ಬಾಗೇಪಲ್ಲಿ: ಬೇಸಿಗೆ ಕಾಲದಲ್ಲಿ ಮಣ್ಣಿನ ಮಡಿಕೆ ನೀರು ಜನರ ಹೊಟ್ಟೆಯನ್ನು ತಂಪಾಗಿಸುತ್ತದೆ. ಆದರೆ ಇಂಥ ಮಡಿಕೆ ತಯಾರಿಸುವ ಕುಂಬಾರ ಸಮುದಾಯಸ ಹೊಟ್ಟೆ ತಣ್ಣಗಿಲ್ಲ!.
ಬೇಸಿಗೆಯ ಸುಡುಬಿಸಿಲಿನಿಂದ ಕುಂಬಾರರು ತಯಾರಿಸುವ ಮಡಿಕೆಗಳಿಗೆ ಬೇಡಿಕೆ ಬಂದಿದೆ. ಕುಲಕಸಬನ್ನೆ ನಂಬಿ ಬದುಕಿನ ಬಂಡಿ ಸಾಗಿಸುವವರು ಸದ್ಯದ ಮಟ್ಟಿಗೆ ಒಂದಿಷ್ಟು ಕಾಸು ಸಂಪಾದಿಸುತ್ತಿದ್ದಾರೆ.
ಆಧುನಿಕ ಜೀವನ ಶೈಲಿಯಿಂದ ದಶಕಗಳ ಹಿಂದೆಯೇ ಮಣ್ಣಿನ ಪಾತ್ರೆ ಬಳಕೆ ಕಣ್ಮರೆಯಾಗಿದೆ. ಬೇಸಿಗೆ ಹಾಗೂ ಶುಭಕಾರ್ಯದ ಸಂದರ್ಭದಲ್ಲಿ ಮಾತ್ರ ಮಡಿಕೆ–ಕುಡಿಕೆಗಳಿಗೆ ಬೇಡಿಕೆ ಬರುತ್ತದೆ. ಉಳಿದ ಸಮಯದಲ್ಲಿ ಕುಂಬಾರರನ್ನು ಕ್ಯಾರೆ ಎನ್ನುವವರು ಇಲ್ಲ.
ಇದರಿಂದ ಕುಲಕಸುಬನ್ನು ಉಳಿಸಿಕೊಂಡು, ಜೀವನ ಸಾಗಿಸುವುದು ಕಷ್ಟವಾಗಿದೆ. ಇದರಿಂದ ಕುಂಬಾರಿಕೆ ಮತ್ತು ಕುಂಬಾರರು ನಲುಗಿ ಹೋಗಿದ್ದಾರೆ. ಬೇಸಿಗೆ ಸಮಯದಲ್ಲಿ ಕುಂಬಾರಿಕೆ, ಉಳಿದ ಸಮಯದಲ್ಲಿ ಕೂಲಿ ಮಾಡಿ ಜೀವನ ಸಾಗಿಸಬೇಕಿದೆ. ಹೀಗಾಗಿ ಕುಂಬಾರ ಸಮುದಾಯಕ್ಕೆ ಸರ್ಕಾರ ವಿಶೇಷ ಯೋಜನೆ ರೂಪಿಸಬೇಕೆಂಬು ಕುಂಬಾರರು ಒತ್ತಾಯಿಸಿದ್ದಾರೆ.
ಕುಂಬಾರರು ತಾವು ತಯಾರಿಸುವ ಮಡಿಕೆಗಳನ್ನು ಮಾರಾಟ ಮಾಡಲು ವ್ಯವಸ್ಥೆ ಇಲ್ಲದೆ ಕಾರಣ ಪಟ್ಟಣದ ವ್ಯಾಪಾರಿಗಳಿಗೆ ಮಾರುತ್ತಾರೆ. ವರ್ತಕರು ಕಡಿಮೆ ಬೆಲೆಯಲ್ಲಿ ಖರೀದಿಸಿ, ಪಟ್ಟಣ ಮತ್ತು ವಾರದ ಸಂತೆಗಳಲ್ಲಿ ದುಪ್ಪಟ್ಟು ಬೆಲೆಗೆ ವ್ಯಾಪಾರ ಮಾಡುತ್ತಾರೆ. ಇದರಿಂದ ಕುಂಬಾರರ ಶ್ರಮಕ್ಕೆ ಕನಿಷ್ಠ ಬೆಲೆಯೂ ದೊರೆಯುತ್ತಿಲ್ಲ. ಸರ್ಕಾರದಿಂದ ಪ್ರೋತ್ಸಾಹವೂ ದೊರೆಯುತ್ತಿಲ್ಲ.
ಇದೇ ಕಾರಣಕ್ಕೆ ಬಾಗೇಪಲ್ಲಿ ತಾಲ್ಲೂಕಿನಲ್ಲಿಯೂ ಮಡಿಕೆ ಮಾಡುವವರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಇಂದಿಗೂ ಕೂಡ ಈ ಸಮಸ್ಯೆಗಳು ಕುಂಬಾರರನ್ನು ಕಾಡುತ್ತಿದೆ. ಇಷ್ಟೇಲ್ಲ ಸಮಸ್ಯೆ ಇದ್ದರೂ ಕೆಲವರು ತಮ್ಮ ಕುಲಕಸುಬು ಉಳಿವಿಗಾಗಿ ನಷ್ಟದ ನಡುವೆಯೂ ಕುಂಬಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ತಾಲ್ಲೂಕಿನ ಗೂಳೂರು ಹೋಬಳಿಯ ನಲ್ಲಪರೆಡ್ಡಿಪಲ್ಲಿ ಗ್ರಾಮದಲ್ಲಿ ಕಳೆದ 30 ವರ್ಷಗಳಿಂದ ಕುಂಬಾರ ಸಮುದಾಯದ ವೆಂಕಟರಾಮಪ್ಪ ಹಾಗೂ ಇವರ ಸಹೋದರ ಶಿವಪ್ಪ ತಮ್ಮ ಕುಲ ಕಸುಬನ್ನು ಜೀವಂತವಾಗಿರಿಸಿದ್ದಾರೆ.
ಆಧುನಿಕ ಕಾಲಚಕ್ರಕ್ಕೆ ಸಿಕುಕಿ ನಲುಗಿರುವ ಕುಂಬಾರಿಕೆ ಉಳಿವಿಗೆ ಸರ್ಕಾರ ನೆರವಿಗೆ ಧಾವಿಸಬೇಕು ಎನ್ನುತ್ತಾರೆ ಈ ಸಹೋದರರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.