ADVERTISEMENT

ಚಿಮುಲ್ ರಚನೆ: ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕ್ರೆಡಿಟ್ ಸಂಘರ್ಷ

ಡಿ.ಎಂ.ಕುರ್ಕೆ ಪ್ರಶಾಂತ
Published 28 ಅಕ್ಟೋಬರ್ 2024, 5:44 IST
Last Updated 28 ಅಕ್ಟೋಬರ್ 2024, 5:44 IST
ಚಿಕ್ಕಬಳ್ಳಾಪುರದ ಮೆಗಾ ಡೇರಿ
ಚಿಕ್ಕಬಳ್ಳಾಪುರದ ಮೆಗಾ ಡೇರಿ   

ಚಿಕ್ಕಬಳ್ಳಾಪುರ: ಬಿಜೆಪಿ ಆಡಳಿತದಲ್ಲಿ ಒಮ್ಮೆ ಮತ್ತು ಕಾಂಗ್ರೆಸ್ ಆಡಳಿತದಲ್ಲಿ ಒಮ್ಮೆ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಕೋಚಿಮುಲ್) ವಿಭಜನೆ ಮತ್ತು ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಚಿಮುಲ್) ರಚನೆ ಆಗಿದೆ. ಹೀಗೆ ಒಂದೇ ಪ್ರಕ್ರಿಯೆ ಎರಡು ಸರ್ಕಾರದ ಅವಧಿಗಳಲ್ಲಿ ನಡೆದಿದೆ. 

ಇದು ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು, ಎರಡೂ ಪಕ್ಷಗಳ ಬೆಂಬಲಿತ ಸಹಕಾರ ವಲಯದಲ್ಲಿ ಕ್ರೆಡಿಟ್‌ ಸಂಘರ್ಷಕ್ಕೆ ಕಾರಣವಾಗಿದೆ. ಬಿಜೆಪಿ ಮುಖಂಡರು ಸಂಸದ ಡಾ.ಕೆ.ಸುಧಾಕರ್ ಅವರೇ ವಿಭಜನೆಯ ರೂವಾರಿ ಎಂದರೆ ಕಾಂಗ್ರೆಸ್ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರತ್ತ ಬೆರಳು ತೋರುತ್ತಿದ್ದಾರೆ. 

ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಂಸದರು ತಮಗೆ ದೊರೆತ ವೇದಿಕೆಗಳಲ್ಲಿ ಕೋಚಿಮುಲ್ ವಿಭಜನೆ ‘ತಮ್ಮಿಂದ’, ‘ತಮ್ಮ ಸರ್ಕಾರದಿಂದ’ ಎಂದು ಹಕ್ಕು ಪ್ರತಿಪಾದಿಸುತ್ತಿದ್ದಾರೆ.

ADVERTISEMENT

ಶನಿವಾರ ಚಿಕ್ಕಬಳ್ಳಾಪುರದಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ‘ಕೋಚಿಮುಲ್ ವಿಭಜನೆ ತಮ್ಮ ಸರ್ಕಾರದ ಸಾಧನೆ’ ಎಂದು ಡಾ.ಕೆ.ಸುಧಾಕರ್ ಒತ್ತಿ ಹೇಳಿದರು. ಮತ್ತೊಂದು ಕಡೆ ಚಿಂತಾಮಣಿ ಕಾರ್ಯಕ್ರಮದಲ್ಲಿ ಡಾ.ಎಂ.ಸಿ.ಸುಧಾಕರ್, ‘ವಿಭಜನೆಯ ಕುರಿತು ಸ್ಪಷ್ಟ ನಿರ್ಧಾರ ಕೈಗೊಂಡಿದ್ದು ಕಾಂಗ್ರೆಸ್’ ಎಂದು ಪ್ರತಿಪಾದಿಸಿದರು. 

ಹೀಗೆ ಎರಡೂ ಪಕ್ಷಗಳು, ಸರ್ಕಾರಗಳು ಮತ್ತು ಇಬ್ಬರು ಪ್ರಮುಖ ನಾಯಕರ ನಡುವೆ ಕೋಚಿಮುಲ್ ವಿಭಜನೆ ಮತ್ತು ಚಿಮುಲ್ ರಚನೆಯ ಚರ್ಚೆಗಳು ಭರಾಟೆಯಿಂದ ನಡೆದಿದೆ. 

ಸಾಮಾನ್ಯವಾಗಿ ಸಹಕಾರ ಕ್ಷೇತ್ರ ರಾಜಕೀಯದಿಂದ ಹೊರತಾದುದು ಎನ್ನುವ ಮಾತಿದೆ. ಆದರೆ ಇದು ಪೂರ್ಣ ಸತ್ಯವಲ್ಲ. ಸಹಕಾರ ಕ್ಷೇತ್ರದ ಮೇಲೆ ಆಯಾ ರಾಜಕೀಯ ಪಕ್ಷಗಳು ಮತ್ತು ರಾಜಕೀಯ ನಾಯಕರು ಹಿಡಿತ ಸಾಧಿಸಲು ಪ್ರಬಲವಾಗಿಯೇ ಪ್ರಯತ್ನಿಸುವರು. ರಾಜಕಾರಣದಲ್ಲಿ ತೊಡಗಿದ್ದವರೇ ಸಹಕಾರ ಧುರೀಣರು ಎನಿಸಿರುವರು.

ಈ ಕಾರಣದಿಂದ ಜಿಲ್ಲೆಯಲ್ಲಿ ಈ ಹಿಂದಿನಿಂದಲೂ ಡಾ.ಕೆ.ಸುಧಾಕರ್ ಮತ್ತು ಅವರ ಬೆಂಬಲಿಗರು, ಜಿಲ್ಲೆಯ ಕಾಂಗ್ರೆಸ್ ಶಾಸಕರು ಹಾಗೂ ಆ ಪಕ್ಷ ಬೆಂಬಲಿತ ನಿರ್ದೇಶಕರು ನಡುವೆ ಸಹಕಾರ ವಲಯದಲ್ಲಿ ರಾಜಕೀಯ ಜಟಾಪಟಿಗೆ ಜೋರಾಗಿಯೇ ನಡೆಯುತ್ತಿದೆ. 

ಈ ಹಿಂದೆ ಬಿಜೆಪಿ ಸರ್ಕಾರದ ಆಡಳಿತದ ಅವಧಿಯಲ್ಲಿ ಆದ ಆದೇಶಗಳು ಮತ್ತು ಒಕ್ಕೂಟ ಒಂದು ವರ್ಷ ನಡೆದಿದ್ದನ್ನು ಬಿಜೆಪಿ ಮುಖಂಡರು ಸ್ಮರಿಸುವರು. ಕಾಂಗ್ರೆಸ್ ಸರ್ಕಾರವು ಬಿಜೆಪಿ ಸರ್ಕಾರದ ವಿಭಜನೆಯ ಆದೇಶವನ್ನು ರದ್ದುಗೊಳಿಸಿದ್ದನ್ನೂ ಪ್ರಸ್ತಾಪಿಸುವರು. 

ಮತ್ತೊಂದೆಡೆ ಬಿಜೆಪಿ ಆಡಳಿತದಲ್ಲಿ ಕೋಚಿಮುಲ್ ವಿಭಜನೆ ಅವೈಜ್ಞಾನಿಕವಾಗಿತ್ತು. ಚಿಕ್ಕಬಳ್ಳಾಪುರ ಜಿಲ್ಲೆಯ ನಿರ್ದೇಶಕರ ಅಧಿಕಾರದ ಅವಧಿ ಪೂರ್ಣವಾಗದಿದ್ದರೂ ಚುನಾವಣೆ ನಡೆಸಲು ಮುಂದಾಗಿದ್ದರು. ಈ ಅವೈಜ್ಞಾನಿಕ ವಿಭಜನೆಯ ಕಾರಣದಿಂದಲೇ ನಮ್ಮ ಸರ್ಕಾರ ಆದೇಶ ರದ್ದುಗೊಳಿಸಿತು. ಈಗ ಎಲ್ಲ ಸಾಧಕ ಬಾಧಕಗಳನ್ನು ಚರ್ಚಿಸಿ ಸೂಕ್ತ ರೀತಿಯಲ್ಲಿ ವಿಭಜಿಸಲಾಗಿದೆ ಎಂದು ಕಾಂಗ್ರೆಸ್ ಬೆಂಬಲಿತ ಕೋಚಿಮುಲ್ ನಿರ್ದೇಶಕರು ಮತ್ತು ಆ ಪಕ್ಷದ ಸಹಕಾರ ಧುರೀಣರು ನುಡಿಯುತ್ತಿದ್ದಾರೆ.

ಕೋಚಿಮುಲ್ ಆಡಳಿತ ಮಂಡಳಿಯ ಅಧಿಕಾರದ ಅವಧಿ ಪೂರ್ಣವಾಗಿದೆ. ಈಗ ಚಿಮುಲ್‌ಗೆ ಚುನಾವಣೆ ನಡೆಸಬೇಕಾಗಿದೆ. ಚುನಾವಣೆ ನಡೆದರೆ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ‘ವಿಭಜನೆ ತಮ್ಮದು’ ಎಂದು ಹಕ್ಕು ಪ್ರತಿಪಾದಿಸಿ ಮತ ಕೇಳುವುದು ನಿಚ್ಚಳ. 

ಕೋಚಿಮುಲ್ ವಿಭಜನೆಯ ಬೆಳವಣಿಗೆಗಳು ಸಾಗಿದ್ದು ಹೀಗೆ

  •  2021ರ ನವೆಂಬರ್; ಬಿಜೆಪಿ ಸರ್ಕಾರದ ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ಕೋಚಿಮುಲ್ ವಿಭಜನೆಗೆ ಮುದ್ರೆ. ಚಿಕ್ಕಬಳ್ಳಾಪುರ ‌ಜಿಲ್ಲೆಗೆ ಪ್ರತ್ಯೇಕ ಹಾಲು‌ ಒಕ್ಕೂಟ ಸ್ಥಾಪಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಹಕಾರ ಇಲಾಖೆಯ ಜಂಟಿ‌ ಕಾರ್ಯದರ್ಶಿ ಆಡಳಿತಾತ್ಮಕ ಅನುಮೋದನೆ.

  • 2021ರ ಡಿಸೆಂಬರ್‌; ಆಸ್ತಿ‌ ಮತ್ತು ಜವಾಬ್ದಾರಿ ವಿಭಜನೆಯನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸಲು ಸರ್ಕಾರದ ಆದೇಶ. 

  • 2022ರ ಜೂನ್‌; ಸಹಕಾರ ಸಂಘಗಳ ಕಾಯ್ದೆಯಡಿ ಚಿಮುಲ್ ನೋಂದಣಿ. ಆಡಳಿತಾಧಿಕಾರಿಯಾಗಿ ಜಿಲ್ಲಾಧಿಕಾರಿ ನೇಮಕ.

  • 2023ರ ಜೂನ್; ವಿಭಜನೆಯ ಆದೇಶವನ್ನು ಹಿಂದಕ್ಕೆ ಪಡೆದ ಕಾಂಗ್ರೆಸ್ ಸರ್ಕಾರ.

  • 2023ರ ಜುಲೈ; ವಿಭಜನೆ ಆದೇಶ ಹಿಂದಕ್ಕೆ ಪಡೆದಿದ್ದರ ವಿರುದ್ಧ ಬಿಜೆಪಿ ಬೆಂಬಲಿತ ಸಹಕಾರ ಧುರೀಣರು ಹೈಕೋರ್ಟ್ ಮೊರೆ.

  • 2024ರ ಮೇ; ಕೋಚಿಮುಲ್ ಆಡಳಿತ ಮಂಡಳಿಯ ನಿರ್ದೇಶಕರ ಅಧಿಕಾರದ ಅವಧಿ 2024ರ ಮೇ 12ಕ್ಕೆ ಪೂರ್ಣ.

  • 2024 ಜುಲೈ.23; ಬಾಗೇಪಲ್ಲಿಯಲ್ಲಿ ಕೋಚಿಮುಲ್ ಆಡಳಿತ ಮಂಡಳಿಯ ವಿಶೇಷ ಸಭೆ. ಕೋಚಿಮುಲ್ ವಿಭಜನೆಗೆ ತೀರ್ಮಾನ.

  • 2024ರ ಸೆಪ್ಟೆಂಬರ್; ಈ ಹಿಂದಿನ ಆದೇಶಗಳನ್ನು ಮತ್ತೆ ಯಥಾವತ್ ಮರುಸ್ಥಾಪಿಸಿ ಸರ್ಕಾರ ಆದೇಶ. ಮರುಸ್ಥಾಪಿತವಾದ ಕೋಮುಲ್ ಮತ್ತು ಚಿಮುಲ್‌ಗೆ ಆಡಳಿತಾಧಿಕಾರಿಗಳನ್ನು ನೇಮಿಸುವ ಪ್ರತ್ಯೇಕ ಆದೇಶ ಹೊರಡಿಸಲಾಗುವುದು ಎಂದ ಬೆಂಗಳೂರು ಪ್ರಾಂತ ಸಹಕಾರ ಸಂಘಗಳ ಜಂಟಿ ನಿಬಂಧಕ.

  • 2024ರ ಅಕ್ಟೋಬರ್; ಈ ಹಿಂದಿನ ಆದೇಶಗಳನ್ನು ಮತ್ತೆ ಮರುಸ್ಥಾಪಿಸಿದ ಸರ್ಕಾರದ ಆದೇಶ ಹೈಕೋರ್ಟ್ ಎತ್ತಿ ಹಿಡಿಯಿತು. ಚಿಮುಲ್ ರಚನೆಗೆ ಅಧಿಕೃತ ಮುದ್ರೆ.

ಯಾರನ್ನೋ ಅಧ್ಯಕ್ಷರನ್ನಾಗಿ ಮಾಡಲು ಡಾ.ಕೆ.ಸುಧಾಕರ್ ಅವೈಜ್ಞಾನಿಕವಾಗಿ ಕೋಚಿಮುಲ್ ವಿಭಜಿಸಿದ್ದರು. ಚಿಕ್ಕಬಳ್ಳಾಪುರ ಜಿಲ್ಲೆಯ ನಿರ್ದೇಶಕದ ಅಧಿಕಾರದ ಅವಧಿ ಮೊಟಕುಗೊಳಿಸಿದ್ದರು. ನಮ್ಮ ಸರ್ಕಾರ ವಿಭಜನೆಯ ಸಾಧಕ ಬಾಧಕಗಳನ್ನು ಪರಿಶೀಲಿಸಿ ಸ್ಪಷ್ಟ ಮತ್ತುಅಭಿವೃದ್ಧಿಗೆ ಪೂರಕವಾಗಿ ಕ್ರಮಕೈಗೊಂಡಿದೆ.
ಡಾ.ಎಂ.ಸಿ.ಸುಧಾಕರ್ ಜಿಲ್ಲಾ ಉಸ್ತುವಾರಿ ಸಚಿವ ಚಿಕ್ಕಬಳ್ಳಾಪುರ ಜಿಲ್ಲೆ
ನನಗೆ ಮತ್ತು ಬಿಜೆಪಿಗೆ ಹೆಸರು ಬರುತ್ತದೆ ಎನ್ನುವ ರಾಜಕೀಯ ದುರುದ್ದೇಶದಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ವಿಭಜನೆ ಆದೇಶ ರದ್ದುಗೊಳಿಸಿತು. ರಾಜಕೀಯ ಸ್ವಾರ್ಥ ದ್ವೇಷಕ್ಕಾಗಿ 17 ತಿಂಗಳ ಹಿಂದೆ ನಮ್ಮ ಸರ್ಕಾರ ಮಾಡಿದ್ದ ತೀರ್ಮಾನ ರದ್ದುಪಡಿಸಿತ್ತು. ಕೆಲವೇ ಕೆಲವು ನಾಯಕರ ಸ್ವಾರ್ಥ ರಾಜಕಾರಣಕ್ಕೆ ಅಭಿವೃದ್ಧಿ ಕುಂಠಿತವಾಗಿದೆ.  
ಡಾ.ಕೆ.ಸುಧಾಕರ್ ಸಂಸದ ಚಿಕ್ಕಬಳ್ಳಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.