ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಶುಕ್ರವಾರ ಒಬ್ಬ ಕಾನ್‌ಸ್ಟೆಬಲ್ ಸೇರಿದಂತೆ ಐದು ಜನರಲ್ಲಿ ಕೋವಿಡ್ 19 ದೃಢಪಟ್ಟಿದ್ದು, ಈ ಪೈಕಿ ಚಿಕ್ಕಬಳ್ಳಾಪುರ ತಾಲ್ಲೂಕಿನ ನಲ್ಲಕದಿರೆನಹಳ್ಳಿಯ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 136ಕ್ಕೆ ಏರಿಕೆಯಾಗಿದೆ.
ಎಸ್ಪಿ ಕಚೇರಿಯಲ್ಲಿರುವ ಪೊಲೀಸ್ ನಿಯಂತ್ರಣ ಕೊಠಡಿಯಲ್ಲಿ ಕರ್ತವ್ಯ ನಿರ್ವಹಿಸುವ 32 ವಯಸ್ಸಿನ ಕಾನ್‌ಸ್ಟೆಬಲ್, ಚಿಕ್ಕಬಳ್ಳಾಪುರ ತಾಲ್ಲೂಕಿನ ಹಾರೋಬಂಡೆ ಬಳಿಯ ಸಾಯಿಬಾಬಾ ದೇವಾಲಯದ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಕಲ್ಯಾಣಮಂಟಪ ಕಾಮಗಾರಿಯಲ್ಲಿ ತೊಡಗಿದ್ದ ಕೇರಳದ ಮೂಲದ 68 ವರ್ಷದ ವೆಲ್ಡರ್ ಸೂಪರ್‌ವೈಸರ್‌ಗೆ ಕೋವಿಡ್ ತಗುಲಿದೆ.
ಜತೆಗೆ, ಚಿಂತಾಮಣಿಯ ಮೊದಲ ಸೋಂಕಿತ ವ್ಯಕ್ತಿಯ 17 ವರ್ಷದ ಮೊಮ್ಮಗ (ಮಗಳ ಮಗ) ಮತ್ತು ಬಾಗೇಪಲ್ಲಿಗೆ ಮಹಾರಾಷ್ಟ್ರದಿಂದ ವಾಪಾಸಾದ ವಲಸೆ ಕಾರ್ಮಿಕರ ಪೈಕಿ 28ರ ಪ್ರಾಯದ ಮಹಿಳೆಯೊಬ್ಬರಿಗೆ ಕೋವಿಡ್ ಅಂಟಿರುವುದು ಶುಕ್ರವಾರ ಪತ್ತೆಯಾಗಿದೆ.
ಎಸ್ಪಿ ಕಚೇರಿಯಲ್ಲಿರುವ ಪೊಲೀಸ್ ನಿಯಂತ್ರಣ ಕೊಠಡಿಯಲ್ಲಿ ಕರ್ತವ್ಯ ನಿರ್ವಹಿಸುವ ಕಾನ್‌ಸ್ಟೆಬಲ್ ಕೆಲ ದಿನಗಳ ಹಿಂದಷ್ಟೇ 12 ದಿನಗಳ ರಜೆ ಮೇಲೆ ತುಮಕೂರಿಗೆ ಹೋಗಿ ವಾಪಾಸಾಗಿದ್ದರು ಎಂದು ತಿಳಿದು ಬಂದಿದೆ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಕಾನ್‌ಸ್ಟೆಬಲ್ ಒಬ್ಬರಿಗೆ ಕೋವಿಡ್ ತಗುಲಿರುವುದು ಪೊಲೀಸ್ ಇಲಾಖೆಯನ್ನು ಬೆಚ್ಚಿ ಬೀಳಿಸಿದೆ.
ಸೋಂಕಿತ ಕಾನ್‌ಸ್ಟೆಬಲ್ ಪ್ರಾಥಮಿಕ ಸಂಪರ್ಕಕ್ಕೆ ಬಂದ ಸಹದ್ಯೋಗಿಗಳಿಗೂ ಕೋವಿಡ್ ತಗುಲಿರುವ ಶಂಕೆ ವ್ಯಕ್ತವಾದ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿರುವ ಪೊಲೀಸ್ ವಸತಿ ಸಂಕಿರ್ಣಗಳ ಪೈಕಿ ಎರಡು ಸಂಕೀರ್ಣಗಳನ್ನು ಸೀಲ್‌ಡೌನ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಕೆಲಸಕ್ಕೆ ಬೇಕಾದ ಅಗತ್ಯ ಸಾಮಗ್ರಿಗಳ ಖರೀದಿಗಾಗಿ ಐದು ದಿನಗಳ ಹಿಂದೆ ಹಾರೊಬಂಡೆಯಿಂದ ಬೆಂಗಳೂರಿಗೆ ಹೋಗಿದ್ದ ವೆಲ್ಡಿಂಗ್ ಸೂಪರ್‌ವೈಸರ್‌ಗೆ ಬೆಂಗಳೂರಿನಲ್ಲಿ ಕೋವಿಡ್ ತಗುಲಿರುವ ಶಂಕೆ ವ್ಯಕ್ತವಾಗಿದೆ.
ಜಿಲ್ಲೆಗೆ ಇತ್ತೀಚೆಗೆ ಮಹಾರಾಷ್ಟ್ರದಿಂದ 316 ಕಾರ್ಮಿಕರು ವಾಪಾಸಾಗಿದ್ದು, ಈ ಪೈಕಿ ಈವರೆಗೆ 103 ಮಂದಿಗೆ ಕೋವಿಡ್ ತಗುಲಿರುವುದು ದೃಢಪಟ್ಟಿದೆ. ಜತೆಗೆ, ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ 32 ಪ್ರಕರಣಗಳು ವರದಿಯಾಗಿವೆ.
ಈವರೆಗೆ ಜಿಲ್ಲೆಯಲ್ಲಿ 9,809 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ. ಆ ಪೈಕಿ 9,092ಮಂದಿಯಲ್ಲಿ ಯಾವುದೇ ಸೋಂಕು ಪತ್ತೆಯಾಗಿಲ್ಲ. ಇನ್ನುಳಿದಂತೆ ಗೌರಿಬಿದನೂರಿನ 71, ಬಾಗೇಪಲ್ಲಿಯ 48, ಚಿಕ್ಕಬಳ್ಳಾಪುರದ 11 ಮತ್ತು ಚಿಂತಾಮಣಿಯ 6 ಜನರಲ್ಲಿ ಕೋವಿಡ್ ಇರುವುದು ದೃಢಪಟ್ಟಿದೆ.
ಸೋಂಕಿತರ ಪೈಕಿ ಚಿಕ್ಕಬಳ್ಳಾಪುರದ ಇಬ್ಬರು, ಗೌರಿಬಿದನೂರಿನ ಒಬ್ಬರು ಮೃತಪಟ್ಟಿದ್ದಾರೆ. 20 ಜನರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಸದ್ಯ ಜಿಲ್ಲಾ ಆಸ್ಪತ್ರೆಯ ಕೋವಿಡ್ ವಾರ್ಡ್‌ನಲ್ಲಿ 113 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.