಿದೆ...
ರಾಯಲಸೀಮೆಯ ಲಕ್ಷಣಗಳನ್ನು ಹೊಂದಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಸಮಸ್ಯೆಗಳ ಅರಿವು ನನಗೆ ಇದೆ. ಈ ಜಿಲ್ಲೆಯು ಕಾಂಗ್ರೆಸ್‌ನ ಭದ್ರಕೋಟೆ. ಎಲ್ಲ ಮುಖಂಡರು ಮತ್ತು ಕಾರ್ಯಕರ್ತರನ್ನು ಒಟ್ಟಿಗೆ ಕೊಂಡೊಯ್ಯುವೆ ಎಂದು ವಿ.ಎಸ್.ಉಗ್ರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ವೇಗವರ್ಧಕವಾಗಿ ಕೆಲಸ ಮಾಡುವೆ. ಶಿವಶಂಕರರೆಡ್ಡಿ, ಸುಬ್ಬಾರೆಡ್ಡಿ, ವಿ.ಮುನಿಯಪ್ಪ ಶಾಸಕರಾಗಿದ್ದಾರೆ. ನಾವು ನೋಡಿದಂತೆ ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ ಇಲ್ಲ. ಪಕ್ಷವನ್ನು ಮತ್ತಷ್ಟು ಸದೃಢವಾಗಿ ಕಟ್ಟಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.