ADVERTISEMENT

ಮೈಸೂರು ದಸರಾ: ಜಂಬೂ ಸವಾರಿ ಮೆರವಣಿಗೆಯಲ್ಲಿ ಗಮನಸೆಳೆದ ಸೌಹಾರ್ದದ ಸ್ತಬ್ಧಚಿತ್ರ

ಮೈಸೂರು ಜಂಬೂಸವಾರಿಯ ಮೆರವಣಿಗೆಯಲ್ಲಿ ಚಿಕ್ಕಬಳ್ಳಾಪುರದ ಕೈವಾರ, ಮುರುಗಮಲ್ಲ, ಕೈಲಾಸಗಿರಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2023, 14:48 IST
Last Updated 24 ಅಕ್ಟೋಬರ್ 2023, 14:48 IST
ನಾಡಹಬ್ಬ ಮೈಸೂರು ದಸರಾದ ಜಂಬೂ ಸವಾರಿಯ ಮೆರವಣಿಗೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಸ್ತಬ್ಧಚಿತ್ರ
ನಾಡಹಬ್ಬ ಮೈಸೂರು ದಸರಾದ ಜಂಬೂ ಸವಾರಿಯ ಮೆರವಣಿಗೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಸ್ತಬ್ಧಚಿತ್ರ   

ಚಿಕ್ಕಬಳ್ಳಾಪುರ: ನಾಡಹಬ್ಬ ಮೈಸೂರು ದಸರಾದ ಜಂಬೂ ಸವಾರಿಯ ಮೆರವಣಿಗೆಯಲ್ಲಿ ಜಿಲ್ಲೆಯ ಸ್ತಬ್ಧಚಿತ್ರ ಗಮನ ಸೆಳೆಯಿತು. 

ಪ್ರತಿ ಜಿಲ್ಲೆಯಿಂದಲೂ ಒಂದು ಸ್ತಬ್ಧಚಿತ್ರವು ಮೆರವಣಿಯಲ್ಲಿ ಇರಲಿದೆ.  ಜಿಲ್ಲೆಯ ಚಿಂತಾಮಣಿಯ ಧಾರ್ಮಿಕ ಕ್ಷೇತ್ರ ಹಾಗೂ ಪ್ರಸಿದ್ಧ ಪ್ರವಾಸಿ ತಾಣಗಳಾದ ಕೈವಾರ, ಕೈಲಾಸಗಿರಿ ಹಾಗೂ ಮುರಗಮಲ್ಲ ದರ್ಗಾ ಸಂಗಮಗೊಂಡಿರುವ ಆಕರ್ಷಕವಾದ ಸ್ತಬ್ಧಚಿತ್ರವನ್ನು ಜಿಲ್ಲಾ ಪಂಚಾಯಿತಿ ರೂಪಿಸಿದೆ. ಇದು ನಾಡಿನ ಭಾವೈಕ್ಯದ ಸಂದೇಶ ಸಾರಿತು.  ರಾಜ್ಯ, ದೇಶ, ವಿದೇಶಗಳ ಜನರು ಜಂಬೂ ಸವಾರಿಯ ಸ್ತಬ್ಧಚಿತ್ರಗಳ ಮೆರವಣಿಗೆಯನ್ನು ಕಣ್ತುಂಬಿಕೊಂಡರು.

ಕೈವಾರವು ರಾಜ್ಯದಲ್ಲಿಯೇ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಎನಿಸಿದೆ. ಕಾಲಜ್ಞಾನಿ ತಾತಯ್ಯ ಅವರ ತಪೋಭೂಮಿ ಕೈವಾರ ಕ್ಷೇತ್ರದಲ್ಲಿ ಎಲ್ಲ ಸಮುದಾಯಗಳ ಭಕ್ತರು ಇದ್ದಾರೆ. ಯೋಗಿನಾರೇಯಣ ಮಠಕ್ಕೆ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಿನ ಭಕ್ತರು ಇದ್ದಾರೆ

ADVERTISEMENT

ಮುರುಗಮಲ್ಲ ದರ್ಗಾ ಹಿಂದೂ ಮುಸ್ಲಿಮರ ಭಾವೈಕ್ಯವನ್ನು ಸಾರುತ್ತದೆ. ಹುಣ್ಣಿಮೆ, ಅಮವಾಸ್ಯೆಯ ಸಂದರ್ಭದಲ್ಲಿ ದೇಶ, ವಿದೇಶದಿಂದ ಇಲ್ಲಿಗೆ ಭಕ್ತರು ಬರುತ್ತಾರೆ. ಚಿಂತಾಮಣಿ ಹೊರವಲಯದ ಅಂಬಾಜಿ ದುರ್ಗ ಬೆಟ್ಟದ ತಪ್ಪಲಿನಲ್ಲಿರುವ ಮಹಾ ಕೈಲಾಸಗಿರಿ ಧಾರ್ಮಿಕ ಕೇಂದ್ರದ ಜತೆಗೆ ಒಳ್ಳೆಯ ಪ್ರವಾಸಿ ತಾಣವೂ ಆಗಿದೆ. ಈ ಮೂರು ಕ್ಷೇತ್ರಗಳನ್ನು ಒಳಗೊಂಡು ಸ್ತಬ್ಧಚಿತ್ರವನ್ನು ರೂಪಿಸಲಾಗಿತ್ತು. 

ಈ ಹಿಂದಿನಿಂದಲೂ ಚಿಕ್ಕಬಳ್ಳಾಪುರ ಜಿಲ್ಲೆಯ ಸ್ತಬ್ಧಚಿತ್ರಗಳು ಮೈಸೂರು ದಸರಾದ ಜಂಬೂ ಸವಾರಿ ಮೆರವಣಿಗೆಯಲ್ಲಿ ಗಮನ ಸೆಳೆದಿವೆ. ದಕ್ಷಿಣ ಭಾರತ ಜಲಿಯಾನ್ ವಾಲಾಬಾಗ್ ಎಂದೇ ಖ್ಯಾತಿ ಪಡೆದಿರುವ ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವತ್ಥದ ಹುತಾತ್ಮರ ವೀರಸೌಧ, ವಿದುರಾಶ್ವತ್ಥ ದೇಗುಲದ ಸ್ತಬ್ಧಚಿತ್ರ, ಗ್ರೀನ್ ನಂದಿ, ಕ್ಲೀನ್ ನಂದಿ ಎಂಬ ಸ್ತಬ್ದಚಿತ್ರ, ಬಾಗೇಪಲ್ಲಿ ಗುಮ್ಮನಾಯಕನಪಾಳ್ಯ, ರೇಷ್ಮೆ ಉದ್ಯಮ, ಕೈವಾರದ ಬಕಾಸುರ ವಧೆ, ಜಿಲ್ಲೆಯ ಭಾರತ ರತ್ನಗಳಾದ ಸರ್.ಎಂ.ವಿಶ್ವೇಶ್ವರಯ್ಯ ಹಾಗೂ ಸಿ.ಎನ್.ಆರ್.ರಾವ್ ಅವರ ಕುರಿತು ಸ್ತಬ್ಧಚಿತ್ರಗಳು ಈ ಹಿಂದೆ ಮೈಸೂರು ದಸರಾದಲ್ಲಿ ಪಾಲ್ಗೊಂಡಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.