ಚಿಕ್ಕಬಳ್ಳಾಪುರ: ತೀವ್ರ ಕುತೂಹಲ ಕೆರಳಿಸಿದ್ದ ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯ ಮತದಾನ ಮುಗಿಯುತ್ತಿದ್ದಂತೆ, ಕ್ಷೇತ್ರದಾದ್ಯಂತ ಈಗ ಸೋಲು ಗೆಲುವಿನ ಲೆಕ್ಕಾಚಾರ ಎಲ್ಲೆಡೆ ಚರ್ಚೆಯ ರೂಪದಲ್ಲಿ ಮಾರ್ದನಿಸುತ್ತಿದೆ.
ಮಳೆ ನಿಂತರೂ ಮರದ ಹನಿಗಳು ನಿಲ್ಲಲ್ಲಿಲ್ಲ ಎಂಬಂತೆ ಉಪ ಚುನಾವಣೆ ಮುಗಿದರೂ ಜನ ಇನ್ನೂ ಅದರ ಗುಂಗಿನಿಂದ ಹೊರಬಂದಿಲ್ಲ. ಅಂಗಡಿ- ಮುಂಗಟ್ಟುಗಳು, ಹೋಟೆಲ್, ರಸ್ತೆ, ಬಸ್ ನಿಲ್ದಾಣ, ರಚ್ಚುಕಟ್ಟೆ.. ಹೀಗೆ ಎಲ್ಲಿ ನಾಲ್ಕು ಜನ ಸೇರಿದರೂ ಚುನಾವಣೆಯದೇ ಮಾತು. ಮತದಾನ ಹೇಗೆ ನಡೆದಿದೆ? ಯಾರ ಪರವಾಗಿ ಅಧಿಕ ಮತಗಳು ಚಲಾವಣೆಯಾಗಿವೆ? ಯಾರು ಗೆಲ್ಲಬಹುದು? ಎಂಬ ಪ್ರಶ್ನೆಗಳು ಎಲ್ಲೆಡೆ ಗರಿಗೆದರುತ್ತಿವೆ.
ಸಮ್ಮಿಶ್ರ ಸರ್ಕಾರದ ಪತನದ ಬೆನ್ನಲ್ಲೇ ಅಧಿಕಾರಕ್ಕೆ ಬಂದ ಬಿಜೆಪಿಗೆ ಅಳಿವು ಉಳಿವಿನ ಪ್ರಶ್ನೆಯಾಗಿ ಬಂದ ಈ ಉಪ ಚುನಾವಣೆ ‘ಹೈವೋಲ್ಟೆಜ್ ಎಲೆಕ್ಷನ್’ ಎಂಬ ಕಾವು ಸೃಷ್ಟಿಸಿತ್ತು. ಇದರಲ್ಲಿ ಎರಡು ಬಾರಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿ, ಎರಡನೇ ಅವಧಿಯಲ್ಲಿ 14 ತಿಂಗಳಿಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಅನರ್ಹ ಶಾಸಕ ಎಂಬ ಹಣೆಪಟ್ಟಿ ಅಂಟಿಸಿಕೊಂಡು ಬಿಜೆಪಿಗೆ ಸೇರ್ಪಡೆಗೊಂಡು ಮೂರನೇ ಬಾರಿಗೆ ಕಣಕ್ಕಿಳಿದ ಡಾ.ಕೆ.ಸುಧಾಕರ್ ಅವರಿಗೆ ಇದು ‘ಅಸ್ತಿತ್ವ‘ದ ಜತೆಗೆ ‘ಪ್ರತಿಷ್ಠೆ’ಯ ಚುನಾವಣೆಯಾಗಿತ್ತು ಎನ್ನುತ್ತಾರೆ ಅವರ ಆಪ್ತರು.
ಶಾಸಕರನ್ನು ಮತ್ತು ಅಧಿಕಾರ ಕಳೆದುಕೊಂಡ ಕಾಂಗ್ರೆಸ್ ಮತ್ತು ಜೆಡಿಎಸ್‌ನವರು ಕೂಡ ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ ಪರಿಣಾಮ, ಮೊದಲ ಬಾರಿಗೆ ಕ್ಷೇತ್ರದಲ್ಲಿ ಕಾಣಿಸಿಕೊಂಡ ಉಪ ಚುನಾವಣೆ ಹಿಂದೆಂದೂ ಕಂಡರಿಯದಷ್ಟು ಕುತೂಹಲ ಕೆರಳಿಸಿತ್ತು. ಪರಿಣಾಮ, ತೀವ್ರ ಪಕ್ಷಾಂತರಕ್ಕೆ ಎಡೆ ಮಾಡಿ, ಅದ್ಧೂರಿ ಬಹಿರಂಗ ಪ್ರಚಾರಗಳಿಗೆ ಸಾಕ್ಷಿಯಾಯಿತು. ಮತದಾನದ ಹಿಂದಿನ ರಾತ್ರಿ ಮತದಾರರ ಮನ ಒಲಿಸುವ ಪ್ರಯತ್ನದ ಭಾಗವಾಗಿ ಕ್ಷೇತ್ರದಲ್ಲಿ ಹಣದ ಹೊಳೆಯೇ ಹರಿದಿದೆ ಎನ್ನುವುದು ಪ್ರಜ್ಞಾವಂತರ ಆರೋಪ.
ಹಗಲಿರುಳು ಚುನಾವಣೆಗಾಗಿ ಶ್ರಮಿಸಿದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳು ಸದ್ಯ ವಿಶ್ರಾಂತಿ ಮೊರೆ ಹೋದರೆ, ಅವರ ಆಪ್ತರು ಯಾವೆಲ್ಲ ಮತಗಟ್ಟೆಗಳಲ್ಲಿ ಎಷ್ಟೆಷ್ಟು ಮತದಾನವಾಗಿದೆ. ಆ ಪೈಕಿ ನಮ್ಮ ನಾಯಕನಿಗೆ ಎಷ್ಟು ದೊರೆಯಲಿದೆ ಎಂಬ ಮಾಹಿತಿ ಕಲೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಮೂರು ಪಕ್ಷಗಳ ಮುಖಂಡರಲ್ಲೂ ಗೆಲುವಿನ ಆಸೆ ಜೀವಂತವಾಗಿರುವುದು ಜನರಿಗೆ ಸೋಜಿಗದ ಜತೆಗೆ ಗೊಂದಲ ಹುಟ್ಟಿಸುತ್ತಿದೆ.
ಸದ್ಯ ರಾಜಕೀಯ ಗಣಿತದಲ್ಲಿ ತೊಡಗಿಸಿಕೊಂಡವರೆಲ್ಲ ತಮ್ಮದೇ ಆದ ಲೆಕ್ಕಾಚಾರದಲ್ಲಿ ಗೆಲುವಿನ ಸೂತ್ರ ಮುಂದಿಡುತ್ತಿದ್ದಾರೆ. ಕೆಲವರು ಈ ಚುನಾವಣೆಯನ್ನು ಪಕ್ಷ ಆಧಾರಿತ ಚುನಾವಣೆ ಎಂದರೆ, ಇನ್ನು ಕೆಲವರು ಇದು ವ್ಯಕ್ತಿ ಆಧಾರಿತ ಚುನಾವಣೆ ಎಂದು ತಮ್ಮದೇ ಲೆಕ್ಕದಲ್ಲಿ ತರ್ಕಿಸುತ್ತ ತಮ್ಮ ಅಭ್ಯರ್ಥಿಗಳ ಪರವಾಗಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸುತ್ತಾರೆ. ಜನರು ಮಾತ್ರ ಈ ಬಾರಿ ಮೂರು ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಸ್ವಲ್ಪ ಮತಗಳ ಅಂತರದಲ್ಲಿ ಯಾರಾದರೂ ಗೆಲ್ಲಬಹುದು ಎಂದು ಹೇಳುತ್ತಿದ್ದಾರೆ.
ಹೇಗಿದೆ ಗೆಲುವಿನ ಲೆಕ್ಕಾಚಾರ?
2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದಲ್ಲಿ ಶೇ 88.6ರಷ್ಟು ಮತದಾನವಾಗಿತ್ತು. ಅದರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಕೆ.ಸುಧಾಕರ್ 82,006 (ಶೇ47.5), ಜೆಡಿಎಸ್ ಅಭ್ಯರ್ಥಿ ಕೆ.ಪಿ.ಬಚ್ಚೇಗೌಡ 51,575 (ಶೇ 29.9), ಪಕ್ಷೇತರ ಅಭ್ಯರ್ಥಿ ಕೆ.ವಿ.ನವೀನ್ ಕಿರಣ್ 29,433 (ಶೇ17) ಮತ್ತು ಬಿಜೆಪಿ ಅಭ್ಯರ್ಥಿ ಡಾ.ಜಿ.ವಿ.ಮಂಜುನಾಥ್ 5,576 (ಶೇ3.2) ಮತಗಳನ್ನು ಪಡೆದಿದ್ದರು. ಜತೆಗೆ ಈ ಕ್ಷೇತ್ರ ಮೊದಲಿನಿಂದಲೂ ಕಾಂಗ್ರೆಸ್ ಭದ್ರಕೋಟೆಯಾಗಿದೆ. ಇಲ್ಲಿ ಬಿಜೆಪಿಗೆ ನೆಲೆ ಇಲ್ಲ. ಹೀಗಾಗಿ ಮತ್ತೊಮ್ಮೆ ಇಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ಎನ್ನುತ್ತಾರೆ ‘ಕೈ’ ಪಾಳೆಯದವರು.
ಇದನ್ನು ಅಲ್ಲಗಳೆಯುವ ಬಿಜೆಪಿಯವರು ಕಳೆದ ಲೋಕಸಭೆ ಚುನಾವಣೆಯ ಫಲಿತಾಂಶದ ಉದಾಹರಣೆಯೊಂದಿಗೆ ಮಾತು ಆರಂಭಿಸುತ್ತಾರೆ. ಜತೆಗೆ ಈ ಬಾರಿಯ ಉಪ ಚುನಾವಣೆ ವ್ಯಕ್ತಿ ಆಧಾರಿತವಾಗಿ ನಡೆದಿದೆ. ಶಾಸಕರಾಗಿ ಸುಧಾಕರ್ ಅವರು ಮಾಡಿರುವ ಅಭಿವೃದ್ಧಿ ನೋಡಿರುವ ಮತದಾರರು ಅವರ ಕೈ ಹಿಡಿಯುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯದಲ್ಲಿ ಯಡಿಯೂರಪ್ಪ ಅವರ ಕೈಬಲಪಡಿಸಲು ಮತ್ತೊಮ್ಮೆ ಇಲ್ಲಿ ಸುಧಾಕರ್ ಅವರನ್ನೇ ಆಯ್ಕೆ ಮಾಡಿ ಮೊದಲ ಬಾರಿಗೆ ಕಾಂಗ್ರೆಸ್ ಕೋಟೆಯಲ್ಲಿ ಕಮಲದ ಖಾತೆ ತೆರೆಯುವುದು ಖಚಿತ ಎನ್ನುತ್ತಾರೆ.
ಮತ್ತೊಂಡೆದೆ ಕಳೆದ ವಿಧಾನಸಭೆಯ ಚುನಾವಣೆಯಲ್ಲಿ ಪಡೆದ ಮತಗಳ ಲೆಕ್ಕ ನೀಡುವ ಜೆಡಿಎಸ್ ಪಾಳೆಯದವರೂ ‘ಕಾಯ್ದು ನೋಡಿ ಈ ಬಾರಿ ಗೆಲುವು ನಮ್ಮದೇ’ ಎಂದು ಆತ್ಮವಿಶ್ವಾಸದಿಂದ ಹೇಳುತ್ತಿದ್ದಾರೆ. ಹೀಗಾಗಿ, ವಿವಿಧ ರೀತಿಯ ಲೆಕ್ಕಾಚಾರ ಹಾಕಿದರೂ ಗೆಲುವು ಯಾರಿಗೆ ಎಂದು ಜನಸಾಮಾನ್ಯರಿಗೆ ಊಹಿಸುವುದು ಕಷ್ಟವಾಗುತ್ತಿದೆ.
ದಲಿತರು, ಪರಿಶಿಷ್ಟರು, ಅಲ್ಪಸಂಖ್ಯಾತರು, ಕುರುಬರು. ಒಕ್ಕಲಿಗರು ಮತ್ತು ಸಣ್ಣ ಸಮುದಾಯದವರು ಅಂಜನಪ್ಪ ಅವರನ್ನು ಗೆಲುವಿನ ದಡ ಸೇರಿಸಲಿದ್ದಾರೆ ಎಂಬ ಆಶಾಭಾವನೆ ಕಾಂಗ್ರೆಸ್ ವಲಯದಲ್ಲಿ ವ್ಯಕ್ತವಾಗುತ್ತಿದ್ದರೆ, ಒಕ್ಕಲಿಗರು, ಬಲಿಜ, ಮೇಲ್ವರ್ಗದ ಮತಗಳ ಜತೆಗೆ ಸ್ವಲ್ಪ ಪ್ರಮಾಣದಲ್ಲಿ ದಲಿತರು, ಪರಿಶಿಷ್ಟರು, ಅಲ್ಪಸಂಖ್ಯಾತರ ಮತಗಳು ಸುಧಾಕರ್ ಅವರ ಗೆಲುವಿಗೆ ಸಹಕಾರಿಯಾಗಲಿವೆ ಎನ್ನುವುದು ಕೇಸರಿ ಪಾಳೆಯದವರ ಸಮೀಕರಣ. ಇನ್ನು ಜೆಡಿಎಸ್‌ನವರು ತಮ್ಮ ಸಾಂಪ್ರದಾಯಿಕ ಮತಗಳ ಜತೆಗೆ ಈ ಬಾರಿ ದಲಿತರು, ಪರಿಶಿಷ್ಟರು, ಅಲ್ಪಸಂಖ್ಯಾತರು ನಮ್ಮ ಕೈ ಹಿಡಿಯಲಿದ್ದಾರೆ ಎಂದು ಹೇಳುತ್ತಾರೆ.
ಉಪ ಚುನಾವಣೆಯಲ್ಲಿ ಶೇ 86.84 ರಷ್ಟು ಮತದಾನವಾಗಿದೆ. 2 ಲಕ್ಷ ಮತದಾರರ ಪೈಕಿ 1.73 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಮತದಾನ ಮಾಡಿರುವವರ ಒಲುವು ಯಾರತ್ತ ಹೆಚ್ಚು ವಾಲಿದೆಯೋ ಎನ್ನುವುದು ಮೂರು ಬಣಗಳ ಒಳಗಿನ ಹೇಳಿಕೊಳ್ಳಲಾಗದ ಬೇಗುದಿ ಉಂಟು ಮಾಡಿದ್ದಂತೂ ಸತ್ಯ. ಕುತೂಹಲ ತಣಿಯಲು ಒಂದು ದಿನ ಕಾಯ್ದರೆ ಸಾಕು ಡಿ.9 ರಂದು ಎಲ್ಲ ಅಭ್ಯರ್ಥಿಗಳ ಭವಿಷ್ಯ ಅನಾವರಣಗೊಳ್ಳಲಿದೆ. ಬಳಿಕವಷ್ಟೇ ಮತದಾರನ ಒಲವಿನ ಚಿತ್ರಣ ಸ್ಪಷ್ಟವಾಗಿ ಗೋಚರವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.