ಚೇಳೂರು: ‘ಅಕ್ರಮವಾಗಿ ರಸ್ತೆಯನ್ನು ಅತಿಕ್ರಮಿಸಿಕೊಂಡು ಪಾದಚಾರಿಗಳು, ಸಾರ್ವಜನಿಕರಿಗೆ ತೊಂದರೆ ನೀಡಿದರೆ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಸರ್ಕಲ್ ಇನ್‌ಸ್ಪೆಕ್ಟರ್ ಜಿ.ಪಿ. ರಾಜು ಎಚ್ಚರಿಕೆ ನೀಡಿದರು.
ಪಟ್ಟಣದಲ್ಲಿ ಪೊಲೀಸ್ ಇಲಾಖೆಯಿಂದ ಕಾನೂನು ಮತ್ತು ಸುವ್ಯವಸ್ಥೆ ಕುರಿತು ಹಮ್ಮಿಕೊಂಡಿದ್ದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚೇಳೂರು ಇದೀಗ ನೂತನ ತಾಲ್ಲೂಕು ಕೇಂದ್ರವಾಗುತ್ತಿದೆ. ಬಸ್‌ನಿಲ್ದಾಣ ಸೇರಿದಂತೆ ಪಟ್ಟಣದ ಸೌಂದರ್ಯ ಕಾಪಾಡಲು ಅಕ್ರಮವಾಗಿ ನಿರ್ಮಿಸಿರುವ ಗೂಡಂಗಡಿಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಮುಖ್ಯ ರಸ್ತೆಗಳಲ್ಲಿ ಇಟ್ಟಿರುವ ವಿವಿಧ ಅಂಗಡಿಗಳಲ್ಲಿ ಸಿ.ಸಿ ಕ್ಯಾಮೆರಾ ಅಳವಡಿಸಿದರೆ ಕಾನೂನುಬಾಹಿರ ಕೆಲಸಗಳಿಗೆ ಕಡಿವಾಣ ಹಾಕಬಹುದು ಎಂದು ಹೇಳಿದರು.
ಆಟೊ, ದ್ವಿಚಕ್ರವಾಹನ ಸೇರಿದಂತೆ ಎಲ್ಲಾ ತರಹದ ವಾಹನಗಳಿಗೆ ದಾಖಲೆಗಳಿದ್ದರೆ ಮಾತ್ರವೇ ರಸ್ತೆಗೆ ಇಳಿಸಬೇಕು. ನಿಮ್ಮ ಭಾಗದಲ್ಲಿ ಯಾವುದೇ ಮೋಸ, ವಂಚನೆ, ಗಲಾಟೆ ನಡೆದರೆ 112ಕ್ಕೆ ಕರೆ ಮಾಡಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂದರು.
ಚೇಳೂರು ಸರ್ಕಲ್ ಸರಹದ್ದಿನಲ್ಲಿ ಅಂಗಡಿಗಳಿಂದ ಮಾಮೂಲು ಕೇಳಿದರೆ ಅಥವಾ ದೌರ್ಜನ್ಯ ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುವುದು. ಅಂದರ್-ಬಾಹರ್, ಕೋಳಿ ಜೂಜು ಸೇರಿದಂತೆ ಇತರೆ ಕಾನೂನುಬಾಹಿರ ಕೃತ್ಯಗಳು ನಡೆದರೆ ಪೊಲೀಸರ ಗಮನಕ್ಕೆ ತರಬೇಕು ಎಂದು
ಹೇಳಿದರು.
ಮೂರು ತಿಂಗಳಿಗೊಮ್ಮೆ ಜನಸಂಪರ್ಕ ಸಭೆ ಮಾಡಬೇಕು. ಸರ್ಕಾರಿ ಬಸ್‌ನಿಲ್ದಾಣ ಸೇರಿದಂತೆ ವಿವಿಧ ರಸ್ತೆಬದಿಯಲ್ಲಿ ತಳ್ಳುವ ಗಾಡಿಗಳನ್ನು ಇಟ್ಟುಕೊಂಡು ಕೆಲವು ವ್ಯಾಪಾರಸ್ಥರು ಫುಟ್‌ಬಾತ್ ಅತಿಕ್ರಮಿಸಿಕೊಂಡಿದ್ದಾರೆ. ಇನ್ನೂ ಕೆಲವರು ಜಾಗಗಳನ್ನೇ ಬಾಡಿಗೆಗೆ ನೀಡಿದ್ದಾರೆ. ಅವುಗಳನ್ನು ತೆರವುಗೊಳಿಸಬೇಕಿದೆ ಎಂದು ಸಭೆಯಲ್ಲಿ ಬೀದಿಬದಿಯ ವ್ಯಾಪಾರಸ್ಥರು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಲ್ ಇನ್‌ಸ್ಪೆಕ್ಟರ್, ‘ಒಂದು ತಿಂಗಳೊಳಗೆ ರಸ್ತೆ ಕಾಮಗಾರಿ ಪೂರ್ಣಗೊಂಡ ಬಳಿಕ ರಸ್ತೆಬದಿಯಲ್ಲಿಅಕ್ರಮವಾಗಿ ಇಟ್ಟಿರುವ ಅಂಗಡಿಗಳನ್ನು ತೆರವುಗೊಳಿಸಲಾಗುವುದು’ ಎಂದು ಹೇಳಿದರು.
ಸಭೆಯಲ್ಲಿ ಪಿಎಸ್‍ಐ ಹರೀಶ್ ವಿ.ಜೆ. ಶೆಟ್ಟಿ, ಪಾತಪಾಳ್ಯ ಪಿಎಸ್‍ಐ ಅಮರ್ ಎಸ್. ಮುಗುಳೆ, ಎಎಸ್‍ಐ ಎಂ. ರಾಮನಾಥರೆಡ್ಡಿ, ಚೇಳೂರು ಸರ್ಕಲ್ ಇನ್‍ಸ್ಪೆಕ್ಟರ್ ಕಚೇರಿಯ ಎಎಸ್‍ಐ ವೆಂಕಟರವಣಪ್ಪ, ಪಿಡಿಒ ಗೌಸ್ ಪೀರ್, ಕರ ವಸೂಲಿಗಾರ ಪಿ.ಎನ್. ಮಂಜುನಾಥ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.