ADVERTISEMENT

ಗುಡಿಬಂಡೆ: ಅಂಗನವಾಡಿ ಮಕ್ಕಳ ಪೌಷ್ಟಿಕ ಆಹಾರದಲ್ಲಿ ಸತ್ತ ಇಲಿ!

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2024, 14:38 IST
Last Updated 11 ಆಗಸ್ಟ್ 2024, 14:38 IST
ಗುಡಿಬಂಡೆ ತಾಲ್ಲೂಕು ಗರುಡಾಚಾರ್ಲಹಳ್ಳಿ ಅಂಗನವಾಡಿ ಕೇಂದ್ರದ ಮಕ್ಕಳಿಗೆ ನೀಡಲಾದ ಬೆಲ್ಲದ ಪುಡಿ ಪಾಕೆಟ್‌ನಲ್ಲಿ ಕಂಡು ಬಂದ ಸತ್ತ ಇಲಿ ಹೋಲುವ ವಸ್ತು 
ಗುಡಿಬಂಡೆ ತಾಲ್ಲೂಕು ಗರುಡಾಚಾರ್ಲಹಳ್ಳಿ ಅಂಗನವಾಡಿ ಕೇಂದ್ರದ ಮಕ್ಕಳಿಗೆ ನೀಡಲಾದ ಬೆಲ್ಲದ ಪುಡಿ ಪಾಕೆಟ್‌ನಲ್ಲಿ ಕಂಡು ಬಂದ ಸತ್ತ ಇಲಿ ಹೋಲುವ ವಸ್ತು    

ಗುಡಿಬಂಡೆ (ಚಿಕ್ಕಬಳ್ಳಾಪುರ): ತಾಲ್ಲೂಕಿನ ಹಂಪಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗರುಡಾಚಾರಹಳ್ಳಿ ಅಂಗನವಾಡಿ ಕೇಂದ್ರದ ಮಕ್ಕಳಿಗೆ ನೀಡಲಾದ ಪೌಷ್ಟಿಕ ಆಹಾರದಲ್ಲಿ ಸತ್ತ ಇಲಿಯ ಅವಶೇಷ ಪತ್ತೆಯಾಗಿದೆ.

ಅಂಗನವಾಡಿ ಕೇಂದ್ರದ ನಂದೀಶ ಮತ್ತು ಲಕ್ಷ್ಮಿ ಎಂಬ ಮಕ್ಕಳಿಗೆ ನೀಡಲಾದ ಬೆಲ್ಲದ ಪುಡಿ ಪ್ಯಾಕೆಟ್‌ ತೆರೆದಾಗ ದುರ್ವಾಸನೆ ಬಂದಿದೆ. ಪೋಷಕರು ಅದನ್ನು ಪರೀಕ್ಷಿಸಿದಾಗ ಬೆಲ್ಲದ ಪುಡಿಯ ನಡುವೆ ಸತ್ತಿರುವ ಇಲಿಯ ರೋಮ ಮತ್ತು ಇತರ ಅವಶೇಷ ಸಿಕ್ಕಿವೆ.  

ಬಾಗೇಪಲ್ಲಿ ತಾಲ್ಲೂಕಿನ ಯಲ್ಲಂಪಲ್ಲಿಯ ಎಂಎಸ್‌ಪಿಸಿ ಏಜೆನ್ಸಿ ಏಪ್ರಿಲ್‌ನಲ್ಲಿ ಅಂಗನವಾಡಿ ಕೇಂದ್ರಕ್ಕೆ ಸರಬರಾಜು ಮಾಡಿದ ಆಹಾರ ಪದಾರ್ಥ ಪೂರೈಕೆ ಮಾಡಿತ್ತು. ಆ ಪೈಕಿ ಬೆಲ್ಲದ ಪುಡಿ ಪಾಕೆಟ್‌ನಲ್ಲಿ ಸತ್ತಿರುವ ಇಲಿಯನ್ನು ಹೋಲುವ ವಸ್ತು, ರೋಮಗಳು ಕಾಣಿಸಿಕೊಂಡಿದೆ.   

ADVERTISEMENT

ಪೋಷಕರು ತಕ್ಷಣ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಪ್ಯಾಕೆಟ್‌ ಪಡೆದು ಪರೀಕ್ಷೆಗೆ ಕಳುಹಿಸಿದ್ದಾರೆ. ವರದಿ ಬಂದ ನಂತರ ಆಹಾರ ಭದ್ರತಾ ಕಾಯ್ದೆ ಅಡಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಇಬ್ಬರೂ ಮಕ್ಕಳು ಜೂನ್ ಮತ್ತು ಜುಲೈ ತಿಂಗಳಲ್ಲಿ ಅಂಗನವಾಡಿ ಕೇಂದ್ರದಿಂದ ಆಹಾರ ಪದಾರ್ಥ ಪಡೆದಿಲ್ಲ ಎಂದು ಗುಡಿಬಂಡೆ ಸಿಡಿಪಿಒ ರಫೀಕ್ ತಿಳಿಸಿದ್ದಾರೆ.

ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲು ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿದೆ. ಆದರೆ ಆಹಾರ ಪದಾರ್ಥ ಪೂರೈಸುವ ಗುತ್ತಿಗೆ ಪಡೆದ ಏಜೆನ್ಸಿಗಳು ಇಷ್ಟು ನಿರ್ಲಕ್ಷ್ಯ ವಹಿಸಿದರೆ ಹೇಗೆ? ಅದನ್ನು ಸೇವಿಸಿ ಮಕ್ಕಳಿಗೆ ಆರೋಗ್ಯ ಏರುಪೇರಾದರೆ ಯಾರು ಹೊಣೆ? ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ಮಾಡಿ ಆಹಾರ ಪದಾರ್ಥ ಪೂರೈಸುತ್ತಿರುವ ಏಜೆನ್ಸಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಕ್ಕಳ ಪೋಷಕರು ಮತ್ತು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಗುಡಿಬಂಡೆ ತಾಲ್ಲೂಕು ಗರುಡಾಚಾರ್ಲಹಳ್ಳಿ ಅಂಗನವಾಡಿ ಕೇಂದ್ರದ ಮಕ್ಕಳಿಗೆ ನೀಡಲಾದ ಬೆಲ್ಲದ ಪುಡಿ ಪಾಕೆಟ್‌ನಲ್ಲಿ ಕಂಡು ಬಂದ ಸತ್ತ ಇಲಿ ಹೋಲುವ ವಸ್ತು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.