ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ 1,788 ಗ್ರಾಮಗಳಿವೆ. ಇಷ್ಟೊಂದು ಗ್ರಾಮಗಳಿಗೆ ಇರುವುದು 57 ಪ್ರಾಥಮಿಕ ಹಾಗೂ 2 ಸಮುದಾಯ ಆರೋಗ್ಯ ಕೇಂದ್ರಗಳು ಮಾತ್ರ! ವಿಸ್ತಾರವಾದ ಹಳ್ಳಿಗಳು, ದೊಡ್ಡ ಪ್ರಮಾಣದ ಜನಸಂಖ್ಯೆಯ ಅನಾರೋಗ್ಯ ನಿಭಾಯಿಸುವುದೇ ಆರೋಗ್ಯ ಕೇಂದ್ರಗಳಿಗೆ ಸವಾಲು.
ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ 28 ಹಳ್ಳಿಗಳು ಒಳಪಡುತ್ತವೆ. ಚಿಂತಾಮಣಿ ತಾಲ್ಲೂಕಿನ ಮುರುಗಮಲೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಗೆ 42 ಗ್ರಾಮಗಳು, ಬಾಗೇಪಲ್ಲಿ ತಾಲ್ಲೂಕು ಮಿಟ್ಟೆಮರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ 30ಕ್ಕೂ ಹೆಚ್ಚು ಹಳ್ಳಿಗಳು ಒಳಪಡುತ್ತವೆ.
ಆಂಧ್ರಪ್ರದೇಶದ ಗಡಿಭಾಗಕ್ಕೆ ಹೊಂದಿಕೊಂಡಿರುವ ಬಾಗೇಪಲ್ಲಿ ತಾಲ್ಲೂಕಿನ ಮಾರ್ಗಾನುಕುಂಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 57 ಹಳ್ಳಿಗಳು ಒಳಪಡುತ್ತವೆ! ಇಷ್ಟು ಹಳ್ಳಿಗಳ ಜನರ ಆರೋಗ್ಯ ಕಾಪಾಡಬೇಕಾದ ಪ್ರಾಥಮಿಕ ಆರೋಗ್ಯ ಕೇಂದ್ರವು ಸಿಬ್ಬಂದಿ ಕೊರತೆಯಿಂದ ನಲುಗಿದೆ. ಜೂಲಪಾಳ್ಯ, ಪಾತಪಾಳ್ಯ ಆರೋಗ್ಯ ಕೇಂದ್ರಗಳದ್ದೂ ಇದೇ ಸ್ಥಿತಿ.
ಬಾಗೇಪಲ್ಲಿ ತಾಲ್ಲೂಕಿನ ಯಲ್ಲಂಪಲ್ಲಿಗೆ ‘ಪ್ರಜಾವಾಣಿ’ ಪ್ರತಿನಿಧಿ ಭೇಟಿ ನೀಡಿದಾಗ ಕೋವಿಡ್ ಪರೀಕ್ಷೆ ವಿಚಾರವಾಗಿ ಯಲ್ಲಂಪಲ್ಲಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿಯೇ ಮಿಟ್ಟೆಮರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಹರ್ಷವರ್ಧನ್ ಮತ್ತು ಗ್ರಾಮಪಂಚಾಯಿತಿ ಉಪಾಧ್ಯಕ್ಷ ನಾರಾಯಣಸ್ವಾಮಿ ನಡುವೆ ವಾಗ್ವಾದ ನಡೆಯುತ್ತಿತ್ತು.
‘ಒಬ್ಬರಿಗೆ ಸೋಂಕು ತಗುಲಿದೆ. ತಕ್ಷಣವೇ ಅವರ ಮನೆಯವರೆಲ್ಲರನ್ನೂ ಪರೀಕ್ಷೆಗೆ ಒಳಪಡಿಸಬೇಕು. ಇದರಿಂದ ಸೋಂಕಿನ ಪ್ರಸರಣ ತಡೆಯಬಹುದು. ಆದರೆ, ಎಲ್ಲರ ಪರೀಕ್ಷೆಗಳು ನಡೆಯುತ್ತಿಲ್ಲ. ಹೀಗಾದರೆ ಸೋಂಕು ಹೇಗೆ ನಿಯಂತ್ರಣಕ್ಕೆ ಬರುತ್ತದೆ’ ಎಂದು ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ಆಗ ವೈದ್ಯರು, ‘ಪ್ರತಿ ಹಳ್ಳಿಗಳಿಗೆ ಮೂರು ದಿನಕ್ಕೆ ಒಮ್ಮೆ ಭೇಟಿ ನೀಡುತ್ತಿದ್ದೇನೆ. ಒಂದು ಹಳ್ಳಿಗೆ ಬಂದು ಹೋದರೆ ಮತ್ತೆ ಆ ಹಳ್ಳಿಗೆ ಬರಲು ಎಷ್ಟು ದಿನಬೇಕು, ಯೋಚಿಸಿ. ಆಶಾ ಕಾರ್ಯಕರ್ತೆಯರು ದಿನವೂ ಭೇಟಿ ನೀಡುತ್ತಿದ್ದಾರೆ. ಇರುವವರು ಒಬ್ಬರೇ ಲ್ಯಾಬ್ ಟೆಕ್ನಿಷಿಯನ್’ ಎಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.
‘ಆಗೊಮ್ಮೆ ಈಗೊಮ್ಮೆ ಆಶಾ ಕಾರ್ಯಕರ್ತೆಯರು ಊರಿಗೆ ಬರುವರು. ಬಂದಾಗಲೆಲ್ಲ ಫೋಟೊ ತೆಗೆದುಕೊಳ್ಳುವರು. ಅದು ಬಿಟ್ಟರೆ ಬೇರೆನೂ ಆಗಿಲ್ಲ. ನಮಗೂ ವಯಸ್ಸಾಗಿದೆ. ನಮಗೇನೂ ಕೊಟ್ಟಿಲ್ಲ’ ಎನ್ನುವರು ಚಿಂತಾಮಣಿ ತಾಲ್ಲೂಕು ಕೋನಪ್ಪಲ್ಲಿಯ ಗೋಪಾಲಕೃಷ್ಣ.
ಗ್ರಾಮೀಣ ಪ್ರದೇಶಗಳ ಸೋಂಕಿತರ ಬಹುತೇಕ ಮನೆಗಳಲ್ಲಿ ಪ್ರತ್ಯೇಕ ವಾಸಕ್ಕೆ ಕೊಠಡಿ ಮತ್ತು ಶೌಚಾಲಯ ಇಲ್ಲ. ಇದೂ ಸಹ ಸೋಂಕು ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಮನೆಗಳಲ್ಲಿ ಸೌಲಭ್ಯವಿಲ್ಲದಿದ್ದರೆ ಕೋವಿಡ್ ಕೇರ್ ಸೆಂಟರ್‌ಗಳಿಗೆ ಸೋಂಕಿತರನ್ನು ದಾಖಲಿಸುತ್ತಿದೆ. ಅಲ್ಲಿಗೆ ಹೋಗಲು ಒಪ್ಪದಿದ್ದರೆ ಪೊಲೀಸರನ್ನು ಬಳಸಿ ದಾಖಲಿಸಲಾಗುತ್ತಿದೆ.
ಕೋವಿಡ್ ಕೇರ್ ಸೆಂಟರ್‌ಗೆ ದಾಖಲಾಗಲು ಒಪ್ಪದೆ ಆಶಾ ಕಾರ್ಯಕರ್ತೆಯರ ಜತೆ ಜಟಾಪಟಿ ನಡೆಸಿದ, ಸೋಂಕು ಇದ್ದರೂ ಮುಕ್ತವಾಗಿ ಓಡಾಟ ನಡೆಸಿದ ಪ್ರಸಂಗಗಳು ಜಿಲ್ಲೆಯ ಹಲವು ಕಡೆಗಳಲ್ಲಿ ಜರುಗಿವೆ.
ಶಿಡ್ಲಘಟ್ಟದ ಹನುಮಂತಪುರ ಗೇಟ್ ಬಳಿಯ ಕೋವಿಡ್ ಕೇರ್ ಸೆಂಟರ್‌ನಲ್ಲಿನ ಅವ್ಯವಸ್ಥೆ ಬಗ್ಗೆ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷೆ ಲಕ್ಷ್ಮಿದೇವಮ್ಮ ವಿಡಿಯೊ ಮಾಡಿದ್ದರು. ಅದು ವೈರಲ್ ಆಗಿತ್ತು. ನಂತರ ಈ ಕೇಂದ್ರ
ವನ್ನು 11ನೇ ಮೈಲಿಗೆ ಸ್ಥಳಾಂತರಿಸಲಾಯಿತು.
ಪ್ರತ್ಯೇಕ ವ್ಯವಸ್ಥೆಗಳು ಇಲ್ಲದಿದ್ದರೂ ಬಹಳಷ್ಟು ಸೋಂಕಿತರು ಮನೆಗಳಲ್ಲಿಯೇ ಇರಬೇಕು ಎಂದು ಅಪೇಕ್ಷಿಸುತ್ತಾರೆ. ಜನರ ಮೊಂಡಾಟದಿಂದಲೂ ಸೋಂಕು ಹೆಚ್ಚಿದೆ ಎಂದು ಹೆಸರು ಹೇಳಲು ಇಚ್ಛಿಸದ ಆರೋಗ್ಯ ಇಲಾಖೆ ಸಿಬ್ಬಂದಿಯೊಬ್ಬರು ತಿಳಿಸಿದರು.
ಟಾಸ್ಕ್‌ಫೋರ್ಸ್ ಬಲ: ಕೋವಿಡ್ ತಡೆಗೆ ಗ್ರಾಮ ಮಟ್ಟದಲ್ಲಿ ರಚನೆಯಾಗಿರುವ ಟಾಸ್ಕ್‌ಫೋರ್ಸ್‌ಗಳು ಜಿಲ್ಲೆಯಲ್ಲಿ ಚುರುಕಾಗಿವೆ. ಹೋಂ ಐಸೊಲೇಷನ್, ಕೋವಿಡ್ ಕೇರ್ ಸೆಂಟರ್ ನಿರ್ವಹಣೆ, ಔಷಧಿ ವಿತರಣೆ, ಲಸಿಕೆ, ಸ್ವಚ್ಛತೆ ವಿಚಾರವಾಗಿ ಟಾಸ್ಕ್‌ಫೋರ್ಸ್‌ಗಳು ಕೆಲಸ ಮಾಡುತ್ತಿವೆ. ಜಿಲ್ಲಾಧಿಕಾರಿ ಆರ್. ಲತಾ ಹಳ್ಳಿಗಳಿಗೆ ಭೇಟಿ ನೀಡಿದಾಗ ಈ ಸಮಿತಿಗಳ ಸಭೆಯನ್ನು ಕಡ್ಡಾಯವಾಗಿ ನಡೆಸುತ್ತಿದ್ದಾರೆ. ಹಳ್ಳಿಗಳಿಗೆ, ಕೋವಿಡ್ ಕೇರ್ ಸೆಂಟರ್‌ಗಳಿಗೆ ಭೇಟಿ ನೀಡಿ ಸೋಂಕಿತರ ಆರೋಗ್ಯ ವಿಚಾರಿಸುತ್ತಿದ್ದಾರೆ.
ನೀಗದ ಭಯ; ಬೆಂಗಳೂರಿಗರ ಲಗ್ಗೆ
ಕೋವಿಡ್ ಲಸಿಕೆ ವಿಚಾರದಲ್ಲಿ ಜಿಲ್ಲೆಯ ಗ್ರಾಮೀಣ ಜನರಲ್ಲಿ ಇಂದಿಗೂ ಭಯ ನಿವಾರಣೆಯಾಗಿಲ್ಲ. ‘ನಮ್ಮ ಊರಲ್ಲಿ ಒಬ್ಬರಿಗೆ ಲಸಿಕೆ ಪಡೆದ ನಂತರ ಸೋಂಕು ಬಂದಿತು. ಲಸಿಕೆಯಿಂದಲೇ ಜ್ವರ ಬಂದಿತು ಎಂದುಕೊಂಡು ಬಹಳಷ್ಟು ಜನರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ಶಿಡ್ಲಘಟ್ಟ ತಾಲ್ಲೂಕಿನ ಚಿನ್ನದಾಸೇನಹಳ್ಳಿಯ ದೇವರಾಜು ತಿಳಿಸಿದರು.
18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲು ಮುಂದಾಗುತ್ತಿದ್ದಂತೆ ಶಿಡ್ಲಘಟ್ಟ, ಗುಡಿಬಂಡೆ, ಬಾಗೇಪಲ್ಲಿಗೆ ಬೆಂಗಳೂರಿನಿಂದ ಬಂದು ಲಸಿಕೆ ಸಹ ಹಾಕಿಸಿಕೊಂಡಿದ್ದಾರೆ. ಇದಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವಿಚಾರ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರ ಆಪ್ತ ಸಹಾಯಕರವರೆಗೂ ತಲುಪಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.