ADVERTISEMENT

ಚಿಕ್ಕಬಳ್ಳಾಪುರ: ಡೀಮ್ಡ್ ಅರಣ್ಯದಿಂದ 32,486 ಎಕರೆ ಹೊರಕ್ಕೆ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಜಂಟಿಯಾಗಿ ಪರಿಭಾವಿತ ಅರಣ್ಯದ ಸರ್ವೆ

ಡಿ.ಎಂ.ಕುರ್ಕೆ ಪ್ರಶಾಂತ
Published 25 ಜೂನ್ 2024, 6:22 IST
Last Updated 25 ಜೂನ್ 2024, 6:22 IST
ಡಾ.ಎಂ.ಸಿ. ಸುಧಾಕರ್
ಡಾ.ಎಂ.ಸಿ. ಸುಧಾಕರ್   

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆಯು ನಡೆಸಿದ ಜಂಟಿ ಸರ್ವೆಯಿಂದ ಜಿಲ್ಲೆಯಲ್ಲಿನ ಡೀಮ್ಡ್ ಅರಣ್ಯ (ಪರಿಭಾವಿತ ಅರಣ್ಯ) ಪ್ರದೇಶದಿಂದ ಒಟ್ಟು 32,486.22 ಎಕರೆ ಜಮೀನನ್ನು ಕೈಬಿಡಬಹುದು ಎನ್ನುವ ಅಂಶ ಕಂಡು ಬಂದಿದೆ. ಅಲ್ಲದೆ ಸರ್ವೆಯ ಅಂತಿಮ ವರದಿ ನೀಡಲು ಜು.15ರವರೆಗೂ ಗಡುವು ನೀಡಿದ್ದು ಮತ್ತಷ್ಟು ಕೈ ಬಿಡುವ ಜಮೀನು ಹೆಚ್ಚಾಗುತ್ತದೆಯೇ ಕಡಿಮೆ ಆಗುತ್ತದೆ ಎನ್ನುವುದು ತಿಳಿಯಲಿದೆ.

ಸರ್ಕಾರದ ಅಧಿಸೂಚನೆ (2022ರ ಮೇ 5) ಪ್ರಕಾರ ಜಿಲ್ಲೆಯಲ್ಲಿ ಒಟ್ಟು 49463-02 ಎಕರೆಯನ್ನು ಡೀಮ್ಡ್ ಅರಣ್ಯ ಎಂದು ಗುರುತಿಸಲಾಗಿತ್ತು. ನಂತರ ಈ ಡೀಮ್ಡ್ ಅರಣ್ಯ ಎಂದು ಗುರುತಿಸಿರುವ ಪ್ರದೇಶಗಳ ಬಗ್ಗೆ ಗೊಂದಲಗಳು ಸಹ ಮೂಡಿದವು. ಡೀಮ್ಡ್ ಅರಣ್ಯದ ಬಗ್ಗೆ ಗೊಂದಲಗಳು ಇದ್ದಲ್ಲಿ ಮರು ಸರ್ವೆ ನಡೆಸಬೇಕು ಎಂದು ಸರ್ಕಾರ ಸೂಚಿಸಿತು. ಆ ಪ್ರಕಾರ ಜಿಲ್ಲೆಯಲ್ಲಿಯೂ ಸಹ ಈ ಗೊಂದಲಗಳ ನಿವಾರಣೆಗೆ ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೆ ನಡೆಸಿವೆ. 

ಕೆರೆ ಸರ್ವೆ ನಂಬರ್‌ಗಳು, ಕೆಐಎಡಿಬಿಗೆ ಅಧಿಸೂಚನೆ ಆಗಿರುವ ಡೀಮ್ಡ್ ಅರಣ್ಯ ಪ್ರದೇಶ, ಮುಜರಾಯಿ ದೇವಾಲಯಗಳಿಗೆ ಅಧಿಸೂಚನೆ ಆಗಿರುವ ಪ್ರದೇಶ, ಖಾಸಗಿ ಹಿಡುವಳಿ ಜಮೀನುಗಳ ಪರಿಭಾವಿತ ಅರಣ್ಯ ಪ್ರದೇಶ, ಸರ್ಕಾರಿ ವಿವಿಧ ಉದ್ದೇಶಗಳಿಗೆ ಮಂಜೂರಾದ ಪ್ರದೇಶ, ಗುತ್ತಿಗೆಗೆ ನೀಡಲಾದ ಪ್ರದೇಶ, ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ಮಂಜೂರಾದ ಪ್ರದೇಶ, ಈಗಾಗಲೇ ರೆಗ್ಯಲರ್ ಪಾರೆಸ್ಟ್ (ಸೆಕ್ಷನ್ 4)ರ ವಿಸ್ತೀರ್ಣ, ಅಳತೆಯಂತೆ ಕಡಿಮೆ ಮಾಡಬಹುದಾದ ಅಥವಾ ಕೈಬಿಡಬಹುದಾದ ಅರಣ್ಯೇತರ ಪ್ರದೇಶವು ಈ ‍‍ಪಟ್ಟಿಯಲ್ಲಿದೆ. ಹೀಗೆ ಇವುಗಳನ್ನು ಡೀಮ್ಡ್ ಅರಣ್ಯ ಪ್ರದೇಶ ಪಟ್ಟಿಯಿಂದ ಕೈಬಿಡಬಹುದು ಎಂದು ಸರ್ವೆಯಲ್ಲಿ ತಿಳಿಸಲಾಗಿದೆ.

ADVERTISEMENT

ಜಿಲ್ಲೆಯಲ್ಲಿ ಗುರುತಿಸಲಾಗಿದ್ದ 49463-02 ಎಕರೆ ಡೀಮ್ಡ್ ಅರಣ್ಯ ಪ್ರದೇಶದ ಪೈಕಿ 32,486 ಎಕರೆಯನ್ನು ಡೀಮ್ಡ್ ವ್ಯಾಪ್ತಿಯಿಂದ ಹೊರಗಿಡಲು ಅವಕಾಶವಿದೆ. ಜಂಟಿ ಸರ್ವೆಯ ನಂತರ ಡೀಮ್ಡ್ ಅರಣ್ಯ ಎಂದು ಜಿಲ್ಲೆಯಲ್ಲಿ ಪರಿಗಣಿಸಬಹುದಾಗ ಜಮೀನಿನ ಒಟ್ಟು ವಿಸ್ತೀರ್ಣ 16976-20 ಎಕರೆ ಇದೆ.

ದೂರು ಸ್ವೀಕಾರ: ಸರ್ಕಾರದ ಈ ಡೀಮ್ಡ್ ಅರಣ್ಯ ನೀತಿಯು ರೈತರು ಮತ್ತು ಅರಣ್ಯ ಇಲಾಖೆಯ ನಡುವೆ ಜಿಲ್ಲೆಯಲ್ಲಿ ಸಂಘರ್ಷಕ್ಕೆ ಕಾರಣವಾಗಿದೆ. ಜಿಲ್ಲೆಯ ಹಲವು ಕಡೆಗಳಲ್ಲಿ ಉಳುಮೆ ಮಾಡುತ್ತಿದ್ದ ರೈತರನ್ನು ಡೀಮ್ಡ್ ಅರಣ್ಯದ ಹೆಸರಿನಲ್ಲಿ ಒಕ್ಕಲೆಬ್ಬಿಸಲಾಗುತ್ತಿದೆ. ಇದಕ್ಕೆ ರೈತರು ಸಹ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲಲ್ಲಿ ಪ್ರತಿಭಟನೆಗಳು ನಡೆದಿವೆ. ಈ ಪ್ರತಿಭಟನೆಗಳ ಕಾರಣದಿಂದ ರೈತರು ಮತ್ತು ಅರಣ್ಯ ಇಲಾಖೆ ನಡುವೆ ಸಂಘರ್ಷ ಮುಂದುವರಿದಿದೆ. 

ಹೀಗೆ ಡೀಮ್ಡ್ ಅರಣ್ಯದ ವಿಚಾರವಾಗಿ ಎದುರಾಗಿರುವ ಸಮಸ್ಯೆಗಳ ಪರಿಹಾರಕ್ಕೆ ದಾರ ರೈತರಿಂದ ಸರ್ಕಾರ ದೂರುಗಳನ್ನು ಸಹ ಸ್ವೀಕರಿಸುತ್ತಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟಿ 144 ದೂರುಗಳು ಸ್ವೀಕೃತವಾಗಿವೆ.

ಖಾಸಗಿ ಹಿಡುವಳಿ ಜಮೀನುಗಳನ್ನು ಅಧಿಸೂಚಿತ ಪರಿಭಾವಿತ (ಡೀಮ್ಡ್) ಅರಣ್ಯ ಎಂದು ಘೋಷಿಸಿರುವುದು, ಕೆಲವೊಂದು ಸೆಕ್ಷನ್–04ರ ಅಧಿಸೂಚಿತ ಜಮೀನುಗಳನ್ನು ಪುನಃ ಪರಿಭಾವಿತ ಅರಣ್ಯ ಎಂದು ಘೋಷಿಸಿರುವುದು ಅತಿ ವ್ಯಾಪ್ತಿ ಆಗಿರುವುದು, ಅರ್ಜಿದಾರರು ಸುಮಾರು ವರ್ಷಗಳಿಂದ ಉಳುಮೆ ಮಾಡುತ್ತಿದ್ದು ಸದರಿ ಪ್ರದೇಶವನ್ನೂ ಡೀಮ್ಡ್ ಅರಣ್ಯ ಎಂದು ಘೋಷಿಸಿರುವುದು,
ಅರ್ಜಿದಾರರಿಗೆ ಈಗಾಗಲೇ ಸರ್ಕಾರಿ ಜಮೀನುಗಳನ್ನು ಗುತ್ತಿಗೆಗೆ ನೀಡಿದ್ದು ಅಂತಹ ಜಮೀನುಗಳನ್ನು ಡೀಮ್ಡ್ ಅರಣ್ಯ ಎಂದು ಘೋಷಿಸಿರುವುದು– ಈ ಎಲ್ಲ ಕಾರಣಗಳ ಬಾಧಿತರಾದ 144 ಮಂದಿ ದೂರುಗಳನ್ನು ಸಲ್ಲಿಸಿದ್ದಾರೆ.

ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ನಡೆಸಿದ ಡೀಮ್ಡ್ ಅರಣ್ಯ ಪ್ರದೇಶದ ಜಂಟಿ ಸರ್ವೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಮೀಕ್ಷೆಯ ವರದಿ ಸಲ್ಲಿಸಲು ಜು.15ರ ಗಡುವು ನೀಡಿದ್ದಾರೆ. ಆ ಪ್ರಕಾರ ಡೀಮ್ಡ್ ಅರಣ್ಯ ಪ್ರದೇಶದಿಂದ ಮತ್ತಷ್ಟು ಜಮೀನು ಹೊರಗೆ ಉಳಿಯುವ ಸಾಧ್ಯತೆಯೂ ಇದೆ.

‘ಜಿಲ್ಲೆಯಲ್ಲಿ ಡೀಮ್ದ್ ಫಾರೆಸ್ಟ್‌ ಎಂದು ಸರ್ಕಾರದಿಂದ ಘೋಷಿಸಿರುವ ಪ್ರದೇಶದಲ್ಲಿ ವಾಸ್ತವದಲ್ಲಿರುವ ಸ್ವಾಭಾವಿಕ ಗಿಡ, ಮರ, ಕೆರೆ, ಕುಂಟೆ, ಕಲ್ಲುಬಂಡೆ, ಗುತ್ತಿಗೆ ಜಮೀನು, ಮುಜರಾಯಿ ಜಮೀನು, ಅರಣ್ಯ, ರೈತರ ಹಿಡುವಳಿ ಜಮೀನನ್ನು ಸರಿಯಾಗಿ ದೃಢೀಕರಿಸಲು ಅಧಿಕಾರಿಗಳು ಮರು ಸರ್ವೆ ಸಮೀಕ್ಷೆ ಕೈಗೊಳ್ಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ಸೂಚಿಸಿದ್ದಾರೆ.

ಜಿಲ್ಲೆಯಾದ್ಯಂತ ಮರು ಸಮೀಕ್ಷೆ ಮಾಡಬೇಕು. ಜುಲೈ 15ರ ಒಳಗೆ ವರದಿ ನೀಡಬೇಕು ಎಂದು ನಿರ್ದೇಶನ ನೀಡಿದ್ದಾರೆ.

ಪಟ್ಟಿ 

‘ಕಂದಾಯ ಅಧಿಕಾರಿಗಳು ಗಮನಿಸಬೇಕಿತ್ತು’
‘ಚಿಕ್ಕಬಳ್ಳಾಪುರ ಸಣ್ಣ ಜಿಲ್ಲೆ. ಇಲ್ಲಿಯೇ 50 ಸಾವಿರ ಎಕರೆ ಡೀಮ್ಡ್ ಅರಣ್ಯ ಎಂದು ಗುರುತಿಸಲಾಗಿದೆ. ನನ್ನ ವಿಧಾನಸಭಾ ಕ್ಷೇತ್ರದಲ್ಲಿಯೇ 20ಕ್ಕೂ ಹೆಚ್ಚು ಕೆರೆಗಳು ಕೈಗಾರಿಕೆಗೆ ಮೀಸಲಿಟ್ಟ ಮತ್ತು ಕೈಗಾರಿಕೋದ್ಯಮಿಗಳಿಗೆ ಹಂಚಿಕೆ ಮಾಡಿರುವ ಜಮೀನನ್ನು ಡೀಮ್ಡ್ ಅರಣ್ಯ ಎಂದು ಗುರುತಿಸಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು. ಕೆರೆ ಎಂದು ಷರಾ ಬರೆದಿದ್ದರೂ ಅಂದಿನ ಜಿಲ್ಲಾಡಳಿತ ನಿರ್ಲಕ್ಷ್ಯವಹಿಸಿ ಡೀಮ್ಡ್ ಅರಣ್ಯಕ್ಕೆ ಸೇರಿಸಿದೆ. ಕಂದಾಯ ಅಧಿಕಾರಿಗಳು ಗಮನಿಸಬೇಕಾಗಿತ್ತು. ಗಂಭೀರವಾಗಿ ತೆಗೆದುಕೊಳ್ಳಬೇಕಾಗಿತ್ತು. ಅಕ್ಕಪಕ್ಕದ ಜಿಲ್ಲೆಗಳಲ್ಲಿನ ಬೆಳವಣಿಗೆಗಳ ಬಗ್ಗೆ ವಿಚಾರಿಸಿಕೊಳ್ಳಬೇಕಾಗಿತ್ತು. ಆದರೆ ಅದ್ಯಾವುದನ್ನೂ ಮಾಡಿಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.