ಗೌರಿಬಿದನೂರು: ಮೃತಪಟ್ಟವರ ಶವ ಸಂಸ್ಕಾರ ನಡೆಸಲು ಗೌರಿಬಿದನೂರಿನಲ್ಲಿರುವ ಮುಕ್ತಿಧಾಮಗಳು ಅಥವಾ ಸ್ಮಶಾನಗಳು ನರಕ ಯಾತನೆಯಿಂದ ಬಳಲುತ್ತಿವೆ. ಈ ಮುಕ್ತಿಧಾಮಗಳಿಗೆ ಹೈಟೆಕ್ ರಸ್ತೆಗಳು ಅಥವಾ ದೊಡ್ಡ ದೊಡ್ಡ ಅಲಂಕಾರಗಳನ್ನು ಮಾಡುವುದು ಬೇಕಾಗಿಲ್ಲ. ಕನಿಷ್ಠ ಸ್ಮಶಾನಗಳ ಆವರಣದಲ್ಲಿ ಬೆಳೆದಿರುವ ಗಿಡ ಗಂಟಿಗಳನ್ನು ತೆರವು ಮಾಡುವುದು, ಸಂಸ್ಕಾರ ನಡೆಸಿದ ನಂತರ ಸಂಸ್ಕಾರಕ್ಕೆ ಬಂದವರು ಕೈ ಕಾಲು ತೊಳೆದುಕೊಳ್ಳಲು ನೀರು...ಹೀಗೆ ಕನಿಷ್ಠ ವ್ಯವಸ್ಥೆಗಳು ಆದರೆ ಸಾಕು.
ಆದರೆ ಗೌರಿಬಿದನೂರಿನ ಸ್ಮಶಾನಗಳನ್ನು ನೋಡಿದರೆ ಸ್ಮಶಾನವೊ ಗಿಡಗಂಟಿಗಳು ತುಂಬಿರುವ ಪೊದೆಯೊ ಎನ್ನುವ ಭಾವನೆ ಮೂಡುತ್ತದೆ. ಗೌರಿಬಿದನೂರು ನಗರದ ಬಹುತೇಕ ಸ್ಮಶಾನಗಳಲ್ಲಿ ಮುಳ್ಳುಕಂಟಿ, ಜಾಲಿಗಿಡಗಳು ಬೆಳೆದಿವೆ.
ನಗರದ ಕಲ್ಲೂಡಿ, ಹಿರೇಬಿದನೂರು, ಚೀಕಟಗೆರೆ, ಕರೇಕಲ್ಲಹಳ್ಳಿ, ಉಪ್ಪಾರ ಕಾಲೊನಿ, ಉಡಮಲೋಡಿ ನಲ್ಲಿರುವ ಕ್ರಿಶ್ಚಿಯನ್ ಸಮುದಾಯದ ಸ್ಮಶಾನ ಮತ್ತು ಬಿಜಿಎಸ್ ಕಾಲೇಜಿನ ಹಿಂಭಾಗದಲ್ಲಿರುವ ಮುಸ್ಲಿಂ ಸಮುದಾಯದ ಸ್ಮಶಾನ ಹೀಗೆ ಎಲ್ಲಾ ಕಡೆಗಳಲ್ಲೂ ಸ್ಮಶಾನದಲ್ಲಿ ಜಾಲಿ ಗಿಡಗಳು, ಗಿಡ ಗಂಟಿಗಳು ಬೆಳೆದು ನಿಂತಿವೆ.
ಒಳ ಹೋಗಲು ಆಗದಂತಹ ಸ್ಥಿತಿ ಇದೆ. ಗಿಡ ಗಂಟಿಗಳು ಹೆಚ್ಚಾಗಿ ಬೆಳೆದಿರುವುದರಿಂದ ಹಾವು ಚೇಳುಗಳು ಕಾಣಿಸುವುದು ಸರ್ವೇ ಸಾಮಾನ್ಯವಾಗಿದೆ.
ಇಲ್ಲಿರಬೇಕಾದ ಕನಿಷ್ಠ ಮೂಲ ಸೌಕರ್ಯಗಳು ಇಲ್ಲ. ನೀರಿನ ವ್ಯವಸ್ಥೆಯಂತೂ ಬಹುತೇಕ ಕಡೆ ಕಾಣುವುದೇ ಇಲ್ಲ. ವಿದ್ಯುತ್ ದೀಪಗಳು ಎಲ್ಲೂ ಅಳವಡಿಸಿಲ್ಲ. ಬಿಸಿಲು ಮಳೆ ಬಂದರೆ ಕನಿಷ್ಠ ನಿಲ್ಲಲು ವ್ಯವಸ್ಥೆಯನ್ನು ಯಾವ ಸ್ಮಶಾನದಲ್ಲೂ ಮಾಡಿಲ್ಲ.
ನಗರ ಮತ್ತು ಗ್ರಾಮಗಳಲ್ಲಿನ ಸ್ಮಶಾನಗಳಿಗೆ ಸರಿಯಾದ ರಸ್ತೆಗಳೂ ಇಲ್ಲ. ಶವ ಸಾಗಿಸುವಾಗ ಕಚ್ಚಾ ರಸ್ತೆಯಲ್ಲೇ ಸಾಗಬೇಕು. ಮಳೆಗಾಲ ಬಂದರೆ ಅಧ್ವಾನವಾದ ರಸ್ತೆಯಲ್ಲಿ ಶವ ಸಾಗಿಸುವುದು ದುಸ್ತರವಾದ ಕೆಲಸ. ಇಷ್ಟೆಲ್ಲಾ ಅಧ್ವಾನಗಳು ಇದ್ದರೂ ಅಧಿಕಾರಿಗಳು ಮಾತ್ರ ಕೈಕಟ್ಟಿ ಕುಳಿತಿದ್ದಾರೆ.
ಸ್ಮಶಾನಗಳು ತ್ಯಾಜ್ಯ ವಿಲೇವಾರಿ ಘಟಕಗಳಾಗಿವೆ. ತ್ಯಾಜ್ಯ ಬಿಸಾಡುವ ಜನರಿಗೆ ಇದು ಹೇಳಿ ಮಾಡಿಸಿದ ಜಾಗ. ಯಾವುದೇ ಸ್ಮಶಾನದಲ್ಲಿ ನೋಡಿದರೂ ಮದ್ಯದ ಬಾಟಲಿಗಳು ಮತ್ತು ಪ್ಲಾಸ್ಟಿಕ್ ಕವರ್‌ಗಳೇ ತುಂಬಿವೆ.
ತಾಲ್ಲೂಕಿನ ಪ್ರತಿಯೊಂದು ಕಡೆ ಸ್ಮಶಾನ ಭೂಮಿ ಗುರುತಿಸಿ, ಅವುಗಳನ್ನು ಅಭಿವೃದ್ಧಿ ಪಡಿಸುವ ಯೋಜನೆಗೆ ಅಧಿಕಾರಿಗಳ ನಿರುತ್ಸಾಹ ತೋರುತ್ತಿದ್ದಾರೆ ಎನ್ನುವುದು ಇವುಗಳ ಸ್ಥಿತಿ ನೋಡಿದರೆ ಎದ್ದು ಕಾಣುತ್ತದೆ. ಗ್ರಾಮಸ್ಥರೇ ಕೆಲ ಸಂದರ್ಭದಲ್ಲಿ ಸ್ವಯಂ ಪ್ರೇರಣೆಯಿಂದ ಸ್ವಚ್ಛತೆಗೆ ಮುಂದಾಗುತ್ತಿದ್ದಾರೆ. ಇನ್ನು ಮಳೆಗಾಲದ ಸಂದರ್ಭದಲ್ಲಂತೂ ಅನನುಕೂಲ ತುಸು ಹೆಚ್ಚಾಗಿರುತ್ತದೆ.
ಅಂತ್ಯಸಂಸ್ಕಾರ ಕ್ರಿಯೆಯಲ್ಲಿ ಭಾಗವಹಿಸುವ ದುಃಖತಪ್ತ ಜನರಿಗೆ ಕನಿಷ್ಠ ನೆರಳು ಇಲ್ಲ. ಸ್ಮಶಾನ ಭೂಮಿ ಸ್ವಚ್ಛಗೊಳಿಸಿ, ಸುತ್ತಲು ಬೇಲಿ ನಿರ್ಮಿಸುವುದು, ಗೇಟ್ ನಿರ್ಮಾಣ, ದಾರಿಯನ್ನು ನಿರ್ಮಿಸುವುದು ಸರ್ಕಾರದ ಆದ್ಯತೆ. ಆದರೆ ಇದರ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಗಿಡ ನೆಡುವುದಕ್ಕೆ ಮಾತ್ರ ಸೀಮಿತ: ಬಹುತೇಕ ಸ್ಮಶಾನಗಳು ಪರಿಸರ ದಿನಾಚರಣೆಯ ದಿನ ಗಿಡ ನೆಡುವುದಕ್ಕೆ ಮಾತ್ರ ಸೀಮಿತವಾಗಿವೆ. ಕೆಲವು ಸ್ಮಶಾನಗಳಲ್ಲಿ ಗಿಡ ಮರಗಳು ಬೆಳೆದಿರುವುದು ಬಿಟ್ಟರೆ, ಬೇರೆ ಯಾವ ವ್ಯವಸ್ಥೆಯು ಇಲ್ಲ.
ಸ್ವಚ್ಛತೆ ನಡೆಸಲಾಗಿದೆ; ಮತ್ತೆ ಗಿಡ ಬೆಳೆದಿವೆ
ಈಗಾಗಲೇ ಸ್ವಚ್ಛತೆ ಮಾಡಲಾಗಿದೆ. ಮಳೆಗಾಲವಾದ ಕಾರಣ ಮತ್ತೆ ಗಿಡಗಳು ಬೆಳೆದಿವೆ. ಆ ಗಿಡಗಳನ್ನು ತೆರವುಗೊಳಿಸುತ್ತೇವೆ. ಈಗ ಡೆಂಗಿ ಕಾಯಿಲೆ ನಿಯಂತ್ರಣದ ಬಗ್ಗೆ ಗಮನವಹಿಸಲಾಗಿದೆ. ಆದ್ದರಿಂದ ಗಿಡಗಳ ತೆರವು ವಿಳಂಬವಾಗಿದೆ - ಡಿ.ಎಂ.ಗೀತಾ, ಪೌರಾಯುಕ್ತರು, ಗೌರಿಬಿದನೂರು
ಪ್ರತಿಭಟಿಸಬೇಕಾಗುತ್ತದೆ
ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಲವು ಕಡೆ ಸ್ಮಶಾನ ಒತ್ತುವರಿಯಾಗಿದೆ. ಈ ಬಗ್ಗೆ ಹಲವು ಬಾರಿ ಲಿಖಿತವಾಗಿ ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರತಿಭಟನೆ ಮಾಡಿದಾಗ ಮಾತ್ರ ಅಧಿಕಾರಿಗಳು ಸ್ಪಂದಿಸುತ್ತಾರೆ. ಮತ್ತೊಮ್ಮೆ ಕೆಲಸವಾಗಬೇಕಾದರೆ, ಮತ್ತೆ ಪ್ರತಿಭಟನೆ ಮಾಡಬೇಕಾಗುತ್ತದೆ - ಸನಂದಪ್ಪ, ದಲಿತ ಮುಖಂಡರು, ಗೌರಿಬಿದನೂರು
ಒತ್ತುವರಿಯಾಗಿವೆ
ಬಹುತೇಕ ಸ್ಮಶಾನಗಳು ಒತ್ತುವರಿಯಾಗಿವೆ. ಸೂಕ್ತ ದಾಖಲೆಗಳೊಂದಿಗೆ, ಜಾಗ ತೆರವುಗೊಳಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಆದರೆ ಅಧಿಕಾರಿಗಳ ಬಳಿ ಸಂಪೂರ್ಣ ದಾಖಲೆಗಳು ಇವೆಯೋ ಇಲ್ಲವೋ ಗೊತ್ತಿಲ್ಲಾ? ಜನರ ಬಗ್ಗೆ ಕಾಳಜಿ ತೋರುತ್ತಿಲ್ಲ - ಆರ್.ಎನ್. ರಾಜು, ಪ್ರಜಾ ಸಂಘರ್ಷ ಸಮಿತಿ, ಸಹ ಸಂಚಾಲಕ, ಗೌರಿಬಿದನೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.