ಚಿಕ್ಕಬಳ್ಳಾಪುರ: ‘ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನನ್ನನ್ನು ಸೋಲಿಸುವಂತೆ ಗೋಗರೆದಿದ್ದಾರೆ. ನಾನು ಸೋಲುವುದಿರಲಿ, ನಿಮ್ಮ ಅಂತಿಮ ಯಾತ್ರೆ ಇದು ನೆನಪಿರಲಿ. ಇದು ನಿಮ್ಮ ಕೊನೆಯ ಚುನಾವಣೆ. ನಾನು ನಿಮ್ಮಂತೆ ಹೇಳುವುದಿಲ್ಲ. ಈ ಬಾರಿಯಾದರೂ ನೀವು ಗೆಲ್ಲಿ ಎನ್ನುತ್ತೇನೆ’ ಎಂದು ಸಚಿವ ಡಾ.ಕೆ. ಸುಧಾಕರ್ ಲೇವಡಿ ಮಾಡಿದರು.
ಶನಿವಾರ ನಗರದ ನಂದಿ ರಂಗಮಂದಿರದಲ್ಲಿ ಆಯೋಜಿಸಿದ್ದ ಸ್ತ್ರೀ ಶಕ್ತಿ ಸಂಘಗಳಿಗೆ ಬಡ್ಡಿ ರಹಿತ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ನಿಮ್ಮೊಂದಿಗೆ ನಾನು ಐದು ವರ್ಷ ಇದ್ದೆ. ಹಾಗಾಗಿ ನೀವು ಗೆಲ್ಲಬೇಕೆಂದು ಬಯಸುತ್ತೇನೆ ಹೊರತು ನಿಮ್ಮ ವಿರುದ್ಧ ಯಾವುದೇ ವೈಯಕ್ತಿಕ ದ್ವೇಷ ಇಲ್ಲ’ ಎಂದರು.
ಸಿದ್ದರಾಮಯ್ಯ 2013ರಿಂದ 18ರವರೆಗೂ ಚಿಕ್ಕಬಳ್ಳಾಪುರಕ್ಕೆ 16 ಬಾರಿ ಬಂದಿದ್ದರು. ಆಗ 224 ಶಾಸಕರಲ್ಲಿ ಸುಧಾಕರ್ ಮೊದಲಿಗರು ಎಂದಿದ್ದಿರಲ್ಲವೇ. ಆಗ ಯಾವ ಸಿದ್ದರಾಮಯ್ಯ ಇದ್ದಿರಿ ಎಂದು ಪ್ರಶ್ನಿಸಿದರು.
‘ಸಿದ್ದರಾಮಯ್ಯನವರೇ ನಾನೂ ಹಳ್ಳಿಯಿಂದ ಬಂದವನು. ಆದರೆ ನನಗೆ ಮನೆಯಲ್ಲಿ ಸಂಸ್ಕಾರ ಕಲಿಸಿದ್ದಾರೆ. ಆ ರೀತಿ ನಾನು ಮಾತನಾಡುವುದಿಲ್ಲ. ಏಕ ವಚನ, ವ್ಯಂಗ್ಯ ನನಗೂ ಗೊತ್ತಿದೆ. ನಾನು ವೈಯಕ್ತಿಕ ದ್ವೇಷವೂ ಮಾಡಲ್ಲ. ವಿಷಯಾಧಾರಿತ ಚರ್ಚೆ, ವಸ್ತು ಸ್ಥಿತಿ ಮಾತನಾಡಿದ್ದೀನಿ. ಈವರೆಗೂ ನಾನು ಯಾರ ಬಗ್ಗೆಯೂ ವೈಯಕ್ತಿಕ ದ್ವೇಷ ಮಾಡಿಲ್ಲ’ ಎಂದರು.
ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿ, ₹42 ಕೋಟಿ ವೆಚ್ಚದಲ್ಲಿ ಮನೆ ಮನೆಗೆ ನಲ್ಲಿ ಮೂಲಕ ನೀರು ನೀಡಲಾಗುತ್ತಿದೆ. ನೀವು ಕಳೆದ 75 ವರ್ಷ ವರ್ಷದಲ್ಲಿ ಅಭಿವೃದ್ಧಿ ಮಾಡಿದ್ದರೆ ಬಡವರ ಮನೆಗೆ ನೀರು ಯಾಕೆ ನೀಡಿಲ್ಲ. ಸ್ವಚ್ಛ ಭಾರತ್ ಯೋಜನೆಯಡಿ ದೇಶದಲ್ಲಿ 10 ಕೋಟಿ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಜಿಲ್ಲೆಯಲ್ಲಿ ಶೇ 100ರಷ್ಟು ಶೌಚಾಲಯ ನಿರ್ಮಾಣವಾಗಿದೆ ಎಂದು ವಿವರಿಸಿದರು.
‘ಫೆಬ್ರುವರಿ ಅಂತ್ಯದಲ್ಲಿ 22 ಸಾವಿರ ಮಹಿಳೆಯರನ್ನು ಸೇರಿಸಿ, ಉಚಿತ ನಿವೇಶನ ಹಕ್ಕುಪತ್ರ ವಿತರಿಸುವ ಕೆಲಸ ಮಾಡಲಾಗುವುದು. ಸರ್ಕಾರ ಯಾವುದೇ ಯೋಜನೆ ನೀಡುವುದು ಜನರ ತೆರಿಗೆ ಹಣದಲ್ಲಿ. ನಿಮ್ಮಿಂದ ಚುನಾಯಿತರಾಗಿ ಶಾಸನ ಮಾಡುವುದು ಮಾತ್ರ ನಮ್ಮ ಕರ್ತವ್ಯ. ನಮ್ಮ ಮನೆಗಳಿಂದ ತಂದು ನೀಡುವುದಿಲ್ಲ. ಆದರೆ ಕೊಟ್ಟಿರುವುದನ್ನು ಇಷ್ಟು ಬಾರಿ ಹೇಳುವುದು ಸರಿಯಲ್ಲ. ಮೂರು ಬಾರಿ ಉಚಿತ ಲಸಿಕೆ ನೀಡಲಾಗಿದೆ. ಒಂದು ಸಲವೂ ನಾವೇ ನಿಮ್ಮನ್ನು ಬದುಕಿಸಿದೆವು ಎಂದು ಹೇಳಿಲ್ಲ’ ಎಂದು ತಿರುಗೇಟು ನೀಡಿದರು.
ಆರೋಗ್ಯ ಕ್ಷೇತ್ರ ಕಳೆದ 70 ವರ್ಷದಲ್ಲಿ ಆಗಿದ್ದ ಅಭಿವೃದ್ಧಿಯಲ್ಲಿ ಐದು ಪಟ್ಟು ಹೆಚ್ಚಿನ ಅಬಿವೃದ್ಧಿ ಮಾಡಲಾಗಿದೆ. ಈ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧ ಎಂದರು.
ಚಿಕ್ಕಬಳ್ಳಾಪುರದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಒಟ್ಟು 405 ಸ್ತ್ರೀ ಶಕ್ತಿ ಸಂಘಗಳಿಂದ 4,505 ಸದಸ್ಯರಿಗೆ ಒಟ್ಟು ₹20.14 ಕೋಟಿ ಸಾಲದ ಚೆಕ್ ವಿತರಿಸಲಾಯಿತು. 2022 ಮತ್ತು 2023ನೇ ಸಾಲಿನ 173 ಕಾಮಗಾರಿಗಳಲ್ಲಿ ಹಲವು ಉದ್ಘಾಟನೆ ಮತ್ತು ಹಲವು ಶಂಕುಸ್ಥಾಪನೆ ನಡೆಸಲಾಗಿದೆ. ಇವುಗಳ ಒಟ್ಟು ಮೊತ್ತ 86.35 ಕೋಟಿ ಆಗಿದೆ ಎಂದು ಸಚಿವರು
ವಿವರಿಸಿದರು.
ಮರಳುಕುಂಟೆ ಕೃಷ್ಣಮೂರ್ತಿ, ಕೆ.ವಿ.ನಾಗರಾಜ್, ಮೋಹನ್, ರಾಮಸ್ವಾಮಿ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.